ಅಡುಗೆ ಮಾಡಿ ಬಡಿಸುವುದೆಂದರೆ ಒಲವು, ಖುಷಿಯನ್ನು ದಾಟಿಸುವ ಕ್ರಿಯೆ

ಅಡುಗೆ ಮಾಡಿ ಬಡಿಸುವುದೆಂದರೆ ಒಲವು, ಖುಷಿಯನ್ನು ದಾಟಿಸುವ ಕ್ರಿಯೆ
ಬಡಿಸುವ ಖುಷಿ

ಎಲ್ಲರೂ ಜತೆಯಾಗಿ ಕುಳಿತು ಮಾಡುವ ಊಟ,  ಅಮ್ಮ ಬಡಿಸಿಕೊಟ್ಟಾಗ ತಿನ್ನುವ ಖುಷಿ, ಬಡಿಸುವಾಗ ಅಮ್ಮನ ಕಣ್ಣಲ್ಲಿ ಕಾಣುವ ಸಂತೃಪ್ತಿ ಉಂಟಲ್ಲಾ ಅದು ಪದಗಳಿಗೆ ನಿಲುಕದ್ದು. ಅಮ್ಮ ಬಡಿಸುವಾಗ ಆಕೆಯ ಮುಖವನ್ನೊಮ್ಮೆ ನೋಡಿ, ಆಕೆಯ ಕಣ್ಣಲ್ಲಿಯೂ ಇಂಥಾ ಹೊಳಪು ಕಾಣಬಹುದು.

Rashmi Kallakatta

|

Jan 26, 2022 | 10:52 AM

ನನಗನಿಸಿದಂತೆ ಅಡುಗೆ ಮಾಡುವುದರಲ್ಲಿ ಎರಡು ವಿಧ. ಏನಾದರೊಂದು ತಿನ್ನಬೇಕಲ್ಲಾ ಹೇಗಾದರೊಂದು ಮಾಡಿ ಹಾಕಿದರಾಯ್ತು ಎನ್ನುವವರು. ಇನ್ನೊಂದು ವಿಧ ಎಂದರೆ ಚೆನ್ನಾಗಿ ಅಡುಗೆ ಮಾಡಬೇಕು, ಅಡುಗೆ ಮಾಡುವಾಗಲೂ ಮಾಡಿದ್ದನ್ನೂ ಬಡಿಸುವಾಗಲೂ ತೃಪ್ತಿ, ಖುಷಿ ಕಂಡುಕೊಳ್ಳುವವರು. ಇಂಥಾ ಖುಷಿಯನ್ನು ನಾನು ಕಂಡಿದ್ದು ಅಮ್ಮನಲ್ಲಿ. ಅಮ್ಮ ಪ್ರತಿಯೊಂದು ವಿಷಯದಲ್ಲೂ ಅಚ್ಚುಕಟ್ಟು. ಪಾತ್ರೆ ತೊಳೆಯುವುದರಿಂದ ಹಿಡಿದು ಅಡುಗೆ ಮಾಡಿ ಬಡಿಸಿ ಉಂಡ ಪಾತ್ರೆ ತೊಳೆಯುವವರೆಗೂ ಭಯಂಕರ ಶಿಸ್ತು. ಅದು ಹೀಗೇ ಇರಬೇಕು ಎಂದು ಪಟ್ಟು ಹಿಡಿದವರಲ್ಲ. ಆದರೆ ಹೀಗೆ ಮಾಡಿದರೆ ರುಚಿ ಬರುತ್ತದೆ. ಯಾವುದನ್ನು ಹೇಗೆ ಬೇಯಿಸಬೇಕು,ಎಷ್ಟು ಬೇಯಿಸಬೇಕು, ಇಷ್ಟಾದರೆ ಎಷ್ಟು ಜನರಿಗೆ ಉಣ್ಣಬಹುದು ಎಂಬುದು ಪಕ್ಕಾ ಲೆಕ್ಕಾಚಾರ. ನಮ್ಮ ಮನೆಯೆಂದರೆ ತುಂಬು ಕುಟುಂಬ, ನಾಯಿ,ಬೆಕ್ಕು,ಹಸು, ಕೋಳಿ ಹೀಗೆ .ಇವುಗಳೆಲ್ಲಕ್ಕೂ ಆಹಾರ ಕೊಡಬೇಕು .ಅದೆಲ್ಲವೂ ಪರ್​​ಫೆಕ್ಟ್. ಮೂಕ ಪ್ರಾಣಿಗಳವು, ಅವುಗಳಿಗೆ ಹೊತ್ತು ಹೊತ್ತಿಗೆ ಆಹಾರ ಕೊಡದಿದ್ದರೆ ಹೇಗೆ ಅಂತ ಮನೆ ಬಿಟ್ಟು ಅಮ್ಮ ಎಲ್ಲಿಯೂ ಹೋಗುವುದಿಲ್ಲ. ಹೋಗುವುದು ಅನಿವಾರ್ಯ ಆದರೆ ಅದಕ್ಕೊಂದು ವ್ಯವಸ್ಥೆ ಮಾಡಿಯೇ ಹೊರಡುವುದು. ಕುಟುಂಬದ ಸದಸ್ಯರಿಗೆ ಅಮ್ಮ ಅಡುಗೆ ಮಾಡಿಬಡಿಸುವುದು ಬಿಡಿ, ಹಸುಗಳಿಗೆ ಅಕ್ಕಚ್ಚು ಕಲಸುವುದು ಕೂಡಾ ಅಷ್ಟೇ ಪರ್​​ಫೆಕ್ಟ್.  ನಾಯಿಯ ಮುಖ ನೋಡಿ, ಅದಕ್ಕೆ ಹಸಿದಿದೆ ಇವತ್ತು ಬೆಳಗ್ಗೆ ಸರಿ ತಿಂದಿಲ್ಲ , ಬೆಕ್ಕಿಗೆ ಮೀನಿಲ್ಲದೆ ಊಟ ಸೇರ್ತಿಲ್ಲ ಹೀಗೆ ಅಮ್ಮ ಪ್ರತಿಯೊಂದು ಜೀವಿಯ ಮೇಲೂ ಕಾಳಜಿ, ಪ್ರೀತಿ  ತೋರಿಸುತ್ತಾ ಇರುತ್ತಾರೆ.

