Karnataka Budget 2023: ಬೊಮ್ಮಾಯಿ ಬಜೆಟ್ ಹೇಗಿದೆ? ಈ ಬಗ್ಗೆ ಯಾರು ಏನು ಹೇಳಿದರು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು(ಫೆಬ್ರವರಿ 17) ಒಟ್ಟು 3,09,182 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಇನ್ನು ಬೊಮ್ಮಾಯಿ ಬಜೆಟ್ ಹೇಗಿದೆ? ಈ ಬಗ್ಗೆ ಯಾರು ಏನು ಹೇಳಿದರು? ಎನ್ನುವುದು ಇಲ್ಲಿದೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು(ಫೆಬ್ರವರಿ 17) ಒಟ್ಟು 3,09,182 ಕೋಟಿ ರೂ ಗಾತ್ರದ ಬಜೆಟ್ ಮಂಡನೆ (Karnataka Budget 2023) ಮಾಡಿದ್ದಾರೆ. ಇದರಲ್ಲಿ ರಾಜಸ್ವ ಸ್ವೀಕೃತಿ (Revenue Receipts) 2,25,910 ಕೋಟಿ ರೂ ಸೇರಿ ಒಟ್ಟು ಸ್ವೀಕೃತಿಯು 3,03,910 ಕೋಟಿ ರೂ ಇದೆ. ವಿವಿಧ ಇಲಾಖೆವಾರು ಅನುದಾನಗಳನ್ನು ನೀಡಿದ್ದಾರೆ. ಅಲ್ಲದೇ ಮುಂಬರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇನ್ನು ಬೊಮ್ಮಾಯಿ ಅವರು ಮಂಡಿಸಿದ ಎರಡನೇ ಬಜೆಟ್ (Basavaraj Bommai Budget 2023) ಹೇಗಿತ್ತು?ಈ ಬಗ್ಗೆ ಯಾರು ಏನು ಹೇಳಿದರು? ಎನ್ನುವುವುದು ಈ ಕೆಳಗಿನಂತಿದೆ.
ಇದನ್ನೂ ಓದಿ: Karnataka Budget 2023 Highlights: ಕರ್ನಾಟಕ ಬಜೆಟ್ ಮುಖ್ಯಾಂಶಗಳು
ಬಜೆಟ್ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು?
ಬೊಮ್ಮಾಯಿ ಮಂಡಿಸಿದ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ನಲ್ಲಿ ಒತ್ತು ನೀಡಿದ್ದಾರೆ. ನಿರೀಕ್ಷೆಗೂ ಮೀರಿ ಒಳ್ಳೆ ಬಜೆಟ್ ಮಂಡಿಸಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸಲು ಬಜೆಟ್ನಲ್ಲಿ ಆದ್ಯತೆ ನೀಡಿದ್ದಾರೆ. ಉತ್ತಮ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿಗೆ ಅಭಿನಂದಿಸುವೆ ಎಂದರು.
ಬಿಸಿಲುಕುದುರೆ ಬಜೆಟ್ ಎಂದ ಡಿಕೆ ಶಿವಕುಮಾರ್
ಬಜೆಟ್ ಕೇವಲ ಆಶ್ವಾಸನೆಗಳ ಪಟ್ಟಿ ಅಷ್ಟೇ. ಸಿಎಂ ಬೊಮ್ಮಾಯಿ ಮಂಡಿಸಿರುವುದು ಬಿಸಿಲುಕುದುರೆ ಬಜೆಟ್. ರಾಜ್ಯದ ಜನ ಕಿವಿಗೆ ಹೂವು ಇಡುವ ಬಜೆಟ್ ಆಗಿದೆ. ಬಜೆಟ್ ಜಾತ್ರೆ ಕನ್ನಡಕದಂತೆ, ಈ ಬಜೆಟ್ನಿಂದ ಉಪಯೋಗವಿಲ್ಲ. ಜಾತ್ರೆ ಕನ್ನಡಕ ಹಾಕಿಕೊಂಡರೆ ಏನೂ ಕಾಣಲ್ಲ. ಬಜೆಟ್ ಓದಲು ಸಿಎಂ ಬೊಮ್ಮಾಯಿಗೆ ಸ್ವರವೇ ಇರಲಿಲ್ಲ. ಮಾತೆತ್ತಿದರೆ ಧಮ್, ತಾಕತ್ ಬಗ್ಗೆ ಮಾತನಾಡುವ ಬೊಮ್ಮಾಯಿ, ಬಜೆಟ್ ಓದಲು ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವರ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಡಬಲ್ ಇಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿಯವರು, ಡಬಲ್ ಇಂಜಿನ್ ಸೀಜ್ ಆಗಿ ಕೇವಲ ವಾಯ್ಸ್ ಬರುತ್ತಿದೆ. ನಿರುದ್ಯೋಗ, ಆರೋಗ್ಯ, ರೈತರ ಆದಾಯ ಹೆಚ್ಚಳಕ್ಕೆ ಕ್ರಮವಿಲ್ಲ. ಇದು ಬಾಯ್ ಬಾಯ್ ಬಜೆಟ್, ಶೋಕೇಸ್ನಲ್ಲಿ ಇಡಬೇಕಿರುವ ಬಜೆಟ್. ಬೊಮ್ಮಾಯಿ ಬಜೆಟ್ ಮಂಡಿಸಿದ್ದೀನಿ ಎಂದು ಹೇಳಿಕೊಳ್ಳಬೇಕು ಅಷ್ಟೇ. ಈ ಬಜೆಟ್ ಜಾರಿಗೆ ಬರುವುದಿಲ್ಲ, ಘೋಷಣೆಗೆ ಮಾತ್ರ ಸೀಮಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿರು.
