ಧರ್ಮ ಇನ್ ರಿಯಲ್ ಲೈಫ್: ದೇವರ ಕೆಲಸದ ಜತೆಗೆ ಶ್ವಾನ ಪ್ರೀತಿ ಈ ಬಾಲಾಜಿ ಸಿಂಗ್ಗೆ
ಮುದ್ದು ಮುದ್ದಾದ ನಾಯಿಗಳನ್ನು ಸಾಕುವುದು ಹವ್ಯಾಸವಾದರೇ ಇಲ್ಲೊಬ್ಬರು ತಮ್ಮ ಜೀವನವನ್ನೇ ನಾಯಿಗಳಿಗಾಗಿ ಮುಡಿಪಾಗಿರಿಸಿದ್ದಾರೆ. ನಾನಾ ತಳಿಯ ನಾಯಿಗಳನ್ನು ತನ್ನ ಸ್ವಂತ ಮಕ್ಕಳಂತೆ ಸಾಕಿ ಸಲಹಿ, ಅವುಗಳ ನಿಧನದ ನಂತರ ಉತ್ತರಕ್ರಿಯೆ ಸೂತಕಗಳನ್ನು ಆಚರಿಸಿಕೊಂಡು ಬಂದಿದ್ದಾರೆ ಬಾಲಾಜಿ ಸಿಂಗ್. ಧರ್ಮಸ್ಥಳ ದೇವಳದ ಬಳಿ ಪುಟ್ಟದಾದ ಮನೆಯಲ್ಲಿ ಬಾಲಾಜಿಯವರ ವಾಸ. ಧರ್ಮಸ್ಥಳ ಕ್ಷೇತ್ರದಲ್ಲಿ ದೇವರ ಕೆಲಸವನ್ನು ಮಾಡುತ್ತಾರೆ. ಎಳವೆಯಿಂದಲೇ ಶ್ವಾನಗಳ ಮೇಲೆ ಅಪಾರ ಪ್ರೀತಿ. ಇವರ ಶ್ವಾನ ಪ್ರೀತಿಯನ್ನು ಕಂಡು ರಾಜ್ಯದ ಹಲವಾರು ಕಡೆಗಳಿಂದ ಜಾತಿ ತಳಿಯ ನಾಯಿಗಳನ್ನು ಸಾಕಲು ತಂದುಕೊಡುತ್ತಿದ್ದರು. ಅವುಗಳ ಲಾಲನೆ ಪಾಲನೆಯಲ್ಲೇ ದಿನ ಕಳೆಯುತ್ತಾರೆ.
ಮುದ್ದು ಮುದ್ದಾದ ನಾಯಿಗಳನ್ನು ಸಾಕುವುದು ಹವ್ಯಾಸವಾದರೇ ಇಲ್ಲೊಬ್ಬರು ತಮ್ಮ ಜೀವನವನ್ನೇ ನಾಯಿಗಳಿಗಾಗಿ ಮುಡಿಪಾಗಿರಿಸಿದ್ದಾರೆ. ನಾನಾ ತಳಿಯ ನಾಯಿಗಳನ್ನು ತನ್ನ ಸ್ವಂತ ಮಕ್ಕಳಂತೆ ಸಾಕಿ ಸಲಹಿ, ಅವುಗಳ ನಿಧನದ ನಂತರ ಉತ್ತರಕ್ರಿಯೆ ಸೂತಕಗಳನ್ನು ಆಚರಿಸಿಕೊಂಡು ಬಂದಿದ್ದಾರೆ ಬಾಲಾಜಿ ಸಿಂಗ್. ಧರ್ಮಸ್ಥಳ ದೇವಳದ ಬಳಿ ಪುಟ್ಟದಾದ ಮನೆಯಲ್ಲಿ ಬಾಲಾಜಿಯವರ ವಾಸ. ಧರ್ಮಸ್ಥಳ ಕ್ಷೇತ್ರದಲ್ಲಿ ದೇವರ ಕೆಲಸವನ್ನು ಮಾಡುತ್ತಾರೆ. ಎಳವೆಯಿಂದಲೇ ಶ್ವಾನಗಳ ಮೇಲೆ ಅಪಾರ ಪ್ರೀತಿ. ಇವರ ಶ್ವಾನ ಪ್ರೀತಿಯನ್ನು ಕಂಡು ರಾಜ್ಯದ ಹಲವಾರು ಕಡೆಗಳಿಂದ ಜಾತಿ ತಳಿಯ ನಾಯಿಗಳನ್ನು ಸಾಕಲು ತಂದುಕೊಡುತ್ತಿದ್ದರು. ಅವುಗಳ ಲಾಲನೆ ಪಾಲನೆಯಲ್ಲೇ ದಿನ ಕಳೆಯುತ್ತಾರೆ. ಲ್ಯಾಬ್ರಾಡಾರ್, ಆಲ್ಸೇಶನ್, ಜೆರ್ಮನ್ ಶೆಫರ್ಡ್ ಮುಂತಾದ ನಾಯಿಗಳನ್ನು ಸಾಕಿದ್ದಾರೆ. ಇವರ ಶ್ವಾನಪ್ರೀತಿಯನ್ನು ಕಣ್ತುಂಬಿಕೊಳ್ಳಲ್ಲು ಶಾಲಾ-ಕಾಲೇಜು ವಿದ್ಯಾರ್ಥಿಗಳು, ದೂರದೂರಿಂದ ಅನೇಕರು ಭೇಟಿ ನೀಡುತ್ತಾರೆ.
