ಮದುವೆ ಮಂಟಪದಲ್ಲಿ ತಾಳಿಕಟ್ಟುವ ಹೊತ್ತಿಗೆ ನಿಲ್ಸೀ ಎಂದು ಯಾರಾದರೂ ಕೂಗಿದ್ದರೆ…

ಮದುವೆ ಮಂಟಪದಲ್ಲಿ ತಾಳಿಕಟ್ಟುವ ಹೊತ್ತಿಗೆ ನಿಲ್ಸೀ ಎಂದು ಯಾರಾದರೂ ಕೂಗಿದ್ದರೆ...
ಪ್ರಾತಿನಿಧಿಕ ಚಿತ್ರ

ಇನ್ನೇನು ತಾಳಿ ಕಟ್ಟಲು ಎಲ್ಲ ಸಿದ್ಧತೆ ಆಗಿತ್ತು. ಅವನ ಮುಖದಲ್ಲಿ ಟೆನ್ಶನ್,ಸುತ್ತಲಿದ್ದವರು ಮೊಬೈಲ್ ಕ್ಯಾಮೆರಾ ಆನ್ ಮಾಡಿ ರೆಡಿ ಆಗಿದ್ದರು. ಮದುವೆ ಫೋಟೊಗ್ರಾಫರ್,ವಿಡಿಯೊಗ್ರಾಫರ್​​ಗೆ ಸರಿಯಾಗಿ ಕಾಣುವಂತೆ ನಮ್ಮನ್ನು ನಿಲ್ಲಿಸಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ತಾಳಿ ಕಟ್ಟಬೇಕು. ಆ ಹೊತ್ತಲ್ಲಿ....

Rashmi Kallakatta

| Edited By: shivaprasad.hs

Dec 24, 2021 | 9:16 AM

ಕನ್ಫ್ಯೂಷನ್ ಮತ್ತು ನೀನು ಜತೆಗೆ ಹುಟ್ಟಿದವರು ಅಂತ ಕಾಣುತ್ತೆ ಅಂತಿರ್ತಾರೆ ಅಮ್ಮ. ಅದೆಷ್ಟು ತಲೆ ಕೆಡಿಸಿಕೊಳ್ತಿ,  ಎಲ್ಲವೂ ಸರಿಹೋಗುತ್ತದೆ ಎಂಬ ಧೈರ್ಯಬೇಕು ಎಂದು ಉಪದೇಶ ಕೊಡುತ್ತಿರುತ್ತಾರೆ ನಮ್ಮಮ್ಮ. ಕೆಲವೊಂದು ವಿಷಯಗಳ ಬಗ್ಗೆ ಅದೆಷ್ಟು ಮಂಡೆಬಿಸಿ ಮಾಡ್ಕೊಳ್ತೀನಿ ಅಂದ್ರೆ ಇಡೀ ಜಗತ್ತೇ ಇವತ್ತು ಮುಗಿದುಬಿಡುತ್ತದೋ ಏನೋ ಅನ್ನುವಷ್ಟು. ಮದುವೆ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಕೂಲ್ ಆಗಿದ್ದವಳು ಮದುವೆ ಹತ್ತಿರ ಬರ್ತಿದ್ದಂತೆ ನೂರಾರು ಪ್ರಶ್ನೆಗಳು ತಲೆಯೊಳಗೆ ಹೊಕ್ಕು ಥಕಥೈ ಶುರುಮಾಡಿದ್ದವು. ಹಲವಾರು ಸಂಸಾರದ ಕತೆಗಳು ಸರಣಿಯಾಗಿ ಕಣ್ಮುಂದೆ ಸುಳಿದು ಇಲ್ಲ ಸಲ್ಲದ ಹಲವಾರು ಪ್ರಶ್ನೆಗಳು ಹುಟ್ಟಿ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೆಣಗಾಡಿದ್ದು ಈಗ ನೆನಪಿಸಿಕೊಂಡರೆ ಅಂದು ನನಗೇನಾಗಿತ್ತು? ಎಂದು ಯೋಚಿಸುತ್ತೇನೆ. ಒಂದಿಬ್ಬರು ಆತ್ಮೀಯರಲ್ಲಿ ನನ್ನ ಗೊಂದಲಗಳನ್ನು ಹೇಳಿ ಸಮಾಧಾನ ಕಂಡುಕೊಂಡಿದ್ದು ಇದೆ. ಅಂತೂ ಇಂತು ಮದ್ವೆ ದಿನ ಹತ್ತಿರ ಬರುತ್ತಿದ್ದಂತೆ ಪ್ರಶ್ನೆಗಳ ಬದಲು ಗೊಂದಲಗಳೇ ಜಾಸ್ತಿಯಾಗತೊಡಗಿತ್ತು. ಮದ್ವೆ ದಿನ ಮದು ಮಕ್ಕಳು ಡ್ಯಾನ್ಸ್ ಮಾಡುವ ಟಿಕ್ ಟಾಕ್ ವಿಡಿಯೊಗಳು ವೈರಲ್ ಆಗ್ತಿದ್ದವು. ಅದ್ಹೇಗಪ್ಪಾ ಅವರು ಅಷ್ಟು ಕೂಲ್ ಆಗಿರ್ತಾರೆ ಅಂತ ನಾನು ಯೋಚಿಸ್ತಿದ್ದೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಟೆನ್ಶನ್ ಇರ್ತದೆ ,ಕೆಲವರು ಟೆನ್ಷನ್ ನಲ್ಲಿಯೂ ಅಷ್ಟೊಂದು ಕೂಲ್ ಹೇಗಿರುತ್ತಾರೆ ಎಂಬುದು ನನಗೆ ಉತ್ತರ ಸಿಗದ ಪ್ರಶ್ನೆ.

