Mother’s Day 2022: ಸಹನೆಯ ಮತ್ತೊಂದು ಹೆಸರೇ ತಾಯಿ

ಯಾವ ಕಾಲಕ್ಕೂ ಹೋಲಿಸಿದರು ನಮ್ಮ ನಡೆ- ನುಡಿ ಸಂಸ್ಕೃತಿಯಲ್ಲಿ ಬದಲಾವಣೆಯನ್ನು ಕಾಣಬಹುದು ಆದರೆ ತಾಯಿಯ ಪ್ರೀತಿ ವಾತ್ಸಲ್ಯವನ್ನು ಕಿಂಚಿತ್ತು ಬದಲಾಗಲಿಲ್ಲ ಎಷ್ಟೇ ಕಲ್ಲು ಹೃದಯವಾದರೂ ಕರಗುವುದು ಮಾತೃ ಹೃದಯದ ಮುಂದೆ.

Mother’s Day 2022: ಸಹನೆಯ ಮತ್ತೊಂದು ಹೆಸರೇ ತಾಯಿ
ಸಾಂದರ್ಭಿಕ ಚಿತ್ರ
Edited By:

Updated on: May 08, 2022 | 6:27 PM

ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಸಂಸ್ಕೃತದ ಈ ಮಾತು ತಾಯಿ ಮತ್ತು ಭೂಮಿಯ ಸಹನೆಯನ್ನು ತೋರ್ಪಡಿಸುತ್ತದೆ. ಹೆಣ್ಣಿಗೆ ನೀಡುವ ಗೌರವ, ಅದರಲ್ಲಿಯೂ ತಾಯಿಗೆ ನೀಡುವ ಪೂಜನೀಯ ಸ್ಥಾನ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಉತ್ತುಂಗಕ್ಕೆರಿಸುತ್ತದೆ. ತಾಯಿಯ ವಿಶಾಲ ಹೃದಯ ಶ್ರೀಮಂತಿಕೆ ವಾತ್ಸಲ್ಯ ಹಾಗೂ ಭೂಮಿಯಂತಹ ಸಹನೆಗೆ ಯಾರು ಸರಿಸಾಟಿಯಾಗದು. ಪ್ರತಿ ಹೆಜ್ಜೆಯಲ್ಲೂ ಮಕ್ಕಳ ಒಳಿತನ್ನೇ ಬಯಸುವ ಆ ಜೀವ ನಿಜವಾಗಿಯೂ ದೈವ ಸ್ವರೂಪಿ. ಪ್ರತಿಯೊಬ್ಬರ ಬಾಳಿನಲ್ಲಿ ತಾಯಿಯೇ ಪ್ರಪಂಚ ನಂಬಿಕೆಗೆ ಮತ್ತೊಂದು ಹೆಸರೇ ಅಮ್ಮ. ಅವಳ ಕರುಣೆ, ತ್ಯಾಗ, ವಾತ್ಸಲ್ಯವನ್ನು ಹಾಡಿ ಹೊಗಳಲು ಪದಗಳೇ ಇನ್ನು ಹುಟ್ಟಿಲ್ಲ. ಪ್ರತಿಯೊಂದು ಕ್ರೂರ ಪ್ರಾಣಿಗಳಲ್ಲಿ ಮಾತೃವಾತ್ಸಲ್ಯ ಎಂಬುದು ಇದ್ದೇ ಇರುತ್ತದೆ. ಎಷ್ಟೇ ಕ್ರೂರ ತುಂಬಿದ ಮನಸ್ಸು ಕೂಡ ತನ್ನ ಮಕ್ಕಳ ಮುಂದೆ ಕ್ರೂರತ್ವ ವಾತ್ಸಲ್ಯದ ರೂಪದಲ್ಲಿ ಶರಣಾಗುತ್ತದೆ. ತಾಯಿಯ ಮಮಕಾರ ಪದಗಳಿಗೂ ಮೀರಿದ ಸಂವೇದನೆ, ಅವಳ ತ್ಯಾಗ ಹೃದಯಸ್ಪರ್ಶಿ. ಯಾವುದೇ ಫಲಾಪೇಕ್ಷೆಯನ್ನು ನಿರೀಕ್ಷಿಸದೆ ಮಕ್ಕಳಿಗಾಗಿ ಸದಾ ಹಸನ್ಮುಖಿಯಾಗಿರುವ ಕರುಣಾಮಯಿ ಜೀವ.