ಅಮ್ಮನ ಅಡುಗೆ ತುಂಬಾ ಮಿಸ್ ಮಾಡಿಕೊಂಡದ್ದು ಊರು ಬಿಟ್ಟು ಕೆಲಸಕ್ಕೆ ಸೇರಿದಾಗ. ಬೆಂಗಳೂರಿನ ಪಿಜಿ ಊಟವು ಅಮ್ಮನ ಕೈರುಚಿಗೆ ಯಾವುದೂ ಸಮ ಇಲ್ಲ ಎಂಬುದನ್ನು ಹೇಳಿಕೊಟ್ಟಿತ್ತು. ಹತ್ತು ವರ್ಷ ಪಿಜಿ ಜೀವನ, ಆಮೇಲೆ ಸ್ವಂತ ಮನೆ ಮಾಡಿಕೊಂಡಾಗ ಅಡುಗೆ ಪ್ರಯೋಗಗಳು ಶುರು. ಮನೆಯಲ್ಲಿ ಅಮ್ಮ ಕಲಿಸಿದ ಅಡುಗೆ ಜತೆ ತರಹೇವಾರಿ ರೆಸಿಪಿ ವಿಡಿಯೊಗಳನ್ನು ನೋಡಿ ಅಡುಗೆ ಮಾಡಿದ್ದೇ ಮಾಡಿದ್ದು. ಅಡುಗೆ ಮಾಡಿದ ಮೇಲೆ Not bad ಎಂದು ನಾನೇ ಹೇಳಿಕೊಳ್ಳುತ್ತಿದ್ದೆ. ರುಚಿ ನೋಡಲು ಗೆಳತಿಯೂ ಇದ್ದಳು. ಆಕೆ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಆಗಾಗ ಸಲಹೆ ಸೂಚನೆ ಅವಳ ಕೈಯಿಂದ ಸಿಗುತ್ತಿತ್ತು. ನಮಗಿಬ್ಬರಿಗೆ ಇಷ್ಟವಾದದು ಎಂದರೆ ಅಡುಗೆ ಮಾಡಿಬಡಿಸುವುದು. ರುಚಿ ರುಚಿಯಾದ ಅಡುಗೆ ಮಾಡಿ ಇನ್ನೊಬ್ಬರಿಗೆ ಬಡಿಸುವುದು ಖುಷಿ ಕೊಡುತ್ತದೆ, ಹಾಗಾಗಿ ವಾರಾಂತ್ಯದಲ್ಲಿ ಇಬ್ಬರೂ ಜತೆ ಸೇರಿ ಅಡುಗೆ ಮಾಡಿ ಬಡಿಸಿ ಉಣ್ಣುವ ಖುಷಿ ಕಂಡುಕೊಳ್ಳುತ್ತಿದ್ದೆವು.