ನಿರ್ಗಮನದ ಬಜೆಟ್ ಎಂದ ಸಿದ್ದರಾಮಯ್ಯ
ಸಿಎಂ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಆಗಿದೆ. ಬೊಮ್ಮಾಯಿ 3,09,182 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ಬಜೆಟ್ನಲ್ಲಿ 206 ಕಾರ್ಯಕ್ರಮ ಘೋಷಣೆ ಮಾಡಿದ್ದರು. ಅದರಲ್ಲಿ ಹಲವು ಕಾರ್ಯಕ್ರಮ ಜಾರಿ ಮಾಡಿಲ್ಲ. ಚುನಾವಣೆ ವೇಳೆ ಘೋಷಿಸಿದ್ದ ಶೇ.92ರಷ್ಟು ಅಶ್ವಾಸನೆ ಈಡೇರಿಸಿಲ್ಲ. ಜನರಿಗೆ ಸುಳ್ಳು ಭರವಸೆ ನೀಡಿ, ಕನಸಿನ ಲೋಕದಲ್ಲಿ ತೇಲಾಡಿಸಿ ನಂತರ ಯಾವುದೇ ಕೆಲಸ ಮಾಡದೆ ಭ್ರಮನಿರಶನ ಮಾಡಿದ್ದಾರೆ ಎಂದು ಹೇಳಿದರು.
ಎಸ್ಸಿಪಿ, ಟಿಎಸ್ಪಿ ಅನುದಾನ ಕಡಿತಗೊಳಿಸಿ ದ್ರೋಹಮಾಡಿದ್ದಾರೆ. ರಾಜ್ಯದ ಒಟ್ಟು 5,64,896 ಕೋಟಿ ಸಾಲವಾಗುತ್ತೆ ಎಂದು ಹೇಳಿದ್ದಾರೆ. ನಾನು ಅಧಿಕಾರದಿಂದ ಕೆಳಗಿಳಿಯುವಾಗ 2,42,000 ಕೋಟಿ ಇತ್ತು. ಕಳೆದ 5 ವರ್ಷಗಳಲ್ಲಿ ರಾಜ್ಯದ ಸಾಲ 3,22,000 ಕೋಟಿ ರೂ. ಆಗಿದೆ. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 41,914 ಕೋಟಿ ರೂ. ಸಾಲ ಇತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ 2,54,760 ಕೋಟಿ ರೂಪಾಯಿ ಸಾಲವಾಗಿದೆ. ನನ್ನ 5 ವರ್ಷಗಳ ಅವಧಿಯಲ್ಲಿ 1,16,512 ಕೋಟಿ ಸಾಲವಾಗಿತ್ತು. ಬಿಜೆಪಿಯವರು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. 5,64,896 ಕೋಟಿ ಸಾಲಕ್ಕೆ 34,000 ಕೋಟಿ ರೂ. ಬಡ್ಡಿ ಕಟ್ಟಬೇಕಿದೆ. ಚುನಾಯಿತ ಸರ್ಕಾರ ಜನರಿಗೆ ಉತ್ತರದಾಯಿಯಾಗಿರಬೇಕು. ಸರ್ಕಾರ ಎಂದಿಗೂ ಮತದಾರರಿಗೆ ಮಾಹಿತಿ ಮುಚ್ಚಿಡಬಾರದು. ರಾಜ್ಯದಿಂದ 4 ಲಕ್ಷದ 75 ಸಾವಿರ ಕೋಟಿ ತೆರಿಗೆ ವಸೂಲಿ ಆಗಿದೆ ಎಂದು ಮಾಹಿತಿ ನೀಡಿದರು.
