ನಗುಮೊಗದ ಕಣ್ಣುಗಳಲ್ಲಿ ಆತ್ಮವಿಶ್ವಾಸದ ಛಾಯೆ, ಗೌರವ ಹೆಚ್ಚಿಸುವ ಶುಭ್ರ ಉಡುಗೆಯ ದಿಟ್ಟ ಮಹಿಳೆ ನಿರ್ಮಲಾ ಸೀತಾರಾಮನ್ (Nirmala Sitharaman). ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಬಾರಿ ಕೇಳಿರುವ ಹೆಸರು, ಅತಿಹೆಚ್ಚು ಬಾರಿ ನೋಡಿರುವ ಮುಖ ನಿರ್ಮಲಾ ಸೀತಾರಾಮನ್ ಅವರದು. 2014ರಿಂದ ರಾಜ್ಯಸಭಾ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರು ಎಂಬ ಶ್ರೇಯಕ್ಕೆ ಪಾತ್ರರಾದವರು. ಇಂದಿರಾ ಗಾಂಧಿ ನಂತರ ರಕ್ಷಣಾ ಇಲಾಖೆ ನಿರ್ವಹಿಸಿದ ಮೊದಲ ಮಹಿಳೆಯೂ ಹೌದು. ಫೋರ್ಬ್ಸ್ನ 2020ರ ಜಗತ್ತಿನ ನೂರು ಪ್ರಭಾವಿ ಮಹಿಳೆಯರಲ್ಲಿ 41ನೇ ಸ್ಥಾನ ಪಡೆದಿದ್ದರು. ಇಂದು (ಫೆ.1) ಸಂಸತ್ತಿನಲ್ಲಿ ಅವರು ದೇಶದ ಅಯವ್ಯಯ (Union Budget 2022) ಮಂಡಿಸಲಿದ್ದಾರೆ.
ತಮಿಳುನಾಡಿನ ಮಧುರೈಯ ನಿರ್ಮಲಾ ಸೀತಾರಾಮನ್ ತಿರುಚಿನಾಪಳ್ಳಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ವಿಶೇಷ ವಿದ್ಯಾರ್ಥಿ ವೇತನ ಪಡೆದರು. ನಂತರ, 1991ರಲ್ಲಿ ಅವರ ಕುಟುಂಬ ಲಂಡನ್ನಿಂದ ಮರಳಿ ಭಾರತಕ್ಕೆ ಮರಳಿತು. ಬಿಜೆಪಿಗೆ ಪದಾರ್ಪಣೆ ಇಸವಿ 2006. ನಿರ್ಮಲಾ ಸೀತಾರಾಮನ್ ರಾಜಕೀಯಕ್ಕೆ ಬಲಗಾಲಿಟ್ಟ ವರ್ಷ. ಬಿಜೆಪಿ ಸೇರಿದ ಅವರು 2008ರಲ್ಲಿ ಪಕ್ಷದ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ನೇಮಕವಾದರು. ಜತೆಗೆ, 2010ರಲ್ಲಿ ವರ್ಷ ಅವರನ್ನು ಮಾಧ್ಯಮ ವಕ್ತಾರರನ್ನಾಗಿಯೂ ಬಿಜೆಪಿ ನೇಮಿಸಿತು.
2014ರಲ್ಲಿ ರಚನೆಯಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಮಲಾ ಸೀತಾರಾಮನ್ ಅವರನ್ನು ಇನ್ನಷ್ಟು ಉನ್ನತ ಸ್ಥಾನಕ್ಕೇರಿಸಿತು. ವಾಣಿಜ್ಯ ಮತ್ತು ಉದ್ಯಮಗಳ ಇಲಾಖೆಯ ರಾಜ್ಯ ಖಾತೆಯ (ಸ್ವತಂತ್ರ ನಿರ್ವಹಣೆ) ಸಚಿವರಾದರು. 2017ರಲ್ಲಿ ದೇಶದ ರಕ್ಷಣೆಯ ಜವಾಬ್ದಾರಿಯೂ ಲಭಿಸಿತು. ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿ, 2019ರಲ್ಲಿ ಹಣಕಾಸು ಸಚಿವರಾದರು. ಅದೇ ವರ್ಷ ಮೊದಲ ಬಾರಿಗೆ ದೇಶದ ಬಜೆಟ್ ಮಂಡಿಸಿದರು. ಕೇಂದ್ರ ಹಣಕಾಸು ಸಚಿವೆಯಾಗಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯೆ.
