Union Budget 2023: ಬಜೆಟ್ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲು
Budget 2023 Highlights: ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದ್ದು, 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು 5ನೇ ಬಜೆಟ್ ಮಂಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ (Karnataka Assembly Elections) ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬಜೆಟ್ನಲ್ಲಿ ಏನೆಲ್ಲ ಕೊಡುಗೆ ಸಿಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಫೆ. 17ರಂದು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ (Karnataka Budget 2023) ಮಂಡನೆ ಮಾಡಲಿದ್ದು, ಅದಕ್ಕೂ ಮೊದಲೇ ಮೋದಿ ಸರ್ಕಾರ ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ಘೋಷಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ (Bhadra Upper Irrigation Project) 5300 ಕೋಟಿ ರೂ. ಹಣವನ್ನು ಮೀಸಲಿಟ್ಟಿರುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದ್ದು, 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಈ ಕುರಿತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿತ್ತು. ಇದೀಗ ಈ ಘೋಷಣೆಯಿಂದ ಮಧ್ಯ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
Finance Minister @nsitharaman Ji is presenting the Union Budget in Parliament. Do watch. https://t.co/6Cpi03g6vJ
— Narendra Modi (@narendramodi) February 1, 2023
2022ರ ಏಪ್ರಿಲ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಲ್ಮಟ್ಟದ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ಒಮ್ಮೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ 16,000 ಕೋಟಿ ರೂ. ಈ ಯೋಜನೆಗೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Union Budget 2023: ಬಜೆಟ್ ಕಾಪಿಯನ್ನು ಕನ್ನಡದಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಭದ್ರಾ ಮೇಲ್ದಂಡೆ ಯೋಜನೆಯು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರ್‌ಗೆ ಸುಮಾರು 19 ಟಿಎಂಸಿ ಅಡಿ ನೀರು ನೀರಾವರಿಯನ್ನು ಒದಗಿಸುತ್ತದೆ. ವಾಣಿ ವಿಲಾಸ ಜಲಾಶಯದ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ 10.8 ಟಿಎಂಸಿ ಅಡಿ ನೀರನ್ನು ಬಳಸಿ 350 ಕ್ಕೂ ಹೆಚ್ಚು ಟ್ಯಾಂಕ್‌ಗಳನ್ನು ತುಂಬಿಸಲು ಈ ಯೋಜನೆಯು ಯೋಜಿಸಿದೆ.
ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ @nsitharaman ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು.
— Basavaraj S Bommai (@BSBommai) February 1, 2023
ಈ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಮತಗಳೂ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಪ್ರಾತಿನಿಧ್ಯ ನೀಡಿದೆ.
ಹಾಗೇ, ಎಲ್ಲ ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲವನ್ನು ಮುಂದುವರೆಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ. 30ರಷ್ಟು ಹೆಚ್ಚಳವಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾಗ ಸಂಸತ್ನಲ್ಲಿ ಮೋದಿ ಮೋದಿ ಘೋಷಣೆ ಕೇಳಿಬಂದಿತು.
ಇದನ್ನೂ ಓದಿ: Budget 2023 Live: ಬಜೆಟ್ ಮಂಡನೆಗೆ ಮೊದಲೇ ಷೇರು ಮಾರುಕಟ್ಟೆಯಲ್ಲಿ ಆಶಾದಾಯಕ ಬೆಳವಣಿಗೆ, ಬಲಗೊಂಡ ರೂಪಾಯಿ
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 6,000 ಕೋಟಿ ರೂ. ಮೊತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಪ್ರಗತಿಗೆ ಪೂರಕವಾಗಿ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸುವುದಾಗಿ ಸಚಿವರು ಘೋಷಿಸಿದರು. ನಿರ್ಮಲಾ ಸೀತಾರಾಮನ್ ಅವರ ಬಹುನಿರೀಕ್ಷಿತ ಬಜೆಟ್ ಭಾಷಣವು ಅರಂಭದಲ್ಲಿಯೇ ಗ್ರಾಮೀಣ ಭಾರತದ ಬಗ್ಗೆ ಪ್ರಸ್ತಾಪಿಸಿತು.
ಇನ್ನಷ್ಟು ಬಜೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Wed, 1 February 23