ಅಂತೂ ಮದುವೆ ದಿನ ಬಂದೇ ಬಿಡ್ತು. ಮನೆಯಲ್ಲಿ ಬೆಳಗ್ಗಿನ ಶಾಸ್ತ್ರಗಳು ಮುಗಿದು ಮದುವೆ ಮಂಟಪಕ್ಕೆ ಬಂದಾಗ ಟೆನ್ಶನ್ ಮತ್ತಷ್ಟು ಜಾಸ್ತಿಯಾಗಿತ್ತು. ಮದುಮಗಳ ಫೋಟೊಗೆ ಅಂತ ಪೋಸ್ ಕೊಟ್ಟು ಮತ್ತೆ ಮದುವೆ ಶಾಸ್ತ್ರದ ಗಡಿಬಿಡಿ. ಸ್ಟೇಜ್ ಕೆಳಗೆ ಪರಿಚಿತ,ಅಪರಿಚಿತ ಮುಖಗಳು. ಚಿಕ್ಕಂದಿನಿಂದಲೇ ಸ್ಟೇಜ್ ಮೇಲೆ ನಿಲ್ಲುವುದೆಂದರೆ ಭಯ. ಅಂಥದ್ದರಲ್ಲಿ ಮದುವೆಗಾಗಿ ಸ್ಟೇಜ್ ಮೇಲೆ ಕೂತಿದ್ದೇನೆ. ನನ್ನ ಟೆನ್ಶನ್ ನೋಡಿ ಮದುಮಗನಿಗೆ ಮತ್ತಷ್ಟು ಟೆನ್ಶನ್. ಬೇರೊಂದು ಊರು, ಬೇರೊಂದು ಸಂಪ್ರದಾಯಗಳಿರುವ ಅವರಿಗೆ ನಮ್ಮ ಸಂಪ್ರದಾಯದ ಮದುವೆಯಲ್ಲಿ ಏನು ಮಾಡಬೇಕು ಎಂಬುದರ ಗೊಂದಲ,ಜತೆಗೆ ಭಾಷೆಯ ಸಮಸ್ಯೆ. ಅಲ್ಲಿಂದಲೇ ಭಾಷಾ ಅನುವಾದ ಕೆಲಸವೂ ನಡೀತಿತ್ತು.