ವಯೋಸಹಜವಾಗಿ ಅವುಗಳು ಮರಣಿಸಿದಾಗ ಅವುಗಳ ಅಂತ್ಯಕ್ರಿಯೆ, ಉತ್ತರಕ್ರಿಯೆ , ಸೂತಕ ಆಚರಿಸುತ್ತಾರೆ. ತಮ್ಮ ನೆಚ್ಚಿನ ನಾಯಿಗಳ ನೆನಪಿಗಾಗಿ ಸಮಾಧಿ ನಿರ್ಮಿಸಿ ದಿನವೂ ಅಗರಬತ್ತಿಗಳನ್ನು ಹಚ್ಚುತ್ತಾರೆ. ಫಲ ನೀಡುವ ಮರಗಳನ್ನೂ ಕೂಡ ಅದರ ಸ್ಮರಣಾರ್ಥ ನೆಡುತ್ತಾರೆ. ಈಗಲೂ ತಮ್ಮ ಪ್ರೀತಿಯ ನಾಯಿಗಳ ನೆನಪುಗಳನ್ನು ಮೆಲುಕು ಹಾಕುವಾಗ ಅವರ ಕಣ್ತುಂಬಿ ಬರುತ್ತದೆ.
ನಾಯಿಗಳಿಗೆ ಪ್ರೀತಿಯಿಂದ ಉಣಿಸುತ್ತಾರೆ, ಮನುಷ್ಯರಂತೆ ಅವುಗಳನ್ನು ಸಂಬೋಧಿಸುತ್ತಾರೆ.. ಆಟೋಟಗಳನ್ನು ಕಲಿಸುತ್ತಾರೆ. ಯಾವುದಾದರು ಅನಾರೋಗ್ಯದಿಂದ ಬಳಲುತ್ತಿರುವ ಬೀದಿನಾಯಿಗಳು ಬಂದರೆ ಯಾವುದೇ ಮುಜುಗರವಿಲ್ಲದೆ ಅವುಗಳನ್ನು ಸ್ವಚ್ಛ ಮಾಡಿ ಚಿಕಿತ್ಸೆ ನೀಡುತ್ತಾರೆ.. ಪ್ರತಿದಿನ ವಿಹಾರಕ್ಕೆ ನಾಯಿಗಳನ್ನು ಕರೆದುಕೊಂಡು ಹೋಗಿ ಬರುವಾಗ ಐಸ್ಕ್ರೀಮ್ ಕೊಡಿಸುತ್ತಾರೆ. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳನ್ನು ನಾಯಿಗಳಿಗೆ ಕಲಿಸುತ್ತಾರೆ. ಯಾವುದೇ ಬೀದಿ ನಾಯಿಗಳು ಬಂದರೂ ಅವುಗಳ ಹೊಟ್ಟೆ ತುಂಬಿಸಿ ಮುದ್ದಾಡುತ್ತಾರೆ. ಅದೆಷ್ಟೋ ದಿನಗಳು ನಾಯಿಗಳಿಗೆ ಅನ್ನ ಹಾಕಿ ಸ್ವತಃ ತಾವೇ ಉಪವಾಸ ಇದ್ದ ದಿನಗಳೂ ಇವೆ.
