ನಗರದ ಬದುಕಿನ ಅಲಾರಾಂ ಟೈಮ್ ಮತ್ತು ಹಳ್ಳಿ ಮನೆಯ ಗೋಡೆ ಗಡಿಯಾರ
ಊರಿನ ಮಣ್ಣಿನ ಸೆಳೆತವೇ ಹಾಗೆ. ಅದು ಪಟ್ಟಣವಲ್ಲ .ತೆಂಗು, ಕಂಗು ಕರಿಮೆಣಸು, ಮರಗೆಣಸು ಬೆಳೆಯುವ ಹಳ್ಳಿ. ಹಂಚಿನ ಮನೆ, ಅಂಗಳ ತುಂಬಾ ಅಡಿಕೆ, ಗಿಡಗಳ ಬುಡ ಕೆದಕುವ ಕೋಳಿ, ಮನೆಗೆ ಕಾವಲು ಕಾಯಲು ನಿಂತ ಊರ ನಾಯಿ, ಕೊಟ್ಟಿಗೆಯಲ್ಲಿನ ಹಸು, ಹಿತ್ತಿಲಲ್ಲಿ ಚಿಲಿಪಿಲಿಗುಡುವ ಪಕ್ಷಿಗಳು, ಗೆಡ್ಡೆ ಗೆಣಸು ಕದಿಯಲು ಬರುವ ಕಾಡಹಂದಿ...

ಬೆಳಗ್ಗೆ ಏಳಬೇಕಾದರೆ ಅಲಾರಾಂ ಸೆಟ್ ಮಾಡಬೇಕು. 6 ಗಂಟೆಗೆ ಏಳಬೇಕಾದರೆ ಅಲಾರಾಂ ಟೈಮಿಂಗ್ 5.30, 5. 40, 5.50 ಹೀಗೆ ಸೆಟ್ ಮಾಡಿಟ್ಟು ಕಿರುಚುವ ಅಲ್ಲ ಹಾಡು ಹೇಳುವ ಮೊಬೈಲ್ನ್ನು ಬೈಯುತ್ತಾ 6 ಗಂಟೆಗೆ ಎದ್ದೇಳಲೇ ಬೇಕು. ಆಮೇಲೆ ಎಷ್ಟು ನಿಮಿಷದಲ್ಲಿ ಸ್ನಾನ ಮುಗಿಸಬೇಕು, ತಿಂಡಿ ರೆಡಿ ಮಾಡಿಡಬೇಕು, ಲಂಚ್ ಬಾಕ್ಸ್ ,ರೆಡಿಯಾಗಿ ದಡಬಡನೆ ಮೆಟ್ಟಲಿಳೀದು ಮೆಟ್ರೋ ಅಥವಾ ಬಿಎಂಟಿಸಿ ಬಸ್ ಹತ್ತಿ ಇಳಿದು ಆಫೀಸ್ ಬಾಗಿಲಲ್ಲಿ ಪಂಚ್ ಮಾಡುವಲ್ಲಿಯವರೆಗೆ ಇಂತಿಷ್ಟು ಟೈಮ್ ಸೆಟ್ ಆಗಿರುತ್ತದೆ. ನಾಳೆ ಬೆಳಗ್ಗೆ ಏನು ತಿಂಡಿ ಮಾಡಬೇಕು? ಯಾವ ಡ್ರೆಸ್ ಹಾಕಬೇಕು ಎಂಬುದು ರಾತ್ರಿಯೇ ನಿರ್ಧಾರ ಮಾಡಿಟ್ಟರೆ ಸಮಯ ಲಾಭ. ಕೆಲವೊಂದು ದಿನ ಅಡುಗೆ ಸರಿಯಾಗಲ್ಲ, ತುಂಬಿಸಿ ರೆಡಿ ಮಾಡಿದ್ದ ಲಂಚ್ ಬಾಕ್ಸ್ ಕೆಳಗೆ ಬಿದ್ದು ಹೋಗುವುದೋ ,ನಲ್ಲಿಯಲ್ಲಿ ನೀರು ಬರದಿರುವುದೋ, ಕರೆಂಟ್ ಕೈಕೊಟ್ಟು ಇನ್ಯಾವುದೋ ಕಿರಿಕಿರಿಯಲ್ಲಿ ಬೆಳಗ್ಗಿನ ಮೂಡ್ ಹಾಳಾಗಿ ಬಿಡುತ್ತದೆ. ಮಹಾನಗರಗಳಲ್ಲಿ ವಾಸಿಸುವರಿಗೆ ಮೂಡ್ ಹಾಳಾಗಲು ನಿರ್ದಿಷ್ಟ ಕಾರಣವೇನೂ ಬೇಕಿಲ್ಲ. ಬಸ್ನಲ್ಲಿ ಚೇಂಜ್ ಕೊಡಿ ಎಂದು ಕಂಡೆಕ್ಟರ್ ಹೇಳಿದರೆ, ಆಟೋದವರು ಬರಲ್ಲ ಮೇಡಂ ಎಂದರೂ, ಮಾತಾಡಲು ಇಷ್ಟ ಇಲ್ಲದವರ ಗುಡ್ ಮಾರ್ನಿಂಗ್ ಮೆಸೇಜ್ ಬಂದರೂ ಮೂಡ್ ಹಾಳೇ.
