Global NCAP: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಕಿಯಾ ಕಾರೆನ್ಸ್ ಎಂಪಿವಿ
ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಿಯಾ ಕಾರೆನ್ಸ್ ಎಂಪಿವಿ ಆವೃತ್ತಿಯು ಸಾಧರಣ ಪ್ರದರ್ಶನ ತೋರಿದ್ದು, ಅಪಘಾತದ ಸಂದರ್ಭದಲ್ಲಿ ಹೊಸ ಕಾರು ಗ್ರಾಹಕರಿಗೆ ಕನಿಷ್ಠ ಮಟ್ಟದ ಸುರಕ್ಷತೆ ಒದಗಿಸಲು ಸಹಕಾರಿಯಾಗಿದೆ.
ಹೊಸ ಕಾರುಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷಿಸುವ ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಸಾಕಷ್ಟು ಸಹಕಾರಿಯಾಗಿದ್ದು, ಇದೀಗ ಕಿಯಾ ಕಾರೆನ್ಸ್ (Kia Carens) ಎಂಪಿವಿ ಆವೃತ್ತಿಯು ಕೂಡಾ ಹೊಸ ಸುರಕ್ಷಾ ಮಾನದಂಡಗಳ ಪೂರೈಕೆಯೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸಾಧರಣ ಪ್ರದರ್ಶನ ತೋರಿದೆ. ಭಾರತದಲ್ಲಿ ಕಾರೆನ್ಸ್ ಬಿಡುಗಡೆಯಾದ ನಂತರ ಎರಡನೇ ಬಾರಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಭಾಗಿಯಾಗಿದ್ದು, ಉತ್ಪಾದನಾ ಗುಣಮಟ್ಟ ಮತ್ತು ವಿವಿಧ ಸುರಕ್ಷಾ ಸೌಲಭ್ಯಗಳೊಂದಿಗೆ 3 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.
ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಭಾಗಿಯಾಗುವ ಕಾರುಗಳಿಗೆ ಉತ್ಪಾದನಾ ಗುಣಮಟ್ಟ ಮತ್ತು ಸುರಕ್ಷಾ ಫೀಚರ್ಸ್ ಆಧರಿಸಿ 5 ಸ್ಟಾರ್ ನಿಂದ 0 ಸ್ಟಾರ್ ತನಕ ರೇಟಿಂಗ್ಸ್ ಸಿಗಲಿದ್ದು, ಇದೀಗ ಕಿಯಾ ಕಾರೆನ್ಸ್ ಕಾರು ಕೂಡಾ 3 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ ಸೇಫ್ಟಿ ಫೀಚರ್ಸ್ ಜೋಡಣೆಯ ಹೊರತಾಗಿಯೂ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸಾಧರಣ ಪ್ರದರ್ಶನ ತೋರಿದ್ದು, ಅಪಘಾತದ ಸಂದರ್ಭದಲ್ಲಿ ಇದು ವಯಸ್ಕ ಪ್ರಯಾಣಿಕರಿಗೆ ಸಾಧರಣ ಸುರಕ್ಷತೆ ನೀಡಲಿದ್ದರೆ ಮಕ್ಕಳಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಭರ್ಜರಿ ರೇಟಿಂಗ್ಸ್ ಪಡೆದುಕೊಂಡ ಹೊಸ ಮಾರುತಿ ಸುಜುಕಿ ಸ್ವಿಫ್ಟ್
ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ವಯಸ್ಕ ಪ್ರಯಾಣಿಕರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿಗದಿಪಡಿಸಲಾಗಿದ್ದ ಒಟ್ಟು 49 ಅಂಕಗಳಿಗೆ ಕಿಯಾ ಕಾರೆನ್ಸ್ ಕಾರು 40.92 ಅಂಕಗಳನ್ನು ಗಳಿಸಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಹೊಸ ಕಾರೆನ್ಸ್ ಕಾರಿನಲ್ಲಿ ಇನ್ನಷ್ಟು ಗುಣಮಟ್ಟ ಸುಧಾರಿಸುವ ಅಗತ್ಯವಿದೆ. ಇನ್ನು ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಕಾರೆನ್ಸ್ ಕಾರು ವಿವಿಧ ಎಂಜಿನ್ ಆಯ್ಕೆಯೊಂದಿಗೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಾರಾಟಗೊಳ್ಳುತ್ತಿದೆ.
ಕಾರೆನ್ಸ್ ಕಾರು ಸದ್ಯ 1.5 ಲೀಟರ್ ಪೆಟ್ರೋಲ್ ಎನ್ಎ ಪೆಟ್ರೋಲ್, 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಇಂಟಲಿಜೆಂಟ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಹಲವು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಆರಂಭಿಕ ಮಾದರಿಗೂ ಅನ್ವಯಿಸುವಂತೆ ಆರ್ ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಮಕ್ಕಳ ಪ್ರಯಾಣಕ್ಕಾಗಿ ಐಸೋಫಿಕ್ಸ್ ಆ್ಯಂಕರ್ ಸೀಟ್ ನೀಡಲಾಗಿದೆ.
ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ
ಇನ್ನು ಹೊಸ ಕಾರು ಪ್ರೀಮಿಯಂ, ಪ್ರೇಸ್ಟಿಜ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 10.52 ಲಕ್ಷದಿಂದ ರೂ. 19.67 ಲಕ್ಷ ಬೆಲೆ ಹೊಂದಿದ್ದು, ಇದು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುತಿ ಸುಜಕಿ ಎರ್ಟಿಗಾಗೆ ಪ್ರಬಲ ಪೈಪೋಟಿಯಾಗಿದೆ. ಹಾಗೆಯೇ ದುಬಾರಿ ಬೆಲೆ ಹೊಂದಿರುವ 7 ಸೀಟರ್ ಸೌಲಭ್ಯದ ಟೊಯೊಟಾ ಇನೋವಾ ಕ್ರಿಸ್ಟಾ ಮಾದರಿಗೆ ಪರ್ಯಾಯ ಆಯ್ಕೆ ಇದಾಗಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಬದಲಾವಣೆ ಪಡೆದುಕೊಳ್ಳಬಹುದಾಗಿದೆ.