ಆರ್‌ಇ ಹಿಮಾಲಯನ್ Vs ಯೆಜ್ಡಿ ಅಡ್ವೆಂಚರ್.. ಅಡ್ವೆಂಚರ್ ರೈಡ್‌ಗೆ ಯಾವುದು ಬೆಸ್ಟ್?

ಭಾರತದಲ್ಲಿ ಅಡ್ವೆಂಚರ್ ಬೈಕ್ ಮಾದರಿಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಅಡ್ವೆಂಚರ್ ಬೈಕ್ ವಿಭಾಗದಲ್ಲಿ ಇತ್ತೀಚೆಗೆ ಹಲವು ಹೊಸ ಬೈಕ್ ಮಾದರಿಗಳು ಲಗ್ಗೆಯಿಟ್ಟಿವೆ. ಮಧ್ಯಮ ಕ್ರಮಾಂಕದ ಅಡ್ವೆಂಚರ್ ಬೈಕ್ ವಿಭಾಗದಲ್ಲಿ ಸದ್ಯ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಹೆಚ್ಚು ಬೇಡಿಕೆಯಲ್ಲಿದ್ದು, ಇದಕ್ಕೆ ಪೈಪೋಟಿಯಾಗಿ ಯೆಜ್ಡಿ ಅಡ್ವೆಂಚರ್ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಆರ್‌ಇ  ಹಿಮಾಲಯನ್ Vs ಯೆಜ್ಡಿ ಅಡ್ವೆಂಚರ್.. ಅಡ್ವೆಂಚರ್ ರೈಡ್‌ಗೆ ಯಾವುದು ಬೆಸ್ಟ್?
ಆರ್‌ಇ ಹಿಮಾಲಯನ್ Vs ಯೆಜ್ಡಿ ಅಡ್ವೆಂಚರ್
Follow us
TV9 Web
| Updated By: Praveen Sannamani

Updated on: Dec 06, 2023 | 9:14 PM

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಅಡ್ವೆಂಚರ್ ಬೈಕ್ (Adventure Bikes) ಮಾದರಿಗಳ ಮಾರಾಟ ಪ್ರಮಾಣವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಅಡ್ವೆಂಚರ್ ಬೈಕ್ ಮಾದರಿಗಳು ಆಫ್ ರೋಡ್ ಕೌಶಲ್ಯದ ಜೊತೆಗೆ ದಿನನಿತ್ಯದ ಪ್ರಯಾಣಕ್ಕೂ ಅನೂಕೂಲವಾಗಿರುವುದು ಹೆಚ್ಚಿನ ಬೇಡಿಕೆ ದಾಖಲಾಗಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಅಡ್ವೆಂಚರ್ ಬೈಕ್ ವಿಭಾಗದಲ್ಲಿ ಐಷಾರಾಮಿ ಬೈಕ್ ಕಂಪನಿಗಳು ಮಾತ್ರವಲ್ಲದೆ ಮಧ್ಯಮ ಕ್ರಮಾಂಕದ ಬೈಕ್ ಉತ್ಪಾದನಾ ಕಂಪನಿಗಳು ಸಹ ವಿವಿಧ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿವೆ.

ಮಧ್ಯಮ ಕ್ರಮಾಂಕದ ಅಂದರೆ 300 ಸಿಸಿ ಯಿಂದ 500 ಸಿಸಿ ಅಂತರದ ಎಂಜಿನ್ ಆಯ್ಕೆ ಹೊಂದಿರುವ ಅಡ್ವೆಂಚರ್ ಬೈಕ್ ವಿಭಾಗವು ಹೆಚ್ಚು ಬೇಡಿಕೆಯಲ್ಲಿದ್ದು, ಇದರಲ್ಲಿ ಸದ್ಯ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 (Royal Enfield Himalayan 450) ಹೆಚ್ಚು ಬೇಡಿಕೆಯಲ್ಲಿದೆ. ಹಿಮಾಲಯನ್ ಬೈಕ್ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಹೊಸ ತಲೆಮಾರಿನ ಯೆಜ್ಡಿ ಅಡ್ವೆಂಚರ್ (Yezdi Adventure) ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎರಡೂ ಬೈಕ್ ಮಾದರಿಗಳ ನಡುವಿನ ವ್ಯತ್ಯಾಸಗಳು, ಫೀಚರ್ಸ್ ಮತ್ತು ಎಂಜಿನ್ ಪರ್ಫಾಮೆನ್ಸ್ ಬಗೆಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಹಿಮಾಲಯನ್ 450 ಬೈಕ್ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಬಲಿಷ್ಠವಾದ ವಿನ್ಯಾಸದೊಂದಿಗೆ ಟ್ವಿನ್-ಸ್ಪಾರ್ ಫ್ರೇಮ್ ಆಧರಿತ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿದ್ದು, ಇದರಲ್ಲಿ ಆಲ್ ಎಲ್ಇಡಿ ಲೈಟಿಂಗ್ಸ್ ಮತ್ತು ಸ್ಲಿಪ್ಲ್ ಅಂಡ್ ಅಸಿಸ್ಟ್ ಕ್ಲಚ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ. ಹೊಸ ಪ್ಲ್ಯಾಟ್ ಫಾರ್ಮ್ ನಿಂದಾಗಿ ಹಿಮಾಲಯನ್ ಬೈಕ್ ತೂಕವು ಈ ಹಿಂದಿನ ಮಾದರಿಗಿಂತಲೂ ಸುಮಾರು 10 ಕೆ.ಜಿ ಇಳಿಕೆಯೊಂದಿಗೆ 196 ಕೆ.ಜಿ ತೂಕ ಹೊಂದಿದ್ದು, ರೈಡ್ ಬೈ ವೈರ್ ತಂತ್ರಜ್ಞಾನ ಸೇರಿದಂತೆ ಇಕೋ ಮತ್ತು ಪರ್ಫಾಮೆನ್ಸ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ಹಾಗೆಯೇ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು ಸಹ ಪ್ರತಿಸ್ಪರ್ಧಿ ಮಾದರಿಗೆ ಪೈಪೋಟಿಯಾಗಿ ಹಲವಾರು ಹೊಸ ಫೀಚರ್ಸ್ ಹೊಂದಿದ್ದು, ಇದು ಹಿಮಾಲಯನ್ ಮಾದರಿಯಲ್ಲಿಯೇ ವಿಂಡ್ ಸ್ಕ್ರೀನ್, ವೃತ್ತಾಕಾರವಾದ ಎಲ್ಇಡಿ ಹೆಡ್ ಲ್ಯಾಂಪ್, ವಿಭಜಿತ ಆಸನಗಳು, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಲೂಟೂಥ್ ಕನೆಕ್ಟಿವಿಟಿ, ಎಲ್ಇಡಿ ಲೈಟಿಂಗ್ಸ್ ಮತ್ತು ಸ್ವಿಚ್ ಮಾಡಬಹುದಾದ ಎಬಿಎಸ್ ನೊಂದಿಗೆ ಆಫ್ ರೋಡ್ ಕೌಶಲ್ಯಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‌ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಹಿಮಾಲಯನ್ 450 ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ 452 ಸಿಸಿ ಲಿಕ್ವಿಡ್ ಕೂಲ್ಡ್, DOHC ಸಿಂಗಲ್ ಸಿಲಿಂಡರ್ ಎಂಜಿನ್‌ ಜೋಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 40 ಹಾರ್ಸ್ ಪವರ್ ಮತ್ತು 40 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಇದರೊಂದಿಗೆ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 30.2 ಹಾರ್ಸ್ ಪವರ್ ಮತ್ತು 29.84 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಇದು ಹಿಮಾಲಯನ್ ಮಾದರಿಗಿಂತಲೂ ಕಡಿಮೆ ಹಾರ್ಸ್ ಪವರ್ ಹೊಂದಿದ್ದರೂ ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ ಆಫ್ ರೋಡ್ ಕೌಶಲ್ಯಕ್ಕೆ ಸಹಕಾರಿಯಾಗಿದೆ.

