ದಕ್ಷಿಣದ ಅಯೋಧ್ಯೆ ಕನ್ಯಾಡಿ ಶ್ರೀರಾಮ ಕ್ಷೇತ್ರ! ಇಲ್ಲಿದೆ ಅದ್ಭುತ ಶಿಲ್ಪಕಲೆಗಳು
ದಕ್ಷಿಣದ ಅಯೋಧ್ಯೆ ಎಂದೇ ಕರೆಯಲ್ಪಡುವ ಶ್ರೀರಾಮ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ. ಕನ್ಯಾಡಿಯ ನಿತ್ಯಾನಂದ ನಗರದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ನೇತ್ರಾವತಿ ನದಿಯ ಸಮೀಪದ ಪುಣ್ಯಕ್ಷೇತ್ರವಾಗಿದ್ದು ಸಂಪೂರ್ಣವಾಗಿ ದಕ್ಷಿಣೋತ್ತರ ಶಿಲ್ಪಕಲೆಯನ್ನು ಇಲ್ಲಿ ಬಿಂಬಿಸಲಾಗಿದೆ.
ಹಲವು ಬಾರಿ ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದಿದ್ದರೂ ಸಹ ಅದೇ ದಾರಿಯಲ್ಲಿ ಸಾಗುವಾಗ ಸಿಗುವ ಶ್ರೀರಾಮನ ಕ್ಷೇತ್ರವನ್ನು ಬಸ್ಸಿನಿಂದಲೇ ನೋಡಿದ್ದು ಬಿಟ್ಟರೆ ಒಂದು ಭಾರಿಯೂ ಭೇಟಿ ನೀಡಿರಲಿಲ್ಲ. ಏನೋ ಅಚಾನಕ್ಕಾಗಿ ಗೆಳತಿಯೊಬ್ಬಳು ಶ್ರೀರಾಮನ ಕ್ಷೇತ್ರಕ್ಕೆ ಹೋಗುವುದಾಗಿ ಮಾತು ಪ್ರಸ್ತಾಪಿಸಿದಾಗ ನಾನು ಹೊರಟು ಸಿದ್ಧಳಾದೆ. ಚಿಕ್ಕಂದಿನಿಂದಲೂ ಆಂಜನೇಯನ ಬಗ್ಗೆ ಅಪಾರ ಭಕ್ತಿ, ಪ್ರೀತಿ ಇದ್ದ ನನಗೆ ಈ ದೇವಸ್ಥಾನಕ್ಕೆ ಹೋಗುವ ಮುನ್ನವೇ ಖುಷಿ ನೀಡಿತ್ತು. ಶ್ರೀರಾಮನ ಕ್ಷೇತ್ರ ತಲುಪಿದ್ದೆ ತಡ ಇಲ್ಲಿನ ವಾಸ್ತುಶಿಲ್ಪಗಳೇ ವಿಶೇಷವಾಗಿತ್ತು. ದೇವಾಲಯವನ್ನೇ ಸೊಂಡಿಲಿನಿಂದ ಎತ್ತಿ ಹಿಡಿದಂತೆ ನಿರ್ಮಾಣಗೊಂಡ ಆನೆಯ ಮೂರ್ತಿಗಳು ಕೆಂಪು ಮತ್ತು ಬಂಗಾರ ವರ್ಣದಿಂದ ಲೇಪಿತವಾದ ಇಲ್ಲಿನ ಗೋಪುರಗಳು ಕಣ್ಮನ ಸೆಳೆಯಿತು. ವಿಭಿನ್ನತೆ ಒಳಗೊಂಡಿರುವ ಈ ದೇವಾಲಯದ ವಿಶೇಷತೆಯನ್ನು ತಿಳಿದುಕೊಳ್ಳಬೇಕೆನಿಸಿತು. ಹಾಗೆ ತಿಳಿದುಕೊಂಡ ಒಂದಷ್ಟು ಮಾಹಿತಿಗಳು ಇಲ್ಲಿವೆ.