ಸಲ್ಸ್ ಪರ್ಸನ್ ಆಗಿದ್ದರು ನಿರ್ಮಲಾ
ಸೇಲ್ಸ್ ಪರ್ಸನ್ ಆಗಿಯೂ ಕೆಲಸ ಮಾಡಿದ್ದರು! ಲಂಡನ್ನಲ್ಲಿ ವಾಸಿಸುವಾಗ ಅಲ್ಲಿನ ರೀಜೆಂಟ್ ಸ್ಟ್ರೀಟ್ನಲ್ಲಿ ಸೇಲ್ಸ್ ಪರ್ಸನ್ ಆಗಿಯೂ ಕೆಲಸ ಮಾಡಿದ್ದರು ನಿರ್ಮಲಾ ಸೀತಾರಾಮನ್. ಕೃಷಿ ಎಂಜಿನಿಯರ್ಗಳ ಸಮಿತಿಯ ಅರ್ಥಶಾಸ್ತ್ರಜ್ಞರಿಗೆ ಸಹಾಯಕಿಯಾಗಿ, ಬಿಬಿಸಿ ವರ್ಲ್ಡ್ ಸರ್ವೀಸ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಹಿರಿಯ ಮ್ಯಾನೇಜರ್ ಆಗಿ, 2017ರಲ್ಲಿ ರಾಷ್ಟ್ರೀಯ ಮಹಿಳಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ನಮ್ಮ ಹಣಕಾಸು ಸಚಿವರು.
ನಿರ್ಮಲಾ ಸೀತಾರಾಮನ್ ದೆಹಲಿಯ ಜವಾಹರ್ಲಾಲ್ ನೆಹರು ವಿವಿಯಲ್ಲಿ ಅಧ್ಯಯನ ನಡೆಸುವಾಗ ಪರಕಾಲ ಪ್ರಭಾಕರ್ ಅವರನ್ನು ಭೇಟಿಯಾದರು. 1986ರಲ್ಲಿ ಬಿಜೆಪಿ ಪರ ಒಲವು ಬೆಳೆಸಿಕೊಂಡಿದ್ದ ನಿರ್ಮಲಾ ಸೀತಾರಾಮನ್ಗೂ ಪರಕಾಲ ಪ್ರಭಾಕರ್ ಅವರಿಗೂ ಒಲವು ಬೆಳೆದು ಮದುವೆಯಾಯಿತು. ಹೆಣ್ಣು ಮಗುವಿನ ತಾಯಿಯೂ ಆದರು. ಮಗಳ ಹೆಸರು ಪರಕಾಲ ವಾಙ್ಮಯಿ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರಿಗೆ, ಆಂಧ್ರಪ್ರದೇಶ ಬಿಜೆಪಿ ಘಟಕಗಳಿಗೆ ಸಂವಹನ ಸಲಹೆಗಾರರಾಗಿಯೂ ನಿರ್ಮಲಾ ಪತಿ ಪರಕಾಲ ಪ್ರಭಾಕರ್ ಸೇವೆ ಸಲ್ಲಿಸಿದ್ದರು. ಆಂಧ್ರಪ್ರದೇಶದ ಟಿವಿ ಮಾಧ್ಯಮಗಳಲ್ಲಿ ಚರ್ಚೆಗಳನ್ನು ನಡೆಸಿಕೊಡುತ್ತಿದ್ದರು.
ದಕ್ಷಿಣ ಭಾರತದ ಮಹಿಳೆಯ ಕೈಲಿದೆ ದೇಶದ ಆರ್ಥಿಕತೆ
ಈ ವರ್ಷ ಎರಡನೇ ಬಾರಿಗೆ ಹಣಕಾಸು ಸಚಿವರಾಗಿ ದೇಶದ ಆಯವ್ಯಯ ಮಂಡಿಸುತ್ತಿದ್ದಾರೆ ನಿರ್ಮಲಾ ಸೀತಾರಾಮನ್. ಕರ್ನಾಟಕ ಸಂಗೀತದ ಅಭಿಮಾನಿಯಾಗಿರುವ ಅವರು ದಿನಕ್ಕೆ ಮೂರು ಗಂಟೆಯನ್ನು ಓದುವಿಕೆಗೆ ಮೀಸಲಿಡುತ್ತಾರಂತೆ. ಜತೆಗೆ, ಅಡುಗೆ, ಚಾರಣ, ಪ್ರವಾಸಗಳಲ್ಲೂ ಅತೀವ ಆಸಕ್ತಿ ಹೊಂದಿದ್ದಾರೆ. ಹಿಂದಿಗಿಂತ ಇಂಗ್ಲೀಷಿನಲ್ಲೇ ಹೆಚ್ಚು ಪರಿಣಿತಿ ಹೊಂದಿರುವ ಅವರು ಕೇಂದ್ರ ಸರ್ಕಾರದಲ್ಲಿ ದಕ್ಷಿಣ ಭಾರತದ ಅತಿ ಪ್ರಮುಖ ಪ್ರತಿನಿಧಿ. ಇಡೀ ದೇಶದ ಆರ್ಥಿಕ ಸ್ಥಿತಿಗತಿ ದಕ್ಷಿಣ ಭಾರತೀಯ ಮಹಿಳೆಯ ಕೈಲಿದೆ.
ಬರಹ: ಗುರುಗಣೇಶ್ ಭಟ್ ಡಬ್ಗುಳಿ
ಇದನ್ನೂ ಓದಿ: Budget 2022: ಕೃಷಿ ಸಾಲ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ರೈಲ್ವೆಗೆ ಹೆಚ್ಚಿನ ಅನುದಾನ; ಬಜೆಟ್ ಕುರಿತ ಪ್ರಮುಖ ಬೇಡಿಕೆಗಳಿವು