Happy Teachers Day: ಬದುಕಲ್ಲಿ ಶಿಕ್ಷಕರಾಗಿ ಮಾತ್ರವಲ್ಲದೆ ಮಮತೆ ನೀಡಿದ ತಾಯಿ ನನ್ನ ಗುರು
ಸಮಸ್ಯೆ ಬಂದಾಗ ಬೆನ್ನು ಕೊಟ್ಟು ಕೂತವರಲ್ಲ. ಕಷ್ಟ ಬಂತೆಂದು ಕೈ ಚೆಲ್ಲಿದವರಲ್ಲ. ಕಾಲೇಜಿನ ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಸುವಲ್ಲಿ ಇವರು ಎತ್ತಿದ ಕೈ. ಇವರ ಜೀವನಾನುಭವವನ್ನು ಪ್ರತಿದಿನ ನಮ್ಮಲ್ಲಿ ಹಂಚಿಕೊಂಡು, ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ಸಲಹೆಯನ್ನು ನೀಡಿದವರು.
ಆ ನಗುವೇ ಅವರ ಒಡವೆ. ಅವರ ಮಾತೇ ನಮಗೆ ಧೈರ್ಯ,ಸ್ಫೂರ್ತಿ. ಅವರು ವಿದ್ಯಾರ್ಥಿಗಳ ಪಾಲಿಗೆ ಗುರು ಮಾತ್ರವಲ್ಲ, ತಾಯಿಯ ಸ್ಥಾನ ತುಂಬಿದವರು. ಚೈತನ್ಯದ ಚಿಲುಮೆ ಎಂದರೂ ತಪ್ಪಿಲ್ಲ. ನಾನು ಪತ್ರಿಕೋದ್ಯಮ ವಿಭಾಗಕ್ಕೆ ಸೇರಬೇಕು , ಉತ್ತಮ ಪತ್ರಕರ್ತೆ ಆಗಬೇಕು ಎಂಬ ಕನಸಿಗೆ ರೆಕ್ಕೆ ಕಟ್ಟಿ ಹಾರಲು ಕಲಿಸಿದವರಿವರು. ನನ್ನ ಅಚ್ಚು ಮೆಚ್ಚಿನ ಉಪನ್ಯಾಸಕರು ಭವ್ಯ ಮೇಡಂ ಹೌದು, ಓರ್ವ ಉತ್ತಮ ಗುರುವಿಗೆ ಇರಬೇಕಾದಂತಹ ಎಲ್ಲಾ ಗುಣಗಳನ್ನು ನಾನು ಕಂಡಿದ್ದು ಇವರಲ್ಲೇ ಎನ್ನಬಹುದು. ಇವರಿಂದ ,ಇವರನ್ನು ನೋಡಿ ಕಲಿಯ ಬೇಕಾದ್ದದು ಬಹಳಷ್ಟಿದೆ. ಅದೆಷ್ಟು ಸವಾಲುಗಳೆದುರಾದರೂ ಇವರು ಕುಗ್ಗಿದ್ದನ್ನು ನಾನು ನೋಡಲೇ ಇಲ್ಲ.
ಸಮಸ್ಯೆ ಬಂದಾಗ ಬೆನ್ನು ಕೊಟ್ಟು ಕೂತವರಲ್ಲ. ಕಷ್ಟ ಬಂತೆಂದು ಕೈ ಚೆಲ್ಲಿದವರಲ್ಲ. ಕಾಲೇಜಿನ ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಸುವಲ್ಲಿ ಇವರು ಎತ್ತಿದ ಕೈ. ಇವರ ಜೀವನಾನುಭವವನ್ನು ಪ್ರತಿದಿನ ನಮ್ಮಲ್ಲಿ ಹಂಚಿಕೊಂಡು, ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ಸಲಹೆಯನ್ನು ನೀಡುತ್ತಾ, ಯಾವ ದಾರಿಯಲ್ಲಿ ಹೇಗೆ ಸಾಗಬೇಕು ಎಂಬುದನ್ನು ಸೂಚಿಸುತ್ತಾ, ಭರವಸೆಯನ್ನೇ ಕಳೆದುಕೊಂಡ ಅದೆಷ್ಟೋ ಜನರಿಗೆ ಹುರಿದುಂಬಿಸುತ್ತಾ, ನನ್ನ ಬದುಕಲ್ಲಿ ಗುರುವಾಗಿ ಮಾತ್ರವಲ್ಲದೆ ಮಮತೆ ನೀಡುವ ತಾಯಿಯ ಸ್ಥಾನವನ್ನು ಕೂಡ ತುಂಬಿದವರು ಇವರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಕೂಡ ಕಲ್ಪಿಸಿಕೊಟ್ಟು, ವಿದ್ಯಾರ್ಥಿ ಎಂಬ ಕಲ್ಲನ್ನು ಶಿಲೆಯಾಗಿಸುವ ಕಲೆ ಇರುವ ಶಿಲ್ಪಿ. ಒಬ್ಬ ಗುರು ಎಂಬ ನೆಲೆಯಲ್ಲಿ, ಪಾಠ-ಪ್ರವಚನವನ್ನು ಹೊರತು ಪಡಿಸಿ, ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದಕ್ಕನುಸಾರವಾಗಿ ನಡೆದುಕೊಳ್ಳುವ ವ್ಯಕ್ತಿತ್ವ ಅನಿವಾರ್ಯ. ಸರಳತೆ , ಶಿಸ್ತು, ನೇರ ನಡೆ-ನುಡಿ, ಅಕ್ಕರೆ ತುಂಬಿದ ಮಾತು ಹೀಗೆ ಒಂದಾ , ಎರಡಾ… ಹೇಳಿದರೆ ಪದಗಳೇ ಸಾಲವು. ಅವರು ಪಾಠ ಹೇಳಿಕೊಡುವ ಶೈಲಿ, ಪಾಠದ ವೇಳೆ ಎಲ್ಲರ ಗಮನವನ್ನು ಹಿಡಿದು ಇಟ್ಟುಕೊಳ್ಳುವ ರೀತಿ, ಒಂದು ರೀತಿಯ ವಿಸ್ಮಯವೇ ಸರಿ.
ಯಾಕೋ ಮನಸ್ಸು ಸರಿ ಇಲ್ಲ, ಏನೋ ಒಂದು ರೀತಿಯ ಕಸಿವಿಸಿ, ಎಡೆಬಿಡದೆ ಕಾಡುತ್ತಿರುವ ಚಿಂತೆ, ಇವೆಲ್ಲದರ ನಡುವೆ ನಾನು ನನ್ನನ್ನೇ ಕಳೆದುಕೊಂಡಿದ್ದೆ ಎಂದೇ.. ಹೇಳಬಹುದು. ಆ ಸಂದರ್ಭದಲ್ಲಿ ನನ್ನನ್ನು ಕೈ ಹಿಡಿದು ನಡೆಸಿದವರು ನನ್ನ ಭವ್ಯ ಮೇಡಂ. ಸಮಸ್ಯೆಗಳು ಎದುರಾದಾಗ, ಅವುಗಳನ್ನು ಎದುರಿಸಿ ಮುಂದೆ ಹೋಗುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕೇ ವಿನಹ ಸಮಸ್ಯೆ ಬಂತೆಂದು ತಲೆ ಮೇಲೆ ಕೈ ಹೊತ್ತು ಕೂರುವುದು ಸರಿಯಲ್ಲ. ಇದು ನಿನ್ನ ಗುರಿಯನ್ನು ತಲುಪಲು ತಡೆಯುಂಟು ಮಾಡುತ್ತದೆ. ನಿನ್ನ ಮೇಲೆ ನಂಬಿಕೆ ಇಡು, ಎಲ್ಲಾ ಸರಿಯಾಗುತ್ತದೆ ಎಂದು ದೈರ್ಯ ತುಂಬಿದರು. ಜೊತೆಗೆ ತಪ್ಪು ಮಾಡಿದಾಗ ನನಗೆ ಬುದ್ದಿ ಹೇಳಿ, ತಿದ್ದಿದವರು ಇವರು.
ಶುಭ್ರ. ಪುತ್ರಕಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು