ನವದೆಹಲಿ, ಜನವರಿ 20: ಭಾರತದ ಆರ್ಥಿಕತೆಯ ಬೆಳವಣಿಗೆ ಇತ್ತೀಚೆಗೆ ಮಂದಗೊಂಡಿದ್ದರೂ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಅತಿ ಹೆಚ್ಚು ವೇಗದಲ್ಲಿ ಬೆಳೆಯುತ್ತಿರುವುದು ಭಾರತವೇ. ಈ ದೇಶದ ಯುವಶಕ್ತಿಯೇ ಪ್ರಮುಖ ಬಂಡವಾಳವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದೆ. ಭಾರತಕ್ಕೆ ಅತ್ಯಂತ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅನುಕೂಲಕರ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಳ್ಳುವ ದೊಡ್ಡ ಸವಾಲು ಕೂಡ ಭಾರತದ ಮುಂದಿದೆ. ಇದೇ ಅನುಕೂಲಕರ ಪರಿಸ್ಥಿತಿಯು ದೊಡ್ಡ ಅನನುಕೂಲಕರ ಪರಿಸ್ಥಿತಿಗೆ ಎಡೆ ಮಾಡಿಕೊಡಲೂ ಬಹುದು.
ಬೆಳೆಯುತ್ತಿರುವ ಆರ್ಥಿಕತೆಗೆ ಹೆಚ್ಚಿನ ಯುವಶಕ್ತಿ ಅಗತ್ಯ. ಹಾಗೆಯೇ ಹೆಚ್ಚಿನ ಸಂಖ್ಯೆಯ ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕಾದರೆ ಆರ್ಥಿಕತೆ ಉತ್ತಮ ವೇಗದಲ್ಲಿ ಬೆಳವಣಿಗೆ ಹೊಂದಬೇಕು. ಎರಡೂ ಕೂಡ ಒಂದಕ್ಕೊಂದು ಪೂರಕವಾಗಿರುವ ಸಂಗತಿ. ಇದರಲ್ಲಿ ಒಂದು ಕಡಿಮೆ ಆದರೂ ಮತ್ತೊಂದೂ ಕೂಡ ನಶಿಸುತ್ತದೆ. ಹೀಗಾಗಿ, ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವ ದೊಡ್ಡ ಸವಾಲು ಸರ್ಕಾರದ ಮುಂದಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉತ್ಸಾಹ ಹೆಚ್ಚಿಸಿದ ಕೇಂದ್ರ ಯೋಜನೆಗಳು; 2025ರ ಬಜೆಟ್ನಲ್ಲಿ ಮತ್ತಷ್ಟು ಪುಷ್ಟಿ ಸಾಧ್ಯತೆ
ಸರ್ಕಾರವು ಉದ್ಯೋಗಸೃಷ್ಟಿಗೆ ಬಹಳಷ್ಟು ಕಸರತ್ತು ನಡೆಸುತ್ತಿದೆ. ಸ್ಟಾರ್ಟಪ್ಗಳ ಸಂಖ್ಯೆ ಅದ್ವಿತೀಯವಾಗಿ ಏರುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸರ್ಕಾರ ಸಕಲ ರೀತಿಯಲ್ಲಿ ಉತ್ತೇಜನ ನೀಡುತ್ತಿದೆ. ಆದರೂ ಕೂಡ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆನೋವು ಸೃಷ್ಟಿಸುವುದು ಮುಂದುವರಿದಿದೆ. ವೇತನದಲ್ಲಿ ಇಳಿಮುಖ, ಭಾರತೀಯ ಕಾರ್ಪೊರೇಟ್ ಸಂಸ್ಥೆಗಳ ವಿಸ್ತರಣೆಯಲ್ಲಿ ಚುರುಕತನ ಕಾಣದೇ ಇರುವುದು ಇವೆಲ್ಲವೂ ಭಾರತದ ಮಂದ ವೇಗದ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತಿವೆ.
ಯುವಜನರ ಕೈಗೆ ಸರಿಯಾಗಿ ಕೆಲಸ ಇಲ್ಲವಾದರೆ ಆರ್ಥಿಕ ಬೆಳವಣಿಗೆ ಕಷ್ಟವಾಗುವುದು ಹೌದು. ಈ ನಿಟ್ಟಿನಲ್ಲಿ ಈ ನಿರುದ್ಯೋಗ ಸಮಸ್ಯೆ ನಿವಾರಿಸಲು ಬಜೆಟ್ನಲ್ಲಿ ಹೆಚ್ಚಿನ ಮುತುವರ್ಜಿ ತೋರಬಹುದೆಂದು ನಿರೀಕ್ಷಿಸಬಹುದು. ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಪ್ರಯತ್ನ ಮತ್ತಷ್ಟು ತೀವ್ರಗೊಳ್ಳಬಹುದು. ಹೆಚ್ಚು ಉದ್ಯೋಗ ಸೃಷ್ಟಿಸಬಲ್ಲ ವಲಯಗಳಿಗೆ ಬಜೆಟ್ನಲ್ಲಿ ಹೆಚ್ಚು ಪುಷ್ಟಿ ನೀಡಲು ಯತ್ನಿಸಬಹುದು.
ಇದನ್ನೂ ಓದಿ: ಪಿಎಂ ಇಂಟರ್ನ್ಶಿಪ್ ಸ್ಕೀಮ್; ಶೇ. 80ಕ್ಕೂ ಹೆಚ್ಚು ಭಾರತೀಯ ಕಂಪನಿಗಳಿಂದ ಬೆಂಬಲ
ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕಳೆದ ಬಾರಿಯ ಬಜೆಟ್ನಲ್ಲಿ ಅವರು ಮಹಿಳೆಯರು, ಯುವಜನರು, ರೈತರು ಮತ್ತು ಬಡವರು ಈ ನಾಲ್ಕು ವರ್ಗಗಳತ್ತ ಗಮನ ಕೊಡುತ್ತಿರುವುದಾಗಿ ಹೇಳಿದ್ದರು. ಈ ಬಾರಿಯ ಬಜೆಟ್ನಲ್ಲೂ ಈ ನಾಲ್ಕು ವರ್ಗಗಳತ್ತ ಗಮನ ಮುಂದುವರಿಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