Karnataka Budget: ಕರ್ನಾಟಕ ಬಜೆಟ್​​; ವೀಕ್ಷಿಸುವುದು ಹೇಗೆ, ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ

|

Updated on: Feb 17, 2023 | 3:16 PM

ಕರ್ನಾಟಕ ಬಜೆಟ್​ 2023-24; ಇದು ಈ ಸರ್ಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಹಿಗಾಗಿ ನಿರೀಕ್ಷೆಗಳು ಹೆಚ್ಚಾಗಿವೆ. ಕೆಲ ಮಹತ್ವದ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ‘ಟಿವಿ9’ಗೆ ತಿಳಿಸಿವೆ.

Karnataka Budget: ಕರ್ನಾಟಕ ಬಜೆಟ್​​; ವೀಕ್ಷಿಸುವುದು ಹೇಗೆ, ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ಬಜೆಟ್​​ಗೆ (Karnataka Budget 2023) ಕ್ಷಣಗಣನೆ ಆರಂಭವಾಗಿದ್ದು, ಬೆಳಿಗ್ಗೆ 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommai) ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಈ ಸರ್ಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಹಿಗಾಗಿ ನಿರೀಕ್ಷೆಗಳು ಹೆಚ್ಚಾಗಿವೆ. ಕೆಲ ಮಹತ್ವದ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ‘ಟಿವಿ9’ಗೆ ತಿಳಿಸಿವೆ. ಜನಪ್ರಿಯ ಬಜೆಟ್‌ ಮಂಡಿಸಲು ಬೊಮ್ಮಾಯಿ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಬಜೆಟ್‌ ಮಂಡನೆಗೂ ಮುನ್ನ ಮುಖ್ಯಮಂತ್ರಿಗಳು ಬೆಂಗಳೂರಿನ ಆರ್‌.ಟಿ. ನಗರದಲ್ಲಿರುವ ಶ್ರೀಕಂಠೇಶ್ವರ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ. ಬಜೆಟ್‌ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ ಬೆಳಗ್ಗೆ 9.45ಕ್ಕೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಬಜೆಟ್​ಗೆ ಅನುಮೋದನೆ ಪಡೆಯಲಿದ್ದಾರೆ. ಬಜೆಟ್ ಮಂಡನೆ ಬಳಿಕ ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ಮುಖ್ಯಮಂತ್ರಿಗಳು ಹೆಚ್ಚಿನ ವಿವರ ನೀಡಲಿದ್ದಾರೆ.

ಬಜೆಟ್​ ನಿರೀಕ್ಷೆಗಳೇನೇನು?

