ಹೀರೋ ಡರ್ಟ್ ಬೈಕಿಂಗ್: ಎಕ್ಸ್ ಪಲ್ಸ್ 200 4ವಿ ಜೊತೆ ರೂ. 10 ಲಕ್ಷ ನಗದು ಬಹುಮಾನ ಗೆದ್ದ ಚಾಂಪಿಯನ್ ಸ್ಪರ್ಧಿ
ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ಆಯೋಜಿಸಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆಯು ಮುಕ್ತಾಯಗೊಂಡಿದ್ದು, ಅಂತಿಮ ಸುತ್ತಿನಲ್ಲಿದ್ದ ಟಾಪ್ 20 ಸವಾರರು ನಡುವಿನ ಚಾಂಪಿಯನ್ ಸೆಣಸಾಟವು ರೋಚಕವಾಗಿತ್ತು.
ಹೀರೋ ಮೋಟೊಕಾರ್ಪ್(Hero Motocorp) ಕಂಪನಿಯು ಆಯೋಜಿಸಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಪೂರ್ಣಗೊಂಡಿದೆ. ಕಳೆದ ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ಡರ್ಟ್ ಬೈಕಿಂಗ್ ಚಾಲೆಂಜ್(Dirt Bike Challenge) ಸ್ಪರ್ಧೆಯು ಇದೀಗ ಮುಕ್ತಾಯಗೊಂಡಿದ್ದು, ಫೈನಲ್ ರೇಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದೇಶಾದ್ಯಂತ ಕಳೆದ 4 ತಿಂಗಳಿನಿಂದ ವಿವಿಧ ಹಂತದಲ್ಲಿ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆ ಆಯೋಜಿಸಿದ್ದ ಹೀರೋ ಮೋಟೊಕಾರ್ಪ್ ಕಂಪನಿಯು ಅಂತಿಮ ಸ್ಪರ್ಧೆಗಾಗಿ ಟಾಪ್-20 ಸವಾರರನ್ನು ಆಯ್ಕೆ ಮಾಡಿಕೊಂಡಿತ್ತು. ಈ ವಾರಾಂತ್ಯದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯ ರೋಚಕ ಹಣಾಹಣಿಯಲ್ಲಿ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರಾಕೇಶ್ ಎನ್. ಮತ್ತು ಗಿಡ್ಯುನ್ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಮಿಂಚಿದರು.
ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆಯ ಎಲ್ಲಾ ಸುತ್ತುಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಒಲೆಸ್ಯಾ ಡಯಾಸ್ ಅವರನ್ನು ಅತ್ಯುತ್ತಮ ಮಹಿಳಾ ಆಫ್-ರೋಡ್ ರೈಡರ್ ಎಂದು ಗೌರವಿಸಲಾಯಿತು. ವಿಜೇತರು, ಮೊದಲ ಮತ್ತು ಎರಡನೇ ರನ್ನರ್ ಅಪ್‌ಗಳಿಗೆ ಕಂಪನಿಯು ತನ್ನ ಜನಪ್ರಿಯ ಎಕ್ಸ್ ಪಲ್ಸ್ 200 4ವಿ ಮೋಟಾರ್ ಸೈಕಲ್ ಜೊತೆಗೆ ಕ್ರಮವಾಗಿ ರೂ. 10 ಲಕ್ಷ, ರೂ. 6 ಲಕ್ಷ ಮತ್ತು ರೂ. 4 ಲಕ್ಷ ಮೌಲ್ಯದ ಪ್ರಾಯೋಜಕತ್ವದ ಪ್ರಶಸ್ತಿಗಳನ್ನು ಪಡೆದುಕೊಂಡರು.
ಜೈಪುರದಲ್ಲಿರುವ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಆಫ್ ರೋಡ್ ಟ್ರ್ಯಾಕ್ ನಲ್ಲಿ ಅಂತಿಮ ಹಂತದ ಸ್ಪರ್ಧೆ ಆಯೋಜಿಸಿದ್ದ ಹೀರೋ ಮೋಟೋಕಾರ್ಪ್ ಕಂಪನಿಯು ಉತ್ತಮ ಅನುಭವಕ್ಕಾಗಿ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಮಾನಾಗಿ ಡರ್ಟ್ ಬೈಕಿಂಗ್ ಚಾಲೆಂಜ್ ವಿನ್ಯಾಸಗೊಳಿಸಿತ್ತು.
ಇದನ್ನೂ ಓದಿ: ಬಿಡುಗಡೆಯಾಗಲಿದೆ ಬಲಶಾಲಿ ಹೀರೋ ಎಕ್ಸ್ ಪಲ್ಸ್ 200ಟಿ 4ವಿ ವರ್ಷನ್
ಜುಲೈನಲ್ಲಿ ಆರಂಭಗೊಂಡಿದ್ದ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆಯಲ್ಲಿ ಸುಮಾರು 1,00,000 ಸ್ಪರ್ಧಿಗಳು ನೋಂದಾಯಿಸಿದ್ದರು. ಪ್ರಮುಖ 41 ನಗರಗಳಲ್ಲಿ 120ಕ್ಕಿಂತ ಹೆಚ್ಚು ದಿನಗಳ ಕಾಲ ನಡೆದಿದ್ದ ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗಾಗಿ ಟಾಪ್ 20 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ನಗರ ಮತ್ತು ಪ್ರಾದೇಶಿಕ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದ 90 ರೈಡರ್‌ಗಳು ವಲಯ ಸುತ್ತನ್ನು ತಲುಪಿದ್ದರು. ವಲಯ ಸುತ್ತು 4-ದಿನಗಳ ಕಾಲ ನಡೆಯಿತು. ಇದರಲ್ಲಿ ದಿ ಹೀರೋ ಮೋಟೋಸ್ಪೋರ್ಟ್ಸ್ ರಾಷ್ಟ್ರೀಯ ತಂಡದಿಂದ ತರಬೇತಿ ಪಡೆದ ಟಾಪ್-20 ಡರ್ಟ್-ಬೈಕಿಂಗ್ ಹೀರೋಗಳು ಅಂತಿಮ ಹಂತಕ್ಕೆ ತಲುಪಿದರು. ಇದರಲ್ಲಿ ಪ್ರತಿಹಂತ ದಲ್ಲೂ ಉತ್ತಮ ಪ್ರದರ್ಶನ ತೋರಿದ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇನ್ನು ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆಯು ಮೂಲ ಉಪಕರಣ ತಯಾರಿಕೆ ಕಂಪನಿಯೊಂದು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಮೊದಲ ಪ್ರತಿಭಾಶೋಧ ಸ್ಪರ್ಧೆ ಇದಾಗಿದ್ದು, ಆಫ್-ರೋಡ್ ರೇಸಿಂಗ್‌ನಲ್ಲಿ ಉದಯೋನ್ಮುಖ ಸವಾರರನ್ನು ಮುಖ್ಯ ವೇದಿಕೆಗೆ ಪರಿಚಯಿಸುವಲ್ಲಿ ಮಹತ್ವದ ಹೆಜ್ಜೆಯಿರಿಸುತ್ತಿದೆ.
Published On - 4:21 pm, Thu, 10 November 22