Toyota Innova Crysta: 2023ರ ಟೊಯೊಟಾ ಇನೋವಾ ಕ್ರಿಸ್ಟಾ ಡೀಸೆಲ್ ವರ್ಷನ್ ಬಿಡುಗಡೆ
ಟೊಯೊಟಾ ಇಂಡಿಯಾ ಕಂಪನಿಯು ತನ್ನ ನವೀಕೃತ ಎಂಜಿನ್ ಪ್ರೇರಿತ ಇನೋವಾ ಕ್ರಿಸ್ಟಾ ಎಂಪಿವಿ ಆವೃತ್ತಿಯನ್ನ ಆಕರ್ಷಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ(Toyota) ಕಂಪನಿಯು ನವೀಕೃತ ಎಂಜಿನ್ ಆಯ್ಕೆಯೊಂದಿಗೆ ಇನೋವಾ ಕ್ರಿಸ್ಟಾ(Innova Crysta) ಮಾದರಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಹೊಸ ಎಂಜಿನ್ ಆಯ್ಕೆ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಈ ಬಾರಿ ಮಹತ್ವದ ಬದಲಾವಣೆ ಪರಿಚಯಿಸಿರುವ ಟೊಯೊಟಾ ಕಂಪನಿಯು ಡೀಸೆಲ್ ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಕಾರಿನಲ್ಲಿ ಪೆಟ್ರೋಲ್ ಮಾದರಿಯ ಆಯ್ಕೆಯನ್ನ ಕೈಬಿಟ್ಟಿದೆ.
ವೆರಿಯೆಂಟ್ ಗಳು ಮತ್ತು ಬೆಲೆ
ಹೊಸ ಇನೋವಾ ಕ್ರಿಸ್ಟಾ ಕಾರು ಮಾದರಿಯು ಜಿ, ಜಿಎಕ್ಸ್ ಮತ್ತು ವಿಎಕ್ಸ್ ವೆರಿಯೆಂಟ್ ಗಳಲ್ಲಿ ಮಾರಾಟಗೊಳ್ಳಲಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 19.13 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹಾಗೆಯೇ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯು ರೂ. 20.09 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಟ್ಯಾಕ್ಸಿ ಆಪರೇಟರ್‌ಗಳು ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ ಹೊಸ ಕಾರನ್ನ ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಎಂಜಿನ್ ಆಯ್ಕೆ
ಟೊಯೊಟಾ ಇಂಡಿಯಾ ಕಂಪನಿಯು ಹೊಸ ಇನೋವಾ ಕ್ರಿಸ್ಟಾದಲ್ಲಿ ಈ ಹಿಂದಿನ 2.4 ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನೇ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿ ಜೋಡಣೆ ಮಾಡಿದೆ. ಹೊಸ ಮಾನದಂಡದಿಂದಾಗಿ ಡೀಸೆಲ್ ಮಾದರಿಯು ಈ ಹಿಂದಿನ ಕಡಿಮೆ ಮಾಲಿನ್ಯ ಉತ್ಪಾದನೆಯೊಂದಿಗೆ ಹೆಚ್ಚಿನ ಇಂಧನ ದಕ್ಷತೆ ಹೊಂದಿರಲಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.
ಇದರೊಂದಿಗೆ ಇನೋವಾ ಕ್ರಿಸ್ಟಾ ಇನ್ಮುಂದೆ ಡೀಸೆಲ್ ಮ್ಯಾನುವಲ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿರದ್ದು, ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಎಂಜಿನ್ ಖರೀದಿ ಬಯಸುವ ಗ್ರಾಹಕರು ಇನೋವಾ ಹೈಕ್ರಾಸ್ ಆವೃತ್ತಿಯನ್ನು ಆಯ್ಕೆ ಮಾಡಬಹುದಾಗಿದೆ.
ವಿನ್ಯಾಸ ಮತ್ತು ಫೀಚರ್ಸ್
ಹೊಸ ಇನೋವಾ ಕ್ರಿಸ್ಟಾ ಮಾದರಿಯು ಮರುವಿನ್ಯಾಸಗೊಳಿಸಲಾದ ಫ್ರಂಟ್ ಫಾಸಿಯಾ ಮತ್ತು ಬಂಪರ್ ಹೊರತುಪಡಿಸಿ ಇನ್ನುಳಿದಂತೆ ಹಳೆಯ ಮಾದರಿಯ ವಿನ್ಯಾಸವನ್ನೇ ಹೊಂದಿದ್ದು, 7 ಸೀಟರ್ ಮತ್ತು 8 ಸೀಟರ್ ಆಸನ ಸೌಲಭ್ಯದ ಆಯ್ಕೆ ಹೊಂದಿದೆ. ಹಾಗೆಯೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನ ಬೆಸ್ ವೆರಿಯೆಂಟ್ ನಲ್ಲೂ ಲಭ್ಯವಾಗುವಂತೆ 7 ಏರ್ ಬ್ಯಾಗ್ ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೇರಿದಂತೆ 8 ಇಂಚಿನ ಟಚ್ ಸ್ಕ್ರೀನ್, ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಕನೆಕ್ಟಿವಿಟಿ ಸೌಲಭ್ಯಗಳಿವೆ.
Published On - 7:20 pm, Mon, 20 March 23