ಬಾಲಾಜಿಯವರು ಬಿ.ಎ ವಿದ್ಯಾಭ್ಯಾಸ ಪೂರೈಸಿದ ನಂತರ ತಂದೆ ತಾಯಿಯ ಆರೈಕೆ ಮಾಡಿಕೊಂಡಿದ್ದರು..ಅವರ ಅಗಲಿಕೆಯ ನಂತರ ಸಣ್ಣ ಉದ್ಯೋಗವೊಂದರಲ್ಲಿ ಬಂದ ಆದಾಯದಲ್ಲಿ ತಮ್ಮ ಹಾಗು ನಾಯಿಗಳ ಖರ್ಚನ್ನು ನಿರ್ವಹಿಸುತ್ತಾರೆ. ತಿಂಗಳಿಗೆ ಅಂದಾಜು ಮೂರು ಸಾವಿರ ರೂಪಾಯಿಗಳು ನಾಯಿಗಳ ಪೋಷಣೆಗಳಿಗೆ ಬೇಕಾಗುತ್ತದೆ.. ಬಾಲಾಜಿಯವರು ಸಂಸಾರ ಬಂಧನಕ್ಕೆ ಸಿಲುಕದೇ ಒಬ್ಬರೇ ತಮ್ಮ ನಿವಾಸದಲ್ಲಿ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯಕ್ಷಗಾನದ ಹಿಮ್ಮೇಳದ ಮದ್ದಳೆಯ ನಾದ, ಸ್ವರ, ತಾಳದ ಹಿನ್ನೆಲೆ ಇಲ್ಲಿದೆ
ಇವರ ನಾಯಿಗಳು ಕೂಡಾ ಹಾಗೆ ಬಾಲಾಜಿಯವರ ಒಡನಾಡಿಯಾಗಿ ಸಣ್ಣ ಅನಾರೋಗ್ಯವೇನಾದರೂ ಆದರೆ ಅವುಗಳು ಅನ್ನ ನೀರು ಬಿಟ್ಟು ಇವರ ಜೊತೆಯಲ್ಲೇ ಇದ್ದು ಕಾಯುತ್ತವೆ. ನಾಯಿಗಳು ಮಕ್ಕಳಂತೆ ಮುಗ್ಧ ಜೀವಿಗಳು. ಅವುಗಳನ್ನು ಪ್ರೀತಿಯಿಂದ ಸಾಕಿ ಸಲಹಿದಾಗ ಅವುಗಳೂ ನಮ್ಮನ್ನು ಪ್ರೀತಿಸುತ್ತವೆ.. ಮನುಷ್ಯರಿಗಿಂತ ಹೆಚ್ಚು ಮಾನವೀಯತೆ ನಿಯತ್ತು ನಾಯಿಗಳಿಗಿವೆ ಎನ್ನುತ್ತಾರೆ ಬಾಲಾಜಿಯವರು.
ಶ್ವಾನಪ್ರೀತಿಯ ಹೊರತಾಗಿ ಬಾಲಾಜಿಯವರು ಹೆಂಗೆಳೆಯರಿಗೆ ಸವಾಲೆನ್ನುವಂತೆ ಚಿತ್ತಾಕರ್ಷಕ ರಂಗೋಲಿ ಬಿಡಿಸುತ್ತಾರೆ, ಹಬ್ಬ ಹರಿದಿನಗಳಲ್ಲಿ ಮನೆಯನ್ನು ಸಿಂಗರಿಸುತ್ತಾರೆ. ಅದರಲ್ಲೂ ದೀಪಾವಳಿಯಿಂದ ಲಕ್ಷದೀಪೋತ್ಸವದ ವರೆಗೆ ಒಂದು ತಿಂಗಳ ಕಾಲ ಸುಮಾರು 200-250 ಹಣತೆಗಳನ್ನು ಪ್ರತಿನಿತ್ಯ ಮನೆಯ ಮುಂಬಾಗದಲ್ಲಿ ಜೋಡಿಸಿ ಬೆಳಗುತ್ತಾರೆ. ವರ್ಷದಲ್ಲಿ ಅನೇಕ ಬಾರಿ ಭಾರತದ ಪುಣ್ಯಧಾಮಗಳಿಗೆ ಯಾತ್ರೆ ಹೋಗುತ್ತಾರೆ.
ಇಷ್ಟು ಮಾತ್ರವಲ್ಲದೇ ಯಾವುದೇ ಸಾವು ಸಂಭವಿಸಿದಾಗ ಮೇಲು- ಕೀಳು , ಜಾತಿ ಭೇದಗಳಿಲ್ಲದೆ ಅವರ ಮನೆಗಳಿಗೆ ತೆರಳಿ ಅಂತಿಮ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ. ತಮ್ಮ ಜೀವನವನ್ನೇ ತಂದೆ ತಾಯಿಯ ಆರೈಕೆ , ಮೂಕಪ್ರಾಣಿಗಳನ್ನು ಸಲಹುವುದು ಹಾಗು ಪರೋಪಕಾರಕ್ಕಾಗಿಯೇ ಮುಡಿಪಾಗಿರಿಸಿದ್ದಾರೆ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಹಾಗಾಗಿಯೇ ನಾಯಿ ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಪ್ರೀತಿಯ ಶ್ವಾನ ಪ್ರೀತಿಗೆ ಸಾಕ್ಷಿಯಾಗಿದ್ದಾರೆ ಬಾಲಾಜಿ ಸಿಂಗ್.
ವೈಷ್ಣವೀ.ಜೆ.ರಾವ್, ಉಜಿರೆ