ಸುರಕ್ಷಾ ಫೀಚರ್ಸ್ ಗಳು

ಹಿಮಾಲಯನ್ ಬೈಕಿನ ಸುರಕ್ಷಾ ಫೀಚರ್ಸ್ ಬಗೆಗೆ ಹೇಳುವುದಾರರೇ ಮುಂಭಾಗದ ಚಕ್ರದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಜೋಡಣೆ ಮಾಡಲಾಗಿದ್ದು, ಅಡ್ವೆಂಚರ್ ಬೈಕ್ ಚಾಲನೆಗೆ ಸಹಕಾರಿಯಾಗುವಂತೆ ಮುಂಭಾಗದಲ್ಲಿ 21 ಇಂಚಿನ ವ್ಹೀಲ್ ಮತ್ತು ಹಿಂಬದಿಯಲ್ಲಿ 17 ಇಂಚಿನ ವ್ಹೀಲ್ ಅಳವಡಿಸಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನಲ್ ಎಬಿಎಸ್ ನೀಡಲಾಗಿದ್ದು, ಇದು ಅಡ್ವೆಂಚರ್ ರೈಡಿಂಗ್ ನಲ್ಲಿ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಇದರೊಂದಿಗೆ ಹೊಸ ಬೈಕ್ 230 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಒಟ್ಟು 17 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಪಡೆದುಕೊಂಡಿದ್ದು, ಇದಕ್ಕೆ ಪೈಪೋಟಿಯಾಗಿರುವ ಯೆಜ್ಡಿ ಅಡ್ವೆಂಚರ್ ಸಹ ಡ್ಯುಯಲ್ ಚಾನಲ್ ಎಬಿಎಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಬೆಲೆಯಲ್ಲಿ ಗಮನಸೆಳೆಯುತ್ತದೆ.

ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!

ಬೆಲೆ ( ಎಕ್ಸ್ ಶೋರೂಂ ಪ್ರಕಾರ)

ಹಿಮಾಲಯನ್ ಹೊಸ ಬೈಕ್ ಮಾದರಿಯು ವಿವಿಧ ತಾಂತ್ರಿಕ ಅಂಶಗಳು ಮತ್ತು ಬಣ್ಣದ ಆಯ್ಕೆಗಳಿಗೆ ಅನುಗುಣವಾಗಿ ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಆರಂಭಿಕ ಮಾದರಿಯು ರೂ. 2.69 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.84 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು ಸಹ ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 2.18 ಲಕ್ಷದಿಂದ ರೂ. 2.22 ಲಕ್ಷ ಬೆಲೆ ಹೊಂದಿದೆ.

ಈ ಮೂಲಕ ಹಿಮಾಲಯನ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಗಳು ವಿವಿಧ ವಿಭಾಗಗಳಲ್ಲಿ ತಮ್ಮದೆ ಆದ ಗ್ರಾಹಕ ವರ್ಗ ಹೊಂದಿದ್ದು, ಆದರೂ ಕೂಡಾ ಅಡ್ವೆಂಚರ್ ಕೌಶಲ್ಯದಲ್ಲಿ ಯೆಜ್ಡಿ ಅಡ್ವೆಂಚರ್ ಗಿಂತಲೂ ಹೊಸ ಹಿಮಾಲಯನ್ ಹೆಚ್ಚು ಬಲಿಷ್ಠವಾಗಿದೆ ಎನ್ನಬಹುದು.