ಆಕ್ರಂದನ : ಇದು ಅಂತರಾತ್ಮದ ಕೂಗು…. ಭಾಗ -2

ದೇವು, ಕುಂಞ ತೂರಾಡುತ್ತಾ ಮಾತಿಗೆ ಶುರುವಿಟ್ಟುಕೊಂಡಿದ್ದರು. ಬಯಲುರಿಯ ಬೆಂಕಿ ಅಣ್ಣ ತಮ್ಮಂದಿರ ಮುಖದಲ್ಲಿ ಪ್ರಜ್ವಲಿಸುತ್ತಿತ್ತು...... ಹಿಂದಿನ ಸಂಚಿಕೆಯ ಆಕ್ರಂದನ 2ನೇ ಭಾಗವಾಗಿ ಇಲ್ಲಿ ಮುಂದುವರಿಯಲಿದೆ

ಆಕ್ರಂದನ : ಇದು ಅಂತರಾತ್ಮದ ಕೂಗು…. ಭಾಗ -2
ಆಕ್ರಂದನ ಭಾಗ-2
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 09, 2022 | 9:57 AM

ಮತ್ತೆ ಮಾತಾಡಿದ ಕುಂಞ. “ ಹೇಳು ದೇವು ಎಂತ ಮಾಡುವ. ನಂಗೂ ಈ ಜೀವನ ಸಾಕಾಗಿದೆ. ಅಪ್ಪ ಇದ್ದಿದ್ನ ತಿಂದ್ಕೊಂಡ. ನಮ್ಗೆ ಉಳ್ದಿದ್ದು ಚಿಪ್ಪು. ತಲೆಗೆ ಎಳೆದ್ರೆ ಕಾಲಿಗಿಲ್ಲ.. ಕಾಲಿಗೆಳೆದ್ರೆ ತಲೆಗಿಲ್ಲ. ಬದುಕಿದ್ರೆ ದಣಿ ತರ ಬದುಕ್ಬೇಕು” ಅಂದ. ಕುಂಞನ ಮಾತಿಗೆ ಪ್ರೇರೇಪಿತನಾದ ದೇವು “ಹೌದು.. ಇಲ್ಲಾಂದ್ರೆ ಅದೇ ಚಿಂದಿ ಆಯೋ ಕೆಲಸ.. ಇವ್ರುಗಳ ಮನೇಲಿ ಮುಗೀದೇ ಇರೋ ಜೀತ. ನೀನೇ ಹೇಳು ಈವಾಗ. ಏನ್ ಮಾಡಾಣಾಂತಿ?”. “ಬಾ, ಹೊರಡೋಣ” ಎಂದ ಕುಂಞ. ಇಬ್ಬರೂ ತೂರಾಡುತ್ತಾ ಎದ್ದು ಹೊರಟರು. ಇಬ್ಬರ ಮನದಲ್ಲಿದ್ದ ಆಲೋಚನೆಗಳೂ ಒಂದೇ. ಕನ್ನ ಹಾಕುವುದು. ಅಂದು ಕುಡಿದು ತಲೆಗೇರಿದ ಮತ್ತು ಮಾಡಬಾರದ್ದನ್ನ ಮಾಡಿಸಿತ್ತು.

ರಾತ್ರೋ ರಾತ್ರಿ ಅರಮನೆಯಲ್ಲಿದ್ದ ಒಂದಷ್ಟು ದೈವ-ದೇವರುಗಳ ಚಿನ್ನ ಕಾಣೆಯಾದವು. ಮಾರನೆ ದಿನ, ಊರಿಡೀ ಅದೇ ಸುದ್ದಿ. “ದೇವರ ಚಿನ್ನಕ್ಕೆ ಕೈ ಹಾಕಿದ ಕಳ್ಳರಾದರೂ ಯಾರು..? ಯಾವೂರಿನವರಿರಬಹುದು? ಯಾರೋ ಹೊರಗಿನವರೇ ಇರಬೇಕು. ಈ ದೇವರ ಕಾರ್ನಿಕ ಗೊತ್ತಿದ್ದರೆ ಖಂಡಿತಾ ಅಂತಾ ಕೆಲಸ ಮಾಡುತ್ತಿರಲಿಲ್ಲ. ಇನ್ನು ಅವರಿಗೆ ಉಳಿಗಾಲವಿದೆಯೇ?” ಎಂಬೆಲ್ಲಾ ಮಾತುಗಳು. ಊರ ಮುಖಂಡರ ಪಂಚಾಯ್ತಿ ಕರೆಯಲಾಯ್ತು. ಅರಮನೆಯ ಕೆಲಸಗಾರರ ವಿಚಾರಣೆ ಶುರುವಾಯ್ತು. ಯಾರೂ ಕಳ್ಳರಂತೆ ಕಂಡಿಲ್ಲ. ದೈವ ಪಾದ್ರಿಗಳಾದುದರಿಂದ ಕುಂಞ,ದೇವುವನ್ನು ಅನುಮಾನಿಸುವಂತೆಯೇ ಇರಲಿಲ್ಲ. ನಾನಾ ರೀತಿಯ ತನಿಖೆ ನಡೆಸಿದರೂ ಅರಮನೆಯ ಕಳ್ಳತನಕ್ಕೆ ಉತ್ತರ ಸಿಗದೇ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿತು. ಕೊನೆಗೆ ಊರವರೆಲ್ಲಾ ಸೇರಿ ಕಳ್ಳರನ್ನು ಹುಡುಕಿ ಕೊಡಬೇಕಾಗಿ ದೈವಕ್ಕೆ ಪ್ರಾರ್ಥಿಸಿಕೊಂಡರು.

