Budget 2023: ವಾಯುಮಾರ್ಗದ ಸಂಪರ್ಕಕ್ಕೆ ಆದ್ಯತೆ; ಭಾರತದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ

|

Updated on: Feb 01, 2023 | 1:37 PM

Union Budget Highlights: ಪ್ರಾದೇಶಿಕ ವಾಯು ಸಂಪರ್ಕವನ್ನು ಸುಧಾರಿಸಲು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು, ವಾಟರ್ ಏರೋಡ್ರೋಮ್‌ಗಳು, ಸುಧಾರಿತ ಲ್ಯಾಂಡಿಂಗ್ ವಲಯಗಳನ್ನು ಪುನರುಜ್ಜೀವನಗೊಳಿಸುವುದಾಗಿ ಘೋಷಿಸಲಾಗಿದೆ.

Budget 2023: ವಾಯುಮಾರ್ಗದ ಸಂಪರ್ಕಕ್ಕೆ ಆದ್ಯತೆ; ಭಾರತದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿರುವ ಕೇಂದ್ರ ಬಜೆಟ್​ನಲ್ಲಿ (Union Budget) ಭಾರತದ ವಿವಿಧ ಭಾಗಗಳಲ್ಲಿ ಸಂಪರ್ಕ ಹೆಚ್ಚಿಸಲು 50 ಹೊಸ ವಿಮಾನ ನಿಲ್ದಾಣಗಳನ್ನು ಘೋಷಿಸಲಾಗಿದೆ. ಪ್ರಾದೇಶಿಕ ವಾಯು ಸಂಪರ್ಕವನ್ನು ಸುಧಾರಿಸಲು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು, ವಾಟರ್ ಏರೋಡ್ರೋಮ್‌ಗಳು ಮತ್ತು ಸುಧಾರಿತ ಲ್ಯಾಂಡಿಂಗ್ ವಲಯಗಳನ್ನು ಪುನರುಜ್ಜೀವನಗೊಳಿಸುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯವು ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸಲು ಮತ್ತು ಜನಸಾಮಾನ್ಯರಿಗೆ ಕೈಗೆಟುಕುವ ವಿಮಾನ ಪ್ರಯಾಣವನ್ನು ಕಲ್ಪಿಸಲು ಪ್ರಾದೇಶಿಕ ಸಂಪರ್ಕ ಯೋಜನೆಯನ್ನು 2016ರ ಅಕ್ಟೋಬರ್ 21ರಂದು ಪ್ರಾರಂಭಿಸಿದೆ. 2022ರ ನವೆಂಬರ್ 30ರಲ್ಲಿ UDAN ಅಡಿಯಲ್ಲಿ 4 ಸುತ್ತಿನ ಬಿಡ್ಡಿಂಗ್ ನಂತರ, 453 ಮಾರ್ಗಗಳು ಪ್ರಾರಂಭವಾಗಿವೆ. 2 ವಾಟರ್ ಏರೋಡ್ರೋಮ್ ಮತ್ತು 9 ಹೆಲಿಪೋರ್ಟ್‌ಗಳು ಸೇರಿದಂತೆ 70 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ.

2.15 ಲಕ್ಷಕ್ಕೂ ಹೆಚ್ಚು UDAN ವಿಮಾನಗಳು ಕಾರ್ಯನಿರ್ವಹಿಸಿವೆ ಮತ್ತು 1.1 ಕೋಟಿ ಪ್ರಯಾಣಿಕರು UDAN ವಿಮಾನಗಳಲ್ಲಿ ಇದುವರೆಗೆ ಪ್ರಯೋಜನಗಳನ್ನು ಪಡೆದಿದ್ದಾರೆ. ಈ ಯೋಜನೆಯು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೆ ಕೈಗೆಟುಕುವ ದರದಲ್ಲಿ ವಿಮಾನ ಸಂಪರ್ಕವನ್ನು ಒದಗಿಸಲು ಸಮರ್ಥವಾಗಿದೆ.

ಇದನ್ನೂ ಓದಿ: Union Budget 2023: ಬಜೆಟ್​ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲು

ರಾಜ್ಯ ಸರ್ಕಾರಗಳು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಿವಿಲ್ ಎನ್‌ಕ್ಲೇವ್‌ಗಳ ಅಸ್ತಿತ್ವದಲ್ಲಿರುವ ಸೇವೆಯಿಲ್ಲದ / ಕಡಿಮೆ ಸೇವೆ ಸಲ್ಲಿಸದ ವಿಮಾನ ನಿಲ್ದಾಣಗಳು / ಏರ್‌ಸ್ಟ್ರಿಪ್‌ಗಳ ಪುನರುಜ್ಜೀವನಕ್ಕಾಗಿ 4,500 ಕೋಟಿ ರೂ.ಗಳ ಬಜೆಟ್ ಅನ್ನು ಈಗಾಗಲೇ ಮೀಸಲಿಡಲಾಗಿದೆ.

ಭಾರತದ ಎಲ್ಲ ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ತೆರೆದ ಚರಂಡಿಗಳು ಹಾಗೂ ಮಲಗುಂಡಿಗಳಿಂದ  ಮುಕ್ತವಾಗಬೇಕು. ಮ್ಯಾನ್​ಹೋಲ್ ಮತ್ತು ಮಿಷನ್ ಹೋಲ್​ ಮಾದರಿಗೆ ಬರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಹೆಚ್ಚಿನ ಮಾಲಿನ್ಯ ಉಂಟು ಮಾಡುವ ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು. ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್​ಗಳ ಬದಲಾವಣೆಗೆ ಕೇಂದ್ರ ಸರ್ಕಾರ ನೆರವು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Budget 2023 Live: ಬಜೆಟ್ ಮಂಡನೆಗೆ ಮೊದಲೇ ಷೇರು ಮಾರುಕಟ್ಟೆಯಲ್ಲಿ ಆಶಾದಾಯಕ ಬೆಳವಣಿಗೆ, ಬಲಗೊಂಡ ರೂಪಾಯಿ

ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳವಾಗಿದೆ. ಸಚಿವರು ಈ ಘೋಷಣೆ ಪ್ರಕಟಿಸುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಸಂಭ್ರಮ ಮನೆಮಾಡಿತು. ನಿಫ್ಟಿ ದಿನದ ಗರಿಷ್ಠ ಮಟ್ಟ ತಲುಪಿತು.

ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 6,000 ಕೋಟಿ ರೂ. ಮೊತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