ಮಹಾನಗರಗಳು ನಿದ್ದೆ ಮಾಡುವುದಿಲ್ಲ. ಇಲ್ಲಿನ ಜನ ಸದಾ ಕ್ರಿಯಾಶೀಲರಾಗಿಯೇ ಇರುತ್ತಾರೆ. ಅಲ್ಲಿ ಬದುಕುವಾಗ ನಮ್ಮ ಬದುಕೂ ಹಾಗೇ ಇರುತ್ತದೆ. ಜನರು ಸಮಯದ ಹಿಂದೆ ಓಡುತ್ತಾರೋ, ಸಮಯದ ಜತೆ ಓಡುತ್ತಾರೋ ಗೊತ್ತಾಗಲ್ಲ. ಬೇಕಾದರೆ ಮೆಟ್ರೋ ಅಥವಾ ಬಸ್ ಇಳಿದು ಓಡುವ ಮಂದಿಯನ್ನು ನೋಡಿ. ಎಲ್ಲರಿಗೂ ಅವಸರ. ಎಲ್ಲದರಲ್ಲೂ ನಾನು ಮೊದಲು ಎನ್ನುವ ಧಾವಂತ ಒಂದೆಡೆಯಾದರೆ ಜವಾಬ್ದಾರಿಗಳ ಭಾರ ಅವರನ್ನು ಓಡುವಂತೆ ಪ್ರೇರೇಪಿಸುತ್ತದೆ. ಓಡುವ ಜನರ ನಡುವೆ ನಡೆದು ನೋಡಿ ಎದುರು ಬರುವ ಮುಖಗಳು ಸ್ಪಷ್ಟವಾಗಿ ಕಾಣುತ್ತವೆ. ನಿರಾತಂಕದಿಂದ ನಡೆವ ಜನರನ್ನು ನೋಡಿದಾಗ ನಮ್ಮ ಮನಸ್ಸು ಕೂಡಾ ನಡೆದೇ ಹೋಗು, ಯಾಕೆ ಓಡುತ್ತಿ ಎಂದು ಪಿಸುಗುಟ್ಟುತ್ತದೆ.
ಹೀಗೆ ಪ್ರಯಾಣದ ನಡುವೆ ಅನೇಕ ಮಂದಿ ಎದುರಾಗುತ್ತಿರುತ್ತಾರೆ. ಬೆಳಗ್ಗಿನ ಹೊತ್ತಲ್ಲಿ ಲವಲವಿಕೆಯಿಂದ ಕಾಣುವ ಮುಖಗಳಾದರೆ ಸಂಜೆ ಬಾಡಿದ ಮುಖಗಳು .ಮಾತುಗಳಲ್ಲೇ ಮುಳುಗಿರುವವರು ಒಂದೆಡೆಯಾದರೆ ಮೌನವಾಗಿ ತಮ್ಮದೇ ಲೋಕದಲ್ಲಿರುವವರು. ಪುಸ್ತಕ ಓದುವವರು, ಮೊಬೈಲ್ ನೋಡುವವರು ಹೀಗೆ ಹಲವಾರು ಚಟುವಟಿಕೆಗಳ ಮೂಲಕ ದ್ವೀಪವಾಗಿ ಇರುವವರು ಅನೇಕರು. ಈ ಅನೇಕರ ಮಧ್ಯೆ ನಿಂತು ಎಲ್ಲರನ್ನೂ ಗಮನಿಸಿ, ಈ ಪಟ್ಟಣಕ್ಕೆ ಏನಾಗಿದೆ? ಎಂಬ ಡೈಲಾಗ್ ನಿಮ್ಮ ಮನಸ್ಸಿನಲ್ಲಿ ಸದ್ದಾಗದೇ ಇರದು. ನಾನೂ ಈ ಪಟ್ಟಣದ ಭಾಗವೇ ಆಗಿಬಿಟ್ಟದ್ದೇನೆ . ಅವರಂತೆಯೇ ಓಡುತ್ತೇನೆ, ಸುಸ್ತಾಗುತ್ತೇನೆ. ಅಳುತ್ತೇನೆ, ನಗುತ್ತೇನೆ. ಇಂಥಾ ಹಲವಾರು ಅಳು -ನಗು,ಬದುಕು-ಸಾವುಗಳನ್ನು ಕಂಡು ನಗರ ಬೆಳೆಯುತ್ತಲೇ ಇದೆ. ನೀವು ಯಾವ ಊರು ಎಂದು ಕೇಳಿದಾಗ ನಾನು ಇಂಥಾ ಊರು ಎಂದು ಹೇಳುತ್ತೇನೆ. ಅತ್ತಲಿಂದ ನಾನೂ ಅದೇ ಊರು ಎಂಬ ಮರುತ್ತರ ಬಂದರೇ ಖುಷಿಯೇ ಬೇರೆ. ಪರವೂರಲ್ಲಿರುವಾಗ ನಮ್ಮೂರಿಗೆ ಹೋಗುವ ಬಸ್, ನಮ್ಮೂರ ನೋಂದಣಿ ಸಂಖ್ಯೆಯ ವಾಹನ ನೋಡಿದರೂ ಖುಷಿ. ನನ್ನ ಪಾಲಿಗೆ ಬೆಂಗಳೂರು ಕರ್ಮ ಭೂಮಿ. ನನ್ನ ಊರಲ್ಲ ಇದು ಎಂಬ ಭಾವದಿಂದಲೇ ಅಂಜುತ್ತಾ ಬಂದು ಈ ಮಹಾನಗರದ ಅಪ್ಪುಗೆಯಲ್ಲಿ ಈ ಬೆಂಗಳೂರಿನವಳು ಆದರೂ ಅಲ್ಲಿದೆ ನಮ್ಮನೆ ಎಂಬ ಸೆಳೆತ ಊರಿನ ಕಡೆ ಇದ್ದೇ ಇರುತ್ತದೆ. ಇಲ್ಲಿರುವುದು ಸುಮ್ಮನೆ ಅಂತಲ್ಲ.
