Ultraviolette F77: ಪ್ರತಿ ಚಾರ್ಜ್‌ಗೆ 307 ಕಿ.ಮೀ ಮೈಲೇಜ್ ನೀಡುವ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಬಿಡುಗಡೆ
ಪ್ರೀಮಿಯಂ ಇವಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಆಲ್ಟ್ರಾವಯೊಲೆಟ್ ತನ್ನ ಹೊಸ ಎಫ್77 ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಪ್ರಮುಖ ಎರಡು ವೆರಿಯೆಂಟ್ ಗಳನ್ನು ಹೊಂದಿದೆ.
ನಮ್ಮ ಬೆಂಗಳೂರು ಮೂಲದ ಆಲ್ಟ್ರಾವಯೊಲೆಟ್(Ultraviolette) ಕಂಪನಿಯು ತನ್ನ ಹೊಸ ಎಫ್77(F77) ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್(Electic Bike) ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಮಾದರಿಯು ಬ್ಯಾಟರಿ ಪ್ಯಾಕ್ ಜೋಡಣೆಯನ್ನು ಆಧರಿಸಿ ಸ್ಟ್ಯಾಂಡರ್ಡ್ ಮತ್ತು ರೆಕಾನ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಬಿಡುಗಡೆ ಮಾಡಿದೆ. ಜೊತೆಗೆ ಹೊಸ ಬೈಕಿನಲ್ಲಿ ಕಂಪನಿಯು ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಸಹ ಪರಿಚಯಿಸಿದ್ದು, ಲಿಮಿಟೆಡ್ ಎಡಿಷನ್ ಗಳು ಕೇವಲ 77 ಯುನಿಟ್ ಖರೀದಿಗೆ ಲಭ್ಯವಿರಲಿವೆ.
ಬೆಲೆ(ಎಕ್ಸ್ ಶೋರೂಂ ಪ್ರಕಾರ)
ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಮಾದರಿಯ ಸ್ಟ್ಯಾಂಡರ್ಡ್ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 3.80 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ರೂ. 4.55 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 5.50 ಲಕ್ಷ ಬೆಲೆ ಹೊಂದಿದ್ದು, ಇವು ಕೇವಲ 77 ಯುನಿಟ್ ಗಳೊಂದಿಗೆ ಕೆಲವು ಹೊಸ ಫೀಚರ್ಸ್ ಹೊಂದಿರಲಿವೆ. ಲಿಮಿಟೆಡ್ ಎಡಿಷನ್ ಗಳು 77 ಯುನಿಟ್ ಮಾರಾಟದ ನಂತರ ಸ್ಟ್ಯಾಂಡರ್ಡ್ ಮತ್ತು ರೆಕಾನ್ ಮಾದರಿಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಹೊಸ ಎಫ್77 ಇವಿ ಬೈಕ್ ಮಾದರಿಯ ಸ್ಟ್ಯಾಂಡರ್ಡ್ ವೆರಿಯೆಂಟ್ 7.1kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್ ಗೆ 207 ಕಿ.ಮೀ ಮೈಲೇಜ್ ನೀಡಿದರೆ ಎಫ್77 ರೆಕಾನ್ ವೆರಿಯೆಂಟ್ 10.3kWh ಬ್ಯಾಟರಿ ಪ್ಯಾಕ್ ಮೂಲಕ 307 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರಲ್ಲಿ ಆರಂಭಿಕ ವೆರಿಯೆಂಟ್ 27kW ಮತ್ತು 85 ಎಂಎನ್ ಟಾರ್ಕ್ ಉತ್ಪಾದನೆ ಮಾಡಲಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ 29kW ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಹಾಗೆಯೇ ಎಫ್77 ಲಿಮಿಟೆಡ್ ಎಡಿಷನ್ ಮೊದಲೆರಡು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಜೊತೆಗೆ ಕೆಲವು ವಿಶೇಷ ಫೀಚರ್ಸ್ ಹೊಂದಿರಲಿದ್ದು, ಇದು 30.2kW(40.49 ಬಿಎಚ್ ಪಿ) ಮತ್ತು 100 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪರ್ಪಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ. ಇನ್ನುಳಿದಂತೆ ಮೂರು ವೆರಿಯೆಂಟ್ ಗಳಿಗೂ ಅನ್ವಯಿಸುವಂತೆ ಗ್ಲೈಡ್, ಕಾಂಬೋಟ್ ಮತ್ತು ಬ್ಯಾಲಿಸ್ಟಿಕ್ ರೈಡಿಂಗ್ ಮೋಡ್ ಗಳನ್ನು ನೀಡಲಾಗಿದೆ. ಇದರೊಂದಿಗೆ ಹೊಸ ಬೈಕ್ ಮಾದರಿಯು ಪ್ರತಿ ಗಂಟೆಗೆ 150 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದ್ದು, ಇದು 2.9 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 60 ಕಿ.ಮೀ ಮತ್ತು 7.8 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಮಾದರಿ ಫ್ಯೂಚರಿಸ್ಟಿಕ್ ವಿನ್ಯಾಸ ಭಾಷೆಯನ್ನು ಹೊಂದಿದ್ದು, ಅಲ್ಟ್ರಾ-ವಿ ಲೈಟಿಂಗ್ ಸಿಗ್ನಿಚೆರ್ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಿದೆ. ಹೊಸ ಇವಿ ಬೈಕಿನಲ್ಲಿ ರೈಡರ್ ಗೆ ಅನುಕೂಲಕವಾದ ಹಲವಾರು ಅಂಶಗಳು ಗಮನಸೆಳೆಯಲಿದ್ದು, ಕಡಿಮೆ ಎತ್ತರದಲ್ಲಿರುವ ಆಸನ ಮತ್ತು ಎತ್ತರದಲ್ಲಿರುವ ಹ್ಯಾಂಡಲ್ ಬಾರ್ ಗಳು ಬೈಕ್ ಅನ್ನು ಸಾಮಾನ್ಯ ರಸ್ತೆಗಳಲ್ಲಿ ಮಾತ್ರ ಟ್ರ್ಯಾಕ್ ನಲ್ಲೂ ಉತ್ತಮ ಪರ್ಫಾಮೆನ್ಸ್ ಗೂ ಪೂರಕವಾಗಿವೆ.
