ಐಷಾರಾಮಿ ಲುಕ್ ನಲ್ಲಿ ಎಂಟ್ರಿ ಕೊಟ್ಟ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್

ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಹೊಸದಾಗಿ ನೈಟ್ ಎಡಿಷನ್ ಬಿಡುಗಡೆ ಮಾಡಿದ್ದು, ಹಲವಾರು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಐಷಾರಾಮಿ ಲುಕ್ ನಲ್ಲಿ ಎಂಟ್ರಿ ಕೊಟ್ಟ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್
Follow us
|

Updated on: Sep 04, 2024 | 10:22 PM

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ ಇಂಡಿಯಾ (Hyundai India) ತನ್ನ ಹೊಸ ಕ್ರೆಟಾ ನೈಟ್ ಎಡಿಷನ್ (Creta Knight edition) ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಪ್ರಮುಖ ನಾಲ್ಕು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.14 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯು ವಿಶೇಷವಾಗಿ ಬ್ಲ್ಯಾಕ್ ಥೀಮ್ ನೊಂದಿಗೆ ಐಷಾರಾಮಿ ಚಾಲನೆ ಅನುಭವ ನೀಡಲಿದ್ದು, ಜೊತೆಗೆ ರಸ್ತೆಯಲ್ಲಿ ಇದು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.

ಕ್ರೆಟಾ ನೈಟ್ ಎಡಿಷನ್ ನಲ್ಲಿ ಹೊಸ ಚಾಲನಾ ಅನುಭವಕ್ಕಾಗಿ 21 ಬಗೆಯ ತಾಂತ್ರಿಕ ಅಂಶಗಳನ್ನು ಉನ್ನತೀಕರಿಸಲಾಗಿದ್ದು, ಬ್ಲ್ಯಾಕ್ ಥೀಮ್ ಹೊಂದಿರುವ ಮುಂಭಾಗದ ರೇಡಿಯೇಟರ್ ಗ್ರಿಲ್, ಮ್ಯಾಟ್ ಬ್ಲ್ಯಾಕ್ ಲೋಗೊಗಳು, ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಆರ್17 ಕಪ್ಪು ಮಿಶ್ರಲೋಹದ ಚಕ್ರಗಳು ಮತ್ತು ವಿಶೇಷವಾಗಿ ನೈಟ್ ಎಡಿಷನ್ ಸೂಚಿಸುವ ಬ್ಯಾಡ್ಜ್ ನೀಡಲಾಗಿದೆ. ಇದರಲ್ಲಿ ಗಮನಾರ್ಹವಾದ ಇತರೆ ವೈಶಿಷ್ಟ್ಯಗಳೆಂದರೆ ಕಪ್ಪು ಬಣ್ಣದ ಸ್ಕಿಡ್ ಪ್ಲೇಟ್‌ಗಳು, ಸೈಡ್ ಸಿಲ್ ಗಾರ್ನಿಶ್, ರೂಫ್ ರೈಲ್ಸ್, ಸಿ-ಪಿಲ್ಲರ್ ಗಾರ್ನಿಶ್, ರಿಯರ್ ವ್ಯೂ ಮಿರರ್ ಮತ್ತು ಸ್ಪಾಯ್ಲರ್ ಗಳು ಅದ್ಭುತವಾಗಿವೆ.

Hyundai Creta Knight edition (2)

ಹೊಸ ಕಾರಿನಲ್ಲಿ ಹೊರಭಾಗದಲ್ಲಿ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಆಲ್ ಬ್ಲ್ಯಾಕ್ ಥೀಮ್ ನೊಂದಿಗೆ ಸಜ್ಜುಗೊಳಿಸಲಾಗಿದೆ. ಕಪ್ಪು ಬಣ್ಣದಲ್ಲಿರುವ ಇಂಟಿರಿಯರ್ ನಲ್ಲಿ ಬ್ರ್ಯಾಸ್ ಕಲರ್ ಇನ್ಸರ್ಟ್ ಐಷಾರಾಮಿ ನೋಟವನ್ನು ನೀಡುತ್ತದೆ. ಜೊತೆಗೆ ಅರಾಮದಾಯಕ ಆಸನಗಳಲ್ಲಿ ಬ್ರ್ಯಾಸ್ ಪೈಪಿಂಗ್ ಮತ್ತು ಸ್ಟ್ರೀಚಿಂಗ್ ನೀಡಲಾಗಿದ್ದು, ಹೆಚ್ಚುವರಿಯಾಗಿ ಮೆಟಲ್ ಪ್ಯಾಡಲ್, ಲೆದರ್ ಹೋದಿಕೆ ಹೊಂದಿರುವ ಸ್ಟ್ರೀರಿಂಗ್ ವ್ಹೀಲ್ ಮತ್ತು ಬ್ರ್ಯಾಸ್ ಸ್ಟ್ರೀಚಿಂಗ್ ಗೇರ್ ಬೂಟ್ ನೀಡಲಾಗಿದೆ.

ಕ್ರೆಟಾ ನೈಟ್ ಎಡಿಷನ್ ನಲ್ಲಿ ಹ್ಯುಂಡೈ ಕಂಪನಿಯು 1.5 ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.5 ಲೀಟರ್ ಸಿಆರ್ ಡಿಐ ಡೀಸೆಲ್ ಎಂಜಿನ್ ಆಯ್ಕೆ ನೀಡಿದ್ದು, ಇವು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿವೆ. ಇನ್ನುಳಿದಂತೆ ಹೊಸ ಮಾದರಿಯಲ್ಲಿ ಸಾಮಾನ್ಯ ಕ್ರೆಟಾದಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದ್ದು, ಹೊಸ ಆವೃತ್ತಿಯೊಂದಿಗೆ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಪ್ 5 ಕಾರುಗಳಿವು!

ಇನ್ನು ಆಕರ್ಷಕ ಬೆಲೆ, ವಿವಿಧ ಎಂಜಿನ್ ಆಯ್ಕೆಗಳು, ಗಮನಸೆಳೆಯುವ ಹೊರ ಮತ್ತು ಒಳ ವಿನ್ಯಾಸಗಳು, ಸುಧಾರಿತ ತಂತ್ರಜ್ಞಾನ ಸೇರಿದಂತೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತಿರುವ ಕ್ರೆಟಾ ಕಾರು ಮಧ್ಯಮ ವರ್ಗದ ಗ್ರಾಹಕರ ಹಲವು ಬೇಡಿಕೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಬಿಡುಗಡೆಯಾದ 9 ವರ್ಷಗಳ ನಂತರವೂ ಬೇಡಿಕೆಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟವಾಗುತ್ತಿರುವ ಕ್ರೆಟಾ ಕಾರು ಈ ಹಿಂದೆಂದಿಗಿಂತಲೂ ಅತ್ಯಧಿಕ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಎನ್ ಲೈನ್ ಆವೃತ್ತಿಯೊಂದಿಗೆ ಸಹ ಮಾರಾಟವಾಗುತ್ತಿದೆ.