Best selling cars: ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು!

ಹಬ್ಬದ ಋತು ಹಿನ್ನಲೆಯಲ್ಲಿ ಹೊಸ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಳವಾಗುತ್ತಿದ್ದು, ಕಳೆದ ತಿಂಗಳು ವಿವಿಧ ಕಾರು ಮಾದರಿಗಳು ಭರ್ಜರಿ ಬೇಡಿಕೆ ಪಡೆದುಕೊಂಡಿವೆ.

Best selling cars: ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು!
ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು
Follow us
|

Updated on: Oct 09, 2023 | 3:40 PM

ದೇಶಾದ್ಯಂತ ಹಬ್ಬದ ಋತು ಆರಂಭವಾಗಿರುವ ಹಿನ್ನಲೆಯಲ್ಲಿ ಹೊಸ ಕಾರುಗಳ(New Cars) ಮಾರಾಟ ಪ್ರಮಾಣವು ಸಾಕಷ್ಟು ಹೆಚ್ಚಳವಾಗಿದ್ದು, ಕಳೆದ ತಿಂಗಳು ವಿವಿಧ ಕಾರು ಮಾದರಿಗಳು ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ನಿರ್ಮಾಣದ ಕಾರುಗಳೇ ಅಗ್ರಸ್ಥಾನದಲ್ಲಿದ್ದು, ಬಜೆಟ್ ಕಾರುಗಳ ಅಬ್ಬರದ ನಡುವೆಯೂ ಟಾಟಾ ಮತ್ತು ಹ್ಯುಂಡೈ ನಿರ್ಮಾಣದ ಕಾರುಗಳು ಕೂಡಾ ಸದ್ದು ಮಾಡುತ್ತಿವೆ. ಹಾಗಾದ್ರೆ ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುವು? ಎಷ್ಟು ಪ್ರಮಾಣದಲ್ಲಿ ಮಾರಾಟಗೊಂಡಿವೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾದರಿಯಾಗಿರುವ ಬಲೆನೊ ಕಾರು ಕಳೆದ ತಿಂಗಳು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ಕೆಲ ತಿಂಗಳಿನಿಂದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಇದು ಕಳೆದ ತಿಂಗಳು ಒಟ್ಟು 18,417 ಯುನಿಟ್ ಮಾರಾಟಗೊಂಡಿದೆ. ಹೊಸ ಬಲೆನೊ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್ಆರ್

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಹಲವು ವರ್ಷಗಳಿಂದಲೂ ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿದೆ. ಕಳೆದ ತಿಂಗಳು 16,250 ಯುನಿಟ್ ಮಾರಾಟಗೊಂಡಿರುವ ವ್ಯಾಗನ್ಆರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಕಡಿಮೆ ಸಾಮರ್ಥ್ಯದ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 1.0 ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಸಿಎನ್ ಜಿ ಆಯ್ಕೆಯಲ್ಲೂ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..

ಟಾಟಾ ನೆಕ್ಸಾನ್

ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಟಾಪ್ 10 ಕಾರುಗಳಲ್ಲಿ ಟಾಟಾ ನೆಕ್ಸಾನ್ ಕಂಪ್ಯಾಕ್ಟ್ ಎಸ್ ಯುವಿ ಕೂಡಾ ಪ್ರಮುಖವಾಗಿದೆ. ಕಳೆದ ತಿಂಗಳು ಒಟ್ಟು 15,325 ಯುನಿಟ್ ಮಾರಾಟಗೊಂಡಿದ್ದು, ಕಳೆದ ಕೆಲ ತಿಂಗಳಿನಿಂದ ಭರ್ಜರಿಯಾಗಿ ಮಾರಾಟಗೊಳ್ಳುತ್ತಿದೆ. ಹೊಸ ನೆಕ್ಸಾನ್ ಕಾರು ಇತ್ತೀಚೆಗೆ ಫೇಸ್ ಲಿಫ್ಟ್ ಆವೃತ್ತಿ ಪಡೆದುಕೊಂಡಿದ್ದು, ಐಷಾರಾಮಿ ಲುಕ್ ನೊಂದಿಗೆ ಪವರ್ ಫುಲ್ ಎಂಜಿನ್ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರುವುದು ಮತ್ತಷ್ಟು ಬೇಡಿಕೆ ದಾಖಲಿಸುವ ನೀರಿಕ್ಷೆಯಿದೆ.