ದೂರದಿಂದ ಹೊಸ ಇವಿ ಬೈಕ್ ಮಾದರಿಯು ಸಾಮಾನ್ಯ ಮಾದರಿಯಂತೆ ಕಂಡರೂ ಹಲವಾರು ವಿಭಿನ್ನ ತಾಂತ್ರಿಕ ಅಂಶಗಳನ್ನು ಹೊಂದಿದೆ. ಇದರಲ್ಲಿ ಫ್ರೀ ಲೋಡ್ ಹೊಂದಾಣಿಕೆಯಿರುವ 41 ಎಂಎಂ ಫ್ರಂಟ್ ಯುಎಸ್ ಡಿ ಫೋರ್ಕ್ ಮತ್ತು ರಿಯರ್ ಮೊನೋಶಾಕ್ ಸಸ್ಷೆಂಷನ್ ಹೊಂದಿರಲಿದೆ. ಹಾಗೆಯೇ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ 4 ಪಿಸ್ಟನ್ ರೆಡಿಯಲ್ ಕ್ಯಾಲಿಪರ್ ಹೊಂದಿರುವ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಹೊಂದಿರುವ 230 ಎಂಎಂ ರಿಯರ್ ಡಿಸ್ಕ್ ಸೌಲಭ್ಯವನ್ನು ಜೋಡಿಸಲಾಗಿದೆ.
ಇನ್ನು ಹೊಸ ಇವಿ ಬೈಕಿನಲ್ಲಿ ಹಲವಾರು ಕನೆಕ್ಟೆಡ್ ಸೌಲಭ್ಯಗಳನ್ನು ನೀಡಲಾಗಿದ್ದು, 5 ಇಂಚಿನ ಟಿಎಫ್ ಟಿ ಡ್ಯಾಶ್ ಬೋರ್ಡ್ ಜೊತೆ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಫೀಚರ್ಸ್ ಹೊಂದಿರಲಿದೆ. ಇದರೊಂದಿಗೆ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ನೋಟಿಫಿಕೇಷನ್ ಅಲರ್ಟ್, ರೈಡ್ ಅನಾಲಟಿಕ್ಸ್, ರಿಯಲ್ ಟೈಮ್ ಲೋಕೆಷನ್, ಕ್ರ್ಯಾಶ್ ಡಿಟೆಕ್ಷನ್, ಬ್ಯಾಟರಿ ಸ್ಯಾಟಿಕ್ಸ್ ಸೇರಿದಂತೆ ಹಲವಾರು ತಂತ್ರಜ್ಞಾನ ಸೌಲಭ್ಯಗಳಿವೆ.
ವಿತರಣೆ ಅವಧಿ
ಸದ್ಯ ಹೊಸ ಎಫ್77 ಇವಿ ಬೈಕ್ ಮಾದರಿಗಾಗಿ ಆಲ್ಟ್ರಾವಯೊಲೆಟ್ ಕಂಪನಿಯು ಅಧಿಕೃತ ಬುಕಿಂಗ್ ಆರಂಭಿಸಿದ್ದು, ಮುಂಬರುವ ಜನವರಿ ಕೊನೆಯಲ್ಲಿ ಹೊಸ ಬೈಕ್ ವಿತರಣೆ ಮಾಡುವ ಯೋಜನಯಲ್ಲಿದೆ. ಮೊದಲ ಹಂತದಲ್ಲಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಬೈಕ್ ವಿತರಿಸಲಿದ್ದು, ತನನಂತರ ಎರಡನೇ ಹಂತದಲ್ಲಿ ಮುಂಬೈ, ಚೆನ್ನೈ, ಪುಣೆ, ಕೊಚ್ಚಿನ್ ನಗರಗಳಲ್ಲಿ ಬೈಕ್ ವಿತರಿಸಲಿದೆ. ತದನಂತರ ಗ್ರಾಹಕರ ಬೇಡಿಕೆಯೆಂತೆ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಜಾಲ ವಿಸ್ತರಿಸಲಿದೆ.
Published On - 6:41 pm, Thu, 24 November 22