Bajaj Chetak EV: ಹೊಸ ದಾಖಲೆ ನಿರ್ಮಿಸಿದ ಬಜಾಜ್ ಚೇತಕ್ ಇವಿ ಸ್ಕೂಟರ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ ಕಂಪನಿಯು ಚೇತಕ್ ಇವಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ತನ್ನ ಜನಪ್ರಿಯ ಚೇತಕ್ ಇವಿ ಸ್ಕೂಟರ್ (Chetak EV Scooter) ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಚೇತಕ್ ಇವಿ ಬಿಡುಗಡೆಯಾದ ನಂತರ ಇದುವರೆಗೆ ಇದು ಬರೋಬ್ಬರಿ 2 ಲಕ್ಷ ಯುನಿಟ್ ಮಾರಾಟಗೊಂಡಿದೆ. 90ರ ದಶಕದಲ್ಲಿ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದ ಚೇತಕ್ ಸ್ಕೂಟರ್ ಮಾದರಿಯನ್ನು ಬಜಾಜ್ ಕಂಪನಿಯು ಕಳೆದ 2020ರ ಜನವರಿಯಲ್ಲಿ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಮರು ಪರಿಚಯಿಸಿದ್ದು, ಬಿಡುಗಡೆಯಾದ ನಂತರ ಇದುವರೆಗೆ ಒಟ್ಟು 2 ಲಕ್ಷ ಯುನಿಟ್ ಮಾರಾಟಗೊಂಡಿದೆ.
ಚೇತಕ್ ಇವಿ ಬಿಡುಗಡೆಯ ಆರಂಭದಲ್ಲಿ ಕಡಿಮೆ ಪ್ರಮಾಣದ ಮಾರಾಟ ಹೊಂದಿದ್ದ ಬಜಾಜ್ ಕಂಪನಿಯು ಕಳೆದ ಒಂದೂವರೆ ವರ್ಷದಿಂದ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ಎಂಟು ತಿಂಗಳ ಅವಧಿಯಲ್ಲಿಯೇ ಬರೋಬ್ಬರಿ 1 ಲಕ್ಷ ಯುನಿಟ್ ಮಾರಾಟಗೊಂಡಿವೆ.
ಗುಣಮಟ್ಟದ ಬಿಡಿಭಾಗಗಳು ಮತ್ತು ಉತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಚೇತಕ್ ಇವಿ ಸ್ಕೂಟರ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್ ಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 95,998 ರಿಂದ ಟಾಪ್ ಎಂಡ್ ವೆರಿಯೆಂಟ್ ರೂ. 1.47 ಲಕ್ಷ ಬೆಲೆ ಹೊಂದಿದೆ.
ಪ್ರೀಮಿಯಂ ಫೀಚರ್ಸ್ ಜೊತೆಗೆ ವಿಸ್ತರಿತ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಹೊಸ ಚೇತಕ್ ಇವಿ ಸ್ಕೂಟರ್ ನಲ್ಲಿ ಹೆಚ್ಚಿನ ಸಾಮಾರ್ಥ್ಯದ ಬ್ಯಾಟರಿ ಹೊಂದಿರುವ ಟಾಪ್ ಎಂಡ್ ವೆರಿಯೆಂಟ್ ತುಸು ದುಬಾರಿಯಾಗಿದ್ದು, ಇದು 2.88 ಕೆಡಬ್ಲ್ಯೂಹೆಚ್ ಮತ್ತು 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಗಳ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 113 ಕಿ.ಮೀ ನಿಂದ 127 ಕಿ.ಮೀ ಮೈಲೇಜ್ ನೀಡುತ್ತದೆ.
ಇನ್ನು ಹೊಸ ಚೇತಕ್ ಇವಿಯಲ್ಲಿ ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿ ಹಲವು ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಇದರಲ್ಲಿರುವ ಬ್ಯಾಟರಿ ಪ್ಯಾಕ್ ಸೊನ್ನೆಯಿಂದ 80% ಚಾರ್ಜ್ ಆಗಲು ಸುಮಾರು 3.15 ಗಂಟೆ ತೆಗೆದುಕೊಳ್ಳುತ್ತದೆ. ಹಾಗೆಯೇ ಹೊಸ ಇವಿ ಸ್ಕೂಟರಿನಲ್ಲಿ ವಿವಿಧ ಬಣ್ಣಗಳ ಆಯ್ಕೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.