ಈ ಎಲ್ಲಾ ಘಟನಾವಳಿಗಳನ್ನು ಕಂಡ ಲಚ್ಚಿ ಬೆದರಿ ಹೋಗಿದ್ದಳು ಮನದೊಳಗೆ ಅದೇನೋ ಭಯ, ದುಃಖ ಮನೆ ಮಾಡಿತ್ತು. ಹಿಂದಿನ ದಿನ ಮಕ್ಕಳು ಅರಮನೆಯಲ್ಲಿ ತಾವು ನೋಡಿದ್ದ ದೇವರ ಚಿನ್ನದ ಬಗೆಗೆ ಬಹಳ ಹೊತ್ತು ಮಾತಾಡುತ್ತಿದ್ದುದು ಅಸ್ಪಷ್ಟವಾಗಿ ಕೇಳಿಸಿಕೊಂಡಿದ್ದಳು. ವಿಪರೀತವಾಗಿ ಕುಡಿದ ಅವರಿಬ್ಬರೂ ರಾತ್ರೋ ರಾತ್ರಿ ಮನೆ ಬಿಟ್ಟಿದ್ದನ್ನು ಕಂಡು ಆಶ್ರ‍್ಯವಾಗಿತ್ತು… ಮತ್ತೆ ಬೆಳಗ್ಗಿನ ಜಾವ ವಾಪಾಸ್ಸಾದವರು ಮನೆಯ ಹಿಂದೆ ಗುಟ್ಟಾಗಿ ಮಣ್ಣು ಅಗೆಯುತ್ತಿದ್ದುದನ್ನು ಕಂಡ ಆಕೆ ನಿದ್ದೆಗಣ್ಣಲ್ಲಿದ್ದುದರಿಂದ ಅದೇನೆಂದು ಕೇಳಬೇಕೆನಿಸಿದರೂ ಕೇಳಿರಲಿಲ್ಲ. ಲಚ್ಚಿ ಕೆಲಸಕ್ಕೆ ಹೊರಟಾಗ ಮಕ್ಕಳಿನ್ನೂ ಎದ್ದಿರಲಿಲ್ಲ. ‘ಸದ್ಯಕ್ಕೆ ಬಿಡುವ ಅಮಲಲ್ಲ ಇದು, ಏನಿದ್ದರೂ ಮತ್ತೆ ಕೇಳೋಣ’ ಎಂದು ಸುಮ್ಮನಾಗಿದ್ದಳು.

