Mercedes EQB: ಬಹುನೀರಿಕ್ಷಿತ ಇಕ್ಯೂಬಿ ಎಲೆಕ್ಟ್ರಿಕ್ ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್
ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಬಹನೀರಿಕ್ಷಿತ ಇಕ್ಯೂಬಿ ಎಲೆಕ್ಟ್ರಿಕ್ 7 ಸೀಟರ್ ಎಸ್ ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಐಷಾರಾಮಿ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮರ್ಸಿಡಿಸ್ ಬೆಂಝ್(Mercedes Benz) ಕಂಪನಿಯು ತನ್ನ ಹೊಸ ಇಕ್ಯೂಬಿ(EQB) ಎಲೆಕ್ಟ್ರಿಕ್ ಎಸ್ ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 74.50 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಬಿಡುಗಡೆಯೊಂದಿಗೆ ಮರ್ಸಿಡಿಸ್ ಕಂಪನಿಯು ಬುಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದ್ದು, ಹೊಸ ಕಾರು 2023ರ ಆರಂಭದಲ್ಲಿ ವಿತರಣೆಗೊಳ್ಳಲಿದೆ. ಹೊಸ ಇಕ್ಯೂಬಿ ಎಲೆಕ್ಟ್ರಿಕ್ ಮಾದರಿಯು ಕೇವಲ ಒಂದೇ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿರಲಿದ್ದು, ಭಾರತದಲ್ಲಿ ಇದು ಮರ್ಸಿಡಿಸ್ ಬೆಂಝ್ ಕಂಪನಿಯು ಬಿಡುಗಡೆ ಮಾಡಿರುವ ಮೂರನೇ ಎಲೆಕ್ಟ್ರಿಕ್ ಕಾರು ಮಾದರಿಯಾಗಿದೆ.
ಬ್ಯಾಟರಿ ಮತ್ತು ಮೈಲೇಜ್
ಇಕ್ಯೂಬಿ ಎಲೆಕ್ಟ್ರಿಕ್ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು 66.5kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಇದು ಡ್ಯುಯಲ್ ಮೋಟಾರ್ ಮತ್ತು ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 423 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಡ್ಯುಯಲ್ ಮೋಟಾರ್ ಹೊಂದಿರುವುದರಿಂದ ಹೊಸ ಇವಿ ಕಾರು ಅತ್ಯುತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, ಇದು 225 ಹಾರ್ಸ್ ಪವರ್ ಮತ್ತು 390 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 7.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಇದರೊಂದಿಗೆ ಹೊಸ ಕಾರು ಪ್ರತಿ ಗಂಟೆಗೆ 160 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ. ಇನ್ನು ಹೊಸ ಇಕ್ಯೂಬಿ ಇವಿ ಕಾರಿನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಸ್ಟ್ಯಾಂಡರ್ಡ್ ಆಗಿ 11kW ಎಸಿ ಚಾರ್ಜರ್ ಜೊತೆಗೆ 100kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ನೀಡಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದಲ್ಲಿ ಕೇವಲ 32 ನಿಮಿಷಗಳ ಚಾರ್ಜ್ ಮೂಲಕ ಶೇ. 10 ರಿಂದ ಶೇ.80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಇಕ್ಯೂಬಿ ಕಾರು ಸಾಮಾನ್ಯ ಕಾರು ಮಾದರಿಯಾದ ಜಿಎಲ್ ಬಿ ಎಸ್ ಯುವಿ ಪ್ಲ್ಯಾಟ್ ಫಾರ್ಮ್ ಹಂಚಿಕೊಂಡಿದ್ದು, ಹೊಸ ಕಾರು 4,684 ಎಂಎಂ ಉದ್ದ, 1,834 ಎಂಎಂ ಅಗಲ, 1,667 ಎಂಎಂ ಎತ್ತರ, 2,829 ಎಂಎಂ ವ್ಹೀಲ್ ಬೆಸ್ ನೊಂದಿಗೆ ಆರಾಮದಾಯಕ 7 ಸೀಟರ್ ಸೌಲಭ್ಯ ಹೊಂದಿದೆ. ಹೊಸ ಇವಿ ಎಸ್ ಯುವಿಯು ಒಟ್ಟು 2,175 ಕೆಜಿ ತೂಕ ಹೊಂದಿದ್ದು, 495 ಲೀಟರ್ ಬೂಟ್ ಸ್ಪೆಸ್ ನೊಂದಿಗೆ ಹೆಚ್ಚಿನ ಸೌಕರ್ಯಗಳನ್ನು ಹೊಂದಿದೆ.
ಮುಂಭಾಗದಿಂದ ಹೊಸ ಇವಿ ಕಾರಿನ ವಿನ್ಯಾಸವು ಸಾಮಾನ್ಯ ಜಿಎಲ್ ಬಿ ಕಾರು ಮಾದರಿಯನ್ನು ನೆನಪಿಸಲಿದ್ದು, ಬಾಕ್ಸಿ ಶೈಲಿಯೊಂದಿಗೆ ಬ್ಲ್ಯೂ ಹೆಡ್ ಲೈಟ್ಸ್, ಕನೆಕ್ಟೆಡ್ ಲೈಟ್ ಬಾರ್, ಬ್ಲ್ಯಾಕ್ಡ್ ಆಫ್ ಗ್ರಿಲ್, 18 ಇಂಚಿನ ಅಲಾಯ್ ವ್ಹೀಲ್, ಲೈಟ್ ಬಾರ್ ಸ್ಟೈಲ್ ಹೊಂದಿರುವ ಟೈಲ್ ಲೈಟ್ ಹೊಂದಿರಲಿದೆ. ಹಾಗೆಯೇ ಹೊಸ ಕಾರಿನ ಇಂಟಿರಿಯರ್ ಕೂಡಾ ಸಾಕಷ್ಟು ಆಕರ್ಷಕವಾಗಿದ್ದು, ಎರಡನೇ ಸಾಲಿನ ಆಸನವನ್ನು ವಿಸ್ತರಿಸಬಹುದಾಗಿದೆ. ಮೂರನೇ ಸಾಲಿನಲ್ಲಿ ಪ್ರಯಾಣಿಕರು ಇಲ್ಲದಿರುವಾಗ ಗರಿಷ್ಠ ಮಡಿಕೆಯೊಂದಿಗೆ ಎರಡನೇ ಸಾಲಿನ ಲೆಗ್ ರೂಂ ವಿಸ್ತರಣೆ ಮಾಡಬಹುದಾಗಿದ್ದು, ಡ್ಯುಯಲ್ ಡಿಸ್ ಪ್ಲೇ ಸೆಟಪ್ ಐಷಾರಾಮಿ ಚಾಲನೆಗೆ ಪೂರಕವಾಗಿದೆ.
ಇದರೊಂದಿಗೆ ಭಾರತದಲ್ಲಿ ಸದ್ಯ ಹೊಸ ಕಾರಿಗೆ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲವಾದರೂ ಬೆಲೆ ವಿಚಾರವಾಗಿ ವೊಲ್ವೊ ಎಕ್ಸ್40 ರೀಚಾರ್ಜ್ ಮತ್ತು ಕಿಯಾ ಇವಿ6 ಮಾದರಿಗಳಿಂತಲೂ ಉತ್ತಮವಾಗಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ರೂ. 17 ಲಕ್ಷದಷ್ಟು ಹೆಚ್ಚುವರಿ ಬೆಲೆಯೊಂದಿಗೆ 3ನೇ ಸಾಲಿನ ಆಸನ ಸೌಲಭ್ಯ ಒದಗಿಸುವುದರ ಜೊತೆಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
Published On - 7:34 pm, Fri, 2 December 22