ಕರ್ನಾಟಕ ಬಜೆಟ್: ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ, ಆರ್ಥಿಕ ಶಿಸ್ತಿನಿಂದ ಸರ್ಪ್ಲಸ್ ಬಜೆಟ್ ಮಂಡಿಸಿದ್ದೇವೆ; ಬೊಮ್ಮಾಯಿ
ಕಳೆದ ಬಜೆಟ್ನಲ್ಲಿ ಉಲ್ಲೇಖಿಸಿರುವ ಯೋಜನೆಗಳು ಅನುಷ್ಠಾನ ಆಗಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು. ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಎಲ್ಲ ಅಂಕಿಅಂಶ ನೀಡಿದ್ದೇವೆ, ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಸಾಲದ ಪ್ರಮಾಣವನ್ನು ಕಡಿಮೆ ಮಾಡಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಮಿಗತೆ (ಸರ್ಪ್ಲಸ್) ಬಜೆಟ್ (Karnataka Budget 2023) ಮಂಡನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಬಜೆಟ್ ಮಂಡನೆ ಮಾಡಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಯಾವ ಸರ್ಕಾರವೂ ಈ ಸಾಧನೆ ಮಾಡಿಲ್ಲ. ಹಿಂದೆ ಜಾರಿಗೊಳಿಸಿದ್ದ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಪ್ರಗತಿಯ ಹಾದಿಯಲ್ಲಿದೆ. ಕಳೆದ ಬಾರಿಯ ಬಜೆಟ್ನಲ್ಲಿ ಏನು ಹೇಳಿದ್ದೆವೋ ಅದೇ ರೀತಿ ವೆಚ್ಚವನ್ನು ಹೆಚ್ಚು ಮಾಡಿದ್ದೇವೆ. ಉದಾಹರಣೆಗೆ; ರೆವೆನ್ಯೂ ಎಕ್ಸ್ಪೆಂಡಿಚರ್, ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಕೂಡ ಹೆಚ್ಚಾಗಿದೆ. ಯಾವ ಯೋಜನೆಯಲ್ಲಿ ಎಷ್ಟು ಖರ್ಚಾಗಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದರು.
ಕಳೆದ ಬಜೆಟ್ನಲ್ಲಿ ಉಲ್ಲೇಖಿಸಿರುವ ಯೋಜನೆಗಳು ಅನುಷ್ಠಾನ ಆಗಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು. ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಎಲ್ಲ ಅಂಕಿಅಂಶ ನೀಡಿದ್ದೇವೆ, ನೀಡುತ್ತಿದ್ದೇವೆ. ಬಜೆಟ್ ಗಾತ್ರ 43,462 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಇದು ಈ ವರ್ಷದ ನಮ್ಮ ಹಣಕಾಸಿನ ಬೆಳವಣಿಗೆ ದರವನ್ನು, ಬೆಳವಣಿಗೆಯನ್ನು ಸೂಚಿಸುತ್ತದೆ. ಆರ್ಥಿಕ ಕ್ಷಮತೆಯ ಮೇಲಿನ ವಿಶ್ವಾಸದೊಂದಿಗೆ ಈ ವರ್ಷ ಬಜೆಟ್ ಗಾತ್ರ ಶೇ 16ರಷ್ಟು ಹೆಚ್ಚಳವಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಇದು ಶೇ 6ರಿಂದ 7ರಷ್ಟು ಹೆಚ್ಚಾಗುತ್ತದೆಯಷ್ಟೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Karnataka Budget PDF Download: ಕರ್ನಾಟಕ ಬಜೆಟ್ ಪಿಡಿಎಫ್ ಕಾಪಿ ಇಲ್ಲಿ ಲಭ್ಯ
ದೇಶದಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕೃಷಿ, ಉತ್ಪಾದನೆ, ಕೈಗಾರಿಕಾ ಕ್ಷೇತ್ರದಲ್ಲಿ ನಾವು ಮುಂದೆ ಇದ್ದೇವೆ. ಕೊರೊನಾ ನಂತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕಷ್ಟ ಎಂದು ತಜ್ಞರು ಹೇಳಿದ್ದರು. ಆರ್ಥಿಕ ಕೊರತೆ ನೀಗಲು 5 ವರ್ಷ ಬೇಕಾಗಬಹುದು ಎಂದಿದ್ದರು. ಆದರೆ, ನಾವು ಕೇವಲ ಎರಡನೇ ವರ್ಷದಲ್ಲಿ ರೆವಿನ್ಯೂ ಸರ್ಪ್ಲಸ್ ಬಜೆಟ್ ಮಂಡಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೃಷಿ, ಉತ್ಪಾದನೆ, ಕೈಗಾರಿಕಾ ಕ್ಷೇತ್ರದಲ್ಲಿ ನಾವು ಸಾಕಷ್ಟು ಸಾಧಿಸಿದ್ದು, ಮುಂಚೂಣಿಯಲ್ಲಿದ್ದೇವೆ. ಹಣಕಾಸಿನ ನಿರ್ವಹಣೆ ದಕ್ಷವಾಗಿದ್ದಾಗ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕಳೆದ ಬಜೆಟ್ನಲ್ಲಿ ಘೋಷಿಸಿದ್ದ ಶೇ 90ರಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹಿಂದಿನ ಯಾವುದೇ ಸರ್ಕಾರಗಳು ಇಷ್ಟು ಯಶಸ್ವಿಯಾಗಿರಲಿಲ್ಲ. ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಆದಾಯವೂ ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು
Published On - 2:27 pm, Fri, 17 February 23