ಆದರೀಗ ಆಕೆಯ ಮನದೊಳಗೆ ಅನುಮಾನದ ಎಳೆಯೊಂದು ಘಟನೆಯ ಅಸ್ಪಷ್ಟ ಚಿತ್ರಣ ನೀಡಲು ಶುರುಮಾಡಿತ್ತು. “ನನ್ನ ಮಕ್ಕಳೇನಾದರೂ ಈ ಕಾರ್ಯ ಮಾಡಿರಬಹುದಾ?” “ಇಲ್ಲ..ಇರಲಿಕ್ಕಿಲ್ಲ” ಹುಟ್ಟಿನಿಂದ ಬಂದ ನಂಬಿಕೆಗಳು ತನ್ನ ಮಕ್ಕಳನ್ನು ತಪ್ಪು ದಾರಿ ಹಿಡಿಯಲು ಬಿಡವು ಎಂಬ ಹುಸಿ ಧೈರ್ಯ ಒಂದೆಡೆಯಾದರೆ,ಮತ್ತೊಂದೆಡೆ ಕಿತ್ತು ತಿನ್ನುವ ಬಡತನ ತಪ್ಪು ಮಾಡಿಸಿಬಿಟ್ಟರೇ? ಎಂಬ ಭಯ. ನೇರ ಮನೆಗೆ ಹೋದವಳೇ ಇನ್ನೇನು ಮಕ್ಕಳನ್ನು ಕೇಳಬೇಕು ಎನ್ನುವಷ್ಟರಲ್ಲಿ ದೇವು ತನ್ನೆದುರಲ್ಲಿ ಬಟ್ಟೆ ಮೇಲೆ ಹಾಸಿದ್ದ ಚಿನ್ನಕ್ಕೆ ಕೈ ಮುಗಿದು ಅಳುತ್ತಿರುವುದು ಕಂಡಿತು. ಇತ್ತ ಕುಂಞ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಎಲ್ಲವನ್ನೂ ಅರ್ಥ ಮಾಡಿಕೊಂಡ ಲಚ್ಚಿ ಮಕ್ಕಳಿಗೆ ಮನಸೋ ಇಚ್ಚೆ ಬಡಿದು ತಾನೂ ಅಳಲು ಶುರು ಮಾಡಿದಳು. ರಾತ್ರಿ ಕುಡಿತದ ಅಮಲಲ್ಲಿ ಅಣ್ಣ ತಮ್ಮಂದಿರು ಅರಮನೆಯಲ್ಲಿದ್ದ ಚಿನ್ನವನ್ನು ಕದ್ದು ತಂದು ಮನೆಯ ಹಿಂಬಾಗದ ಮಣ್ಣಿನಡಿಯಲ್ಲಿ ಬಚ್ಚಿಟ್ಟು ಮಲಗಿದ್ದರು. ಅಮಲಿಳಿದಾಗ ತಮ್ಮ ತಪ್ಪು ಅರಿವಾಗಿತ್ತು. ಆದರೀಗ ಪರಿಸ್ಥಿತಿ ಕೈ ಮೀರಿ ಹೋಗಿತ್ತು.

“ಓಹ್..ನಾವೆಂತಾ ತಪ್ಪು ಮಾಡಿದೆವು ಕುಂಞ. ಇನ್ನು ಆ ತಾಯಿ ನಮ್ಮನ್ನು ಸುಮ್ಮನೆ ಬಿಡುವಳೇ.. ನಮ್ಮ ಮೃತ್ಯು ನಾವೇ ತಂದುಕೊಂಡೆವು, ಇನ್ನೇನೆಲ್ಲಾ ಆಗಲಿದೆಯೋ?” ದೇವು ಗೋಳಾಡುತ್ತಿದ್ದ.. ಮತ್ತೆ ಮತ್ತೆ ದೈವದ ನೆನಪಾಗಿ ಕ್ಷಮೆ ಕೇಳುತ್ತಿದ್ದ.. ತಪ್ಪಾಯಿತೆಂದು ದಂಡ ಹೊಡೆಯುತ್ತಿದ್ದ. ಇತ್ತ ಕುಂಞ ಮಾತೇ ಹೊರಡದವನಂತಾದ. ಅವನಿಗೆ ತಾನು ಎಂದಿಗೂ ಕನಸಲ್ಲೂ ಗ್ರಹಿಸದ ಕಾರ್ಯವೊಂದು ಮಾಡಿದ್ದು ಅತೀವ ನೋವುಂಟು ಮಾಡಿತ್ತು. ತನ್ನನ್ನೇ ತಾನು ನಂಬಲಾರದಾದ. ಹುಟ್ಟಿನಿಂದ ರಕ್ಷಿಸಿದ ತಾಯಿ ಯಾವತ್ತೂ ಸಂತೋಷಕ್ಕೆ, ನೆಮ್ಮದಿಗೆ ಕೊರತೆ ಮಾಡಿರಲಿಲ್ಲ. ಪುಟ್ಟದಾದ ಬದುಕು ಏರಿಳಿತವಿಲ್ಲದೇ ಸಾಗುತ್ತಿತ್ತು.