ಊರಿನ ಮಣ್ಣಿನ ಸೆಳೆತವೇ ಹಾಗೆ. ಅದು ಪಟ್ಟಣವಲ್ಲ .ತೆಂಗು, ಕಂಗು ಕರಿಮೆಣಸು, ಮರಗೆಣಸು ಬೆಳೆಯುವ ಹಳ್ಳಿ. ಹಂಚಿನ ಮನೆ, ಅಂಗಳ ತುಂಬಾ ಅಡಿಕೆ, ಗಿಡಗಳ ಬುಡ ಕೆದಕುವ ಕೋಳಿ, ಮನೆಗೆ ಕಾವಲು ಕಾಯಲು ನಿಂತ ಊರ ನಾಯಿ, ಕೊಟ್ಟಿಗೆಯಲ್ಲಿನ ಹಸು, ಹಿತ್ತಿಲಲ್ಲಿ ಚಿಲಿಪಿಲಿಗುಡುವ ಪಕ್ಷಿಗಳು, ಗೆಡ್ಡೆ ಗೆಣಸು ಕದಿಯಲು ಬರುವ ಕಾಡಹಂದಿ…ಅದೊಂದು ಅಪ್ಪಟ ಹಳ್ಳಿ. ಕೋಳಿಕೂಗಿಗೆ ಅಲ್ಲದಿದ್ದರೂ ಬೆಳಕು ಹರಿಯುತ್ತಿದ್ದಂತೆ ಎಚ್ಚರವಾಗುತ್ತದೆ. ಗೋಡೆ ಗಡಿಯಾರದಲ್ಲಿ ಸಮಯ ನೋಡಿ ಹಳ್ಳಿಯಿಂದ ಪಟ್ಟಣಕ್ಕೆ ಕೆಲಸಕ್ಕೆ ಹೋಗುವವರಿಗೂ ಅವಸರವಿಲ್ಲ. ಮನೆತುಂಬಾ ಜನರಿದ್ದರೂ ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿದರೆ ನಿರಾಳ. ಇಲ್ಲಿ ಎಲ್ಲರಿಗೂ ಮಾತನಾಡಲು, ನಗಲು ಸಮಯವಿದೆ. ಅಳುವುದು ತುಂಬಾ ಕಷ್ಟ. ಒಬ್ಬರ ನೋವು ಎಲ್ಲರ ನೋವಾಗುತ್ತದೆ, ಒಬ್ಬರ ಖುಷಿ ಎಲ್ಲರದ್ದೂ ಆಗುತ್ತದೆ. ಇಲ್ಲಿ ಸಮಯ ನಿಧಾನವಾಗಿಯೋ,ವೇಗವಾಗಿಯೋ ಚಲಿಸುವುದಿಲ್ಲ. ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಜೀವನದ ಶಿಸ್ತು ಇಲ್ಲಿನ ಸೊಬಗು ಹೆಚ್ಚಿಸುತ್ತದೆ. ಊರು ಎಂದರೆ ಪ್ರತಿಯೊಬ್ಬರಿಗೂ ಭಾವುಕ ಸಂಬಂಧ. ಹೀಗಿರುವಾಗ ಊರಿನಿಂದ ದೂರವಿದ್ದು ಮರಳಿ ಗೂಡಿಗೆ ಬಂದಾಗ ಆಗುವ ನಿರಾಳಭಾವವನ್ನು ಅಕ್ಷರಗಳಲ್ಲಿ ಹಿಡಿದಿರಿಸುವುದು ಕಷ್ಟ. ನಗರಗದ ಬದುಕಿನಂತೆ ಹಳ್ಳಿಯ ಈ ಮನೆ-ಮನದಲ್ಲಿ ಧಾವಂತವಿಲ್ಲ. ನಂಬಿಕೆ-ಪ್ರೀತಿ ಇಲ್ಲಿ ಎಲ್ಲರವನ್ನೂ ಬಂಧಿಸಿದೆ. ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ.