ದಕ್ಷಿಣದ ಅಯೋಧ್ಯೆ ಎಂದೇ ಕರೆಯಲ್ಪಡುವ ಶ್ರೀರಾಮ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ. ಕನ್ಯಾಡಿಯ ನಿತ್ಯಾನಂದ ನಗರದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ನೇತ್ರಾವತಿ ನದಿಯ ಸಮೀಪದ ಪುಣ್ಯಕ್ಷೇತ್ರವಾಗಿದ್ದು ಸಂಪೂರ್ಣವಾಗಿ ದಕ್ಷಿಣೋತ್ತರ ಶಿಲ್ಪಕಲೆಯನ್ನು ಇಲ್ಲಿ ಬಿಂಬಿಸಲಾಗಿದೆ. ದೇವಾಲಯದ ಹೊರ ಭಾಗಗಳಲ್ಲಿ ರಾಮಾಯಣದ ಕಥೆಗಳನ್ನು ಸಾರುವ ಕೆತ್ತನೆಗಳನ್ನು ಕೆತ್ತಲಾಗಿದ್ದು ಇಲ್ಲಿನ ಪ್ರತಿಯೊಂದು ಶಿಲ್ಪಕಲೆಯು ಕಣ್ಮನ ಸೆಳೆಯುತ್ತದೆ. ಸೀತಾನ್ವೇಷಣೆಯ ಸಂದರ್ಭದಲ್ಲಿ ಶ್ರೀರಾಮನು ಹೆಜ್ಜೆ ಇಟ್ಟಲ್ಲೆಲ್ಲಾ ಒಂದೊಂದು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂಬುದು ಪುರಾಣ ಕಥೆಗಳಲ್ಲಿ ಉಲ್ಲೇಖಗೊಂಡಿದೆ. ಹಾಗೆಯೇ ಕನ್ಯಾಡಿಯ ಈ ಪ್ರದೇಶದಲ್ಲಿ ಶ್ರೀರಾಮನು ವನವಾಸದ ಸಂದರ್ಭದಲ್ಲಿ ಬಂದಿದ್ದಾನೆಂದು ನಂಬಿಕೆ.
ಇದನ್ನು ಓದಿ : ನೃತ್ಯ ಕ್ಷೇತ್ರದಲ್ಲಿ ಬೆಳೆಯುವ ಮಕ್ಕಳಿಗೆ ಸ್ಪೂರ್ತಿ ಕಿರಣ್ ಮುರಳಿ
ಈ ಆಲಯವನ್ನು ಶ್ರೀ ನಿತ್ಯಾನಂದ ಸ್ವಾಮಿಯವರ ಪರಮ ಶಿಷ್ಯ ಶ್ರೀಶ್ರೀಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಕಟ್ಟಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ಮೂರು ಅಂತಸ್ತುಗಳಿಂದ ಕೂಡಿದ್ದು, ಒಳ ಪ್ರವೇಶಿಸಿದೊಡನೆ ಒಂದೇ ಸೂರಿನಡಿಯಲ್ಲಿ 36 ದೇವರುಗಳ ಗರ್ಭಗುಡಿಗಳನ್ನು ಕಾಣಬಹುದು. ದೇವಾಲಯದ ಪ್ರಮುಖ ಗರ್ಭಗುಡಿಯೊಳಗೆ ಶ್ರೀರಾಮ, ಸೀತೆ, ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇದಲ್ಲದೆ ನವದುರ್ಗೆಯರು ಹಾಗೂ ನವಗ್ರಹಗಳನ್ನು ಕೂಡ ಪೂಜಿಸಲಾಗುತ್ತದೆ. ಶಿರಡಿ ಸಾಯಿಬಾಬಾ, ಬ್ರಹ್ಮ, ನಾರಾಯಣ ಗುರು, ನಾಗ ,ಬೆಳ್ಳಿ ರಥಗಳು ಸೇರಿದಂತೆ ಅತ್ಯದ್ಭುತ ಶಿಲ್ಪಕಲಾ ಶೈಲಿಯಲ್ಲಿ ಭಕ್ತಾದಿಗಳಿಗೆ ಈ ದೇವಸ್ಥಾನ ಸ್ವಾಗತ ನೀಡುತ್ತದೆ.
ರಾಮಾಯಣದ ಕಥೆಗಳನ್ನು ಸಾರುವ ವಿವಿಧ ಶಿಲ್ಪಕಲೆಗಳ ಕೆತ್ತನೆಯ ಜೊತೆಗೆ ಜನರನ್ನು ಆಕರ್ಷಿಸುವ ಪುಣ್ಯಕ್ಷೇತ್ರವೇ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ. 2007ರಲ್ಲಿ ಈ ಕ್ಷೇತ್ರದ ಬ್ರಹ್ಮ ಪ್ರತಿಷ್ಠಾ ಕಲೋತ್ಸವ ಅದ್ದೂರಿಯಾಗಿ ನಡೆಸಲಾಯಿತು. ವರ್ಷಂಪ್ರತಿ ಶ್ರೀ ರಾಮ ನವಮಿಯಂದು ಶ್ರೀರಾಮನಾಮ ಸಪ್ತಾಹ, ಭಜನೆ, ದೀಪಾಲಂಕಾರದಿಂದ ನೋಡುವುದೇ ಕಣ್ಣಿಗೊಂದು ಹಬ್ಬ. ಕುಟುಂಬ ಸಮೇತರಾಗಿ ಭೇಟಿ ಕೊಡಬಹುದಾದ ಶ್ರೀಮಂತ ಶಿಲ್ಪಕಲೆಯ ಪವಿತ್ರ ಕ್ಷೇತ್ರವೇ ಕನ್ಯಾಡಿ ಶ್ರೀ ರಾಮ ಕ್ಷೇತ್ರ.
ಅಕ್ಷತಾ ಕೆ ವರ್ಕಾಡಿ