ಇದೊಂದು ಸುಳ್ಳಿನ ಬಜೆಟ್ ಎಂದ ರಣದೀಪ್ ಸುರ್ಜೇವಾಲ
ಇನ್ನು ಬಜೆಟ್ ಬಗ್ಗೆ ಹುಬ್ಬಳ್ಳಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾತನಾಡಿದ್ದು, ಇದು ಸುಳ್ಳಿನಿಂದ ಕೂಡಿದ ಕಿವಿ ಮೇಲೆ ಹೂವು ಇಡುವ ಬಜೆಟ್. ಇದು ಸಿಎಂ ಬೊಮ್ಮಾಯಿ ಮಂಡಿಸಿದ ಸುಳ್ಳಿನ ಕಂತೆಯ ಬಜೆಟ್. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಿಕೆ ವಿಚಾರವಾಗಿ 9ನೇ ಶೆಡ್ಯೂಲ್ನಲ್ಲಿ ಸೇರಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಬಗ್ಗೆ ಕ್ರಮಕೈಗೊಂಡಿಲ್ಲ. ಒಕ್ಕಲಿಗ, ಲಿಂಗಾಯತರ ಮೀಸಲಾತಿ ವಿಚಾರದ ಬಗ್ಗೆ ಪ್ರಸ್ತಾಪಿಸಿಲ್ಲ. ಡಬಲ್, ತ್ರಿಬಲ್ ಇಂಜಿನ್ ಸರ್ಕಾರ ಇದ್ದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿಕೆ
ಎಲ್ಲಾ ವರ್ಗದ, ಎಲ್ಲಾ ಜನರಿಗೆ ಅನುಕೂಲವಾಗುವಂತಹ ಬಜೆಟ್ ಮಂಡಿಸಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರ ಅಭ್ಯುದಯಕ್ಕೆ ಪೂರಕವಾಗಿದೆ. ಭೂರಹಿತ ಮಹಿಳೆಯರಿಗೆ ಮಾಸಿಕ 500 ರೂ. ಘೋಷಣೆ ಮಾಡಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎನ್ನುವಂತಿದೆ. ರಾಮದೇವರ ಬೆಟ್ಟದಲ್ಲಿ ರಾಮನ ದೇವಸ್ಥಾನ ನಿರ್ಮಾಣವಾಗಲಿದೆ. ಇದಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದರು.
ಚುನಾವಣೆ ಪೂರ್ವದಲ್ಲಿ ಮಂಡನೆಯಾಗಿರುವ ಬಜೆಟ್ ಎಂದ ಹೆಚ್ಡಿಕೆ
ಇನ್ನು ಬಜೆಟ್ ಬಗ್ಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಇವತ್ತಿನ ಚುನಾವಣೆ ಪೂರ್ವದಲ್ಲಿ ಮಂಡನೆಯಾಗಿರುವ ಬಜೆಟ್ ಇದು. ಈ ಬಜೆಟ್ ಗೆ ಯಾವುದೇ ರೀತಿಯ ಮನ್ನಣೆ ಕೊಡುವುದಿಲ್ಲ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಇದೆ. ಮಾರ್ಚ್- ಏಪ್ರಿಲ್ ನಲ್ಲಿ ಸಂಬಳ ಕೊಡುವುದಕ್ಕೆ ಬಜೆಟ್ ಮಂಡಿಸಲಾಗಿದೆ. ಮುಂದೆ ಬರುವ ಸರ್ಕಾರ ಬಜೆಟ್ ಮಂಡನೆ ಮಾಡುತ್ತಾರೆ ಎಂದರು.
ನನಗೆ ಮಾಹಿತಿ ಇರುವ ಪ್ರಕಾರ ಈಗಾಗಲೇ ನಾನು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ವಾತಾವರಣ ನೋಡಿದ್ರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ನಾನು ಸ್ವಲ್ಪ ಇನ್ ಟೆನ್ಸನ್ ಇಟ್ಟುಕೊಂಡಿದ್ದೆ. ವೋಟ್ ಹಾಕಿಸಿಕೊಳ್ಳುವ ಸಲುವಾಗಿ ಆದ್ರೂ ಜನರನ್ನು ಮೆಚ್ಚಿಸಲು ಬಜೆಟ್ ಮಂಡಿಸುತ್ತಾರೆ ಅಂದುಕೊಂಡಿದ್ದೆ. ಆದ್ರೆ, ಬಿಜೆಪಿಯ ಅಲ್ಲಿನ ಮಂತ್ರಿ ಶಾಸಕರುಗಳಿಗೆ ಈ ಬಜೆಟ್ ಗೆ ನೀರಸ ಪ್ರತಿಕ್ರಿಯೆ ಇದೆ. ಇವತ್ತಿನ ಬಜೆಟ್ ಗೆ ಅಷ್ಟು ಮಹತ್ವ ನಾನು ನೀಡುವುದಿಲ್ಲ. ಬಿಜೆಪಿ ಮುಂದೆ ಸ್ವತಂತ್ರವಾಗಿ ಸರ್ಕಾರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಕರ್ನಾಟಕ ಬಜೆಟ್ನ ಮತ್ತಷ್ಟು ಸುದ್ದಿಗಳು
Published On - 2:28 pm, Fri, 17 February 23