Tata Tiago EV: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ ಟಾಟಾ ಟಿಯಾಗೋ ಇವಿ
ಟಾಟಾ ಮೋಟಾರ್ಸ್ ಹೊಸ ಟಿಯಾಗೋ ಇವಿ ಕಾರು ಮಾದರಿಯು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದೆ.
ಎಲೆಕ್ಟ್ರಿಕ್ ಕಾರುಗಳ(Electric Cars) ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಹೊಸ ಟಿಯಾಗೋ ಎಲೆಕ್ಟ್ರಿಕ್(Tiago Electric) ಬಿಡುಗಡೆ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಇವಿ ಕಾರು ಮಾದರಿಗಾಗಿ ಇದುವರೆಗೆ ಬರೋಬ್ಬರಿ 20 ಸಾವಿರ ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ. ಬುಕಿಂಗ್ ಆರಂಭವಾದ ಮೊದಲ ವಾರದಲ್ಲಿಯೇ 10 ಸಾವಿರ ಬುಕಿಂಗ್ ಪಡೆದುಕೊಂಡಿದ್ದ ಹೊಸ ಇವಿ ಕಾರು ಇದೀಗ 20 ಸಾವಿರ ಬುಕಿಂಗ್ ಪಡೆದುಕೊಂಡಿದೆ. ಹೊಸ ಕಾರಿಗೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಬೇಡಿಕೆ ದಾಖಲಾಗಿರುವುದರಿಂದ ಟಾಟಾ ಮೋಟಾರ್ಸ್ ಕಂಪನಿಯು ಪರಿಚಯಾತ್ಮಕ ಬೆಲೆಯನ್ನು 20 ಸಾವಿರ ಗ್ರಾಹಕರಿಗೆ ವಿಸ್ತರಿಸಿದೆ.
ಪ್ರಮುಖ ಎಲೆಕ್ಟ್ರಿಕ್ ಕಾರು ಮಾರಾಟದೊಂದಿಗೆ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಬೆಳವಣೆಯ ನೀರಿಕ್ಷೆಯಲ್ಲಿದ್ದು, ಬಜೆಟ್ ಬೆಲೆಯೊಂದಿಗೆ ಹೊಸ ಟಿಯಾಗೋ ಇವಿ ಕಾರು ಹೊಸ ಸಂಚಲನ ಮೂಡಿಸಿದೆ. ಹೊಸ ಇವಿ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದ್ದು, ಆರಂಭಿಕ ಬೆಲೆಗಳು ಮೊದಲ ಹಂತದಲ್ಲಿ ಕಾರು ಖರೀದಿಸುವ 20 ಸಾವಿರ ಗ್ರಾಹಕರಿಗೆ ಮಾತ್ರ ಅನ್ವಯಿಸಲಿದೆ. ತದನಂತರ ಬುಕಿಂಗ್ ದಾಖಲಿಸುವ ಗ್ರಾಹಕರಿಗೆ ಹೊಸ ದರ ಅನ್ವಯಿಸಲಿದ್ದು, ಹೆಚ್ಚಳಗೊಂಡ ಬೆಲೆಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದೆ.
ಇದನ್ನೂ ಓದಿ: ಐಷಾರಾಮಿ ಸೌಲಭ್ಯದ ಫೋರ್ಸ್ ಅರ್ಬೇನಿಯಾ ವ್ಯಾನ್ ಬಿಡುಗಡೆ
ಸದ್ಯ ಬುಕಿಂಗ್ ದಾಖಲಿಸಿರುವ ಗ್ರಾಹಕರಿಗೆ ಟಾಟಾ ಮೋಟಾರ್ಸ್ ಕಂಪನಿಯು 2023ರ ಜನವರಿಯಿಂದ ವಿತರಣೆಯನ್ನು ಆರಂಭಿಸಲಿದ್ದು, ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಆಧರಿಸಿ ಹೊಸ ಕಾರು ಎಕ್ಸ್ಇ, ಎಕ್ಸ್ ಟಿ, ಎಕ್ಸ್ ಜೆಡ್ ಪ್ಲಸ್, ಎಕ್ಸ್ ಜೆಡ್ ಪ್ಲಸ್ ಟೆಕ್ ಲಕ್ಸ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಬ್ಯಾಟರಿ ಮತ್ತು ಮೈಲೇಜ್
ಟಿಯಾಗೋ ಇವಿ ಆರಂಭಿಕ ಮಾದರಿಗಳು 19.2kWh ಬ್ಯಾಟರಿ ಪ್ಯಾಕ್ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳು 24kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಹೊಸ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿವೆ. 19.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ ಇವಿ ಕಾರು ಮಾದರಿಯು ಪ್ರತಿ ಚಾರ್ಜ್ ಗೆ 250 ಕಿ.ಮೀ ಮೈಲೇಜ್ ನೀಡಲಿದ್ದರೆ 24kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ವಿಸ್ತರಿತ ಬ್ಯಾಟರಿ ಪ್ಯಾಕ್ ಪ್ರೇರಿತ ಹೊಸ ಟಾಟಾ ಟಿಗೋರ್ ಇವಿ ಬಿಡುಗಡೆ
ಸುರಕ್ಷಾ ಸೌಲಭ್ಯಗಳು
IP67 ಮಾನದಂಡಗಳನ್ನು ಪೂರೈಸಿರುವ ಹೊಸ ಟಿಯಾಗೋ ಇವಿ ಕಾರಿನಲ್ಲಿರುವ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಮೋಟಾರ್ ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿದ್ದು, ಬ್ಯಾಟರಿ ಮತ್ತು ಮೋಟಾರ್ ಮೇಲೆ ಕಂಪನಿಯು 1.60 ಲಕ್ಷ ಕಿ.ಮೀ ಇಲ್ಲವೇ 8 ವರ್ಷಗಳಿಗೆ ಅನ್ವಯಿಸುವಂತೆ ಗರಿಷ್ಠ ವಾರಂಟಿ ನೀಡುತ್ತದೆ. ಇನ್ನು ಹೊಸ ಇವಿ ಕಾರು ಮಾದರಿಯ ವಿನ್ಯಾಸವು ಸಾಮಾನ್ಯ ಟಿಯಾಗೋ ಮಾದರಿಯಂತೆ ನೀಡಲಾಗಿದ್ದರೂ ಕೆಲವು ಹೊಸ ಫೀಚರ್ಸ್ ಗಳು ಪೆಟ್ರೋಲ್ ಮಾದರಿಗಿಂತಲೂ ವಿಭಿನ್ನವಾಗಿಸಲು ಸಹಕಾರಿಯಾಗಿದ್ದು, ಹಲವಾರು ಸುರಕ್ಷಾ ಸೌಲಭ್ಯಗಳು ಈ ಕಾರಿನಲ್ಲಿವೆ.
ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಮಲ್ಟಿ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯಲ್ ಪಾರ್ಕಿಂಗ್ ಕ್ಯಾಮೆರಾ, ಸೀಟ್ ಬೇಲ್ಟ್ ರಿಮೆಂಡರ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.
Published On - 4:35 pm, Mon, 28 November 22