Ranveer Singh Viral Photo: ರಣವೀರ್ ಸಿಂಗ್ ‘ಅರೆ ಬೆತ್ತಲೆ’ ವಿವಾದ; ನಿಜಕ್ಕೂ ಅಶ್ಲೀಲ ತುಂಬಿರುವುದು ಎಲ್ಲಿ?
Ranveer Singh Photo Controversy: ‘ಅಶ್ಲೀಲ’ವನ್ನು ನಿರ್ದಿಷ್ಟವಾಗಿ ನಿರೂಪಿಸುವುದು ಅಷ್ಟು ಸುಲಭದ ಕೆಲಸವಲ್ಲ. ‘ಆಶ್ಲೀಲ’ ಯಾವುದು ಎಂದು ತೀರ್ಮಾನಿಸುವುದು ನಾಜೂಕಿನ ಕೆಲಸ ಎಂದು ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ.
ಸ್ಟಾರ್ ನಟ ರಣವೀರ್ ಸಿಂಗ್ (Ranveer Singh) ಮ್ಯಾಗಜಿನ್ ಒಂದರ ಫೋಟೋಶೂಟ್ನಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಂಡಿರುವುದು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿದೆ. ‘ಈ ಚಿತ್ರಗಳು (Ranveer Singh Viral Photos) ಕೇವಲ ಆ ಮ್ಯಾಗಜಿನ್ ನೋಡುಗರಿಗೆ ಸೀಮಿತವಾಗುವ ಬದಲು ಸಮೂಹ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಆಗಿರುವುದರಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಕೆಲವು ಭಾರತೀಯ ಸಂಸ್ಕೃತಿಯ ಆರಾಧಕರು ಹುಯಿಲೆಬ್ಬೆಸಿದ್ದಾರೆ. ಮುಂಬೈ ಪೊಲೀಸರು ರಣವೀರ್ ವಿರುದ್ಧ ಅಶ್ಲೀಲ ನಡವಳಿಕೆ ಆರೋಪದ ಮೇಲೆ ಎಫ್ಐಆರ್ (FIR on Ranveer Singh) ದಾಖಲಿಸಿದ್ದಾರೆ. ಶೀಲ ಮತ್ತು ಅಶ್ಲೀಲದ ಸುತ್ತ ದೇಶಾದ್ಯಂತ ಬಿರುಸಿನ ಚರ್ಚೆ ಆರಂಭವಾಗಿದೆ. ಹಲವರು ವಿಭಿನ್ನ ಮತ್ತು ವಿಶಿಷ್ಟ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಲೇಖಕ ಜೆ.ಬಿ. ರಂಗಸ್ವಾಮಿ ಅವರು, ‘ರಣವೀರ್ ಸಿಂಗ್ ಭಂಗಿ ಕಲಾತ್ಮಕವಾಗಿದೆ. ಪ್ರಚೋದಕ ಅಶ್ಲೀಲತೆಯಿಲ್ಲ. ಅವರ ಸಪ್ರಮಾಣಬದ್ಧ ದೇಹಸೌಷ್ಟವವನ್ನು ನೋಡಿ ಸಂತೋಷವೇ ಆಯಿತು. ರಣವೀರನ ಹಾವಭಾವಗಳಲ್ಲಿ ಪೋಲಿತನದ ಕರೆಗಳಿದ್ದರೆ, ಕಣ್ಣು ಹೊಡೆಯುವಿಕೆ ಇತ್ಯಾದಿಗಳಿದ್ದರೆ ಇಲ್ಲವೇ ದೇಹವನ್ನು ಪ್ರಚೋದನಾತ್ಮಕ ಭಂಗಿಯಲ್ಲಿ ಢಾಳಾಗಿ ತೋರಿದ್ದರೆ ಅಶ್ಲೀಲ ಅನ್ನಬಹುದಿತ್ತು’ ಎಂಬ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ‘ಅಶ್ಲೀಲ’ವನ್ನು ನಿರ್ದಿಷ್ಟವಾಗಿ ನಿರೂಪಿಸುವುದು ಅಷ್ಟು ಸುಲಭದ ಕೆಲಸವಲ್ಲ. ‘ಆಶ್ಲೀಲ’ ಯಾವುದು ಎಂದು ತೀರ್ಮಾನಿಸುವುದು ನಾಜೂಕಿನ ಕೆಲಸ ಎಂದು ಸುಪ್ರೀಂ ಕೋರ್ಟ್ ಕೂಡಾ ಅಭಿಪ್ರಾಯಪಟ್ಟಿದೆ. ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಸಂದರ್ಭದಲ್ಲಿಯೂ ‘ಅದು ಅಶ್ಲೀಲ’ ಎಂದು ವಿವಿಧ ಸಂಘಟನೆಗಳು ಹುಯಿಲೆಬ್ಬಿಸಿದ್ದವು.