ಮದುವೆ ಆದ ಮೇಲೆ ಎಲ್ಲ ಅಡುಗೆ ಪ್ರಯೋಗಗಳು ಗಂಡನ ಮೇಲೆ. ಬಡಪಾಯಿ ನಾನು ಏನು ಮಾಡಿದರೂ ತಿನ್ನುತ್ತಿದ್ದ. ಮಜಾ ಎಂದರೆ ಅವನಿಗೂ ಚೆನ್ನಾಗಿ ಅಡುಗೆ ಮಾಡಲು ಬರುತ್ತಿತ್ತು. ಆದರೆ ಸಮಸ್ಯೆ ಏನಪ್ಪಾ ಅಂದರೆ  ಒಂದು ಅಡುಗೆಗೆ ರಾಶಿ ಪಾತ್ರೆಗಳನ್ನು ಬಳಸುವುದು. ಅವ ಅಡುಗೆ ಮನೆಗೆ ಹೊಕ್ಕರೆ  ಅಡುಗೆ ಮನೆ ಅಸ್ತವ್ಯಸ್ತವಾಗಿ ಇದು ನನ್ನ ಮನೆಯೇ ಅಲ್ಲ ಎಂದು ಅನಿಸಿಬಿಡ್ತಿತ್ತು. ಹಾಗಾಗಿ ಅವ ಅಡುಗೆ ಮಾಡುವುದಾದರೆ ಅವನೇ ಪಾತ್ರೆ ತೊಳೆದು ಕ್ಲೀನ್ ಮಾಡಿಡಬೇಕು ಎಂದು ನಿಯಮ ಮಾಡಿದೆ. ಅದೇನೋ ಅಲ್ಪ ಸ್ವಲ್ಪ ವರ್ಕೌಟ್ ಆಗಿಬಡ್ತು ಅನ್ನಿ.

ಹಾಂ, ಇನ್ನೊಂದು ವಿಷ್ಯ , ಅಡುಗೆ ಮಾಡುವುದೂ ಒಂದು ಕಲೆ ಹಾಗೇ ಬಡಿಸುವುದು ಕೂಡಾ. ಯಾರಿಗೆ ಹೇಗೆ ಬಡಿಸಬೇಕು ಎಂಬುದು ಗೊತ್ತಿರಬೇಕು. ಬಡಿಸಿದ ಅನ್ನ ತಟ್ಟೆಯಿಂದ ಕೆಳಗೆ ಬೀಳದಂತೆ ಸೌಟು ಹಿಡಿಯುವುದೂ ಗೊತ್ತಿರಬೇಕು. ಯಾರಿಗೆ ಎಷ್ಟು ಬಡಿಸಬೇಕು ಎಂಬುದು ಕ್ರಮೇಣ ಗೊತ್ತಾಗುತ್ತದೆ, ಹಾಗೆ ಬಡಿಸಿ ಉಂಡರೆ ರುಚಿ ಜಾಸ್ತಿ ಎಂದು ಅಮ್ಮ ಹೇಳ್ತಾರೆ. ಗಂಡನ ಮನೆಗೆ ಬಂದಾಗ ಈ ಬಡಿಸುವ ಖುಷಿ ಕಾಣಲಿಲ್ಲ. ಟೇಬಲ್ ಮೇಲೆ ಎಲ್ಲವನ್ನೂ ಇಟ್ಟರೆ ಅಲ್ಲಿಗೆ ಮುಗೀತು. ಬೇಕಾದವರು ಹೇಗೆ ಬೇಕಾದರೂ ಬಡಿಸಿ ತಿಂದು  ಎದ್ದು ಹೋಗಬಹುದು.  ಈ ಹೊತ್ತಲ್ಲೆಲ್ಲಾ ತವರು ಮನೆ ನೆನಪು ಕಾಡುತ್ತದೆ. ಎಲ್ಲರೂ ಜತೆಯಾಗಿ ಕುಳಿತು ಮಾಡುವ ಊಟ,  ಅಮ್ಮ ಬಡಿಸಿಕೊಟ್ಟಾಗ ತಿನ್ನುವ ಖುಷಿ, ಬಡಿಸುವಾಗ ಅಮ್ಮನ ಕಣ್ಣಲ್ಲಿ ಕಾಣುವ ಸಂತೃಪ್ತಿ ಉಂಟಲ್ಲಾ ಅದು ಪದಗಳಿಗೆ ನಿಲುಕದ್ದು. ಅಮ್ಮ ಬಡಿಸುವಾಗ ಆಕೆಯ ಮುಖವನ್ನೊಮ್ಮೆ ನೋಡಿ, ಆಕೆಯ ಕಣ್ಣಲ್ಲಿಯೂ ಇಂಥಾ ಹೊಳಪು ಕಾಣಬಹುದು.

ಇದನ್ನೂ ಓದಿ:ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳಿಸಬೇಕಿತ್ತು, ವಿಳಾಸ ಹುಡುಕುತ್ತಿದ್ದೇನೆ

Follow us on

Related Stories

Most Read Stories

Click on your DTH Provider to Add TV9 Kannada