ಮಾರುತಿ ಸುಜುಕಿ ಬ್ರೆಝಾ

ಬ್ರೆಝಾ ಆವೃತ್ತಿಯೊಂದಿಗೆ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿರುವ ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಒಟ್ಟು 15,001 ಯುನಿಟ್ ಮಾರಾಟ ಮಾಡಿದೆ. ವಿವಿಧ ಎಂಜಿನ್ ಆಯ್ಕೆ ಜೊತೆಗೆ ಹಲವಾರು ಹೊಸ ಫೀಚರ್ಸ್ ಹೊಂದಿರುವ ಬ್ರೆಝಾ ಕಾರಿಗೆ ಹೆಚ್ಚಿನ ಬೇಡಿಕೆಯಿದ್ದು, ಇದು 1.5 ಲೀಟರ್ ಪೆಟ್ರೋಲ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆ ಹೊಂದಿದೆ. ಇದಲ್ಲದೆ ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಆವೃತ್ತಿಯು ಸಹ ಖರೀದಿಗೆ ಲಭ್ಯವಿದ್ದು, ಇದು ಕೂಡಾ ಕಳೆದ 7 ವರ್ಷಗಳಿಂದಲೂ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್

ಹ್ಯಾಚ್ ಬ್ಯಾಕ್ ಕಾರುಗಳ ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಳೆದ ತಿಂಗಳು ಒಟ್ಟು 14,703 ಯುನಿಟ್ ಮಾರಾಟಗೊಂಡಿದೆ. ಡೀಸೆಲ್ ಆವೃತ್ತಿಯ ಮಾರಾಟ ಸ್ಥಗಿತ ನಂತರವೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆ ಹೊಂದಿದೆ. ಮುಂಬರುವ ಕೆಲವೇ ತಿಂಗಳು ಸ್ವಿಫ್ಟ್ ಕಾರು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗುವ ಸಿದ್ದತೆಯಲ್ಲಿದ್ದು, ಬಜೆಟ್ ಬೆಲೆಯ ಅತ್ಯುತ್ತಮ ಕಾರು ಮಾದರಿಯಾಗಿದೆ.

ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಮಾರುತಿ ಸುಜುಕಿ ಡಿಜೈರ್

ಕಂಪ್ಯಾಕ್ಟ್ ಸೆಡಾನ್ ಕಾರು ಮಾರಾಟ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಡಿಜೈರ್ ಕಾರು ಕಳೆದ ತಿಂಗಳು ಒಟ್ಟು 13,880 ಯುನಿಟ್ ಮಾರಾಟಗೊಂಡಿದೆ. ಕಳೆದ ವರ್ಷದ ಸೆಪ್ಪೆಂಬರ್ ಅವಧಿಯಲ್ಲಿ ಮಾರಾಟಕ್ಕಿಂತಲೂ ಶೇ.45 ರಷ್ಟು ಬೆಳವಣಿಗೆ ಸಾಧಿಸಿದ್ದು, ಇದು ಕೂಡಾ 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆಯೊಂದಿಗೆ ಭರ್ಜರಿ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಎರ್ಟಿಗಾ

ಆಕರ್ಷಕ ಬೆಲೆ ಮತ್ತು ಭರ್ಜರಿ ಮೈಲೇಜ್ ಹೊಂದಿರುವ ಮಾರುತಿ ಸುಜುಕಿ ಎರ್ಟಿಗಾ ಕಾರು ಮಾದರಿಯು ಕಳೆದ ತಿಂಗಳು ಶೇ.45 ರಷ್ಟು ಬೆಳವಣಿಗೆಯೊಂದಿಗೆ 13,528 ಯುನಿಟ್ ಮಾರಾಟಗೊಂಡಿದೆ.

ಟಾಟಾ ಪಂಚ್

ಮೈಕ್ರೊ ಎಸ್ ಯುವಿ ವಿಭಾಗದಲ್ಲಿ ಸದ್ಯ ಹೊಸ ಸಂಚಲನ ಮೂಡಿಸಿರುವ ಟಾಟಾ ಪಂಚ್ ಕಾರು ಕಳೆದ ತಿಂಗಳು 13,036 ಯುನಿಟ್ ಮಾರಾಟಗೊಂಡಿದ್ದು, ಇದು 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಪಂಚ್ ಕಾರು ಸಣ್ಣ ಕಾರುಗಳಲ್ಲಿ ಅತಿ ಹೆಚ್ಚು ಸುರಕ್ಷಿತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಭರ್ಜರಿ ಫೀಚರ್ಸ್ ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಎಸ್ ಯುವಿಗಳಲ್ಲಿ ಯಾವುದು ಖರೀದಿಗೆ ಬೆಸ್ಟ್?

ಹ್ಯುಂಡೈ ಕ್ರೆಟಾ

ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹ್ಯುಂಡೈ ಕ್ರೆಟಾ ಕಾರು ಮಾದರಿಯು ಕಳೆದ ತಿಂಗಳು 12,717 ಯುನಿಟ್ ಮಾರಾಟಗೊಂಡಿದ್ದು, ಇದು 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹ್ಯುಂಡೈ ವೆನ್ಯೂ

ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ವೆನ್ಯೂ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಇದು ಕಳೆದ ತಿಂಗಳು 12,204 ಯುನಿಟ್ ಮಾರಾಟದೊಂದಿಗೆ ಮಾರುತಿ ಸುಜುಕಿ ಬ್ರೆಝಾ ಕಾರಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಇದು 1.2 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಎನ್-ಲೈನ್ ಆವೃತ್ತಿಯಲ್ಲೂ ಮಾರಾಟಗೊಳ್ಳುತ್ತಿದೆ.