ಇನ್ನೇನು ತಾಳಿ ಕಟ್ಟಲು ಎಲ್ಲ ಸಿದ್ಧತೆ ಆಗಿತ್ತು. ಅವನ ಮುಖದಲ್ಲಿ ಟೆನ್ಶನ್,ಸುತ್ತಲಿದ್ದವರು ಮೊಬೈಲ್ ಕ್ಯಾಮೆರಾ ಆನ್ ಮಾಡಿ ರೆಡಿ ಆಗಿದ್ದರು. ಮದುವೆ ಫೋಟೊಗ್ರಾಫರ್,ವಿಡಿಯೊಗ್ರಾಫರ್​​ಗೆ ಸರಿಯಾಗಿ ಕಾಣುವಂತೆ ನಮ್ಮನ್ನು ನಿಲ್ಲಿಸಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ತಾಳಿ ಕಟ್ಟಬೇಕು. ಆ ಹೊತ್ತಲ್ಲಿ ಸಿನಿಮಾಗಳಲ್ಲಿ ಕಾಣುವಂತೆ ನಿಲ್ಸೀ.. ಎಂಬ ದನಿ ದೂರದಿಂದ ಕೇಳಿ ಬರುವುದೋ ಅಥವಾ ರುಖೋ ಯೇ ಶಾದಿ ನಹೀಂ ಹೋ ಸಕ್ತೀ (ಬಾಲಿವುಡ್ ಸಿನಿಮಾ ಪ್ರಭಾವ) ಅಂತ ಯಾರಾದ್ರೂ ಕೂಗಿದ್ರೆ ಎಂದು ನನ್ನ ಮನಸ್ಸು ಅನ್ನುತ್ತಿತ್ತು. ಕ್ಷಣ ಗಳಿಗೆಯಲ್ಲಿ ನನ್ನ ಕತ್ತಲ್ಲಿ ತಾಳಿ ಇತ್ತು, ನಾವು ಸತಿ-ಪತಿಗಳಾಗಿದ್ದೆವು.

ಮದುವೆಯಾದ ಮರುದಿನ ಗಂಡನಿಗೆ ನೋಡು ತಾಳಿ ಕಟ್ಟುವ ಮುನ್ನ ಈ ರೀತಿ ಅನಿಸಿತ್ತು ಅಂತ ಹೇಳಿದೆ. ತಾಳಿ ಕಟ್ಟುವಾಗ ಕೈ ನಡುಗುತ್ತದೆ ಅಂತ ಅಂದುಕೊಂಡಿದ್ದೆ, ಏನೂ ಆಗಿಲ್ಲ ಎಂದು ಮುಗುಳುನಕ್ಕ. ಮದುವೆ ಫೋಟೊದಲ್ಲಿ ಟೆನ್ಶನ್​​ನಲ್ಲಿಯೇ ನಗುತ್ತಿದ್ದ ನನ್ನ ಮುಖ ನೋಡಿ ನಾನೇಕೆ ಅಷ್ಟು ಟೆನ್ಶನ್ ಮಾಡಿದ್ದೆ ಅಂತ ಅಂದುಕೊಳ್ಳುತ್ತಿರುತ್ತೀನಿ. ನನ್ನ ಗೆಳತಿಯವರಲ್ಲಿಯೂ ನಿಮಗೂ ಹಾಗೇ ಆಗಿತ್ತಾ ಎಂದು ಕೇಳಿದಾಗ ಒಂದಿಬ್ಬರು ನಮಗೆ ಸ್ಟೇಜ್ ನಿಂದಲೇ ಓಡಿಹೋಗಬೇಕು ಎಂದು ಅನಿಸಿಬಿಟ್ಟಿತ್ತು. ಈ  ರೀತಿ ಬಹುತೇಕ ಹೆಣ್ಮಕ್ಕಳಿಗೂ ಆಗುತ್ತಿರುತ್ತದಂತೆ. ಇದೆಲ್ಲ ಕೇಳುವಾಗ ನನಗೆ ಮಾತ್ರ ಅಲ್ಲ ಆ ರೀತಿ ಅನಿಸಿದ್ದು ಎಂದು ಸಮಾಧಾನ ಪಟ್ಟುಕೊಳ್ಳುತ್ತೇನೆ.

ಇದನ್ನೂ ಓದಿ: ನಗರದ ಬದುಕಿನ ಅಲಾರಾಂ ಟೈಮ್ ಮತ್ತು ಹಳ್ಳಿ ಮನೆಯ ಗೋಡೆ ಗಡಿಯಾರ

Follow us on

Related Stories

Most Read Stories

Click on your DTH Provider to Add TV9 Kannada