ಶೀಲ-ಅಶ್ಲೀಲದ ಚರ್ಚೆ ಕೇವಲ ಇಂದು-ನಿನ್ನೆಯದ್ದಲ್ಲ. 1986ರಲ್ಲಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆಯ ಮಧ್ಯ ಪುಟದ ಬ್ರಾಡ್‌ಶೀಟ್‌ನಲ್ಲಿ ಯುವತಿಯ ಅರೆಬೆತ್ತಲೆ ಚಿತ್ರ ಪ್ರಕಟವಾಗಿತ್ತು. ಆಗ ಸಂಪಾದಕ ಪ್ರೀತಿಶ್ ನಂದಿಯವರು ತೀವ್ರ ಟೀಕೆ ಎದುರಿಸಬೇಕಾಯಿತು. ಲೋಕಸಭೆಯಲ್ಲೂ ವಿಷಯ ಪ್ರಸ್ತಾಪವಾಯಿತು. ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸಾರ್ವಜನಿಕ ವಲಯದಲ್ಲಿ ದೊಡ್ಡ ವಾಗ್ವಾದವೇ ನಡೆಯಿತು. ಆಗ ಇನ್ನೊಂದು ಇಂಗ್ಲಿಷ್ ಪತ್ರಿಕೆ ಡೆಬನೇರ್ ಬಹುತೇಕ ಪುಟಗಳಲ್ಲಿ ಸಂಪೂರ್ಣ ಬೆತ್ತಲೆ ಚಿತ್ರಗಳನ್ನೇ ಪ್ರಕಟಿಸುತ್ತಿತ್ತು.
‘ಡೆಬನೇರ್ ಸಂಪೂರ್ಣ ಬೆತ್ತಲೆ ಚಿತ್ರಗಳನ್ನೇ ಪ್ರಕಟಿಸುತ್ತದೆ. ಇಲ್ಲಸ್ಟ್ರೇಟೆಡ್ ವೀಕ್ಲಿ ಅಪರೂಪಕ್ಕೊಮ್ಮೆ ಕೇವಲ ಅರೆ ಬೆತ್ತಲೆ ಪ್ರಕಟಿಸಿದರೆ ಅದರಲ್ಲಿ ತಪ್ಪೇನು?’ ಎಂದು ಕೆಲವರು ಪ್ರಶ್ನಿಸಿದರು. ಆಗ ನಡೆದ ಚರ್ಚೆ ಸ್ವಾರಸ್ಯಕರವಾಗಿದೆ. ‘ಡೆಬನೇರ್ ಪತ್ರಿಕೆಯ ಓದುಗರು ಯಾವುದೇ ಪ್ರಭಾವ ಅಥವಾ ಪ್ರಚೋದನೆಗೆ ಒಳಗಾಗದೆ ಸೌಂದರ್ಯ ಆಸ್ವಾದಿಸುವ ಪ್ರಜ್ಞೆ ಮತ್ತು ಮಾನಸಿಕ ಶಿಸ್ತನ್ನು ರೂಢಿಸಿಕೊಂಡಿರುತ್ತಾರೆ. ಆದ್ದರಿಂದ ಡೆಬನೇರ್ ಪತ್ರಿಕೆಯ ಸಂಪೂರ್ಣ ಬೆತ್ತಲೆ ಚಿತ್ರಗಳು ಅಶ್ಲೀಲವೆನಿಸುವುದಿಲ್ಲ. ಆದರೆ ಇಲ್ಲಸ್ಟ್ರೇಟೆಡ್ ವೀಕ್ಲಿ ಮನೆ ಮಂದಿಯೆಲ್ಲಾ ಓದುತ್ತಾರೆ. ಮಕ್ಕಳು ಸೇರಿದಂತೆ ಸುಲಭವಾಗಿ ಪ್ರಭಾವಕ್ಕೆ ಒಳಗಾಗುವ ಓದುಗರ ಕೈಗೆ ನೇರವಾಗಿ ಆ ಪತ್ರಿಕೆ ಸಿಗುತ್ತದೆ. ಆದ್ದರಿಂದ ವೀಕ್ಲಿಯಲ್ಲಿ ಪ್ರಕಟವಾಗಿರುವ ಅರೆಬೆತ್ತಲೆಚಿತ್ರವೂ ಅಶ್ಲೀಲ’ ಎಂಬ ವಾದ ಕೇಳಿ ಬಂತು.
