ಬಿಡುಗಡೆಗೆ ಸಜ್ಜಾಗಿದೆ ಭರ್ಜರಿ ಮೈಲೇಜ್ ನೀಡುವ ರೆನಾಲ್ಟ್ ಇವಿ 5 ಕಾರು
ರೆನಾಲ್ಟ್ ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಇವಿ 5 ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಜಿನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಲಿದೆ.
ಜಾಗತಿಕ ಮಾರುಕಟ್ಟೆಗಾಗಿ ಹೊಸ ತಲೆಮಾರಿನ ವಿವಿಧ ಕಾರು ಮಾದರಿಗಳನ್ನು ಅನಾವರಣಗೊಳಿಸುತ್ತಿರುವ ರೆನಾಲ್ಟ್ (Renault) ಕಂಪನಿಯು ಶೀಘ್ರದಲ್ಲಿಯೇ ಇವಿ 5 ಎಲೆಕ್ಟ್ರಿಕ್ ಹ್ಯಾಕ್ ಬ್ಯಾಕ್ ಕಾರು ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಹೊಸ ಇವಿ ಕಾರು ಮಾದರಿಯು ವಿನೂತನ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ. ಹೊಸ ಇವಿ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಮಾದರಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಇದು 2024ರ ಫೆಬ್ರವರಿ 26ರಂದು ನಡೆಯಲಿರುವ ಜಿನೆವಾ ಮೋಟಾರ್ ಶೋನಲ್ಲಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ.
ಹೊಸ ಇವಿ 5 ಎಲೆಕ್ಟ್ರಿಕ್ ಕಾರು ಮಾದರಿಯು ರೆನಾಲ್ಟ್ ಕಂಪನಿಯ ಎಎಂಪಿಆರ್ ಸಣ್ಣ ಕಾರುಗಳ ಉತ್ಪಾದನಾ ಪ್ಲ್ಯಾಟ್ ಫಾರ್ಮ ಆಧರಿಸಿ ಅಭಿವೃದ್ದಿಗೊಳ್ಳುತ್ತಿದ್ದು, ಇದು 52 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಜೋಯ್ ಮತ್ತು ಕ್ಲಿಯೊ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿನ ಹಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಪ್ರತಿ ಚಾರ್ಜ್ ಗೆ 380ರಿಂದ 400 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೊಂದಿಗೆ ಆಕರ್ಷಕ ಬೆಲೆಯ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಇದರೊಂದಿಗೆ ಜೋಯ್ ಮತ್ತು ಕ್ಲಿಯೊ ಎಲೆಕ್ಟ್ರಿಕ್ ಕಾರುಗಳಂತೆ ಪವರ್ ಟ್ರೈನ್ ಪಡೆದುಕೊಳ್ಳಲಿರುವ ಹೊಸ ಇವಿ5 ಕಾರು ಮಾದರಿಯು 135 ಹಾರ್ಸ್ ಪವರ್ ಉತ್ಪದನೆಯೊಂದಿಗೆ ರೆಟ್ರೋ ವಿನ್ಯಾಸ ಹೊಂದಿದೆ. ಇದರಲ್ಲಿರುವ ವಿನೂತನ ಫೀಚರ್ಸ್ ಗಳೊಂದಿಗೆ ರೌಂಡ್ ಹೆಡ್ ಲ್ಯಾಂಪ್ಸ್, ಎಲ್ಇಡಿ ಪ್ರೊಜೆಕ್ಟರ್, ಬಾನೆಟ್ ಮೇಲಿರುವ ಚಾರ್ಜಿಂಗ್ ಪಾಯಿಂಟ್ ಮತ್ತು ಹಿಂಬದಿಯಲ್ಲಿ ಪೂರ್ತಿಯಾಗಿ ಹರಡಿಕೊಂಡಿರುವ ಲೈಟ್ ಬಾರ್ ಜೋಡಿಸಲಾಗಿದೆ.
ಹಾಗೆಯೇ ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಬಿ ಸೆಗ್ಮೆಂಟ್ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಹಲವು ಪ್ರಿಮಿಯಂ ಫೀಚರ್ಸ್ ನೀಡುತ್ತಿದ್ದು, ಇದು ಸಣ್ಣ ಗಾತ್ರದಲ್ಲೂ ಆರಾಮದಾಯಕ ಡ್ರೈವಿಂಗ್ ಒದಗಿಸುವ ಮೂಲಕ ದೂರದ ಪ್ರಯಾಣದ ಆಯಾಸವನ್ನು ಕಡಿಮೆ ಮಾಡಲಿದೆ. ಹಾಗೆಯೇ ಸುರಕ್ಷತೆಯಲ್ಲೂ ಗಮನಸೆಳೆಯಲಿರುವ ಹೊಸ ಇವಿ ಕಾರು ಮಾದರಿಯು ಕಡಿಮೆ ಬೆಲೆಯೊಂದಿಗೆ ಪೆಟ್ರೋಲ್ ಕಾರು ಮಾದರಿಗಳಿಗೆ ಅತ್ಯುತ್ತಮ ಪರ್ಯಾಯ ಆಯ್ಕೆಯಾಗಲಿದೆ.
ಇದನ್ನೂ ಓದಿ: ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಪುತ್ರಿ
ಭಾರತದಲ್ಲಿ ಬಿಡುಗಡೆ ಯಾವಾಗ?
ಭಾರತದಲ್ಲಿ ಸದ್ಯ ಹೊಸ ಹೂಡಿಕೆಯೊಂದಿಗೆ ಸಣ್ಣ ಗಾತ್ರದ ಕಾರುಗಳ ಮೇಲೆ ಹೆಚ್ಚಿನ ಗಮನಹರಿಸಿರುವ ರೆನಾಲ್ಟ್ ಕಂಪನಿಯು ಶೀಘ್ರದಲ್ಲಿ ಹೊಸ ತಲೆಮಾರಿನ ಡಸ್ಟರ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಡಸ್ಟರ್ ಎಸ್ ಯುವಿ ಬಿಡುಗಡೆಯ ನಂತರವಷ್ಟೇ ಇವಿ 5 ಕಾರು ಮಾದರಿಯನ್ನು ಬಿಡುಗಡೆ ಮಾಡುವ ನೀರಿಕ್ಷೆಗಳಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಾರು ಕಂಪನಿಗಳು ಈಗಾಗಲೇ ಹಲವಾರು ಇವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ರೆನಾಲ್ಟ್ ಹೊಸ ಇವಿ 5 ಕಾರುಗಳು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.