ಮಳೆ ಅಂದ್ರೆ ಕೆಲವೊಬ್ಬರಿಗೆ ಖುಷಿ ಇನ್ನೂ ಕೆಲವರಿಗೆ ಬೇಜಾರು ನಂಗೆ ಮಾತ್ರ ಅದೇನೋ ಕೆಲವೊಂದು ನೆನಪಿನ ಬುತ್ತಿಯನ್ನು ತರುತ್ತದೆ ಈ ಮಳೆ. ನನ್ನ ಪ್ರೀತಿಯ ಪಯಣ ಶುರುವಾಗಿದ್ದೆ ಈ ಮಳೆಯಿಂದ, ಕೊಡೆ ಇಲ್ಲದೆ ನೆನೆದುಕೊಂಡು ಸಾಗುತ್ತಿರುವಾಗ ಆದ ಅನುಭವ ನಿಜಕ್ಕೂ ಒಮ್ಮೆ ರೋಮಾಂಚನ ಉಂಟು ಮಾಡುತ್ತದೆ ಒಂದು ದಿನ ಜಿಟಿಜಿಟಿ ಮಳೆ ಬರುತ್ತಿತ್ತು. ಅಮ್ಮ ಹೇಳಿದ್ರು ಕೊಡೆ ತೆಗೆದುಕೊಂಡು ಹೋಗೆ ಜೋರು ಮಳೆ ಬರ್ತಿದೆ, ನಾನು ಅವರ ಮಾತು ಕೇಳದೆ ಏನು ಆಗುವುದಿಲ್ಲ ಅಮ್ಮ ಎಂದು ಹಾಗೆ ಹೋದೆ, ಹೋಗುವಾಗ ನಾನು ಗ್ರಚಾರಕ್ಕೆ ಜೋರು ಮಳೆ ಬಂತು. ಈಗ ನೋಡಿ ನನಗೆ ಭಯ ಶುರುವಾಯಿತು, ಬ್ಯಾಗ್ನಲ್ಲಿರುವ ಲ್ಯಾಪ್ ಟಾಪ್ ಹಾಳಾಗುವುದು ಗ್ಯಾರೆಂಟಿ ಅಂದುಕೊಂಡೆ, ಅಮ್ಮನ ಮಾತು ನಾನು ಕೇಳಬೇಕಿತ್ತು ಎಂದು ಸಪ್ಪೆ ಮೊರೆ ಹಾಕಿಕೊಂಡು ಅಲ್ಲಿಂದ ಹೋದೆ.
ಮೈ ಎಲ್ಲ ಒದ್ದೆ, ಮಳೆಯ ಅಬ್ಬರಕ್ಕೆ ದಾರಿಯಲ್ಲಿ ಹೋಗಬೇಕಾದರೆ ಒಬ್ಬ ಹುಡುಗ ಅವನ ಕೊಡೆಯನ್ನು ನನಗೆ ಹಿಡಿದ, ಆ ಕ್ಷಣ ನನಗೆ ಏಕೋ ಕೊಡೆ ಹಿಡಿದವನ ಕೈ ಹಿಡಿಯಬೇಕು ಎನಿಸಿತು, ಏಕೆಂದರೆ ಅವನ ಕಾಳಜಿ ಹಾಗಿತ್ತು. ಕೊಡೆ ಅಡಿಯಲ್ಲಿ ನಮ್ಮ ಮೊದಲ ಪ್ರೀತಿಯ ಪಯಣ ಸಾಗತೊಡಗಿತ್ತು, ಅವನು ತನ್ನ ಹೆಸರನ್ನು ಹೇಳಿ ನನ್ನ ಹೆಸರನ್ನು ಕೇಳಿದಾಗ ಒಮ್ಮೆ ಮುಕಸ್ಮಿತಲಾದೆ, ನಂತರ ನನ್ನ ಪರಿಚಯವನ್ನು ಮಾಡಿಕೊಂಡೆ, ಹೀಗೆ ಸಾಗುತ್ತಿರುವಾಗ ಕಾಲೇಜು ಬಂದೇ ಬಿಡ್ತು, ನಾನು ಥ್ಯಾಂಕ್ಯೂ ಎಂದು ಹೇಳಿದೆ.