ಅಶ್ಲೀಲ ಎಂಬುದು ಸಾಪೇಕ್ಷವಾದ ಸಂಗತಿಯೇ ಹೊರತು ಅದನ್ನು ನಿರ್ದಿಷ್ಟವಾಗಿ ನಿರೂಪಿಸುವುದು ಸಾಧ್ಯವಿಲ್ಲ. ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ ಶ್ಲೀಲ, ಅಶ್ಲೀಲಗಳ ಕಲ್ಪನೆಗಳು ಭಿನ್ನವಾಗಿರುತ್ತವೆ. ಡಿ.ಎಚ್. ಲಾರೆನ್ಸ್‌ನ ‘ದಿ ಲೇಡಿ ಚಾರ್ಟರ್ಲಿಸ್ ಲವರ್’ ಕಾದಂಬರಿ ಮೊದಲು ಪ್ರಕಟವಾದಾಗ ಅಲ್ಲೋಲ ಕಲ್ಲೋಲವೇ ಆಯಿತು. ಆಗ ಅದನ್ನು ನಿಷೇಧಿಸಲಾಯಿತು. ಆಗ ನಿಷೇಧವಾಗಿದ್ದ ಅದೇ ಕಾದಂಬರಿ ಈಗ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿದೆ. ಆದ್ದರಿಂದ 50 ಅಥವಾ 100 ವರ್ಷಗಳ ಹಿಂದೆ ಅಶ್ಲೀಲ ಎನಿಸಿದ್ದು ಈಗ ಅಶ್ಲೀಲ ಅಲ್ಲ. ಅದೇ ರೀತಿ ಮುಂಬೈನ ಬಾರ್‌ಗಳು ಅಥವಾ ಪರ್ಮಿಟ್ ರೂಂಗಳಲ್ಲಿ ಯುವತಿಯರು ಮದ್ಯ ಪೂರೈಸುವುದು ಸಾಮಾನ್ಯ ಸಂಗತಿಯಾದರೆ ಬೆಂಗಳೂರಿನಲ್ಲಿ ಅದು ಅಶ್ಲೀಲವಾಗುತ್ತದೆ.
ಮೊದಲು ಸಿನೆಮಾಗಳಲ್ಲಿ ಪ್ರೇಕ್ಷಕರನ್ನು ಖುಷಿಯಾಗಿ ಇಡಲು ಸಿಲ್ಕ್ ಸ್ಮಿತಾ, ಹೆಲೆನ್, ಜ್ಯೋತಿ ಲಕ್ಷ್ಮಿ ಮೊದಲಾದವರ ಕ್ಯಾಬರೆ ಡ್ಯಾನ್ಸ್ಗಳನ್ನು ನಡುವೆ ಜೋಡಿಸುತ್ತಿದ್ದರು. ಈಗ ಅಂತಹ ಅಗತ್ಯವೇ ಬೀಳುವುದಿಲ್ಲ. ಹೀರೋಯಿನ್ಗಳೇ ಬೋಲ್ಡ್ ಆಗಿ ಬಟ್ಟೆಗಳನ್ನು ಧರಿಸುತ್ತಾರೆ. ಅದನ್ನು ಯಾರೂ ‘ಅಶ್ಲೀಲ’ ಎಂದು ಭಾವಿಸುವುದಿಲ್ಲ. ಆದರೆ ಅದೇ ಹೀರೋಯಿನ್ಗಳು ಮೈತುಂಬಾ ಬಟ್ಟೆ ಧರಿಸಿ ಮೇಲಿನ ಒಂದು ಅಥವಾ ಎರಡು ಗುಂಡಿಗಳನ್ನು ತೆಗೆದರೆ ಅದನ್ನು ಅಶ್ಲೀಲ ಎನ್ನುವವರಿದ್ದಾರೆ. ಏಕೆಂದರೆ ‘ಅದು suggestive. ನಮ್ಮ ಕಲ್ಪನೆಗಳನ್ನು ಗರಿಗೆದರುವಂತೆ ಮಾಡುತ್ತದೆ’ ಎಂಬುದು ಅವರ ವಾದ.
