Maruti Suzuki: 40ನೇ ವರ್ಷದ ಸಂಭ್ರಮಕ್ಕಾಗಿ ಮಾರುತಿ ಸುಜುಕಿ ನೆಕ್ಸಾ ಕಾರುಗಳಲ್ಲಿ ಬ್ಲ್ಯಾಕ್ ಎಡಿಷನ್ ಬಿಡುಗಡೆ
ಪ್ರಯಾಣಿಕರ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿ ಯಶಸ್ವಿ 40 ವರ್ಷಗಳನ್ನು ಪೂರೈಸಿದ್ದು, 40 ವರ್ಷಗಳ ಪೂರೈಸಿದ ಸಂಭ್ರಮಕ್ಕಾಗಿ ನೆಕ್ಸಾ ಕಾರುಗಳ ಮಾದರಿಗಳಲ್ಲಿ ವಿಶೇಷ ಆವೃತ್ತಿ ಪರಿಚಯಿಸಿದೆ.
ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿ ಬರೋಬ್ಬರಿ 40 ವರ್ಷ ಪೂರೈಸಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಪ್ರೀಮಿಯಂ ಕಾರು ಮಾದರಿಗಳಿಗಾಗಿ ಬ್ಲ್ಯಾಕ್ ಎಡಿಷನ್(Black Edition) ಪರಿಚಯಿಸಿದ್ದು, ವಿಶೇಷ ಆವೃತ್ತಿಗಳು ಸ್ಟ್ಯಾಂಡರ್ಡ್ ಮಾದರಿಯನ್ನೇ ಆಧರಿಸಿ ಮಾರುಕಟ್ಟೆ ಪ್ರವೇಶಿಸಿವೆ. ಹೊಸ ಕಾರು ಮಾದರಿಗಳನ್ನು ಸ್ಟ್ಯಾಂಡರ್ಡ್ ಮಾದರಿಗಳ ಬೆಲೆಯಲ್ಲಿಯೇ ಬಿಡುಗಡೆ ಮಾಡಿದ್ದು, ಇಂದಿನಿಂದಲೇ ಬುಕಿಂಗ್ ಆರಂಭಿಸಲಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ವಿವಿಧ ಸೆಗ್ಮೆಂಟ್ ಗಳಲ್ಲಿ 21 ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಎರಡು ಮಾದರಿಯ ಕಾರು ಮಾರಾಟ ಮಳಿಗೆಗಳನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾದಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಶೋರೂಂನಲ್ಲಿ ಮಾರಾಟ ಮಾಡುತ್ತಿದೆ.
ವೆರಿಯೆಂಟ್ ಮತ್ತು ಬೆಲೆ
ಹೊಸ ಕಾರುಗಳಲ್ಲಿ ಇಗ್ನಿಸ್ ಬ್ಲ್ಯಾಕ್ ಎಡಿಷನ್ ಜಿಟಾ ಮತ್ತು ಅಲ್ಫಾ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 6.47 ಲಕ್ಷದಿಂದ ರೂ. 7.72 ಲಕ್ಷ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಿದ್ದರೆ ಸಿಯಾಜ್ ಸೆಡಾನ್ ಕಾರಿನ ಎಲ್ಲಾ ವೆರಿಯೆಂಟ್ ಗಳಲ್ಲೂ ಬ್ಲ್ಯಾಕ್ ಎಡಿಷನ್ ಆಯ್ಕೆಯೊಂದಿಗೆ ರೂ. 8.99 ಲಕ್ಷದಿಂದ ರೂ. 11.99 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಬಲೆನೊ ಕಾರು ಮಾದರಿಯಲ್ಲಿ ಬ್ಲ್ಯಾಕ್ ಎಡಿಷನ್ ಎಕ್ಸ್ ಶೋರೂಂ ಪ್ರಕಾರ ರೂ. 6.99 ಲಕ್ಷದಿಂದ ರೂ. 9.71 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್ಎಲ್6 ಬ್ಲ್ಯಾಕ್ ಎಡಿಷನ್ ಮಾದರಿಯು ರೂ.12.29 ಲಕ್ಷದಿಂದ ರೂ. 14.39 ಲಕ್ಷಕ್ಕೆ ಮತ್ತು ಗ್ರ್ಯಾಂಡ್ ವಿಟಾರಾ ಬ್ಲ್ಯಾಕ್ ಎಡಿಷನ್ ರೂ. 13.89 ಲಕ್ಷದಿಂದ ರೂ. 19.49 ಲಕ್ಷ ಬೆಲೆ ಹೊಂದಿದೆ.
ಲಿಮಿಟೆಡ್ ಎಡಿಷನ್ ಆಕ್ಸೆಸರಿಸ್
ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಕಾರು ಮಾದರಿಗಳಿಗಾಗಿ ಬ್ಲ್ಯಾಕ್ ಎಡಿಷನ್ ವೆರಿಯೆಂಟ್ ಜೊತೆಗೆ ಲಿಮಿಟೆಡ್ ಎಡಿಷನ್ ಆಕ್ಸಸರಿಸ್ ಪ್ಯಾಕೇಜ್ ಪರಿಚಯಿಸಿದ್ದು, ಆಕರ್ಷಕ ಬೆಲೆಯಲ್ಲಿ ಹಲವಾರು ಸ್ಪೋರ್ಟಿ ಲುಕ್ ಹೊಂದಿರುವ ಆಕ್ಸೆಸರಿಸ್ ನೀಡುತ್ತಿದೆ. ಲಿಮಿಟೆಡ್ ಎಡಿಷನ್ ಆಕ್ಸೆಸರಿಸ್ ಗಳು ಮೂಲ ಬೆಲೆಗಿಂತಲೂ ರೂ. 5 ಸಾವಿರದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿರಲಿದ್ದು, ಇವು ಕಾರಿಗೆ ಐಷಾರಾಮಿ ಲುಕ್ ನೀಡಲಿವೆ.
ಎಂಜಿನ್ ಆಯ್ಕೆ
ಹೊಸ ಕಾರುಗಳಲ್ಲಿ ಕಂಪನಿಯು ಹೊಸ ಬಣ್ಣದ ಆಯ್ಕೆ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಹೊರತಾಗಿ ಯಾವುದೇ ಎಂಜಿನ್ ಬದಲಾವಣೆ ತರಲಾಗಿಲ್ಲ. ಸಾಮಾನ್ಯ ಮಾದರಿಯಲ್ಲಿರುವಂತೆ ವಿವಿಧ ಕಾರು ಮಾದರಿಗಳಿಗೆ ಅನ್ವಯಿಸುವಂತೆ 1.2 ಲೀಟರ್ ಪೆಟ್ರೋಲ್, 1.5 ಲೀಟರ್ ಕೆ15 ಸಿ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ನೀಡಲಾಗಿದ್ದು, ವಿವಿಧ ವೆರಿಯೆಂಟ್ ಗಳಲ್ಲಿ ಸಿಎನ್ ಜಿ ಆಯ್ಕೆ ಗಮನಸೆಳೆಯುತ್ತಿವೆ.