- Kannada News Photo gallery Honda launched all-new Shine 100 in India at Rs 64,900, most affordable Honda bike in India
Honda Shine 100: ಬಜೆಟ್ ಬೆಲೆಯ ಹೊಚ್ಚ ಹೊಸ ಹೋಂಡಾ ಶೈನ್ 100 ಬೈಕ್ ಬಿಡುಗಡೆ
ಹೋಂಡಾ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಶೈನ್ 100 ಕಮ್ಯೂಟರ್ ಬೈಕ್ ಮಾದರಿಯನ್ನ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಬಜೆಟ್ ಬೆಲೆಯೊಂದಿಗೆ ಹಲವಾರು ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದೆ.
Updated on:Mar 15, 2023 | 6:23 PM

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಸದ್ಯ ಅಗ್ರಸ್ಥಾನ ಪಡೆದುಕೊಂಡಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಹೀರೋ ಮೋಟೊಕಾರ್ಪ್ ನಿರ್ಮಾಣದ ಪ್ರಮುಖ 100 ಸಿಸಿ ಬೈಕ್ ಮಾದರಿಗಳಿಗೆ ಪೈಪೋಟಿಯಾಗಿ ಶೈನ್ 100 ಆವೃತ್ತಿಯನ್ನ ಬಿಡುಗಡೆ ಮಾಡಿದೆ.

ಹೊಸ ಬೈಕ್ ಮಾದರಿಯು ಬಜೆಟ್ ಬೆಲೆಯೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನ ಪಡೆದುಕೊಂಡಿದ್ದು, ಹೊಸ ಬೈಕ್ ಖರೀದಿಗಾಗಿ ಇಂದಿನಿಂದಲೇ ಅಧಿಕೃತ ಬುಕಿಂಗ್ ಆರಂಭಿಸಿದೆ.

ಹೊಸ ಶೈನ್ 100 ಬೈಕ್ ಮಾದರಿಯು ಕೇವಲ ಒಂದೇ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಬೈಕ್ ಮಾದರಿಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ. 64,900 ಬೆಲೆ ಹೊಂದಿದೆ. ಆರಂಭಿಕ ದರವು ನಿಗದಿತ ಅವಧಿಯಲ್ಲಿ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಅನ್ವಯಿಸಲಿದ್ದು, ತದನಂತರ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಬೆಲೆ ಹೆಚ್ಚಿಸುವುದಾಗಿ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಹೊಸ ಶೈನ್ 100 ಬೈಕ್ ಆವೃತ್ತಿಯಲ್ಲಿ ಹೋಂಡಾ ಕಂಪನಿಯು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಆರ್ ಡಿಇ ಮಾನದಂಡ ಪೂರೈಸಿದ 99.7 ಸಿಸಿ, ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಇದು 4 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 7.61 ಹಾರ್ಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಹೊಸ ಬೈಕ್ ಮಾದರಿಯು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 55 ರಿಂದ 60 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ ಶೈನ್ 100 ಬೈಕ್ ಮಾದರಿಯು ಶೈನ್ 125 ಮಾದರಿಯಿಂದ ಹಲವು ವಿನ್ಯಾಸ ವೈಶಿಷ್ಟ್ಯತೆಗಳನ್ನ ಎರವಲು ಪಡೆದುಕೊಂಡಿದ್ದು, ರೆಡ್, ಬ್ಲ್ಯೂ, ಗೋಲ್ಡ್, ಗ್ರಿನ್ ಮತ್ತು ಗ್ರೇ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದರೊಂದಿಗೆ ಹೊಸ ಬೈಕಿನಲ್ಲಿ ಹೋಂಡಾ ಕಂಪನಿಯು ಆಲ್ ಬ್ಲ್ಯಾಕ್ ಅಲಾಯ್ ವ್ಹೀಲ್, ಹಾಲೋಜೆನ್ ಹೆಡ್ ಲ್ಯಾಂಪ್, ಅಲ್ಯುಮಿನಿಯಂ ಗ್ರ್ಯಾಬ್ ರೈಲ್, ಡ್ಯುಯಲ್ ಪಾಡ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಕಾಂಬಿ ಬ್ರೇಕಿಂಗ್ ಸಿಸ್ಟಂ ಮತ್ತು ಸೈಡ್ ಸ್ಟ್ಯಾಂಡ್ ಅಲರ್ಟ್ ಫೀಚರ್ಸ್ ನೀಡಲಾಗಿದೆ.

ಇದರೊಂದಿಗೆ ಹೊಸ ಬೈಕ್ ಮಾದರಿಯು ಹೀರೋ ಸ್ಲೈಂಡರ್ ಮಾದರಿಗೆ ಪೈಪೋಟಿಯಾಗಿ ಹಲವಾರು ವಿಶೇಷತೆಗಳನ್ನ ಹೊಂದಿದ್ದು, ಹೊಸ ಬೈಕ್ 786 ಎಂಎಂ ಆಸನ ಎತ್ತರದೊಂದಿಗೆ 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಹಿಂಬದಿ ಸವಾರರಿಗೂ ಅನುಕೂಲಕವಾಗುವಂತಹ ಅರಾಮದಾಯಕ ಸಿಂಗಲ್ ಪೀಸ್ ಸೀಟ್ ಜೊತೆ ಹೊರಭಾಗದ ಪ್ಯೂಲ್ ಟ್ಯಾಂಕ್ ಕ್ಯಾಪ್ ನೀಡಲಾಗಿದ್ದು, ಇದು 100 ಸಿಸಿ ವಿಭಾಗದ ಪ್ರಮುಖ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
Published On - 6:09 pm, Wed, 15 March 23
