ಇನ್ನೊಂದು ಪ್ರಕರಣ-ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ವಿರುದ್ಧವೂ ವಿವಿಧ ಸಂಘಟನೆಗಳು ಹುಯಿಲೆಬ್ಬಿಸಿದ್ದವು. ‘ವಿಶ್ವ ಸುಂದರಿ ಸ್ಪರ್ಧೆ ಅಶ್ಲೀಲ ಎನ್ನುವವರು ಮೊದಲು ಬೇಲೂರು ಶಿಲಾಬಾಲಕಿಗೆ ಉಡುಪುಗಳನ್ನು ತೊಡಿಸಲಿ’ ಎಂದು ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಸವಾಲು ಹಾಕಿದ್ದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ‘ನನಗೆ ಮದಿರೆ ಮತ್ತು ಮಾನಿನಿಯರು ಇಷ್ಟ’ ಎಂದು ಹೇಳಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ವಿಧಾನಸಭೆಯಲ್ಲಿಯೂ ಪ್ರಸ್ತಾಪವಾಯಿತು.
ಆ ಸಂದರ್ಭದಲ್ಲಿ ಪಟೇಲರು ಒಂದು ಕಥೆಯನ್ನು ಹೇಳಿದರು. ‘ಗುರು ಮತ್ತು ಶಿಷ್ಯ ಒಂದು ಸಂಜೆ ತಮ್ಮ ಊರಿಗೆ ಮರಳುತ್ತಿದ್ದರು. ತುಂಬಿ ಹರಿಯುತ್ತಿದ್ದ ಹೊಳೆಯನ್ನು ಅವರು ದಾಟಬೇಕಿತ್ತು. ಆದರೆ ಹೊಳೆಯ ಸಮೀಪ ಇವರ ಬಳಿ ಓಡಿ ಬಂದ ಯುವತಿಯೊಬ್ಬಳು ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾಳೆ. ‘ಸ್ವಾಮಿಗಳೇ ಹೊಳೆ ತುಂಬಿ ಹರಿಯುತ್ತಿದೆ. ನನಗೆ ದಾಟಲು ಆಗುತ್ತಿಲ್ಲ. ದಯಮಾಡಿ ನನ್ನನ್ನು ಎತ್ತಿಕೊಂಡು ಆಚೆಯ ದಡಕ್ಕೆ ತಲುಪಿಸಿಬಿಡಿ. ಕತ್ತಲು ಕವಿಯುತ್ತಿದೆ. ಇದು ದಟ್ಟ ಅಡವಿ. ನೀವು ಬಿಟ್ಟು ಹೋದರೆ ಮೃಗಗಳ ಪಾಲಾಗುತ್ತೇನೆ’ ಎಂದು ಅಂಗಲಾಚುತ್ತಾಳೆ.