  • ಬಡವರು, ರೈತರು, ದೀನ ದಲಿತರು, ಮಧ್ಯಮ ವರ್ಗ, ದುಡಿಯುವ ವರ್ಗಕ್ಕೆ ಹೆಚ್ಚು ನಿರೀಕ್ಷೆ
  • ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಛಿಸುವವರಿಗೆ 50 ರೂ. ಸಾವಿರ ಪ್ರೋತ್ಸಾಹ ಧನ
  • ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ
  • ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು 3 ಲಕ್ಷದಿಂದ 5 ಲಕ್ಷ ರೂ.ಗೇರಿಸುವ ಸಾಧ್ಯತೆ
  • ರೈತರ ಬೆಳೆಗೆ ಬಿತ್ತನೆ ಸಂದರ್ಭದಲ್ಲೇ ಖರ್ಚು ವೆಚ್ಚದ ಆಧಾರದ ಮೇಲೆ ಲಾಭದಾಯಕ ದರ ಫಿಕ್ಸ್ ಮಾಡುವುದು
  • ರೈತರಿಗೆ ಡೀಸೆಲ್ ಸಹಾಯಧನ ವಿಸ್ತರಣೆ
  • ಗಾಣಿಗ, ಮಡಿವಾಳ, ಮೇದಾರ, ನೇಕಾರ, ಕುಂಬಾರ, ಅಕ್ಕಸಾಲಿಗ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸಾಧ್ಯತೆ
  • ಸರ್ಕಾರಿ ನೌಕರರ ಮನಗೆಲ್ಲೋಕೆ 7 ನೇ ವೇತನ ಆಯೋಗದ ಶಿಫಾರಸು ಜಾರಿ ಬಗ್ಗೆ ಘೋಷಣೆ ಮಾಡಲು ಚಿಂತನೆ
  • ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ
  • ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಕ್ಲಿನಿಕ್​ಗಳನ್ನು ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಸ್ಥಾಪಿಸುವ ಬಗ್ಗೆ ಘೋಷಣೆ
  • ಮಹಿಳಾ ಸ್ವ ಸಹಾಯ ಸಂಘಗಳಿಗೆ ಸ್ತ್ರೀ ಶಕ್ತಿ ಯೋಜನೆಯಡಿ 5 ಲಕ್ಷ ರೂ. ಹಂಚಿಕೆ
  • ಸ್ವ ಸಹಾಯ ಸಂಘಗಳ ಬಡ್ಡಿ ಅಥವಾ ಸಾಲ ಮನ್ನಾ ಮಾಡುವ ಸಾಧ್ಯತೆ
  • ಎನ್​​ಇಪಿ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣದಲ್ಲೂ ಅನುಷ್ಠಾನಕ್ಕೆ ತರುವುದು
  • 8 ರಿಂದ 10 ಸಾವಿರ ಶಾಲಾ ಕಟ್ಟಡಿಗಳ ನಿರ್ಮಾಣ
  • 15 ಸಾವಿರ ಶಿಕ್ಷಕರ ನೇಮಕ
  • 25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್​​ಟೈಲ್ ಪಾರ್ಕ್ ಸ್ಥಾಪನೆ ಸಾಧ್ಯತೆ
  • ಅಡಿಕೆ ರೋಗ ತಡೆಯುವಿಕೆಗೆ ವಿಶೇಷ ಅನುದಾನ
  • ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಧಿಯಲ್ಲಿ ಅದ್ಬುತ ಸ್ಮಾರಕ ಸ್ಥಾಪನೆ
  • ಬೆಂಗಳೂರು ನಗರದಲ್ಲಿ ಸಮಗ್ರವಾಗಿ ರಾಜಕಾಲುವೆ ಪುನರ್ನಿಮಾಣ ಮಾಡಲು ಐಐಎಸ್ ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯನ್ನು ಸುಧಾರಣೆಗಾಗಿ ವಿಶೇಷವಾದ ಮಾಸ್ಟರ್ ಪ್ಲಾನ್ಗ್ರಾ
  • ಮೀಣ ಪತ್ರಕರ್ತರಿಗೆ ಬಸ್ ಪಾಸ್ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಬಜೆಟ್ ನಲ್ಲಿ ಅನುದಾನ. ನಿವೃತ್ತ ಪತ್ರಕರ್ತರಿಗೆ ಮಾಸಾಸನವನ್ನು ಹೆಚ್ಚಳ ಸಾಧ್ಯತೆ
  • ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ದತಿಯ ಗೋದಾಮುಗಳ ನಿರ್ಮಾಣ
  • ಆಯವ್ಯಯದಲ್ಲಿ ವಿಕಲಚೇತನರಿಗೆ ವಿವಿಧ ಕಾರ್ಯಕ್ರಮಗಳ ಘೋಷಣೆ
  • ಕರಾವಳಿ ಭಾಗದ ಚಟುವಟಿಕೆ, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ ಕಾರ್ಯಕ್ರಮ ಘೋಷಣೆ
  • ಬೆಂಗಳೂರು ಮೂಲಭೂತಸೌಕರ್ಯ ಅಭಿವೃದ್ಧಿಗಾಗಿ ಬಂಪರ್ ಕೊಡುಗೆ ಸಾಧ್ಯತೆ
  • ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು ಸಾಧ್ಯತೆ
  • ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ
  • ಎಲ್ಲಾ ಸಮಾಜದ ಮಠ, ದಲಿತ ಮಠ, ಹಿಂದುಳಿದ ವರ್ಗಗಳ ಮಠಗಳಿಗೆ ಹೆಚ್ಚಿನ ಅನುದಾನ
  • ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ಘೋಷಣೆ
  • ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆ, ಏತ ನೀರವಾರಿಗಳಿಗೆ ಹೆಚ್ಚಿನ ಅನುದಾನ ಘೋಷಣೆ
  • ವಿದ್ಯುತ್ ವಾಹನ ಖರೀದಿದಾರರಿಗೆ ತೆರಿಗೆ ವಿನಾಯಿತಿ, ಸಾರಿಗೆ ಇಲಾಖೆಗೆ ವಿದ್ಯುತ್ ಚಾಲಿತ ಬಸ್ ಗಳ ಖರೀದಿಗೆ ಅನುದಾನ
  • ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಯೋಜನೆ ಸಾಧ್ಯತೆ
  • 12 ವಿವಿಧ ಫ್ರೀ ಕಾರಿಡರ್ ಘೋಷಣೆ ಸಾಧ್ಯತೆ

ಬೆಂಗಳೂರಿಗೆ ಹೆಚ್ಚಿನ ಕೊಡುಗೆ?

ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್​​ನಲ್ಲಿ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ. ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಅನುದಾನ ಹಾಗೂ ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿ ವರೆಗೆ ಹೆಚ್ಚಿನ ನೆರವು ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬಜೆಟ್ ವೀಕ್ಷಿಸುವುದು ಹೇಗೆ?

ಬಜೆಟ್​ ಮಂಡನೆಯ ನೇರ ಪ್ರಸಾರ ಲಭ್ಯವಿದ್ದು, ಟಿವಿ9 ಕನ್ನಡ ವಾಹಿನಿಯಲ್ಲಿಯೂ ವೀಕ್ಷಿಸಬಹುದಾಗಿದೆ.

ಕರ್ನಾಟಕ ಬಜೆಟ್​ ಲೈವ್​ ಅಪ್ಡೇಟ್ಸ್​

ಕರ್ನಾಟಕ ಬಜೆಟ್​ ಮತ್ತಷ್ಟು ಸುದ್ದಿಗಳು

Published On - 6:59 am, Fri, 17 February 23