Toyota Innova Hycross: ಹೊಸ ಇನೋವಾ ಹೈಕ್ರಾಸ್ ಕಾರಿನ ಹೈಬ್ರಿಡ್ ವರ್ಷನ್ ಖಚಿತಪಡಿಸಿದ ಟೊಯೊಟಾ
ಟೊಯೊಟಾ ಇಂಡಿಯಾ ಕಂಪನಿಯು ಇದೇ ತಿಂಗಳು 25ರಂದು ಹೊಸ ಇನೋವಾ ಹೈಕ್ರಾಸ್ ಎಂಪಿವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಕಂಪನಿಯು ಸಾಮಾನ್ಯ ಪೆಟ್ರೋಲ್ ಎಂಜಿನ್ ಜೊತೆಗೆ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.
ಪ್ರೀಮಿಯಂ ಕಾರುಗಳ ಮೂಲಕ ತನ್ನದೆ ಆದ ಗ್ರಾಹಕ ವರ್ಗವನ್ನು ಹೊಂದಿರುವ ಟೊಯೊಟಾ(Toyota) ಕಂಪನಿಯು ಇದೇ ತಿಂಗಳು 25ರಂದು ಹೊಸ ತಲೆಮಾರಿನ ಇನೋವಾ ಹೈಕ್ರಾಸ್(Innova Hycross) ಎಂಪಿವಿ ಮಾದರಿಯನ್ನು ಅನಾವರಣಗೊಳಿಸುತ್ತಿದ್ದು, ಹೊಸ ಕಾರನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಗಿಂತಲೂ ಹೆಚ್ಚಿನ ಬದಲಾವಣೆಯೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಕಾರಿನ ಟೀಸರ್ ಮೂಲಕ ಹೊಸ ಕಾರಿನಲ್ಲಿ ಹೈಬ್ರಿಡ್ ವರ್ಷನ್ ಬಿಡುಗಡೆ ಯೋಜನೆಯನ್ನು ಖಚಿತಪಡಿಸಿದ್ದು, ಹೊಸ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕರೊಲ್ಲಾ ಕ್ರಾಸ್ ವಿನ್ಯಾಸ ಆಧರಿಸಿ ಹೊಸ ವಿನ್ಯಾಸ ಮತ್ತು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.
ಇಂಡೋನೇಷ್ಯಾದಲ್ಲಿ ಇದೇ ತಿಂಗಳು 21ರಂದು ಹೊಸ ಇನೋವಾ ಹೈಕ್ರಾಸ್ ಮಾದರಿಯನ್ನು ಅನಾವರಣಗೊಳಿಸಲಿರುವ ಟೊಯೊಟಾ ಕಂಪನಿಯು ನವೆಂಬರ್ 25ಕ್ಕೆ ಭಾರತದಲ್ಲಿ ಅನಾವರಣಗೊಳಿಸಲಿದೆ. ಕಾರು ಅನಾವರಣದೊಂದಿಗೆ 2023ರ ಜನವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಲಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿರುವ ಹೊಸ ಕಾರಿನ ಚಿತ್ರವು ಸಾಕಷ್ಟು ಸದ್ದು ಮಾಡುತ್ತಿದ್ದು, ಹೊಸ ಕಾರಿಗೆ ಈ ಬಾರಿ ಹೆಚ್ಚಿನ ಮಟ್ಟದ ಸ್ಪೋರ್ಟಿ ಲುಕ್ ನೀಡಲಾಗಿದೆ.
ಹೈಬ್ರಿಡ್ ಎಂಜಿನ್
ಹೊಸ ಇನೋವಾ ಹೈಕ್ರಾಸ್ ಎಂಪಿವಿಯು ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿದ್ದು, 2023ರ ಏಪ್ರಿಲ್ ನಿಂದ ಜಾರಿಗೆ ಬರುತ್ತಿರುವ ಹೊಸ ರಿಯಲ್ ಡ್ರೈವಿಂಗ್ ಎಮಿಷನ್ ನಿಯಮ ಜಾರಿಗೆ ಬರುತ್ತಿರುವ ಹಿನ್ನಲೆಯಲ್ಲಿ ಟೊಯೊಟಾ ಕಂಪನಿಯು ಹೊಸ ಕಾರಿನ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸುತ್ತಿದೆ. ಹೊಸ ಕಾರಿನಲ್ಲಿ ಈ ಬಾರಿ ಡೀಸೆಲ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈಬ್ರಿಡ್ ಎಂಜಿನ್ ಮಾದರಿಯತ್ತ ಗಮನಹರಿಸಿದೆ. ಡೀಸೆಲ್ ಮಾದರಿಯ ಸ್ಥಾನಕ್ಕೆ ಹೊಸ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಹೈಬ್ರಿಡ್ ಮಾದರಿಯು ಭರ್ಜರಿ ಮೈಲೇಜ್ ನೀಡಲಿದೆ.
ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿವೆ ಈ ಮೂರು ಬಹುನೀರಿಕ್ಷಿತ ಕಾರುಗಳು!
ಪ್ರಸ್ತತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಕಂಪನಿಯು ಡೈನಾಮಿಕ್ ಫೋರ್ಸ್ ಫ್ಯಾಮಿಲಿಯಿಂದ ಎರವಲು ಪಡೆಯಲಾದ 2.0 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ 2.0 ಲೀಟರ್ ಆಟ್ಕಿನ್ಸ್ ಸೈಕಲ್ ಸ್ಟ್ರಾಂಗ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಪರಿಚಯಿಸುತ್ತಿದೆ. ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿರುವ ಹೊಸ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಗೆ 17 ರಿಂದ 19 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.
ನೀರಿಕ್ಷಿತ ಹೊಸ ಫೀಚರ್ಸ್
ಇನೋವಾ ಹೈಕ್ರಾಸ್ ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಹಲವಾರು ಹೊಸ ಫೀಚರ್ಸ್ ಜೋಡಣೆ ಮಾಡುತ್ತಿದ್ದು, ಮೊದಲ ಬಾರಿಗೆ ಎಲೆಕ್ಟ್ರಿಕ್ ಸನ್ ರೂಫ್, ಸುಧಾರಿತ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಹಲವು ಕಾರ್ ಕನೆಕ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಗರಿಷ್ಠ ಸೇಫ್ಟಿ ಫೀಚರ್ಸ್ ಹೊಂದಿರುವ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಜೋಡಣೆ ಮಾಡಲಾಗುತ್ತಿದೆ. ಹಾಗೆಯೇ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಕಾರಿಗಿಂತಲೂ ತುಸು ಹೆಚ್ಚುವರಿ ಉದ್ದಳತೆ ಪಡೆದುಕೊಳ್ಳಲಿದ್ದು, ಇದು ಮೂರನೇ ಸಾಲಿನ ಆಸನದಲ್ಲಿ ಕೂರುವ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳವಾಕಾಶ ಒದಗಿಸುತ್ತದೆ.
ಇದನ್ನೂ ಓದಿ: ಗ್ಲಾಂಝಾ ಸಿಎನ್ಜಿ ವರ್ಷನ್ ಬಿಡುಗಡೆ ಮಾಡಿದ ಟೊಯೊಟಾ
ಇದಲ್ಲದೆ ಹೊಸ ಕಾರಿನಲ್ಲಿ ವೈಲ್ಡ್ ಹೆಡ್ ಲ್ಯಾಂಪ್ ಜೊತೆ ಎಲ್ ಆಕಾರದ ಇನ್ ರ್ಸಟ್ ಜೋಡಿಸಲಾಗಿದ್ದು, ಗ್ಲಾಸ್ ಬ್ಲ್ಯಾಕ್ ಹೊಂದಿರುವ ಹೆಕ್ಸಾಗೊನಲ್, ಸ್ಪೋರ್ಟಿ ಫಾಗ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೇರಿದಂತೆ ಸ್ಪೋಕ್ ಅಲಾಯ್ ವ್ಹೀಲ್ ಸೇರಿದಂತೆ ಹಲವು ಹೊಸ ಫೀಚರ್ಸ್ ಗಮನಸೆಳೆಯಲಿವೆ.
ಅಂದಾಜು ಬೆಲೆ
ಹೊಸ ಕಾರಿನಲ್ಲಿ ಪರಿಚಯಿಸಲಾಗುತ್ತಿರುವ ಹೈಬ್ರಿಡ್ ಮಾದರಿಯು ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಿದ್ದು, ಹೊಸ ಕಾರು ಹೊಸ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 28 ಲಕ್ಷ ಬೆಲೆ ಅಂತದಲ್ಲಿ ಮಾರಾಟಗೊಳ್ಳಬಹುದಾಗಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತ ರೂ. 1 ಲಕ್ಷದಿಂದ ರೂ. 2 ಲಕ್ಷದಷ್ಟು ದುಬಾರಿಯಾಗಿರಲಿದೆ.
Published On - 4:24 pm, Sun, 20 November 22