ಗುರುಗಳು ಒಪ್ಪುವುದಿಲ್ಲ. ‘ನಾವು ಸನ್ಯಾಸಿಗಳು. ಸ್ತ್ರೀಯರನ್ನು ನಾವು ಮುಟ್ಟುವಂತಿಲ್ಲ’ ಎನ್ನುತ್ತಾರೆ. ಆದರೆ ಶಿಷ್ಯನು ಗುರುಗಳ ಮಾತನ್ನು ಒಪ್ಪುವುದಿಲ್ಲ. ‘ಇಲ್ಲಿ ಧರ್ಮಕ್ಕಿಂತ ಮಾನವೀಯತೆ ಮುಖ್ಯ. ಅಸಹಾಯಕ ಯುವತಿಯನ್ನು ರಕ್ಷಿಸಲೇಬೇಕು’ ಎಂದು ಆ ಯುವತಿಯನ್ನು ತಲೆಯ ಮೇಲೆ ಕೂರಿಸಿಕೊಂಡು ಹೊಳೆಯನ್ನು ದಾಟಲು ಆರಂಭಿಸುತ್ತಾನೆ. ಆಗ ಗುರುಗಳ ಮನಸ್ಸಿನಲ್ಲಿ ನಾನಾ ವಿಚಾರಗಳು. ‘ಶಿಷ್ಯ ಎಳೇ ವಯಸ್ಸಿನ ಯುವಕ. ಯುವತಿಯೂ ಸುಂದರವಾಗಿದ್ದಾಳೆ. ಅವಳನ್ನು ತಲೆಮೇಲೆ ಕೂರಿಸಿಕೊಂಡಿದ್ದಾನೆ. ಇಬ್ಬರಿಗೂ ಸುಂದರವಾದ ಅನುಭವ ಆಗುತ್ತಿರಬೇಕು. ಛೇ.. ನಾನು ಎಂತಹ ತಪ್ಪು ಮಾಡಿದೆ. ನಾನೇ ಯುವತಿಯನ್ನು ದಾಟಿಸಬೇಕಿತ್ತು..’ ಹೀಗೆ ಗುರುಗಳ ಮನಸ್ಸಿನ ತುಂಬಾ ಉದ್ರೇಕಕಾರಿ ವಿಚಾರಗಳು. ದಡವನ್ನು ತಲುಪಿದ ಬಳಿಕ ‘ನಿನಗೆ ಏನು ಅನ್ನಿಸಿತು?’ ಎಂದು ಶಿಷ್ಯನನ್ನು ಕೇಳುತ್ತಾರೆ. ‘ಯುವತಿಯನ್ನು ರಕ್ಷಿಸುವ ಕರ್ತವ್ಯ ಮಾಡಿದ್ದೇನೆ ಎಂಬ ಭಾವನೆಯನ್ನು ಬಿಟ್ಟರೆ ನನ್ನ ಮನಸ್ಸಿನಲ್ಲಿ ಬೇರೆ ವಿಚಾರಗಳು ಸುಳಿಯಲಿಲ್ಲ’ ಎಂದು ಶಿಷ್ಯ ಹೇಳುತ್ತಾನೆ.
ವಿಧಾನಸಭೆಯಲ್ಲಿ ಈ ಕಥೆಯನ್ನು ಮುಗಿಸಿದ ಮುಖ್ಯಮಂತ್ರಿ ಪಟೇಲರು ‘ಮದಿರೆ ಮತ್ತು ಮಾನಿನಿಯರು ಇಷ್ಟ ಎಂದು ನಾನು ಟಿವಿ ಕಾರ್ಯಕ್ರಮದಲ್ಲಿ ಹೇಳಿ ಅಂದೇ ಅದನ್ನು ಮರೆತುಬಿಟ್ಟೆ. ಆದರೆ ನೀವು ಮಾತ್ರ ಅದನ್ನು ಅನೇಕ ತಿಂಗಳುಗಳಿಂದ ಹಾಗೆಯೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀರಿ’ ಎಂದು ಹೇಳಿದಾಗ ಶಾಸಕರು ಸುಸ್ತಾಗಬೇಕಾಯಿತು. ಹಾಗಾದರೆ ಅಶ್ಲೀಲ ತುಂಬಿರುವುದು ಎಲ್ಲಿ? ಅಶ್ಲೀಲ ಇರುವುದು ನೋಡುಗರ ಕಣ್ಣುಗಳಲ್ಲಿ ಮಾತ್ರ.
ಬರಹ: ಸಿ. ರುದ್ರಪ್ಪ