ಮಕ್ಕಳ ಮುಂದಿನ ಭವಿಷ್ಯಕ್ಕೆ ಒಂದೊಳ್ಳೆ ಆಕಾರ ಕೊಡುವಲ್ಲಿ ತಾಯಿಯ ಪಾತ್ರ ಅಮೋಘವಾದದ್ದು. ನವಮಾಸಗಳ ಕಾಲ ತನ್ನ ಗರ್ಭದಲ್ಲಿ ಜೋಪಾನ ಮಾಡಿ ಇನ್ನೊಂದು ಜೀವವನ್ನು ಭೂಮಿಗೆ ಪರಿಚಯಿಸಿದವಳು ಸಾವು-ಬದುಕಿನ ನಡುವೆ ಹೋರಾಡಿ ಮಗುವಿನ ಅಳು ಕೇಳಿದಾಗ ಸ್ವರ್ಗವೇ ಕೈಗೆ ಸಿಕ್ಕಷ್ಟು ಸಂಭ್ರಮ ಪಟ್ಟವಳೇ ತಾಯಿ. ಆ ಕೂಸಿನ ಮೊದಲ ಮಾತು ಅಮ್ಮ. ಅಮ್ಮ ಎಂಬ ಪದ ಕೇಳಲು ಕಿವಿಗೆ ಇಂಪು ಆ ಪದದಲ್ಲೇ ಏನೋ ಒಂದು ಮಮಕಾರ ಅಡಗಿರುತ್ತದೆ. ಬಿದ್ದಾಗ ಕೈಹಿಡಿದು ಮುನ್ನಡೆಸಿದವಳು, ತಪ್ಪನ್ನು ತಿದ್ದಿ ಸರಿದಾರಿಗೆ ಮುನ್ನಡೆಸಿದವಳು, ಪ್ರೀತಿಯನ್ನು ಬೇಯಿಸಿ ಕೈತುತ್ತು ನೀಡಿದವಳು, ಎಲ್ಲಾ ಕೆಲಸಗಳಲ್ಲೂ ಬೆನ್ನುಲುಬಾಗಿ ನಿಂತು ಪ್ರೋತ್ಸಾಹ ನೀಡಿದ ಸಕಾರ ಮೂರ್ತಿಯೇ ಅಮ್ಮ.

ಯಾವ ಕಾಲಕ್ಕೂ ಹೋಲಿಸಿದರು ನಮ್ಮ ನಡೆ- ನುಡಿ ಸಂಸ್ಕೃತಿಯಲ್ಲಿ ಬದಲಾವಣೆಯನ್ನು ಕಾಣಬಹುದು ಆದರೆ ತಾಯಿಯ ಪ್ರೀತಿ ವಾತ್ಸಲ್ಯವನ್ನು ಕಿಂಚಿತ್ತು ಬದಲಾಗಲಿಲ್ಲ ಎಷ್ಟೇ ಕಲ್ಲು ಹೃದಯವಾದರೂ ಕರಗುವುದು ಮಾತೃ ಹೃದಯದ ಮುಂದೆ. ತಾಯಿ ಒಂದು ಶಿಲ್ಪಿಯಂತೆ ಎಂದು ಹೇಳಿದರೆ ಬಹುಶಃ ತಪ್ಪಲ್ಲ ಶಿಲ್ಪಿ ಹೇಗೆ ಒರಟಾಗಿರುವ ಶಿಲೆಗೆ ಒಂದೊಳ್ಳೆ ಆಕಾರ ನೀಡುತ್ತಾನೋ ತಾಯಿಯೂ ಹಾಗೆ, ಮಕ್ಕಳ ತಪ್ಪುಗಳನ್ನು ಸರಿಪಡಿಸುತ್ತಾ ಒಂದೊಳ್ಳೆ ಆಕಾರವನ್ನು ಕೊಡಲು ಪ್ರಯತ್ನಸುತ್ತಾಳೆ. ಮನದಾಳದ ನೋವನ್ನು ಮನದಲ್ಲಿಯೇ ಕಲ್ಲಾಗಿಸಿ ಮಕ್ಕಳ ಖುಷಿಯಲ್ಲಿ ತಾನು ಸಂತಸ ಪಡುವವಳು.

ತಾಯಿಯ ಈ ಎಲ್ಲಾ ಕಾರ್ಯಕ್ಷಮತೆಗಾಗಿ ಅವಳಿಗೆ ಕೃತಜ್ಞತೆಗೆ ಮೀಸಲಿಟ್ಟ ದಿನವೇ ತಾಯಂದಿರ ದಿನ ಪ್ರತಿವರ್ಷ ವಿಭಿನ್ನ ದಿನಗಳಂದು ತಾಯಿಯಂದಿರ ದಿನ ಆಚರಿಸಲಾಗುತ್ತದೆ. ಈ ದಿನ ಅಸ್ತಿತ್ವಕ್ಕೆ ಬಂದದ್ದು 1914 ರಂದು ಅಂದಿನಿಂದ ಇಂದಿನವರೆಗೆ ವಿಶ್ವದಾದ್ಯಂತ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಆದರೆ ತಾಯಿಗೆ ಕೃತಜ್ಞತೆ ಹೇಳಲು ತಾಯಂದಿರ ದಿನವೇ ಆಗಬೇಕೆಂದಿಲ್ಲ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ನಾವು ಮಾಡುವ ಕೆಲಸ ಅವಳ ನಗುವಿಗೆ ಕಾರಣವಾದಾಗ ಅವಳಿಗೆ ಅಲ್ಪ ಪ್ರಮಾಣದಲ್ಲಾದರೂ ಕೃತಜ್ಞತೆ ತಿಳಿಸಿದಂತೆ. ಆಕೆಯ ಋಣ ನೂರು ಜನುಮ ದಲ್ಲಿಯೂ ತೀರಿಸಲಾಗದು ಎಂಬ ಮಾತಂತೂ ನಿಜಕ್ಕೂ ಸತ್ಯ. ಅಮ್ಮ ನಿನ್ನ ಈ ನಿಸ್ವಾರ್ಥ ಪ್ರೀತಿಗೆ ನನ್ನ ಅಂತರಾಳದ ಧನ್ಯವಾದಗಳು.

ಲೇಖನ: ಕವಿತಾ
ಆಳ್ವಾಸ್ ಕಾಲೇಜು ಮೂಡಬಿದ್ರಿ

ಇನ್ನಷ್ಟು ಬ್ಲಾಗ್​ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:25 pm, Sun, 8 May 22

TV9 Web

TV9 Kannada

Read More
Loading...
Unable to load recommendations.
Follow Us