Force Urbania Van: ಐಷಾರಾಮಿ ಸೌಲಭ್ಯದ ಫೋರ್ಸ್ ಅರ್ಬೇನಿಯಾ ವ್ಯಾನ್ ಬಿಡುಗಡೆ
ಫೋರ್ಸ್ ಮೋಟಾರ್ಸ್ ಕಂಪನಿಯು ತನ್ನ ಹೊಸ ಅರ್ಬೇನಿಯಾ ವ್ಯಾನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ವ್ಯಾನ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ಐಷಾರಾಮಿ ಸೌಲಭ್ಯವುಳ್ಳ ಅರ್ಬೇನಿಯಾ ವ್ಯಾನ್(Urbania Van) ಬಿಡುಗಡೆ ಮಾಡಿದ್ದು, ಹೊಸ ವ್ಯಾನ್ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ವ್ಯಾನ್ ವಿಶೇಷವಾಗಿ ಕಾರ್ಪೊರೇಟ್ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ನಿರ್ಮಾಣಗೊಳಿಸಲಾಗಿದ್ದು, ಹೊಸ ವಾಹನವು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತುಗೊಳ್ಳಲಿದೆ.
ವೆರಿಯೆಂಟ್ ಗಳು ಮತ್ತು ಬೆಲೆ
ಅರ್ಬೇನಿಯಾ ವ್ಯಾನ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 10 ಸೀಟರ್, 13 ಸೀಟರ್ ಮತ್ತು 17 ಸೀಟರ್ ವೆರಿಯೆಂಟ್ ಹೊಂದಿದ್ದು, ಆರಂಭಿಕ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ 13 ಸೀಟರ್ ಮಾದರಿಯು ರೂ. 28.99 ಲಕ್ಷ ಬೆಲೆ ಹೊಂದಿದ್ದರೆ 10 ಸೀಟರ್ ಮಾದರಿಯು 29.50 ಲಕ್ಷ ಬೆಲೆ ಹೊಂದಿದೆ. ಹಾಗೆಯೇ 17 ಸೀಟರ್ ಸೌಲಭ್ಯ ಹೊಂದಿರುವ ಮಾದರಿಯು ರೂ. 31.25 ಲಕ್ಷ ಬೆಲೆ ಪಡೆದುಕೊಂಡಿದೆ.
ಹೊಸ ವ್ಯಾನ್ ಮಾದರಿಯಲ್ಲಿ 10 ಸೀಟರ್ ವೆರಿಯೆಂಟ್ 3,350 ಎಂಎಂ ವ್ಹೀಲ್ ಬೆಸ್ ಪಡೆದುಕೊಂಡಿದ್ದರೆ 13 ಸೀಟರ್ ವೆರಿಯೆಂಟ್ 3,615 ಎಂಎಂ ವ್ಹೀಲ್ ಬೆಸ್ ಪಡೆದುಕೊಂಡಿದೆ. ಇದರಲ್ಲಿ 17 ಸೀಟರ್ ಮಾದರಿಯು 4,400 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಹೊಸ ವಾಹನ ಖರೀದಿಗಾಗಿ ಕಂಪನಿಯು ದೇಶಾದ್ಯಂತ ತನ್ನ ಪ್ರಮುಖ ಪ್ರೀಮಿಯಂ ಡೀಲರ್ಸ್ ಗಳಲ್ಲಿ ಬುಕಿಂಗ್ ಆರಂಭಿಸಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಪಿಎಂವಿ ಮೈಕ್ರೊ ಇವಿ ಕಾರು ಭಾರತದಲ್ಲಿ ಬಿಡುಗಡೆ
ಎಂಜಿನ್ ಸಾಮರ್ಥ್ಯ
ಅರ್ಬೇನಿಯಾ ವ್ಯಾನ್ ಮಾದರಿಯು ಫೋರ್ಸ್ ಮೋಟಾರ್ಸ್ ಕಂಪನಿಯು ಮರ್ಸಿಡಿಸ್ ಕಂಪನಿಯಿಂದ ಎರವಲು ಪಡೆಯಲಾದ ಬಿಎಸ್ 6 ವೈಶಿಷ್ಟ್ಯತೆಯ ಕಾಮನ್ ರೈಲ್ ಡೀಸೆಲ್ ಎಂಜಿನ್ ಬಳಕೆ ಮಾಡಿದ್ದು, ಇದು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 115 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಡಿಸೈನ್ ಮತ್ತು ಫೀಚರ್ಸ್
ಆಕರ್ಷಕ ವಿನ್ಯಾಸ ತಂತ್ರಜ್ಞಾನ ಹೊಂದಿರುವ ಹೊಸ ವಾಹನವು ಗ್ರಾಹಕರಿಗೆ ಐಷಾರಾಮಿ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ವ್ಯಾನ್ ನಲ್ಲಿ ಐಷಾರಾಮಿ ಕಾರುಗಳ ರೀತಿಯಲ್ಲಿರುವ ಕಾಕ್ ಪಿಟ್ ಜೊತೆಗೆ ಸುರಕ್ಷತೆಗಾಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಇಎಸ್ ಪಿ, ಎಬಿಎಸ್, ಇಬಿಡಿ ಮತ್ತು ಇಟಿಡಿಸಿ ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಹೊಸ ವ್ಯಾನ್ ನಲ್ಲಿರುವ 10 ಸೀಟರ್ ಮಾದರಿಯು ಹೆಚ್ಚಿನ ಮಟ್ಟದ ಐಷಾರಾಮಿ ಫೀಚರ್ಸ್ ಹೊಂದಿದ್ದು, ಇದರಲ್ಲಿ ಆಸನ ಸೌಲಭ್ಯಗಳು ಹೆಚ್ಚಿನ ಮಟ್ಟದಲ್ಲಿ ಆರಾಮದಾಯಕ ಅನುಭವ ನೀಡಲಿವೆ.
ಇದನ್ನೂ ಓದಿ: ಐಷಾರಾಮಿ ಫೀಚರ್ಸ್ ಜೊತೆ ಹೈಬ್ರಿಡ್ ಎಂಜಿನ್ ನೊಂದಿಗೆ ಟೊಯೊಟಾ ಇನೋವಾ ಹೈಕ್ರಾಸ್ ಅನಾವರಣ
ಇನ್ನು ಹೊಸ ವಾಹನ ಉತ್ಪಾದನೆಗಾಗಿ ಫೋರ್ಸ್ ಕಂಪನಿಯು ವಿನೂತನ ತಂತ್ರಜ್ಞಾನ ಪ್ರೇರಿತ ಮಾಡ್ಯೂಲರ್ ಮೊನಾರ್ಕ್ಯೂ ಪ್ಲ್ಯಾಟ್ ಫಾರ್ಮ್ ಅಭಿವೃದ್ದಿಪಡಿಸಿದೆ. ಮೊನಾರ್ಕ್ಯೂ ಪ್ಲ್ಯಾಟ್ ಫಾರ್ಮ್ ನಿರ್ಮಾಣಕ್ಕಾಗಿ ಸುಮಾರು ರೂ. 1 ಸಾವಿರ ಕೋಟಿ ಹೂಡಿಕೆ ಮಾಡಲಾಗಿದ್ದು, ಸದ್ಯಕ್ಕೆ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನಲ್ಲಿ ಪ್ರತಿ ತಿಂಗಳು ಸುಮಾರು 1 ಸಾವಿರ ಯುನಿಟ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ.
ಹೊಸ ವಾಹನವನ್ನು ಸದ್ಯಕ್ಕೆ ಭಾರತದಲ್ಲಿ ಮಾತ್ರ ವಿತರಣೆಗೆ ನಿರ್ಧರಿಸಿರುವ ಫೋರ್ಸ್ ಮೋಟಾರ್ಸ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಪ್ರತಿ ತಿಂಗಳು 2 ಸಾವಿರ ಯುನಿಟ್ ಉತ್ಪಾದನೆಗೆ ಸಿದ್ದವಾಗುತ್ತಿದ್ದು, ಉತ್ಪಾದನೆ ಹೆಚ್ಚಳ ನಂತರ ಮಧ್ಯಪ್ರಾಚ್ಯ ರಾಷ್ಟ್ರಗಳು, ಸೆಂಟ್ರಲ್ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಮಾಡಲಿದೆ.
Published On - 1:45 pm, Thu, 24 November 22