ಆಗ ಅವನು ನಾನು ಇದೇ ಕಾಲೇಜಿನಲ್ಲಿ ಬಿಎಸ್ಸಿ ಮಾಡುತ್ತಿರುವೆ ಎಂದ, ಒಮ್ಮೆಲೇ ನನಗೆ ರೆಕ್ಕೆ ಪುಕ್ಕ ಬಂದು ಹಾರುವಷ್ಟು ಖುಷಿ ಆಯಿತು, ನಂತರ ಕಾಲೇಜು ಮುಗಿಯಿತು, ಮಳೆ ನಿಂತಿರಲಿಲ್ಲ ಸ್ನೇಹಿತರೆಲ್ಲಾ ಕರೆದರು, ಬಾ ಹೋಗೋಣವೆಂದು ಆದರೆ ನಂಗೆ ಹೋಗುವ ಮನಸ್ಸಾಗಲಿಲ್ಲ, ಅವನ ಜೊತೆ ಹೋಗಬೇಕೆಂದು ಹಾಗೆ ಹೊರಗೆ ಕಾಯುತ್ತಾ ನಿಂತಿದ್ದೆ, ಆಗ ಅವನು ಕ್ಲಾಸ್ ಮುಗಿಸಿಕೊಂಡು ಹೊರಗೆ ಬಂದ ನನ್ನ ನೋಡಿ ಬರುವಿರಾ ಎಂದ ಅದಕ್ಕಾಗಿಯೇ ಹಾತೊರೆಯುತ್ತಿದ್ದ ಮನಸ್ಸು ಇಲ್ಲ ಎನ್ನಲಿಲ್ಲ, ಹಾಗಾಗಿ ಮತ್ತೆ ಕೊಡೆಯೊಂದರ ಅಡಿಯಲ್ಲಿ ನಮ್ಮ ಪಯಣ ಸಾಗಿತು.
ಆಗ ಅವನು ತನ್ನ ಪ್ರೀತಿಯನ್ನು ನಿಮ್ಮ ಬಳಿ ಹೇಳಬೇಕು ಎಂದ, ನನಗೆ ಇನ್ನಷ್ಟು ಖುಷಿ ಅಬ್ಬಾ..! ನಾನು ಹೇಳಬೇಕೆಂದು ಕೊಂಡಿರುವುದನ್ನು ಇವನೇ ನನಗೆ ಹೇಳೀದ ಎಂದು ಖುಷಿ, ಆದರೆ ಅವನು ಹೇಳಿದ್ದು ನನ್ನ ಕ್ಲಾಸ್ಮೇಟ್ ಶ್ರುತಿ ಬಗ್ಗೆ, ಅವನು ಅವಳನ್ನು ಪ್ರೀತಿಸುವುದಾಗಿ ಹೇಳಿದಾಗ ನನಗೆ ಆ ಮಳೆಯಲ್ಲಿ ಬರಸಿಡಿಲು ಬಡಿದಂತಾಯಿತು. ನನ್ನ ಕಣ್ಣೀರನ್ನು ಮಳೆಗೂ ನೋಡಬೇಕೆಂದು ಆಸೆಯಾಗಿತ್ತು, ಮಳೆಯು ನಿಂತು ಹೋಯಿತು, ಆದರೆ ನನ್ನ ಕಣ್ಣೀರು ಅವನಿಗೆ ಕಾಣಲಿಲ್ಲ, ಅವನ ಬಳಿ ಹೇಳಿದೆ ನಾನು ಶುತ್ರಿಗೆ ಹೇಳಿ ನೋಡುವೇ ಎಂದು ಅಲ್ಲಿಂದ ಮನೆಯತ್ತ ನನ್ನ ಪಯಣ ಬೆಳೆಸಿದೆ. ಹೀಗೆ ನನ್ನ ಮೊದಲ ಪ್ರೀತಿಯ ಪಯಣ ಕೊಡೆಯೊಂದರ ಅಡಿಯಲ್ಲೇ ಶುರುವಾಗಿ ಕೊಡೆಯೊಂದಿಗೆ ಮುಗಿದು ಹೋಯಿತು..
ಐಶ್ವರ್ಯಾ ಕೋಣನ
ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