Ather Energy: ಬಜೆಟ್ ಬೆಲೆಯಲ್ಲಿ ಹೊಸ ಎಥರ್ 450ಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ
ಎಥರ್ ಎನರ್ಜಿ ಕಂಪನಿಯು ತನ್ನ ಹೊಸ 450ಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆರಂಭಿಕ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಬ್ಯಾಟರಿ ಆಯ್ಕೆ ಹೊಂದಿದೆ. ಆದರೆ ಬೆಲೆ ಕಡಿತಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಕಡಿತಮಾಡಲಾಗಿದೆ.
ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ(Ather Energy) ಕಂಪನಿ ತನ್ನ ಹೊಸ 450ಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಕಡಿಮೆ ಬೆಲೆಗೆ ಬಿಡುಗಡೆಯಾಗಿದ್ದು, ಬ್ಯಾಟರಿ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಹೊಸ ಇವಿ ಸ್ಕೂಟರ್ ಓಲಾ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಹೊಸ ಸ್ಕೂಟರ್ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಬೇಡಿಕೆ ದಾಖಲಾಗುತ್ತಿದೆ. ದುಬಾರಿಯಾಗಿರುವ ಪೆಟ್ರೋಲ್, ಡೀಸೆಲ್ ಪರಿಣಾಮ ಗ್ರಾಹಕರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸುತ್ತಿದ್ದಾರೆ. ಇದರಿಂದ ಪ್ರಮುಖ ಇವಿ ವಾಹನ ಉತ್ಪಾದನಾ ಕಂಪನಿಗಳು ಕೆಳದ ಕೆಲ ತಿಂಗಳಿಂದ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅದರಲ್ಲೂ ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಕಂಪನಿ ಭರ್ಜರಿ ಬೇಡಿಕೆ ದಾಖಲಿಸುತ್ತಿದೆ. ಹೀಗಾಗಿ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಹೊಸ ವೆರಿಯೆಂಟ್ ಪರಿಚಯಿಸಿದ್ದು, ಇದು ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಟಿವಿಎಸ್ ಐಕ್ಯೂಬ್
ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಎಥರ್ ಕಂಪನಿಯು 450ಎಕ್ಸ್ ನಲ್ಲಿ ಹೊಸದಾಗಿ ಬೆಸ್ ವೆರಿಯೆಂಟ್ ವೊಂದನ್ನು ಬಿಡುಗಡೆ ಮಾಡಿದೆ. ಹೊಸ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 98,183 ಬೆಲೆ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 30 ಸಾವಿರದಷ್ಟು ಕಡಿಮೆಯಾಗಿದೆ. ಬೆಲೆ ಕಡಿತದಿಂದಾಗಿ ಹೊಸ ಆರಂಭಿಕ ಆವೃತ್ತಿಯು ಕೆಲವು ಪ್ರೀಮಿಯಂ ಫೀಚರ್ಸ್ ಕಳೆದುಕೊಂಡಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಬ್ಯಾಟರಿ ಆಯ್ಕೆ ಹೊಂದಿದೆ.
ಎಥರ್ ಕಂಪನಿಯು ಹೊಸ 450ಎಕ್ಸ್ ಬೆಸ್ ವೆರಿಯೆಂಟ್ ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ 3.7ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ. ಇದು 6.2 ಕೆವಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಉತ್ತಮ ಪರ್ಫಾಮೆನ್ಸ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 146 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಜೊತೆಗೆ ಇದರಲ್ಲಿ ನಾಲ್ಕು ರೈಡ್ ಮೋಡ್‌ಗಳಿದ್ದು, ರಿಯಲ್ ವರ್ಲ್ಡ್ ನಲ್ಲಿ ಕನಿಷ್ಠ 105 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.
ಇನ್ನು ಹೊಸ ಇವಿ ಸ್ಕೂಟರ್ ನಲ್ಲಿ ಎಥರ್ ಕಂಪನಿಯು ಬೆಲೆ ಕಡಿತಕ್ಕಾಗಿ ಹಲವು ಪ್ರೀಮಿಯಂ ಫೀಚರ್ಸ್ ತೆಗೆದುಹಾಕಿದೆ. ಹೊಸ ಸ್ಕೂಟರಿನಲ್ಲಿ ಓವರ್-ದ-ಏರ್ ಅಪ್‌ಡೇಟ್ ಇಲ್ಲವಾದರೂ ಅಗತ್ಯ ಮಾಹಿತಿಗಾಗಿ 7 ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್ ಮೆಂಟ್ ಕ್ಲಸ್ಟರ್ ನೀಡಿದೆ. ಇದರಲ್ಲಿ ಬ್ಯಾಟರಿ ಲಭ್ಯತೆ, ಮೈಲೇಜ್ ಮಾಹಿತಿ ಸೇರಿದಂತೆ ವಿವಿಧ ಅಗತ್ಯ ಮಾಹಿತಿ ಮಾತ್ರ ದೊರೆಯಲಿದ್ದು, ಹೊಸ ವೆರಿಯೆಂಟ್ ಖರೀದಿ ಮೇಲೆ 3 ವರ್ಷ ಅಥವಾ 30 ಸಾವಿರ ಕಿ.ಮೀ ತನಕ ವಾರಂಟಿ ಸಿಗಲಿದೆ. ಈ ಮೂಲಕ ಕಂಪನಿಯು ಬಜೆಟ್ ಬೆಲೆಯಲ್ಲಿ ಸಾಮಾನ್ಯ ಸ್ಕೂಟರ್ ಖರೀದಿಗೆ ಬಯಸುವ ಗ್ರಾಹಕರಿಗಾಗಿಯೇ ಈ ಹೊಸ ವೆರಿಯೆಂಟ್ ಪರಿಚಯಿಸಿದೆ.
ಇದನ್ನೂ ಓದಿ: ಬಜೆಟ್ ಬೆಲೆಯ ಹೊಚ್ಚ ಹೊಸ ಹೋಂಡಾ ಶೈನ್ 100 ಬೈಕ್ ಬಿಡುಗಡೆ
ಕೆನೆಕ್ಟೆಡ್ ಸೌಲಭ್ಯಗಳನ್ನು ಹೊಂದಿರುವ 450ಎಕ್ಸ್ ಸ್ಟ್ಯಾಂಡರ್ಡ್ ಮಾದರಿಯು ಎಂದಿನಂತೆ ಖರೀದಿಗೆ ಲಭ್ಯವಿರಲಿದ್ದು, ಇದು ತುಸು ದುಬಾರಿ ಬೆಲೆಯೊಂದಿಗೆ ಪ್ರೊ ಪ್ಯಾಕ್ ಮೂಲಕ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ಹಾಗೆಯೇ ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಆಕ್ಸಿಲೇಷನ್, ಕಾರ್ನರ್ ರೈಡ್ ಮತ್ತು ಬ್ರೇಕಿಂಗ್ ಫರ್ಪಾಮೆನ್ಸ್ ನಲ್ಲಿ ಸಾಕಷ್ಟು ಸುಧಾರಣೆ ಹೊಂದಿದ್ದು, ಇದರಲ್ಲಿ ಸಾಮಾನ್ಯ ಮಾದರಿಗಿಂತಲೂ ಎರಡು ವರ್ಷಗಳ ಹೆಚ್ಚುವರಿ ವಾರಂಟಿ ಸಹ ಲಭ್ಯವಿದೆ.
Published On - 9:33 pm, Sat, 15 April 23