Children’s Day 2022: ಬಾಲ್ಯವೆಂಬ ಸುಂದರ ಪ್ರಪಂಚದಲ್ಲಿ ನಮ್ಮ ದಿನದ ಸಂಭ್ರಮ ಅದ್ಭುತ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2022 | 4:05 PM

ಮರಳಿ ಪಡೆಯಲಾಗದ ಅಮೂಲ್ಯ ಕ್ಷಣಗಳ ಗೊಂಚಲುಗಳು ನನ್ನ ನೆನಪಿನ ಬುತ್ತಿಯಲ್ಲಿ ಭದ್ರ ಸ್ಥಾನ ಪಡೆದು ಬಿಟ್ಟಿದೆ. ನಾನು ಮಾಡುತ್ತಿದ್ದ ಅವಾಂತರಗಳು, ಇದಕ್ಕಾಗಿ ನಾನು ಶಿಕ್ಷಕರ ಕೈಯಿಂದ ತಿನ್ನುತ್ತಿದ್ದ ಬಿಸಿ ಬಿಸಿ ಕಜ್ಜಾಯ, ತರಗತಿಯಿಂದ ಮನೆಗೆ ಬಂದ ಮೇಲೂ ಬೆನ್ನಿಗೆ ಬೀಳುತ್ತಿದ್ದ ಬಾಸುಂಡೆ ಮರೆಯಲಾ ಸಾಧ್ಯ ಕ್ಷಣಗಳು.

Childrens Day 2022: ಬಾಲ್ಯವೆಂಬ ಸುಂದರ ಪ್ರಪಂಚದಲ್ಲಿ ನಮ್ಮ ದಿನದ ಸಂಭ್ರಮ ಅದ್ಭುತ
Children's Day 2022
Follow us on

ಬಾಲ್ಯವೆಂಬ ಸುಂದರ ಪ್ರಪಂಚ, ಮರಳಿ ಪಡೆಯಲಾಗದ ಅಮೂಲ್ಯ ಕ್ಷಣಗಳ ಗೊಂಚಲುಗಳು ನನ್ನ ನೆನಪಿನ ಬುತ್ತಿಯಲ್ಲಿ ಭದ್ರ ಸ್ಥಾನ ಪಡೆದು ಬಿಟ್ಟಿದೆ. ನಾನು ಮಾಡುತ್ತಿದ್ದ ಅವಾಂತರಗಳು, ಇದಕ್ಕಾಗಿ ನಾನು ಶಿಕ್ಷಕರ ಕೈಯಿಂದ ತಿನ್ನುತ್ತಿದ್ದ ಬಿಸಿ ಬಿಸಿ ಕಜ್ಜಾಯ, ತರಗತಿಯಿಂದ ಮನೆಗೆ ಬಂದ ಮೇಲೂ ಬೆನ್ನಿಗೆ ಬೀಳುತ್ತಿದ್ದ ಬಾಸುಂಡೆ ಮರೆಯಲಾ ಸಾಧ್ಯ ಕ್ಷಣಗಳವು. ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಹಾಸಿಗೆಯಿಂದ ಏಳಲು ಕಳ್ಳತನ ಮಾಡಿ, ಶಾಲೆಗೆ ಹೋಗಲು ಕುಂಟು ನೆಪಗಳನ್ನು ಹೂಡಿದರು ಕೂಡ ಪ್ರಯೋಜನವಾಗದೆ ಇದ್ದಾಗ ಮಾಡುತ್ತಿದ್ದ ನಾಟಕಗಳು ಅಷ್ಟಿಷ್ಟಲ್ಲ. ಈಗ ಆ ಹಳೆಯ ನೆನಪುಗಳ ಮೆಲುಕು ಹಾಕಿದರೆ ಸುಂದರ ನಗುವೊಂದು ಅರಿವಿಲ್ಲದೆ ಸುಳಿದಾಡುತ್ತದೆ.

ಮಳೆಯಲ್ಲಿ ನೆನೆದು ಒದ್ದೆಯಾಗಿ, ಜ್ವರ ಬರಿಸಿಕೊಂಡು ಮನೆಯಲ್ಲಿ ಬೈಗುಳ ತಿನ್ನುತ್ತಿದ್ದ ಮಜವೇ ಬೇರೆ! ಅದರಲ್ಲೂ ಬಾಲ್ಯದ ದಿನಗಳು, ಬಾಲ್ಯದ ಆಟಗಳು, ಸ್ನೇಹಿತರೊಂದಿಗೆ ಕಳೆದ ಪ್ರತಿ ಕ್ಷಣಗಳು ಎಷ್ಟೇ ವರ್ಷಗಳು ಕಳೆದರೂ ಎಂದಿಗೂ ಮಾಸದೆ ಇರುವಂತಹ ನವೀನ ಅನುಭೂತಿ.
ಪಟ್ಟಣದಿಂದ ಕೊಂಚ ಒಳಗೆ ಇದ್ದ ನನ್ನ ಶಾಲೆ ಶಿಸ್ತಿನ ವಿಷಯದಲ್ಲಿ ರಾಜಿಯಾಗದೆ, ನಿಯಮಗಳನ್ನು ಪಾಲಿಸದೇ ಇದ್ದರೆ ಶಿಕ್ಷೆ ಖಚಿತವಾಗಿತ್ತು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಶಿಕ್ಷಕ ವೃಂದ, ಓದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೆಲವೊಮ್ಮೆ ಬಾಲ್ಯದ ಉತ್ಸಾಹದಿಂದಲೋ ಇಲ್ಲವೇ ಶಿಕ್ಷಕರ ಒತ್ತಾಯಕ್ಕೋ ಮಣಿದು ಭಾಗವಹಿಸಿ ಪ್ರಶಸ್ತಿ ಪಡೆದರೆ ಮುಗಿಯಿತು ಏನೋ ಸಾಧಿಸಿದ ಸಂಭ್ರಮ.

