ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳಿಸಬೇಕಿತ್ತು, ವಿಳಾಸ ಹುಡುಕುತ್ತಿದ್ದೇನೆ
ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿರುವಾಗ ಹಳೇ ನೆನಪುಗಳು ಕಣ್ಮುಂದೆ ಬರುತ್ತಿವೆ. ಕಳೆದು ಹೋದ ಕೆಲವು ವಿಳಾಸಗಳನ್ನು ಹುಡುಕಿ ತೆಗೆಯಬೇಕು, ಅವರಿಗೊಂದು ಗ್ರೀಟಿಂಗ್ ಕಾರ್ಡ್ ಕಳುಹಿಸಬೇಕು ಎಂದು ಮನಸ್ಸು ಬಯಸುತ್ತಿದೆ. ನಿಮಗೂ ಹಾಗೇ ಅನಿಸುತ್ತಾ?
2021ಕ್ಕೆ ವಿದಾಯ ಹೇಳಲೇ ಬೇಕು ,ಇನ್ನು ನಾಲ್ಕು ದಿನ ಮುಗಿದರೆ 2022 ಬಂದೇ ಬಿಡುತ್ತದೆ. ಈ ವರ್ಷ ಹೇಗೋ ಕಳೆದು ಹೋಯ್ತು, ಮುಂದಿನ ವರ್ಷ ನೋಡೋಣ ಎಂದು ಹೊಸ ವರ್ಷದಲ್ಲಿ ಮಾಡಬೇಕಾದ ಕಾರ್ಯಗಳ ಪಟ್ಟಿಯೂ ಮನಸ್ಸಲ್ಲಿ ಇರುತ್ತದೆ. ಅದೇ ನ್ಯೂ ಇಯರ್ ರೆಸಲ್ಯೂಷನ್ (New year resolution). ಇವುಗಳಲ್ಲಿ ಎಷ್ಟು ರೆಸಲ್ಯೂಷನ್ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಬದಿಗಿಡಿ, ಮಾಡ್ತೇನೆ ಎಂಬ ನಿರ್ಧಾರ ತೆಗೆದುಕೊಳ್ಳುವುದು ಇದೆಯಲ್ಲ ಅದೇ ದೊಡ್ಡ ವಿಷ್ಯ. ಅಂದ ಹಾಗೆ ಹೊಸ ವರ್ಷದ ಸಂಭ್ರಮ ಎಂದು ಹೇಳುವಾಗ ಪಾರ್ಟಿ ಮಾಡುವುದು, ಡ್ಯಾನ್ಸ್ ,ಕುಡಿತ-ಕುಣಿತಗಳೇ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಅದೊಂದು ಕಾಲವಿತ್ತು. ಇಂಥದೆಲ್ಲ ನಗರಗಳಲ್ಲಿ ನಡೆಯುತ್ತದೆ ಎಂದು ಹಳ್ಳಿಯಲ್ಲಿ ಕುಳಿತ ನಾವು ಟಿವಿಯಲ್ಲಿ ಅದನ್ನು ನೋಡುತ್ತಿದ್ದೆವು. ದೂರದರ್ಶನದಲ್ಲಿ ಹೊಸ ವರ್ಷಕ್ಕೆ ಪ್ರಸಾರವಾಗುವ ವಿಶೇಷ ಸಂಗೀತ, ನೃತ್ಯ ಕಾರ್ಯಕ್ರಮಗಳೇ ನಮ್ಮ ಹೊಸ ವರ್ಷದ ಸೆಲೆಬ್ರೇಷನ್. ಹೊಸ ವರ್ಷವನ್ನು ಸ್ವಾಗತಿಸಲು ಅಣಿಯಾಗುವುದೆಂದರೆ ಗ್ರೀಟಿಂಗ್ ಕಾರ್ಡ್ಸ್ ವಿನಿಮಯ.
ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳಿಸುವುದೇ ದೊಡ್ಡ ಸಂಭ್ರಮ. ಅದು ಇಂಟರ್ನೆಟ್, ವಾಟ್ಸ್ ಆಪ್ ಇಲ್ಲದ ಕಾಲ. ಅಂಗಡಿಗಳಲ್ಲಿ ಕ್ರಿಸ್ಮಸ್, ನ್ಯೂ ಇಯರ್ ಗ್ರೀಟಿಂಗ್ಸ್ ಕಾರ್ಡ್ಗಳು ರಾರಾಜಿಸುತ್ತಿದ್ದವು . ಚಿಕ್ಕದ್ದು, ದೊಡ್ಡದ್ದು, ಮಿನುಗುವಂತದ್ದು, ಒಳಗೆ ಚಂದ ಡಿಸೈನ್ ಇರುವಂತದ್ದು, ಮ್ಯೂಸಿಕ್ ಕಾರ್ಡ್ ಹೀಗೆ ವಿಧವಿಧದ ಕಾರ್ಡ್ ಗಳು ಸಿಗುತ್ತಿತ್ತು. 5ರಿಂದ 500 ರೂಪಾಯಿವರೆಗೂ ವಿಧವಿಧ ಕಾರ್ಡ್ ಗಳು ಲಭ್ಯ .500 ರೂಪಾಯಿಗಿಂತ ಹೆಚ್ಚಿನ ಮೊತ್ತದ ಕಾರ್ಡ್ ಇದ್ದರೂ ಅದು ನಮ್ಮ ಕೈಗೆಟಕದ್ದು ಎಂದು ನೋಡಲೂ ಹೋಗದೇ ಇರುವ ದಿನಗಳವು. ನಮ್ಮ ಕೈಟಕುವ ಕಾರ್ಡ್ಗಳನ್ನಷ್ಟೇ ನೋಡಿ ಖರೀದಿಸುವ ಮಧ್ಯಮ ವರ್ಗದ ಜನರು ನಾವು. ಅಷ್ಟಕ್ಕೆ ಮುಗಿದಿಲ್ಲ, ಯಾರಿಗೆ ಯಾವ ಕಾರ್ಡ್ ಕಳಿಸಬೇಕು ಎಂಬುದು ಸ್ಪಷ್ಟವಾಗಿ ಗೊತ್ತಿರುತ್ತದೆ. ಅದರೊಳಗೆ ಬರೆದಿರುವುದನ್ನು ನೋಡಿ, ಅದರ ಡಿಸೈನ್ ನೋಡಿ ಯಾರ ಟೇಸ್ಟ್ ಹೇಗೆ ಎಂಬುದನ್ನು ನೋಡಿ ಆಯ್ಕೆ ಮಾಡಿ ತಂದಿರುವ ಕಾರ್ಡ್ಗಳವು. ನಮಗೆ ಯಾರೆಲ್ಲ ಕಾರ್ಡ್ ಕಳುಹಿಸಿದ್ದರು ಅವರಿಗೆ ಕಾರ್ಡ್ ಕಳಿಸಲೇ ಬೇಕು. ಕೆಲವೊಂದು ಹೊಸ ಸಂಬಂಧ, ಹೊಸ ಗೆಳೆತನವಾಗಿದ್ದರೆ, ಹಳೇ ಸಂಬಂಧವನ್ನು ಮತ್ತೆ ಚಿಗುರಿಸಲು ಅವರಿಗೆ ಹೊಸ ವರ್ಷದ ಗ್ರೀಟಿಂಗ್ ಕಾರ್ಡ್ ಕಳುಹಿಸಿ ಶುಭಕೋರಿದರೆ ಅವರೂ ಖುಷ್, ನಾವೂ ಖುಷ್.
ಅಂಗಡಿಗಳಿಂದ ಖರೀದಿಸುವ ಗ್ರೀಟಿಂಗ್ ಕಾರ್ಡ್ ಅಲ್ಲದೆ, ನಮ್ಮದೇ ಕ್ರಿಯೇಟಿವ್ ಕಾರ್ಡ್ಗಳೂ ಇರುತ್ತಿತ್ತು. ನಾವು ಶಾಲಾ ವಿದ್ಯಾರ್ಥಿಗಳಾಗಿದ್ದಾಗ ಗ್ರೀಟಿಂಗ್ ಕಾರ್ಡ್ ಮಾಡುವುದು ಹೇಗೆ ಎಂಬುದನ್ನೂ ಹೇಳಿಕೊಡುತ್ತಿದ್ದರು. ಪೇಟಿಂಗ್ ಮಾಡಲು ಗೊತ್ತಿರುವವರು ಪೇಟಿಂಗ್ ಮಾಡ್ತಿದ್ದರು, ಅದು ಗೊತ್ತಿಲ್ಲದಿದ್ದರೆ ಹಳ್ಳಿಗಾಡುಗಳಲ್ಲಿ ಸಿಗುವ ಸಣ್ಣ ಪುಟ್ಟ ಎಲೆಹೂಗಳನ್ನು ಅಂಟಿಸಿ ಕಾರ್ಡ್ ಮಾಡಿದ್ದೂ ಉಂಟು. String Art, ಅದೇ ದಾರವನ್ನು ಬಣ್ಣದಲ್ಲಿ ಅದ್ದಿ ಬಿಳಿ ಹಾಳೆ ಮೇಲೆ ಓರೆ ಕೋರೆಯಾಗಿ ಇರಿಸಿ, ಹಾಳೆಯನ್ನು ಮಡಚಿ ದಾರವನ್ನು ಎಳೆದರೆ ಹಾಳೆಯಲ್ಲಿ ಚಂದ ಡಿಸೈನ್ ಬರ್ತಿತ್ತು. ಹೀಗೆ ಮನೆಯಲ್ಲೇ ತಯಾರಿಸಿದ ಗ್ರೀಟಿಂಗ್ ಕಾರ್ಡ್ಗೆ ನಮ್ಮದೇ ಕೈಬರಹದಲ್ಲಿ ಶುಭಾಶಯಗಳನ್ನು ಕೋರುತ್ತಿದ್ದೆವು. ಶಾಲೆಗೆ ಕ್ರಿಸ್ಮಸ್ ರಜೆ ಸಿಕ್ಕಿದರೆ ಗ್ರೀಟಿಂಗ್ ಕಾರ್ಡ್ ಮಾಡಿ ಕಳುಹಿಸುವುದು ನಮ್ಮ ಕೆಲಸವಾಗಿತ್ತು. ಅದಕ್ಕಾಗಿ ಬಣ್ಣದಪೆನ್ಸಿಲ್,ಸ್ಕೆಚ್ ಪೆನ್, ವಾಟರ್ ಕಲರ್ ಎಲ್ಲವನ್ನೂ ಅಪ್ಪ ತಂದುಕೊಡುತ್ತಿದ್ದರು. ಹೀಗೆ ತಯಾರಿಸಿದ ಗ್ರೀಟಿಂಗ್ ಅಥವಾ ಅಂಗಡಿಯಿಂದ ಖರೀದಿಸಿದ ಕಾರ್ಡ್ಗಳ ಮೇಲೆ ವಿಳಾಸಬರೆದು ಅಂಚೆ ಚೀಟಿ ಅಂಟಿಸಿ ಪೋಸ್ಟ್ ಮಾಡುತ್ತಿದ್ದೆವು. ಹೊಸ ವರ್ಷದಂದು ಅಥವಾ ಅದಕ್ಕೆ ಮುನ್ನಾ ದಿನ ಆ ಕಾರ್ಡ್ ಅವರ ಕೈ ಸೇರುವಂತೆ ಪೋಸ್ಟ್ ಮಾಡುತ್ತಿದ್ದೆವು. ಅವರಿಗೆ ಪೋಸ್ಟ್ ಕೈಸೇರಿದೆ ಎಂದು ಗೊತ್ತಾಗುತ್ತಿದ್ದದ್ದು ಅವರ ಪತ್ರ ಅಥವಾ ಮತ್ತೊಂದು ಗ್ರೀಟಿಂಗ್ ಕಾರ್ಡ್ ನಮಗೆ ಬಂದಾಗಲೇ.
ದೂರದೂರಲ್ಲಿದ್ದರವರ ಜತೆ ವರ್ಷಕ್ಕೊಂದಾದರೂ ಪತ್ರ ವಿನಿಮಯವಾಗಲು ಈ ಗ್ರೀಟಿಂಗ್ ಕಾರ್ಡ್ ಕಾರಣವಾಗುತ್ತಿತ್ತು. ಆ ಕಾರ್ಡ್ಗಳು ಹಾರೈಕೆ ಜತೆ ಪ್ರೀತಿ,ಕಾಳಜಿಯ ಮಾತುಗಳನ್ನು ಹೊತ್ತು ತರುತ್ತಿದ್ದವು. ಅವುಗಳನ್ನು ಕಾಳಜಿಯಿಂದ ತೆಗೆದಿರಿಸುತ್ತಿದ್ದರು ಅಮ್ಮ. ಹಾಗೆ ಕಳುಹಿಸುತ್ತಿದ್ದ, ಪಡೆಯುತ್ತಿದ್ದ ಕಾರ್ಡ್ಗಳ ಖುಷಿ ಅಕ್ಷರಗಳಲ್ಲಿ ಹಿಡಿದಿರಿಸಲಾಗುವುದಿಲ್ಲ. ಜಗತ್ತು ಬದಲಾದಂತೆ ಬದುಕೂ ಬದಲಾಯಿತು. ಇಂಟರ್ನೆಟ್ ಯುಗ ಎಲ್ಲವನ್ನೂ ಹತ್ತಿರದಲ್ಲಿರುವಂತೆ ಮಾಡಿತು. ಗ್ರೀಟಿಂಗ್ ಕಾರ್ಡ್ ಪೋಸ್ಟ್ ಮೂಲಕ ಕಳುಹಿಸುವ ಬದಲು ಇಮೇಲ್ ಕಳುಹಿಸಲು ಶುರು ಮಾಡಿದೆವು. ನಂತರ ಸೋಷ್ಯಲ್ ಮಿಡಿಯಾದಲ್ಲಿ ವಿಷ್ ಕಳುಹಿಸಿವುದು. ಒಂದು ವಾಟ್ಸ್ ಆಪ್ ಮೆಸೇಜ್ ಎಲ್ಲರಿಗೂ ಕಳುಹಿಸಿದರೆ ವಿಷ್ ಮಾಡುವ ಕೆಲಸ ಸುಲಭ. ಗ್ರೀಟಿಂಗ್ ಕಾರ್ಡ್ ಇನ್ನೂ ಮರೆಯಾಗಿಲ್ಲ. ಆದರೆ ಅದನ್ನು ಖರೀದಿಸಿ ತಂದು ವಿಳಾಸ ಬರೆದು ಪೋಸ್ಟ್ ಮಾಡುವ ಸಮಯ ಎಲ್ಲಿದೆ?. ಒಂದು ಫೋನ್ ಕಾಲ್ , ವಿಡಿಯೊಕಾಲ್, ವಾಟ್ಸಾಪ್ ಮೆಸೇಜ್ ಸಾಕು ಸಂಪರ್ಕ ಸಾಧಿಸಲು. ಹೀಗಿರುವಾಗ ಅಂಚೆ ವಿಳಾಸ ಮರೆತು ಹೋಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿರುವಾಗ ಹಳೇ ನೆನಪುಗಳು ಕಣ್ಮುಂದೆ ಬರುತ್ತಿವೆ. ಕಳೆದು ಹೋದ ಕೆಲವು ವಿಳಾಸಗಳನ್ನು ಹುಡುಕಿ ತೆಗೆಯಬೇಕು, ಅವರಿಗೊಂದು ಗ್ರೀಟಿಂಗ್ ಕಾರ್ಡ್ ಕಳುಹಿಸಬೇಕು ಎಂದು ಮನಸ್ಸು ಬಯಸುತ್ತಿದೆ. ನಿಮಗೂ ಹಾಗೇ ಅನಿಸುತ್ತಾ?
ಇದನ್ನೂ ಓದಿ: ಮದುವೆ ಮಂಟಪದಲ್ಲಿ ತಾಳಿಕಟ್ಟುವ ಹೊತ್ತಿಗೆ ನಿಲ್ಸೀ ಎಂದು ಯಾರಾದರೂ ಕೂಗಿದ್ದರೆ
Published On - 9:42 am, Mon, 27 December 21