Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 22ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 22ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಯಾವುದೇ ವಿಚಾರದಲ್ಲಿ ಉಲ್ಲಾಸ- ಉತ್ಸಾಹದಿಂದ ತೊಡಗಿಕೊಳ್ಳಲು ಮನಸ್ಸು ಇರುವುದಿಲ್ಲ. ಆದಾಯದಲ್ಲಿ ಇಳಿಕೆ ಆಗುತ್ತಿದೆ ಎಂಬುದು ಒಂದು ಕಡೆಯ ಚಿಂತೆಯಾದರೆ, ಅದನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂಬುದು ಇನ್ನೊಂದು ಕಡೆಯ ಬೇಸರಕ್ಕೆ ಕಾರಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ದೂರ ಇಟ್ಟು, ಕೆಲವು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರಲಿದ್ದು, ಸಂಬಂಧಪಟ್ಟವರಲ್ಲಿ ಇದನ್ನು ಕೇಳಿಯೂ ಕೇಳಲಿದ್ದೀರಿ. ಪ್ರಾಣಿಗಳಿಂದ ಕಡಿತಕ್ಕೆ ಒಳಗಾಗುವ ಯೋಗ ಇದೆ, ಆದ್ದರಿಂದ ನೀವು ಅಂಥ ಪರಿಸರದಲ್ಲಿ ಓಡಾಡುವಾಗಲೋ ಅಥವಾ ಕಾರ್ಯ ನಿರ್ವಹಣೆ ಮಾಡುವಾಗಲೋ ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯನ್ನು ವಹಿಸಿ. ಎಲೆಕ್ಟ್ರಿಕಲ್ ಸಾಧನಗಳ ಮಾರಾಟ ಮಳಿಗೆ ಇಟ್ಟಿರುವವರಿಗೆ ಆದಾಯ ಮೂಲ ಹೆಚ್ಚಿಕೊಳ್ಳುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ. ಆದರೆ ಇದರ ಬಗ್ಗೆ ನಿಮ್ಮ ಆಸಕ್ತಿ ಕುದುರುವುದಿಲ್ಲ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮನಸ್ಸಿಗೆ ಸಮಾಧಾನ ತರುವಂಥ ಬೆಳವಣಿಗೆಗಳು ಆಗಲಿವೆ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಇಂಟರ್ ವ್ಯೂ ಕರೆ ಬರಬಹುದು. ಇನ್ನು ವೃತ್ತಿಪರರು ನೀವಾಗಿಯೇ ಕೆಲವು ಕ್ಲೈಂಟ್ ಗಳಿಗೆ ಇನ್ನು ಕೆಲಸ ಮಾಡಿಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿದ್ದೀರಿ. ಊಟ- ತಿಂಡಿಗಾಗಿ ದೂರದ ಸ್ಥಳಗಳಿಗೆ ಹುಡುಕಿಕೊಂಡು ಹೋಗಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರು ಸಹ ಜೊತೆಯಾಗುತ್ತಾರೆ. ಕೋರ್ಟ್- ಕಚೇರಿ ಅಲೆದಾಟ ಮಾಡುತ್ತಿರುವವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬ ಪ್ರಸ್ತಾವವನ್ನು ನಿಮ್ಮ ಎದುರಿನ ಪಾರ್ಟಿಯವರಿಂದ ಬರುವ ಸಾಧ್ಯತೆ ಇದೆ. ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಒಳ್ಳೆಯದು. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನಿರೀಕ್ಷಿತವಾಗಿ ಆತಂಕ ಎದುರಾಗಲಿದೆ. ಯಾವುದೋ ಮುಖ್ಯವಾದ ಸಂಗತಿಯನ್ನು ಮರೆತಿದ್ದೀರಿ ಎಂಬುದು ಈ ಆತಂಕದ ಮೂಲ ಆಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಯಾಕೆ- ಏನು ಎಂಬ ಪ್ರಶ್ನೆ ಮಾಡದೆ ತಮಗೆ ಬೇಕಾದ ಕೆಲಸವನ್ನು ಮಾಡಿಕೊಡಬೇಕು ಎಂಬುದು ನಿಮ್ಮ ಸ್ನೇಹಿತರ ನಿರೀಕ್ಷೆ ಆಗಿರಲಿದೆ. ಇದಕ್ಕಾಗಿ ನಡೆಯುವ ಮಾತುಕತೆ ವೇಳೆ ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರು ಆಗಲಿದೆ. ಮನೆ- ಮಳಿಗೆ ನಿರ್ಮಾಣದಲ್ಲಿ ತೊಡಗಿಕೊಂಡವರು ನಿಯಮಾನುಸಾರ ಕೆಲಸ- ಕಾರ್ಯಗಳು ನಡೆಯುತ್ತಾ ಇವೆಯೇ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು ಒಳ್ಳೆಯದು. ಆಸಕ್ತಿಯಿಂದ ಸೇರಿಕೊಂಡಿದ್ದ ಕೋರ್ಸ್ ವೊಂದರಲ್ಲಿ ಮುಂದುವರಿಯುವುದು ಸಾಧ್ಯ ಇಲ್ಲ ಎಂಬುದು ಖಚಿತವಾಗಿ, ಬೇಸರ ಮಾಡಿಕೊಳ್ಳುವಂತೆ ಆಗಲಿದೆ. ಯೂಟ್ಯೂಬರ್ ಗಳಿಗೆ ಖರ್ಚಿನ ಪ್ರಮಾಣ ಹೆಚ್ಚಲಿದ್ದು, ಅದನ್ನು ಹೇಗೆ ಹೊಂದಾಣಿಕೆ ಮಾಡುವುದು ಎಂಬುದೇ ತಿಳಿಯದೆ ಕಂಗಾಲಾಗುತ್ತೀರಿ. ಮನೆಯಲ್ಲಿ ಹಿರಿಯರು ಹೇಳುವಂಥ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಎಲ್ಲ ವಿಚಾರಕ್ಕೂ ಪ್ಲಾನ್ ಬಿ ಮಾಡಿಕೊಳ್ಳುವ ನಿಮ್ಮ ವಿಧಾನದಿಂದ ದೊಡ್ಡ ಅನುಕೂಲ ಆಗಲಿದೆ. ಕಠಿಣವಾದ ವಿಷಯಗಳನ್ನು ಸಹ ಸಲೀಸಾಗಿ ಅರ್ಥ ಮಾಡಿಕೊಳ್ಳುವ ರೀತಿಯಿಂದಾಗಿಯೇ ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುತ್ತಾರೆ. ದೊಡ್ಡ ಮಟ್ಟದ ಖರ್ಚು ಬರಬಹುದು ಎಂದು ಅಂದಾಜು ಮಾಡಿಕೊಂಡಿದ್ದು, ತುಂಬ ಕಡಿಮೆ ಮೊತ್ತದಲ್ಲಿ ಅಂದುಕೊಂಡ ರೀತಿಯಲ್ಲಿಯೇ ಕೆಲಸ ಮುಗಿಯುತ್ತದೆ. ಉದ್ಯೋಗ ಬಿಟ್ಟು ಹೊಸ ವ್ಯವಹಾರ- ವ್ಯಾಪಾರ ಆರಂಭಿಸುವ ನಿರ್ಧಾರದ ಬಗ್ಗೆ ನಿಮ್ಮಲ್ಲಿ ಕೆಲವರು ಸ್ನೇಹಿತರ ಜೊತೆಗೆ ಚರ್ಚೆ ಮಾಡಲಿದ್ದೀರಿ. ಇನ್ನೂ ಕೆಲವರು ಆಹಾರದ ವ್ಯವಹಾರ ಶುರು ಮಾಡುವುದಕ್ಕೆ ಎಲ್ಲ ಸಿದ್ಧತೆ ಮುಗಿಸಿರುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗ ಮಾಡುತ್ತಾ ಇರುವವರಿಗೆ ಉದ್ಯೋಗದ ಆಫರ್ ಬರಬಹುದು. ಇಂಟರ್ನ್ ಷಿಪ್ ಮಾಡುವಂತೆ ಸಹ ಪ್ರಸ್ತಾವವನ್ನು ನಿಮ್ಮ ಮುಂದೆ ಇಡಲಿದ್ದಾರೆ. ಒಟ್ಟಾರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ದಿನ ಇದಾಗಿರುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಕೆಲವು ಬದಲಾವಣೆಗೆ ಸಂಬಂಧಿಸಿದಂತೆ ನಿಮ್ಮನ್ನು ಒಪ್ಪಿಸುವುದಕ್ಕೆ ಸಹೋದ್ಯೋಗಿಗಳು ಪ್ರಯತ್ನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿಯ ತನಕ ಎಲ್ಲಿಯೂ ಹೇಳಿಕೊಳ್ಳದ ಸಂಗತಿಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವಂತೆ ಆಗಲಿದೆ. ನಿಮ್ಮ ಸಾಮರ್ಥ್ಯ, ಬದ್ಧತೆ, ಅದರಿಂದ ಆಗಿರುವ ಅನುಕೂಲಗಳ ಬಗ್ಗೆ ಮಾತನಾಡುತ್ತೀರಿ. ಇದರ ಆಚೆಗೆ ಆಗುವ ಯಾವುದೇ ಬದಲಾವಣೆಗೆ ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ ಎಂಬುದನ್ನು ಸಹ ಹೇಳಲಿದ್ದೀರಿ. ಯಾವುದಾದರೂ ನಿರ್ದಿಷ್ಟ ಕಾಯಿಲೆ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ಏನಾದರೂ ಸೂಚಿಸಿದ್ದಲ್ಲಿ ಗಂಭೀರ ಸಮಸ್ಯೆ ಇಲ್ಲ ಎಂಬುದು ತಿಳಿದುಬರಲಿದೆ. ಸಮಾರಂಭಗಳಿಗೆ ತೆರಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಆಪತ್ಕಾಲಕ್ಕೆ ಇರಲಿ ಎಂಬ ಉದ್ದೇಶದಿಂದ ಕೂಡಿಟ್ಟುಕೊಂಡಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವ ಆಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಹತ್ತಿರ ಏನಿದೆಯೋ ಅದು ಮಾತ್ರ ನಿಮ್ಮದು. ನೀವು ಬೇರೆಯವರಿಗೆ ಕೊಟ್ಟಂಥ ಸಾಲ, ಈಗಾಗಲೇ ಕೆಲಸ ಮಾಡಿಯಾಗಿದೆ ಅದರ ಹಣ ಬರಬೇಕಿದೆ, ಸ್ನೇಹಿತರು- ಸಂಬಂಧಿಕರು ಸಹಾಯ ಮಾಡುವುದಾಗಿ ಕೊಟ್ಟಂಥ ಮಾತು ಇದ್ಯಾವುದನ್ನೂ ನೆಚ್ಚಿಕೊಂಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಹೋಟೆಲ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಪ್ರೀತಿಯಲ್ಲಿ ಇರುವವರು ಜೊತೆಯಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಭವಿಷ್ಯದ ಬಗ್ಗೆ ಗಂಭೀರವಾದ ಚರ್ಚೆ ಸಹ ಮಾಡಲಿದ್ದೀರಿ. ಇಷ್ಟು ಸಮಯ ಮಾತನಾಡದೆ ಉಳಿದು ಹೋಗಿದ್ದ ಕೆಲವು ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಯಾರ ಜತೆಗೂ ಅತಿಯಾದ ಸಲುಗೆ ಬೇಡ. ಇದನ್ನು ಮೀರಿಯೂ ನಡೆದುಕೊಂಡಲ್ಲಿ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ, ಮುಜುಗರದ ಸನ್ನಿವೇಶ ಎದುರಿಸುವಂತೆ ಆಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಯೋಗ ಇದೆ. ಬಹಳ ಸಮಯದಿಂದ ನೀವು ಹೇಳಬೇಕು ಅಂದುಕೊಳ್ಳುತ್ತಾ ಇದ್ದ ಕೆಲವು ವಿಚಾರಗಳನ್ನು ಸಂಬಂಧ ಪಟ್ಟವರಿಗೆ ಹೇಳಲಿದ್ದೀರಿ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ನೀವು ಕೈಯಿಂದ ಹಣ ಹಾಕಿ, ಮಾಡಿಕೊಟ್ಟ ಕೆಲಸದ ಬಾಕಿ ವಸೂಲಿ ಮಾಡುವುದು ಈ ದಿನ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕುದುರುವುದು ಕಷ್ಟ ಆಗಲಿದೆ. ಸ್ನೇಹಿತರ ಜೊತೆಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಅದು ಕೂಡ ಯಾವುದೇ ಯೋಜನೆ ಇಲ್ಲದೆ ದಿಢೀರ್ ಹೊರಟುಬಿಡುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಯಾವುದೇ ಸನ್ನಿವೇಶವನ್ನು ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡುವುದಕ್ಕೆ ಹೋಗಬೇಡಿ. ಲಾಭಕ್ಕೆ ಬರಲಾರದು ಎಂದೆನಿಸಿದ್ದನ್ನು ನಿಲ್ಲಿಸಿಬಿಡುವುದು ಒಳ್ಳೆಯದು. ಆಯುರ್ವೇದ ಔಷಧಗಳ ವಿತರಣೆ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮನೆಯ ಖರ್ಚು ವೆಚ್ಚಗಳು ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿಗೆ ಆಗಲಿದೆ. ಆದಾಯ ಹಾಗೂ ಅದನ್ನು ಬಳಸುವುದಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಆದಾಯದ ಮೂಲ ಜಾಸ್ತಿ ಮಾಡಿಕೊಳ್ಳಲು ಹಾಕುವಂಥ ಶ್ರಮ ಫಲ ನೀಡುತ್ತದೆ. ಸಂಗಾತಿ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅವರ ಬೇಕು- ಬೇಡಗಳನ್ನು ಕೇಳಿಕೊಂಡು, ಅದನ್ನು ಒದಗಿಸಿಕೊಡಲು ಆದ್ಯತೆ ನೀಡಲಿದ್ದೀರಿ. ನಿಮ್ಮ ನಿಲವು- ಉದ್ದೇಶದ ಬಗ್ಗೆ ಸಂಬಂಧಿಕರು ಆಕ್ಷೇಪದ ಮಾತುಗಳನ್ನು ಹೇಳಲಿದ್ದಾರೆ. ನೀವು ಸಹ ಇಂಥ ಮಾತುಗಳಿಗೆ ಅಲ್ಲಿಂದ ಅಲ್ಲಿಗೆ ಎಂಬಂತೆ ಉತ್ತರವನ್ನು ಸಹ ನೀಡುತ್ತೀರಿ. ದೊಡ್ಡ ಅಳತೆಯ ಸೈಟು ಇರುವವರು ಅದನ್ನು ಮಾರಾಟ ಮಾಡಿ, ಕಟ್ಟಿರುವ ಮನೆ ಖರೀದಿ ಮಾಡುವ ಬಗ್ಗೆ ಆಲೋಚಿಸುತ್ತೀರಿ. ಅದರಲ್ಲೂ ತಿಂಗಳಾ ತಿಂಗಳು ಬಾಡಿಗೆ ರೂಪದಲ್ಲಿ ನಿಗದಿತ ಆದಾಯ ಮಾಡಿಕೊಳ್ಳುವ ಕಡೆಗೆ ಗಮನ ಇರಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿರ್ಭಾವುಕ ನಿರ್ಧಾರ ತೆಗೆದುಕೊಳ್ಳಬೇಕು, ಯಾರನ್ನೂ ಹಚ್ಚಿಕೊಳ್ಳಬಾರದು ಎಂದುಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುತ್ತಿರುವುದು ತಲುಪಲು ಸಾಧ್ಯ ಇಲ್ಲದಷ್ಟು ಎತ್ತರದಲ್ಲಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ನೀವು ಒಪ್ಪಿಸಿದ ಕೆಲಸ- ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದರಿಂದ ನೀವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೀರಿ. ಪ್ರಯಾಣಕ್ಕೆ ಹೆಚ್ಚು ಖರ್ಚು ಮಾಡುವ ಯೋಗ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ನಿಮ್ಮ ಬದ್ಧತೆಗೆ ಸ್ನೇಹಿತರು- ಸಂಬಂಧಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಇತರರು ತಮ್ಮಿಂದ ಆಗದು ಎಂದು ಅರ್ಧಕ್ಕೇ ನಿಲ್ಲಿಸಿದಂಥ ಪ್ರಾಜೆಕ್ಟ್ ಅನ್ನು ನೀವು ಕೈಗೆತ್ತಿಕೊಂಡು, ಸಮಾಧಾನ ಆಗುವ ಮಟ್ಟಕ್ಕೆ ಪೂರ್ಣ ಮಾಡಲಿದ್ದೀರಿ. ಹಣಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಬೇಡಿ.