ಇದನ್ನು ಓದಿ:  ಮಕ್ಕಳ ಹಬ್ಬಕ್ಕೆ ಅರ್ಥ ಸಿಗಬೇಕಾದರೆ ಮೊದಲು ಸಾಕ್ಷರತೆ ಮಹತ್ವ ತಿಳಿಸಬೇಕು

ಸುಂದರ ಶಾಲೆಯ ವಾತಾವರಣವೇ ಒಂದು ರೀತಿಯ ಹಿತ. ಒಂದು ಕ್ಲಾಸ್ ಮುಗಿದ ಕೂಡಲೇ ಆಗುವ ಬೆಲ್ ಖುಷಿ ತರಿಸಿದರೆ, ಅದೇ ಆ ಕ್ಲಾಸ್ ಅಥವಾ ಟೀಚರ್ ಇಷ್ಟವಿಲ್ಲದೆ ಹೋದರೆ ಯಾವಾಗ ಕ್ಲಾಸ್ ಮುಗಿಯುತ್ತದೊ ಎಂದು ಕಾದು ಕೂರುವ ಜಾಯಮಾನ ಜೊತೆಗೆ ಆಟದ ಸಮಯವಾದರೆ ಮನಸ್ಸು ಆಕಾಶದಲ್ಲಿಯೆ ತೇಲುತ್ತಿತ್ತು. ನಾನಾ ಆಟ ಆಡುತ್ತಾ ಆಗ ಬೆಲ್ ಬಾರಿಸಿದರೆ ಕೋಪ ಬರುತ್ತಿತ್ತು, ಬೇಸರ ಜೊತೆಗೆ ಆಟದ ವಿಚಾರದಲ್ಲಿ ನಾವು ಸೋತರೆ ಕಿತ್ತಾಡಿ ಮುನಿಸಿಕೊಳ್ಳುತ್ತಿದ್ದ ದಿನಗಳವು. ಶಾಲೆಯಲ್ಲಿ ಪರೀಕ್ಷೆ ಎಂಬ ವಿಚಾರ ಬಂದಾಗ ಮಾತ್ರ ಬೇಸರವಾಗುತ್ತಿತ್ತು. ಶಾಲೆಯಲ್ಲಿಯೂ ಪರೀಕ್ಷೆ ಸರಿ ಮಾಡದಿದ್ದರೆ ಬೈಗುಳ ಹೊಡೆತ ಸಿಗುತ್ತಿತ್ತು.

ಇದು ಪರೀಕ್ಷೆಯ ಮೊದಲಿನ ಕಥೆಯಾದರೆ, ಪರೀಕ್ಷೆಯ ಬಳಿಕ ಆಕಸ್ಮಾತ್ ಒಳ್ಳೆಯ ಅಂಕ ಬಂದರೆ ಪರವಾಗಿಲ್ಲ.. ಬಚಾವ್.. ದುರದೃಷ್ಟ ವಶಾತ್ ಕಮ್ಮಿ ಬಂದರೆ ಬೈಗುಳ ಹೊಡೆತ ಎಲ್ಲ ಮಾಮೂಲಿ. ಅದಕ್ಕಾಗಿಯೇ ಮಾರ್ಕ್ಸ್ ಕಾರ್ಡ್ ಸಿಕ್ಕ ಕೂಡಲೇ ಮನೆಯಲ್ಲಿ ತೋರಿಸದೆ ಶಾಲೆಗೆ ಹೊರಟು ಇನ್ನೇನು ವ್ಯಾನ್ ಬರಲು ಎರಡು ಸೆಕೆಂಡ್ ಬಾಕಿ ಇದೆ ಎಂದಾಗ ಸೈನ್ ಹಾಕಿಸಿಕೊಂಡು ಆಳುವ ನಾಟಕದ ಪ್ರಹಸನ ಕೂಡ ನಡೆಯುತ್ತಿತ್ತು. ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲು ಶಿಕ್ಷಕರ ಪಾತ್ರ ಮಹತ್ವವಾದದ್ದು, ಅವರಿಗೊಂದು ಕೃತಜ್ಞತೆ ಸಲ್ಲಿಸಲೇಬೇಕು. ಏನೇ ಆದರೂ ಕೂಡ ನನ್ನ ಬಾಲ್ಯದ ದಿನಗಳು ಎಂದಿಗೂ ಮರೆಯಲಾಗದ ಸುಂದರ ಅನುಭವಗಳ ಸರಮಾಲೆಯೆ ಸರಿ.

ಅಶ್ವಿನಿ ಹೆಬ್ಬಾರ್

Published On - 3:53 pm, Mon, 14 November 22