Income Tax Slabs: ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಆಗಿಲ್ಲ ಬದಲಾವಣೆ; ಹಿಂದಿನ ವರ್ಷದ ಟ್ಯಾಕ್ಸ್ ರೇಟ್ ಎಷ್ಟಿದೆ?
Interim Budget 2024: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ನಲ್ಲಿ ದೊಡ್ಡ ಘೋಷಣೆಗಳೇನೂ ಮಾಡಿಲ್ಲ. ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಿಂದಿನ ದರಗಳೇ ಮುಂದುವರಿದೆ. ಏಳು ಲಕ್ಷ ರೂವರೆಗಿನ ಟ್ಯಾಕ್ಸ್ ರಿಬೇಟ್ ಹಿಂದಿನ ರೀತಿಯಲ್ಲೇ ಮುಂದುವರಿಯಲಿದೆ.
ನವದೆಹಲಿ, ಫೆಬ್ರುವರಿ 1: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಮಧ್ಯಂತರ ಬಜೆಟ್ನಲ್ಲಿ (Interim budget 2024) ಆದಾಯ ತೆರಿಗೆಯಲ್ಲಿ ಒಂದಷ್ಟು ಬದಲಾವಣೆ ತರಬಹುದು. ತೆರಿಗೆದಾರರ ಮೇಲಿನ ಹೊರೆಯನ್ನು ತುಸು ತಗ್ಗಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಬಜೆಟ್ನಲ್ಲಿ ಇನ್ಕಮ್ ಟ್ಯಾಕ್ಸ್ ದರಗಳಲ್ಲಿ (income tax rates) ಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ. ಹಿಂದಿನ ವರ್ಷದಲ್ಲಿ ಪ್ರಕಟಿಸಲಾಗಿದ್ದ ದರಗಳೇ ಮುಂದುವರಿಯಲಿವೆ.
ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದನ್ನು ತಿಳಿಸಿದರು. ಹಾಗೆಯೇ, ತೆರಿಗೆ ಪಾವತಿದಾರರಿಗೆ ಅಭಿನಂದನೆ ಕೂಡ ಹೇಳಿದ್ದು ವಿಶೇಷ. ಹಿಂದಿನ ಬಜೆಟ್ನಲ್ಲಿ ಹೊಸ ಟ್ಯಾಕ್ಸ್ ರಿಜಿಮ್ ಪ್ರಕಾರ ಏಳು ಲಕ್ಷ ರೂವರೆಗಿನ ಟ್ಯಾಕ್ಸ್ ರಿಬೇಟ್ ಕೊಟ್ಟಿದ್ದ ವಿಚಾರವನ್ನು ಪ್ರಸ್ತಾಪಿಸಿದರು. ಒಟ್ಟಾರೆಯಾಗಿ, ಆದಾಯ ತೆರಿಗೆ ದರದಲ್ಲಿ, ಹೊಸ ಟ್ಯಾಕ್ಸ್ ರಿಜಿಮ್ ಮತ್ತು ಹಳೆಯ ಟ್ಯಾಕ್ಸ್ ರೆಜಿಮ್ ಯಾವುದರಲ್ಲೂ ದರ ಬದಲಾವಣೆ ಆಗಿಲ್ಲ.
ಇದನ್ನೂ ಓದಿ: Union Budget: ಸರ್ಕಾರಕ್ಕೆ ಈ ನಾಲ್ಕು ಜಾತಿಗಳ ಏಳ್ಗೆ ಮುಖ್ಯ: ನಿರ್ಮಲಾ ಸೀತಾರಾಮನ್
ಹಳೆಯ ಟ್ಯಾಕ್ಸ್ ಪದ್ಧತಿಯಲ್ಲಿ ಹೀಗಿದೆ ದರ
- 2.5 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.
- 2.5 ಲಕ್ಷದಿಂದ 5 ಲಕ್ಷ ರೂವರೆಗಿನ ಆದಾಯಕ್ಕೆ: ಶೇ. 5ರಷ್ಟು ತೆರಿಗೆ
- 5 ಲಕ್ಷ ರೂನಿಂದ 7.5 ಲಕ್ಷ ರೂ: ಶೇ. 10
- 7.5 ಲಕ್ಷ ರೂನಿಂದ 10 ಲಕ್ಷ ರೂ: ಶೇ. 15
- 10 ಲಕ್ಷ ರೂನಿಂದ 12.5 ಲಕ್ಷ ರೂ: ಶೇ. 20
- 12.5 ಲಕ್ಷ ರೂನಿಂದ 15 ಲಕ್ಷ ರೂ: ಶೇ. 25
- 15 ಲಕ್ಷ ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ
ಹೊಸ ತೆರಿಗೆ ಪದ್ಧತಿಯಲ್ಲಿ ದರಗಳು
- 3 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಬಾಧ್ಯತೆ ಇಲ್ಲ
- 3 ಲಕ್ಷ ರೂನಿಂದ 6 ಲಕ್ಷ ರೂವರೆಗಿನ ಆದಾಯ: ಶೇ. 5ರಷ್ಟು ತೆರಿಗೆ
- 6 ಲಕ್ಷ ರೂನಿಂದ 9 ಲಕ್ಷ ರೂ: ಶೇ. 10
- 9 ಲಕ್ಷ ರೂನಿಂದ 12 ಲಕ್ಷ ರೂ: ಶೇ. 15
- 12 ಲಕ್ಷ ರೂನಿಂದ 15 ಲಕ್ಷ ರೂ: ಶೇ. 20
- 15 ಲಕ್ಷ ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ
ಇದನ್ನೂ ಓದಿ: Union Budget 2024: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇನ್ನೂ 2 ಕೋಟಿ ಮನೆ: ನಿರ್ಮಲಾ ಸೀತಾರಾಮನ್ ಘೋಷಣೆ
ಹೆಚ್ಚುವರಿ ತೆರಿಗೆ ಇರುತ್ತದೆ…
ಹೊಸ ತೆರಿಗೆ ಪದ್ಧತಿಯಲ್ಲಿ 50 ಲಕ್ಷ ರೂಗಿಂತ ಮೇಲ್ಪಟ್ಟ ಆದಾಯಕ್ಕೆ ಶೇ. 10ರಷ್ಟು ಸರ್ಚಾರ್ಜ್ ಅಥವಾ ಹೆಚ್ಚುವರಿ ತೆರಿಗೆ ಹಾಕಲಾಗುತ್ತದೆ.
ಇನ್ನು, ಒಂದು ಕೋಟಿ ರೂಗಿಂತ ಹೆಚ್ಚು ಇರುವ ಆದಾಯಕ್ಕೆ ಹೆಚ್ಚುವರಿ ತೆರಿಗೆ ಶೇ. 15ರಷ್ಟು ಇರುತ್ತದೆ. 2 ಕೋಟಿ ರೂಗಿಂತ ಹೆಚ್ಚು ಇದ್ದರೆ ಶೇ. 25ರಷ್ಟು ಸರ್ಚಾರ್ಜ್ ಇರುತ್ತದೆ.
ಹೊಸ ತೆರಿಗೆ ಪದ್ಧತಿಯಲ್ಲಿ ವಿಶೇಷತೆ ಎಂದರೆ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಅವಕಾಶ ಇರುತ್ತದೆ. ಇದರಿಂದ ಈ ಆದಾಯ ಗುಂಪಿನವರಿಗೆ ಹೆಚ್ಚೂಕಡಿಮೆ ತೆರಿಗೆ ಬಾಧ್ಯತೆ ಇರುವುದಿಲ್ಲ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