ವ್ಯಾಪಾರ/ಉದ್ಯಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಬಜೆಟ್ 2022ರಲ್ಲಿ (Karnataka Budget 2022) ಮಹಿಳಾ ಉದ್ದಿಮೆದಾರರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಮಹತ್ತರವಾದ ಸಾಲ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 10 ಲಕ್ಷ ರೂಪಾಯಿಗಳ ತನಕ ನೇರ ಸಾಲವನ್ನು ಒದಗಿಸಿ ಪ್ರೋತ್ಸಾಹಿಸಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ಅವರು ಬಜೆಟ್ನಲ್ಲಿ ಪ್ರಸ್ತಾವ ಮಾಡಿದ್ದಾರೆ. KITSನಿಂದ “ಎಲಿವೇಟ್” ಯೋಜನೆಅಡಿಯಲ್ಲಿ ಗುರುತಿಸಲಾದ ಮಹಿಳಾ ಉದ್ದಿಮೆದಾರರು/ಮಹಿಳೆ ನೇತೃತ್ವದ ಸ್ಟಾರ್ಟ್ಅಪ್ಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಡೆಯಿಂದ ನೇರವಾಗಿ 10 ಲಕ್ಷ ರೂಪಾಯಿ ತನಕ ಒದಗಿಸಿ, ಪ್ರೋತ್ಸಾಹಿಸಲಾಗುತ್ತದೆ.
ಮೊದಲ ಬಾರಿಗೆ 2022-23ನೇ ಸಾಲಿಗೆ ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. – ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ. ಮೀಸಲಿಟ್ಟಿದ್ದಾರೆ.
ಬಂಡವಾಳ ವೆಚ್ಚ 46,595 ಕೋಟಿ ರೂಪಾಯಿ ಹಾಗೂ ಸಾಲ ಮರುಪಾವತಿಗೆ 14,179 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.