2022 Maruti Suzuki Eeco: ವಿನೂತನ ಫೀಚರ್ಸ್, ಪವರ್ ಫುಲ್ ಎಂಜಿನ್ ನೊಂದಿಗೆ ಹೊಸ ಮಾರುತಿ ಇಕೋ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ತನ್ನ ಇಕೋ ವ್ಯಾನ್ 2022ರ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ವ್ಯಾನ್ ಹಲವಾರು ಹೊಸ ಸೌಲಭ್ಯಗಳೊಂದಿಗೆ ಪವರ್ ಫುಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.
ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki) ತನ್ನ ಹೊಸ ಇಕೋ(Eeco) ಬಿಡುಗಡೆ ಮಾಡಿದ್ದು, ಹೊಸ ವಾಹನವು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.13 ಲಕ್ಷ ಬೆಲೆ ಹೊಂದಿದೆ. ಹೊಸ ಇಕೋ ವಾಹನವು ಪ್ರಯಾಣಿಕರ ಆವೃತ್ತಿಯ ಜೊತೆ ವಾಣಿಜ್ಯ ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಆಯ್ಕೆ ಹೊಂದಿರಲಿದೆ.
ಹೊಸ ಇಕೋ ವಾಹನವು ಪ್ರಯಾಣಿಕರ ಆವೃತ್ತಿಯಲ್ಲಿ 5 ಸೀಟರ್ ಮತ್ತು 7 ಸೀಟರ್ ಆಯ್ಕೆಗಳನ್ನು ಹೊಂದಿದ್ದರೆ ವಾಣಿಜ್ಯ ಮಾದರಿಯಲ್ಲಿ ಕಾರ್ಗೊ, ಟೂರ್ ಮತ್ತು ಆ್ಯಂಬುಲೆನ್ಸ್ ಆವೃತ್ತಿಗಳನ್ನು ಹೊಂದಿರಲಿದೆ. ಹಾಗೆಯೇ ಹೊಸ ವಾಹನದಲ್ಲಿ ಈ ಹಿಂದಿನಂತೆ ಸಿಎನ್ ಜಿ ವರ್ಷನ್ ಸಹ ಖರೀದಿಗೆ ಲಭ್ಯವಿದ್ದು, ಹೊಸ ಮಾದರಿಯು ಹಳೆಯ ಮಾದರಿಗಿಂತ ರೂ. 50 ಸಾವಿರದಷ್ಟು ದುಬಾರಿಯಾಗಿದೆ.
ಎಂಜಿನ್ ಮತ್ತು ಮೈಲೇಜ್
ಮಾರುತಿ ಸುಜುಕಿ ಕಂಪನಿಯು ಹೊಸ ಇಕೋ ವಾಹನದಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ 1.2 ಲೀಟರ್ ಕೆ12ಸಿ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಗರಿಷ್ಠ 80 ಹಾರ್ಸ್ ಪವರ್ ಮತ್ತು 104.4 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಈ ಮೂಲಕ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 20.20 ಕಿ.ಮೀ ಮೈಲೇಜ್ ನೀಡುತ್ತದೆ.
ಹೊಸ ವಾಹನದಲ್ಲಿರುವ ಸಿಎನ್ ಜಿ ಮಾದರಿಯು 1.2 ಲೀಟರ್ ಕೆ12ಸಿ ಡ್ಯುಯಲ್ ಜೆಟ್ ಪೆಟ್ರೋಲ್ ಜೊತೆಗೆ ಸಿಎನ್ ಜಿ ಕಿಟ್ ಹೊಂದಿರಲಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಗರಿಷ್ಠ 71 ಹಾರ್ಸ್ ಪವರ್ ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 27.05 ಕಿ.ಮೀ ಮೈಲೇಜ್ ನೀಡುತ್ತದೆ.
ಡಿಸೈನ್ ಮತ್ತು ಫೀಚರ್ಸ್
2022ರ ಮಾರುತಿ ಇಕೋ ವ್ಯಾನ್ ಈ ಹಿಂದಿನ ಮಾದರಿಗಿಂತಲೂ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಹೊಂದಿಲ್ಲವಾದರೂ ಕಂಪನಿಯು ಹೊಸದಾಗಿ ಮೆಟಾಲಿಕ್ ಬ್ರಿಸ್ಕ್ ಬ್ಲ್ಯೂ ಬಣ್ಣದ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಈ ಹಿಂದಿನ ಮಾದರಿಯಲ್ಲಿದ್ದ ಸಾಲಿಡ್ ವೈಟ್, ಪರ್ಲ್ ಮಿಡ್ ನೈಟ್ ಬ್ಲ್ಯಾಕ್, ಮೆಟಾಲಿಕ್ ಸಿಲ್ಕಿ ಸಿಲ್ವರ್ ಮತ್ತು ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ ಬಣ್ಣಗಳ ಆಯ್ಕೆಗಳಿವೆ.
ಇದರೊಂದಿಗೆ ಹೊಸ ವ್ಯಾನ್ ನಲ್ಲಿ ಕಂಪನಿಯು ಈ ಬಾರಿ ಸುಧಾರಿತ ಡಿಜಿಟಲ್ ಇನ್ಟುಮೆಂಟ್ ಕ್ಲಸ್ಟರ್, ಹೊಸ ವಿನ್ಯಾಸ ಹೊಂದಿರುವ ಸ್ಟೀರಿಂಗ್ ವ್ಹೀಲ್, ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಆಸನಗಳು ಮತ್ತು ಏರ್ ಪೂರಿಫೈರ್ ಸೌಲಭ್ಯಗಳನ್ನು ನೀಡಲಾಗಿದೆ. ಜೊತೆಗೆ ಹೊಸ ವಾಹನದಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಈ 11 ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.
ಹೊಸ ವಾಹನದಲ್ಲಿ ಮಾರುತಿ ಸುಜುಕಿ ಕಂಪನಿಯು ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಚೈಲ್ಡ್ ಲಾಕ್, ರಿಯರ್ ಸ್ಲೈಡಿಂಗ್ ಡೋರ್ ಅಂಡ್ ವಿಂಡೋ, ಎಂಜಿನ್ ಇಮ್ಬುಲೈಜರ್ ಮತ್ತು ಹಜಾರ್ಡ್ ಸ್ವಿಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಈ ಮೂಲಕ ಹೊಸ ವಾಹನವು ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದ್ದು, ಇಕೋ ವಾಹನವು ಇದುವರೆಗೆ ಭಾರತದಲ್ಲಿ 9.75 ಲಕ್ಷ ಯುನಿಟ್ ಮಾರಾಟ ಗುರಿಸಾಧಿಸಿ ಇದೀಗ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
Published On - 1:19 pm, Mon, 28 November 22