“ಒಬ್ಬ ದೈವ ಪಾದ್ರಿಯಾಗಿ ನಾನು ಮಾಡಿದ್ದು ಸರಿಯೇ? ತಾಯಿಯ ಶಕ್ತಿ ನನ್ನ ಇದೇ ದೇಹದಲ್ಲಲ್ಲವೇ ಹರಿಯುತ್ತಿದ್ದುದು.. ಇದೇ ಕೈಯಲ್ಲಿ ಆ ತಾಯಿಯ ಶಕ್ತಿ ಮದಿಪು ಕೊಡುತ್ತಿದ್ದುದು.. ನನ್ನೂರಿನ ಜನಕ್ಕೆ ನನ್ನ ಮೇಲೆ ಅತೀವ ವಿಶ್ವಾಸ.. ನಾನು ಎಲ್ಲರಿಗೂ ಮೋಸ ಮಾಡಿಬಿಟ್ಟೆ..ಒಂದು ಕ್ಷಣ ನಾನೆಲ್ಲಾ ಮರೆತು ಬಿಟ್ಟೆನೇ? ನಾನು ಅತೀವವಾಗಿ ನಂಬಿದ್ದ ತಾಯಿಯ ಶಕ್ತಿಯನ್ನು ಅನುಮಾನಿಸಿದಂತಾಗಲಿಲ್ಲವೇ? ಆಕೆಗೇ ದ್ರೋಹ ಬಗೆದು ಬಿಟ್ಟೆನೇ?” ಎಂದು ದೈವದ ಭಯದಷ್ಟೇ ಅವನೊಳಗೆ ತಾನು ಮಾಡಿದ ಹೇಯ ಕೃತ್ಯ ಕಿತ್ತು ತಿನ್ನಲಾರಂಭಿಸಿದ್ದವು.

ಇದನ್ನೆಲ್ಲಾ ನೋಡುತ್ತಿದ್ದ ಲಚ್ಚಿಗೆ ದಿಕ್ಕೇ ತೋಚದಂತಾಗಿತ್ತು. ಮಾಡುವುದಿನ್ನಾದರೂ ಏನು. ಊರ ಜನರಿಗೆ ಗೊತ್ತಾದರೆ ಅದೆಷ್ಟು ಅಪಮಾನ. ಊರಿನಿಂದ ಬಹಿಷ್ಕರಿಸಿದರೂ ಆಶ್ರ‍್ಯವಿಲ್ಲ. ಹಾಗಂತ ಈ ಚಿನ್ನವನ್ನೇನು ಮಾಡುವುದು ಇದು ಸೆರಗಲ್ಲಿ ಕಟ್ಟಿಕೊಂಡ ಕೆಂಡವೇ ಸರಿ. ಆ ದಿನ ರಾತ್ರಿ ದೇವುಗೆ ಚಳಿ ಜ್ವರ ಶುರುವಾಗಿತ್ತು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದ. ಇದ್ದಕ್ಕಿದ್ದ ಹಾಗೇ ಕಿರುಚಿಕೊಳ್ಳುತ್ತಿದ್ದ. ಕುಂಞ, ಲಚ್ಚಿ ಎಲ್ಲಾ ರೀತಿಯ ಆರೈಕೆ ಮಾಡಿದರೂ ಜ್ವರ ಬಿಡುವ ಲಕ್ಷಣ ಕಾಣಲಿಲ್ಲ.

ಬೆಳಗ್ಗಿನ ಜಾವ. ಕುಂಞ, ಲಚ್ಚಿಗೆ ರಾತ್ರಿಯ ಗಲಾಟೆಯಿಂದಾಗಿ ಆಗಷ್ಟೇ ನಿದ್ದೆ ಹಿಡಿದಿತ್ತು. ಇತ್ತ ದೇವು, ಕದ್ದ ಚಿನ್ನ ಕಟ್ಟಿಕೊಂಡು ಓಡಿಹೋಗಿದ್ದ. ಎಚ್ಚರವಾಗುವ ಹೊತ್ತಿಗೆ ಮನೆಯಲ್ಲಿ ದೇವು ಇಲ್ಲ. ಅಕ್ಕಪಕ್ಕದಲ್ಲೆಲ್ಲಾ ಹುಡುಕಿದರು. ಬಾವಿಕಟ್ಟೆ, ಕೆರೆ ಎಲ್ಲವೂ ನೋಡಾಯಿತು. ದೇವು ಎಲ್ಲೂ ಇಲ್ಲ. ಅಮ್ಮ ಮಗ ಇಬ್ಬರೂ ತಲೆ ಮೇಲೆ ಕೈ ಹೊತ್ತು ಕುಳಿತರು.

ಗಾರ್ಗಿ 

ಭಾಗ-3 ಮುಂದುವರಿಯಲಿದೆ

Published On - 9:38 am, Wed, 2 March 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು