Yellapragada Subbarow: ಟೆಟ್ರಾಸೈಕ್ಲಿನ್ ಜನಕ ಡಾ ಯಲ್ಲಾಪ್ರಗಡ ಸುಬ್ಬರಾವ್: ಮರೆಯಲಾಗದ, ಮರೆಯಬಾರದ ಮಹಾನುಭಾವ
ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಕಿಮೊಥೆರಪಿ ಚಿಕಿತ್ಸೆ ಮೂಲ ನೇತಾರರು ಸುಬ್ಬರಾವ್ ಅವರೇ ಎನ್ನುವುದು ಹಲವರಿಗೆ ತಿಳಿಯದು. ಇವರು ಆವಿಷ್ಕರಿಸಿದ ಹೆಟ್ರಜಾನ್ ಎಂಬ ಔಷಧಿ ಫೈಲೇರಿಯಾಗೆ ಈಗಲೂ ಏಕೈಕ ಮದ್ದಾಗಿ ಬಳಕೆಯಲ್ಲಿದೆ.
ಸಾರ್ವಜನಿಕ ಕ್ಷೇತ್ರದಲ್ಲಿ ನಿಸ್ಪೃಹ ಸೇವೆ ಸಲ್ಲಿಸಿ, ಅಸಾಧಾರಣ ಪ್ರತಿಭೆಯಿದ್ದರೂ ಬೆಳಕಿಗೆ ಬಾರದೆ ಎಲೆಮರೆಯ ಕಾಯಿಗಳಾಗಿಯೇ ಉಳಿದುಹೋದ ಮಹಾನುಭಾವರು ಎಷ್ಟೋ ಮಂದಿ. ವೈಜ್ಞಾನಿಕ ಕ್ಷೇತ್ರದಲ್ಲಿ ಅಂತಹ ವಿಶಿಷ್ಟ ಸಾಧನೆ ಮಾಡಿ ಪ್ರಚಾರಕ್ಕೆ ಸಿಗದೆ ತಮ್ಮ ಅನುಪಮ ಕೊಡುಗೆಯನ್ನು ಮಾತ್ರ ಈ ಮನುಕುಲಕ್ಕೆ ಬಿಟ್ಟು ಹೋದ ಮಹನೀಯರು ಡಾ.ಯಲ್ಲಾಪ್ರಗಡ ಸುಬ್ಬರಾವ್ (Yellapragada Subbarow). ಮಾನವ ಜನಾಂಗದ ಒಳಿತಿಗಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ಅದ್ವಿತೀಯ ಸಾಧನೆ ಮಾಡಿ ಮರೆಯಾದ ಇವರ ಹೆಸರು ಸ್ವದೇಶದಲ್ಲಿ ಕೇಳುವಂತಾಗಿದ್ದು ಅವರು ತೀರಿಕೊಂಡ ಅರ್ಧ ಶತಮಾನದ ನಂತರವೇ. ಹೌದು ಇದು ‘ಪರೋಪಕಾರಾರ್ಥಮಿದಂ ಶರೀರಂ’ ಎಂಬ ಋಷಿವಾಣಿಯ ಪ್ರತೀಕದಂತಿದ್ದ ಶ್ರೇಷ್ಠ ವಿಜ್ಞಾನಿ ಡಾ.ಸುಬ್ಬರಾವ್ (ಜನನ: 12ನೇ ಜನವರಿ, 1895 – ಮರಣ: ಆಗಸ್ಟ್ 8, 1948) ಅವರನ್ನು ನೆನೆಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಡಾ.ಸುಬ್ಬರಾವ್ ಅವರ 127ನೇ ಜನ್ಮದಿನದ ಪ್ರಯುಕ್ತ ಕೋಲಾರದ ಖ್ಯಾತ ವಿಜ್ಞಾನ ಬರಹಗಾರ ಪುರುಷೋತ್ತಮ್ ರಾವ್ ಅವರ ಲೇಖನವನ್ನು ಪ್ರಕಟಿಸಲಾಗಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ನದಿತೀರದ ಕೊತ್ತೂರು ಜಗನ್ನಾಥಪುರದಲ್ಲಿ ಜನವರಿ 12, 1895ರಂದು ಸುಬ್ಬರಾವ್ ಜನಿಸಿದರು. ಹೆಡ್ ಗುಮಾಸ್ತರ ಮಗನಾದ ಇವರು ಬಾಲ್ಯದಿಂದಲೂ ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಶಸ್ಸಿನ ಮೆಟ್ಟಿಲೇರಲು ಅವರು ಅನುಭವಿಸಿದ ಮಾನಸಿಕ ಹಿಂಸೆ ಸಾಕಷ್ಟು. ಬಡತನದ ಬೇಗೆಯಲ್ಲೂ ಮಗನನ್ನು ಓದಿಸಲೇಬೇಕೆಂಬ ಹಟ ತೊಟ್ಟ ತಾಯಿಯ ಬಲವಂತದಿಂದಲೇ ವಿದ್ಯಾಭ್ಯಾಸವನ್ನು ಮುಗಿಸಿದ ಇವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಕೊನೆಗೆ ವೈದ್ಯವಿಜ್ಞಾನದಲ್ಲಿ ಪಧವೀಧರರಾದರು. ಅವರಿವರು ನೀಡಿದ ಸಹಾಯಹಸ್ತದಿಂದಲೇ ಓದು ಮುಗಿಸಿ ಕಡೆಗೆ ದಾನಿಗಳೊಬ್ಬರ ಸಹಾಯದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದರು. ಬೋಸ್ಟನ್ ನಗರವೇನೋ ತಲುಪಿದ್ದಾಯ್ತು. ಆದರೆ ಅವರ ಅತೀವ ಅಪೇಕ್ಷೆಯಾದ ಹಾರ್ವರ್ಡ್ನ ಸ್ಕೂಲ್ ಅಫ್ ಟ್ರಾಪಿಕಲ್ ಮೆಡಿಸಿನ್ನಲ್ಲಿ ದಾಖಲಾಗಲು ಅಗತ್ಯ ಹಣವಿರಲಿಲ್ಲ. ಸಹಾಯ ಮಾಡುವೆವೆಂದು ಆಶ್ವಾಸನೆ ನೀಡಿದವರಾರೂ ಅವರ ಮಾತಿನಂತೆ ನಡೆದಿರಲಿಲ್ಲ. ಹೀಗಾಗಿ ಅತಂತ್ರ ಪರಿಸ್ಥಿತಿ ಎದುರಿಸಬೇಕಾಯಿತು. ಇವರ ಆಸಕ್ತಿ ಮತ್ತು ಶ್ರದ್ದೆ ಗಮನಿಸಿದ ಸಂಸ್ಥೆಯ ಮುಖ್ಯಸ್ಥ ಡಾ.ರಿಚರ್ಡ್ ಸ್ಟ್ರಾಂಗ್ ಅವರೇ ಕೊನೆಗೆ ಇವರ ದಾಖಲಾತಿಗೆ ಸಹಕರಿಸಿದ್ದು ಅವರ ಸುಯೋಗ.
ಕಾಲೇಜು ಸೇರಿದರೂ ಜೀವನಕ್ಕೆ ದಾರಿಯಿಲ್ಲದೆ ತೀರಾ ದುಸ್ಥಿತಿಗೆ ಸಿಕ್ಕ ಸುಬ್ಬರಾವ್ ಕಡೆಗೆ ಬೋಸ್ಟನ್ ನಗರದ ಪೀಟರ್ ಬೆಂಟ್ ಬ್ರಿಗ್ ಹ್ಯಾಮ್ಸ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಜಾಡಮಾಲಿ ಕೆಲಸ ನಿರ್ವಹಿಸಿದರು. ಹಗಲೆಲ್ಲಾ ಕಾಲೇಜು ವ್ಯಾಸಂಗ ಮುಗಿಸಿ ರಾತ್ರಿ ವೇಳೆ ಆಸ್ಪತ್ರೆಯ ಮೂತ್ರಿಗಳನ್ನು ತೊಳೆಯುವುದು, ಶೌಚಾಲಯಗಳನ್ನು ಶುಚಿಗೊಳಿಸುವುದುಮುಂತಾದ ಕೆಲಸಗಳನ್ನು ಸಹ ಬೇಸರವಿಲ್ಲದೇ ನಿರ್ವಹಿಸಿದರು. ಎಷ್ಟೋ ರಾತ್ರಿಗಳನ್ನು ಊಟ ಉಪಚಾರವಿಲ್ಲದೆ ಉಪವಾಸವಿದ್ದುಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದರು. ಅತೀವ ಕಷ್ಟದ ಪರಿಸ್ಥಿತಿಯಲ್ಲೇ ವಿದ್ಯಾಭ್ಯಾಸ ಮುಗಿಸಿ ನಂತರ ಅಲ್ಲಿಯೇ ಕೆಲಸಕ್ಕೂ ಸೇರಿಕೊಂಡರು. ಮೊದಮೊದಲು ಭಾರತೀಯರಾದ ಇವರಿಗೆ ಅನೇಕ ಕೆಲಸ ಕಾರ್ಯಗಳಲ್ಲಿ ಬಡ್ತಿ ಸ್ಥಾನ ಮಾನಗಳು ದೊರೆಯದಾದುವಾದರೂ ಇವರಲ್ಲಿನ ಪ್ರತಿಭೆ, ಸಂಶೋಧನಾ ಛಲ ಇವರನ್ನು ಕರ್ತವ್ಯ ವಿಮುಖರನ್ನಾಗಿಸಲಿಲ್ಲ. ಮೇಲಾಗಿ ಎಲ್ಲಾ ಪಾಶ್ಚಿಮಾತ್ಯ ಸ್ನೇಹಿತರನ್ನು ಆತ್ಮೀಯರನ್ನಾಗಿಸಿಕೊಳ್ಳುವಲ್ಲಿ ರಾವ್ ಯಶಸ್ವಿಯಾದರು.
ಒಂದಾದ ಮೇಲೊಂದರಂತೆ ಜೀವ ರಾಸಾಯನಿಕ ಶಾಸ್ತ್ರ ಕ್ಷೇತ್ರದಲ್ಲಿ (ಬಯೋ ಕೆಮಿಸ್ಟ್ರಿ) ಸಂಶೋಧನೆಗಳನ್ನು ನಡೆಸಿದ ಡಾ.ಸುಬ್ಬರಾವ್ ಪ್ರತಿಯೊಂದರಲ್ಲೂ ಛಾಪು ಮೂಡಿಸಿದರು. ದೇಹದ ರಸಗಳಲ್ಲಿನ ರಂಜಕದ ಪ್ರಮಾಣ ಮಟ್ಟವನ್ನು ಕರಾರುವಾಕ್ಕಾಗಿ ಅಳೆಯುವ ಕಲಾರಿ ಮೆಟ್ರಿಕ್ ವಿಧಾನವನ್ನು ದಾ.ಫಿಸ್ಕೆ ಮಾರ್ಗದರ್ಶನದಲ್ಲಿ ನಡೆಸಿ ಯಶಸ್ವಿಯಾದರು. ಇದು ಮುಂದೆ ಫಿಸ್ಕೆ-ಸುಬ್ಬರಾವ್ ವಿಧಾನ ಎಂದೇ ಪ್ರಸಿದ್ಧಿಯಾಯಿತು. ಸ್ನಾಯು ಸಂಕೋಚನಾ ಕ್ರಿಯೆಯಲ್ಲಿ ಫಾಸ್ಪೊ ಕ್ರಿಯಾಟಿನ್ ಪಾತ್ರ, ಜೀವಸೃಷ್ಟಿಗೆ ಮೂಲಾಧಾರಕ ಶಕ್ತಿಯೆನಿಸಿದ ಎ.ಟಿ.ಪಿ. ರಹಸ್ಯ ಮುಂತಾದ ಬಗೆಯ ಸಂಶೋಧನೆಗಳು ಅಮೆರಿಕದಲ್ಲಿ ಸುಬ್ಬರಾಯರ ಪ್ರತಿಷ್ಠೆಯನ್ನು ಗಗನಕ್ಕೇರಿಸಿದವು.
ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಕಿಮೊಥೆರಪಿ ಚಿಕಿತ್ಸೆ ಮೂಲ ನೇತಾರರು ಸುಬ್ಬರಾವ್ ಅವರೇ ಎನ್ನುವುದು ಹಲವರಿಗೆ ತಿಳಿಯದು. ಇವರು ಆವಿಷ್ಕರಿಸಿದ ಹೆಟ್ರಜಾನ್ ಎಂಬ ಔಷಧಿ ಫೈಲೇರಿಯಾಗೆ ಈಗಲೂ ಏಕೈಕ ಮದ್ದಾಗಿ ಬಳಕೆಯಲ್ಲಿದೆ. ಇಂದು ಗರ್ಭಿಣಿಯರು ದಿನವೂ ಬಳಸುತ್ತಿರುವ ಪೋಲಿಕ್ ಆಸಿಡ್ ಮಾತ್ರೆಗಳು ಇವರ ಶ್ರಮದ ಪ್ರತಿಫಲವೇ ಆಗಿದೆ. ಪ್ಲೇಗ್ ಮಾರಿಗೆ ರಾಮಬಾಣವೆನಿಸಿದ ಟೆಟ್ರಾಸೈಕ್ಲಿನ್ ಜೀವಿನಿರೋಧಕ ಔಷಧಿಯ ಆವಿಷ್ಕಾರ ಇವರ ನಿರ್ದೇಶನದಲ್ಲಿಯೇ ಆಗಿದ್ದು. ಈ ಸಂಶೋಧನೆಯಿಂದಾಗಿ ಇಡೀ ಪ್ರಪಂಚವೇ ಇವರ ಕುರಿತು ಅಚ್ಚರಿಪಡುವಂತಾಯಿತು.
ನಂತರದ ಬಡದೇಶದ ಕಂದು ವರ್ಣೀಯನೊಬ್ಬ ಅತ್ಯಂತ ಮುಂದುವರಿದ ರಾಷ್ಟ್ರವೊಂದರ ಶ್ವೇತವರ್ಣೀಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವಂತಾದುದು ಒಂದು ಪವಾಡವೇ ಸರಿ. ಅದಕ್ಕೆ ಅಲ್ಲಿಯ ಲೇಖಕರೊಬ್ಬರ ಹೇಳಿಕೆ ಬಹಳ ಆಪ್ಯಾಯಮಾನವಾಗಿದೆ. ‘ಬಹುಶಃ ಡಾ.ಯಲ್ಲಾಪ್ರಗಡ ಸುಬ್ಬರಾವ್ ಎಂಬುವವರ ಹೆಸರನ್ನು ನೀವು ಎಂದೂ ಕೇಳಿರಲಾರಿರಿ. ಆದರೆ ಅಂತಹವರೊಬ್ಬರು ಇದ್ದುದರಿಂದಲೇ ನೀವೆಲ್ಲಾ ಬದುಕಿ ಆರೋಗ್ಯವಂತರಾಗಿರುವುದು, ಅವರಿದ್ದುದರಿಂದಲೇ ಇನ್ನೂ ದೀರ್ಘಾಯುಷಿಗಳಾಗಿ ಬದುಕಿ ಉಳಿಯಲು ಸಾದ್ಯವಾಗಿದೆ’.
ಡಾ.ಸುಬ್ಬರಾವ್ ತಮ್ಮ ಇಡೀ ಜೀವಮಾನವನ್ನು ಸಂಶೋಧನೆ, ಸೇವೆಗಾಗಿಯೇ ಮುಡಿಪಾಗಿರಿಸಿದ್ದವರು. ವೈಯಕ್ತಿಕ ಬದುಕಿನಲ್ಲಿ ಏನೂ ಸುಖ ಕಂಡವರಲ್ಲ. ಅವರಿಗೆ ಸಾಂಸಾರಿಕ ಬದುಕು ಇರಲೇ ಇಲ್ಲ. ಮದುವೆಯಾದರೂ ಹೆಂಡತಿಯನ್ನು ಭಾರತದಲ್ಲೇ ಬಿಟ್ಟು ಯಾವ ಸುಖವನ್ನೂ ಕಾಣದೆ ಕೇವಲ ಸಂಶೋಧನೆಗಳಲ್ಲೇ ಹಗಲುರಾತ್ರಿಗಳನ್ನು ಕಳೆದ ಈ ಅಮರಜೀವಿ ಕಡೆಗೆ ತನ್ನ ಕೊಠಡಿಯಲ್ಲಿ ಏಕಾಂಗಿಯಾಗಿ ಕುರ್ಚಿಯಲ್ಲೇ ಕುಳಿತು ಇಹಲೋಕ ತ್ಯಜಿಸಿದರು. ಜೀವ ರಸಾಯನಶಾಸ್ತ್ರದ ಮೇರು ಸಂಶೋಧಕರೆನಿಸಿಕೊಂಡ ಇವರಿಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ. ಆದರೆ ಅದಕ್ಕೆ ಸಮನಾದ ಪುರಸ್ಕಾರವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕೊಡುವ ಸ್ಟಾಕ್ ಹೋಮ್ನ ಕರೋಲಿನ್ ಇನ್ಸ್ಟಿಟ್ಯೂಟ್ನ ಹಾಲ್ನಲ್ಲಿ ಇವರ ಚಿತ್ರಪಟವನ್ನು ಅನಾವರಣ ಮಾಡಿ ಗೌರವಿಸಲಾಗಿದೆ. ಒಂದು ವಿಶಿಷ್ಟ ಬಗೆಯ ಬೂಸ್ಟ್ಗೆ ಸುಬ್ಬರೋಮೈಸಿಸ್ ಸ್ಪ್ಲೆಂಡೆನ್ಸ್ (Subaromyces Splendens) ಎಂದು ನಾಮಕರಣ ಮಾಡಿ ವಿಜ್ಞಾನ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರವಾಗಿರುವಂತೆ ಮಾಡಲಾಗಿದೆ.
ಇಂತಹ ಅಪ್ರತಿಮ ಪ್ರತಿಭಾನ್ವಿತ ವ್ಯಕ್ತಿಯ ಬಗ್ಗೆ ನಮ್ಮ ದೇಶದಲ್ಲಿ ಸ್ಮರಣೆಯಾದದ್ದು ಅವರು ತೀರಿಕೊಂಡ ಅರ್ಧ ಶತಮಾನದ ನಂತರ ಎಂದರೆ ಪ್ರತಿಭೆಯನ್ನು ಗುರುತಿಸಿ, ಗೌರವಿಸುವುದರಲ್ಲಿ ನಾವೆಷ್ಟು ‘ಪ್ರಾಮಾಣಿಕರು’ ಎಂಬ ಸತ್ಯ ಅರ್ಥವಾದೀತು. ಈಗೀಗ ಭಾರತದಲ್ಲಿ ಅಂಚೆ ಚೀಟಿಗಳಲ್ಲಿ ಹಾಗೂ ಹಲವು ಬೂಸ್ಟ್ಗಳ ಪ್ರಬೇಧಗಳಿಗೆ ಅವರ ಹೆಸರನ್ನಿಟ್ಟು ಭಾರತದಲ್ಲೂ ಸುಬ್ಬರಾಯರನ್ನು ನೆನಪಿಸಿಕೊಳ್ಳಲಾಗುತ್ತಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಸುಬ್ಬರಾಯರು ಅತ್ಯಂತ ಆತ್ಮೀಯ ಸ್ನೇಹಿತರೊಬ್ಬರು ಸುಬ್ಬರಾಯರ ನಿಧನದ ನಂತರವೂ ತೋರಿದ ಪ್ರೀತಿ ಅನನ್ಯ. ಅವರ ಅಭಿಮಾನ ಮತ್ತು ಸ್ನೇಹಗಳ ದ್ಯೋತಕವಾಗಿ ಭೀಮವರಂ ಮೂಲದ ಈ ಸಂಶೋಧಕನ ಚಿತಾಭಸ್ಮ ಅಮೇರಿಕೆಯ ಕ್ರಿಶ್ಚಿಯನ್ ಬ್ಯಾಪ್ಟಿಸ್ಟ್ ಮಾರ್ಟನ್ ಲೋಕ್ಹಾರ್ಟ್ ಎನ್ನುವವರ ಮನೆಯಲ್ಲಿ ಇಂದಿಗೂ ಸ್ನೇಹ ಹಾಗೂ ಗೌರವಪೂರ್ವಕವಾಗಿ ಉಳಿದುಕೊಂಡಿದೆ. ಇಂತಹ ಮಹಾನುಭಾವನ ಸ್ಮರಣೆಯೇ ಆತನಿಗೆ ಸಲ್ಲಿಸುವ ಗೌರವವಾಗಿದೆ.
ಇದನ್ನೂ ಓದಿ: Literature: ಅಭಿಜ್ಞಾನ: ಭರ್ತೃಹರಿಗೆ ರೋಮಾಂಚನದಿಂದ ಕೂದಲು ನಿಮಿರೆದ್ದರೆ, ಬೌದ್ಧರಿಗೆ ಮಹಾ ಮುಜುಗರ