ಬರಲಿದೆ ಭರ್ಜರಿ ಮೈಲೇಜ್ ನೀಡುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ವರ್ಷನ್
ಎಲೆಕ್ಟ್ರಿಕ್ ವಾಹನ ಅಭಿವೃದ್ದಿ ಮತ್ತು ಮಾರಾಟವು ವಿಶ್ವಾದ್ಯಂತ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದ್ದು, ಸಾಂಪ್ರದಾಯಿಕ ವಾಹನ ಮಾದರಿಗಳಿಂದ ಇವಿ ವಾಹನಗಳತ್ತ ಹೆಚ್ಚಿನ ಗಮನಹರಿಸುತ್ತಿರುವ ಹ್ಯುಂಡೈ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಹಲವಾರು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಸದ್ಯ ವಿಶ್ವದ ಪ್ರಮುಖ ಕಾರು ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಹ್ಯುಂಡೈ (Hyundai) ಕಂಪನಿಯು ಭವಿಷ್ಯ ಯೋಜನೆಗಳತ್ತ ಮಹತ್ವದ ಹೆಜ್ಜೆಯಿರಿಸುತ್ತಿದ್ದು, ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ವಿಶ್ವಾದ್ಯಂತ ಹರಡಿಕೊಂಡಿರುವ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳಲ್ಲಿ 2025ರ ವೇಳೆಗೆ ಇವಿ ಕಾರಗಳ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡುತ್ತಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಶೀಘ್ರದಲ್ಲೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸಲು ಸಿದ್ದವಾಗುತ್ತಿದೆ.
ಭಾರತದಲ್ಲಿ ಕೊನಾ ಎಲೆಕ್ಟ್ರಿಕ್ ಮತ್ತು ಐಯಾನಿಕ್ 5 ಎಲೆಕ್ಟ್ರಿಕ್ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಹ್ಯುಂಡೈ ಕಂಪನಿಯು ಜನಪ್ರಿಯ ಕ್ರೆಟಾ ಕಾರಿನ ಎಲೆಕ್ಟ್ರಿಕ್ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದು ಹೊಸ ತಲೆಮಾರಿನ ಇವಿ ವೈಶಿಷ್ಟ್ಯತೆಗಳೊಂದಿಗೆ ಭಾರತದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಹೊಸ ಕ್ರೆಟಾ ಎಲೆಕ್ಟ್ರಿಕ್ ಬಿಡುಗಡೆಯ ಕುರಿತಾಗಿ ಹ್ಯುಂಡೈ ಇಂಡಿಯಾ ಕಂಪನಿಯು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಇವಿ ಕಾರಿನ ಉತ್ಪಾದನಾ ಪ್ರಕ್ರಿಯೆ ಮತ್ತು ಟೆಸ್ಟಿಂಗ್ ಪ್ರಕ್ರಿಯೆಗಳು ಶೀಘ್ರದಲ್ಲಿಯೇ ಬಿಡುಗಡೆಯ ಸುಳಿವು ನೀಡಿದ್ದು, ಇದು ಹೆಚ್ಚಿನ ಮಟ್ಟದ ಸ್ಥಳೀಯಕರಣದೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸಿದ್ದತೆಯಲ್ಲಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..
ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಜೊತೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನು ಸಹ ಮಾರಾಟ ಮಾಡಲು ಉದ್ದೇಶಿಸಿರುವ ಹ್ಯುಂಡೈ ಕಂಪನಿಯು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಕಂಪನಿಯು 2028ರ ವೇಳೆಗೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಒಟ್ಟು ಆರು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ.
ಹೊಸ ಇವಿ ಕಾರುಗಳ ಉತ್ಪಾದನೆಗೆ ಪೂರಕವಾದ ಮತ್ತು ಗುಣಮಟ್ಟದ ಮಾದರಿಗಳನ್ನು ಸಿದ್ದಪಡಿಸಲು ಹ್ಯುಂಡೈ ಕಂಪನಿಯು ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕ್ರೆಟಾ ಇವಿ ಸೇರಿದಂತೆ ವಿವಿಧ ಸೆಗ್ಮೆಂಟ್ ಇವಿ ಕಾರುಗಳನ್ನು ಪರಿಚಯಿಸಲಿದೆ.
ಭಾರತ ಒಂದರಲ್ಲೇ ಎಲೆಕ್ಟ್ರಿಕ್ ಕಾರುಗಳ ಯೋಜನೆಗಾಗಿ ಮುಂದಿನ ಐದು ವರ್ಷಗಳ ಅವಧಿಗೆ ಸುಮಾರು ರೂ.4 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಹ್ಯುಂಡೈ ಕಂಪನಿಯು ಚಾಲನೆ ನೀಡಿದ್ದು, ಹೊಸ ಕ್ರೆಟಾ ಇವಿ ಕಾರು ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 450 ರಿಂದ 500 ಕಿ.ಮೀ ಮೈಲೇಜ್ ನೀಡುವ ಬ್ಯಾಟರಿ ಪ್ಯಾಕ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಪುತ್ರಿ
ಸ್ಟ್ಯಾಂಡರ್ಡ್ ಕಾರಿನ ವಿನ್ಯಾಸವನ್ನೇ ಆಧರಿಸಿರುವ ಕ್ರೆಟಾ ಇವಿ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, ಇದು ಮಹೀಂದ್ರಾ ಎಕ್ಸ್ ಯುವಿ300 ಎಲೆಕ್ಟ್ರಿಕ್ ಮತ್ತು ಎಂಜಿ ಜೆಡ್ಎಸ್ ಇವಿ ಮಾದರಿಗಳಿಗೆ ಪೈಪೋಟಿಯಾಗಿ 2025ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿವೆ.