Maruti Alto K10 CNG: ಭರ್ಜರಿ ಮೈಲೇಜ್ ನೀಡುವ ಮಾರುತಿ ಆಲ್ಟೋ ಕೆ10 ಸಿಎನ್ಜಿ ಬಿಡುಗಡೆ
ಸಿಎನ್ ಜಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಮತ್ತೊಂದು ಜನಪ್ರಿಯ ಕಾರಿನಲ್ಲಿ ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಆಲ್ಟೋ ಕೆ10 ಇದೀಗ ಸಿಎನ್ ಜಿ ಆವೃತ್ತಿಯಲ್ಲೂ ಖರೀದಿಗೆ ಲಭ್ಯವಾಗಿದೆ.
ಸಿಎನ್ ಜಿ ಕಾರುಗಳ(CNG Cars) ಮಾರಾಟದಲ್ಲಿ ಮಾರುತಿ ಸುಜುಕಿ(Maruti Suzuki) ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿರುವ ತನ್ನ ಬಹತೇಕ ಕಾರು ಮಾದರಿಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸದಾಗಿ ಆಲ್ಟೋ ಕೆ10(Alto K10) ಮಾದರಿಯಲ್ಲಿ ಹೊಸ ವರ್ಷನ್ ಪರಿಚಯಿಸಿದೆ. ಹೊಸ ಕಾರು ಮಾದರಿಯು ಹ್ಯಾಚ್ ಬ್ಯಾಕ್ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ಹೊಂದಿದ್ದು, ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಬೆಲೆ ಮತ್ತು ಮೈಲೇಜ್
ಆಲ್ಟೊ ಕೆ10 ಸಿಎನ್ ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಯ ವಿಎಕ್ಸ್ಐ ವೆರಿಯೆಂಟ್ ಆಧರಿಸಿ ಬಿಡುಗಡೆಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ.5.49 ಲಕ್ಷ ಬೆಲೆ ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಮಾರಾಟ ಮಾಡುತ್ತಿರುವ 13ನೇ ಸಿಎನ್ ಜಿ ಕಾರು ಇದಾಗಿದ್ದು, ಇದು ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿರಲಿದೆ. ಹೊಸ ಕಾರಿನಲ್ಲಿ ಕಂಪನಿಯು ಕೆ10ಸಿ ಒನ್ ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಕಿಟ್ ಹೊಂದಿರಲಿದೆ. ಇದು ಪ್ರತಿ ಕೆಜಿ ಸಿಎನ್ ಜಿ ಗೆ ಗರಿಷ್ಠ 33.85 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಈ ವಿಭಾಗದ ಅತ್ಯುತ್ತಮ ಮೈಲೇಜ್ ಪ್ರೇರಿತ ಕಾರು ಮಾದರಿಯಾಗಿದೆ.
ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿವೆ ಈ ಮೂರು ಬಹುನೀರಿಕ್ಷಿತ ಕಾರುಗಳು!
ಎಂಜಿನ್ ಮತ್ತು ಪರ್ಫಾಮೆನ್ಸ್
ಮಾರುತಿ ಸುಜುಕಿ ಹೊಸ ಆಲ್ಟೋ ಕೆ10 ಕಾರು ಉತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಗಮನ ಸೆಳೆಯುತ್ತದೆ. ಹೊಸ ಕಾರಿನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಎನ್ ಜಿ ಕಿಟ್ ಪರಿಚಯಿಸಿದೆ. ಇದು ಇದು 5300 ಆರ್ ಪಿಎಂ ನಲ್ಲಿ 55.9 ಹಾರ್ಸ್ ಪವರ್ ಮತ್ತು 3400 ಆರ್ ಪಿಎಂ ನಲ್ಲಿ 82.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ ಸಾಮಾನ್ಯ ಪೆಟ್ರೋಲ್ ಮಾದರಿಯು ಸಹ ಉತ್ತಮ ಇಂಧನ ದಕ್ಷತೆ ಹೊಂದಿದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ 24.9 ಕಿ.ಮೀ ಮೈಲೇಜ್ ನೊಂದಿಗೆ 64.3 ಹಾರ್ಸ್ ಪವರ್ ಮತ್ತು 89 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಕಾರಿನಲ್ಲಿ ಕಂಪನಿಯು ಸಿಎನ್ ಜಿ ಕಿಟ್ ಹೊರತಾಗಿಯೂ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡಿಲ್ಲ. ಸಿಎನ್ ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ತುಸು ಕಡಿಮೆ ಪಿಕ್ಅಪ್ ಹೊಂದಿದ್ದರೂ ಹೆಚ್ಚು ಇಂಧನ ದಕ್ಷತೆ ಖಾತ್ರಿಪಡಿಸುತ್ತದೆ. ಇದೇ ಕಾರಣಕ್ಕೆ ಮಾರುತಿ ಸುಜುಕಿಯು ತನ್ನ ವಿನೂತನ ತಂತ್ರಜ್ಞಾನ ಪ್ರೇರಿತ ಎಸ್- ಸಿಎನ್ ಜಿ ಮಾದರಿಗಳ ಮಾರಾಟವನ್ನು ವಿಸ್ತರಿಸುತ್ತಿದೆ. ಇದುವರೆಗೆ ಕಂಪನಿಯು ಸುಮಾರು 13 ಕಾರು ಮಾದರಿಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನು ಮಾರಾಟ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ಗ್ಲಾಂಝಾ ಸಿಎನ್ಜಿ ವರ್ಷನ್ ಬಿಡುಗಡೆ ಮಾಡಿದ ಟೊಯೊಟಾ
2010ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಸಿಎನ್ ಜಿ ಕಾರು ಮಾರಾಟ ಆರಂಭಿಸಿದ ಮಾರುತಿ ಸುಜುಕಿ ಕಂಪನಿಯು ಇದುವರೆಗೆ ಸುಮಾರು 1.5 ಮಿಲಿಯನ್ ಗೂ ಹೆಚ್ಚು ಯುನಿಟ್ ಮಾರಾಟ ಮಾಡಿದೆ. ಒಟ್ಟು ಕಾರು ಮಾರಾಟದಲ್ಲಿ ಸದ್ಯ ಶೇ. 13 ರಷ್ಟು ಸಿಎನ್ ಜಿ ಕಾರು ಮಾರಾಟ ಪಾಲು ಹೊಂದಿದೆ. ಶೀಘ್ರದಲ್ಲಿಯೇ ಮತ್ತಷ್ಟು ಕಾರುಗಳು ಸಿಎನ್ ಜಿ ವರ್ಷನ್ ಪಡೆದುಕೊಳ್ಳಲಿವೆ. ಇನ್ನು ಸಿಎನ್ ಜಿ ವಾಹನಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರವು ಸಹ ಸಿಎನ್ ಜಿ ಕೇಂದ್ರಗಳನ್ನು ಹೆಚ್ಚಿಸುತ್ತಿದ್ದು, ಕಡಿಮೆ ಮಾಲಿನ್ಯದೊಂದಿಗೆ ಇವು ಪರಿಸರ ಸ್ನೇಹಿ ಮಾದರಿಯಾಗಿ ಗುರುತಿಸಿಕೊಳ್ಳಲಿವೆ.
Published On - 6:02 pm, Sat, 19 November 22