ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಹೀಗಾಗಿ, ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್ ಅನ್ನು ಇಂಟೆರಿಮ್ ಬಜೆಟ್ ಅಥವಾ ಮಧ್ಯಂತರ ಬಜೆಟ್ (Interim Budget) ಎಂದು ಪರಿಗಣಿಸಲಾಗುತ್ತದೆ. ಪೂರ್ಣಪ್ರಮಾಣದ ಬಜೆಟ್ ಆಗಿರುವುದಿಲ್ಲ. ಚುನಾವಣೆ ಬಳಿಕ ಬರುವ ಹೊಸ ಸರ್ಕಾರ ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡುತ್ತದೆ. ಚುನಾವಣೆಗೆ ಮುಂಚೆ ನಡೆಯುವ ಬಜೆಟ್ ಹೊಸ ಸರ್ಕಾರದಿಂದ ಮೊದಲ ಬಜೆಟ್ ಮಂಡನೆ ಆಗುವವರೆಗೂ ಸರ್ಕಾರದ ವೆಚ್ಚಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಬಜೆಟ್ ಎಂಬುದು ಒಂದು ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಆಗಿರುತ್ತದೆ. ಈ ವರ್ಷದ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗೆ ಒಂದು ಹಣಕಾಸು ವರ್ಷ ಆಗಿರುತ್ತದೆ. ಬಜೆಟ್ನ ಲೆಕ್ಕಾಚಾರ ಮಾರ್ಚ್ 31ಕ್ಕೆ ಮುಗಿಯುತ್ತದೆ.
ಬಜೆಟ್ನಲ್ಲಿ ಸರ್ಕಾರಕ್ಕೆ ಒಂದು ವರ್ಷದಲ್ಲಿ ಬರಬಹುದಾದ ಎಲ್ಲಾ ಆದಾಯಗಳನ್ನು ತೋರಿಸಲಾಗುತ್ತದೆ. ಹಾಗೆಯೇ, ವೆಚ್ಚಗಳ ಪಟ್ಟಿಯೂ ಇರುತ್ತದೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ವಿನಿಯೋಗ ಮಾಡಲಾಗುತ್ತದೆ, ಯಾವ್ಯಾವ ಯೋಜನೆಗಳಿಗೆ ಎಷ್ಟು ಹಣ ಕೊಡಲಾಗುತ್ತದೆ ಎಲ್ಲಾ ವಿವರವೂ ಬಜೆಟ್ನಲ್ಲಿ ಇರುತ್ತದೆ. ಅದರ ಪ್ರಕಾರವೇ ಸರ್ಕಾರ ವೆಚ್ಚ ಮಾಡುತ್ತದೆ.
ಇದನ್ನೂ ಓದಿ: ಬಜೆಟ್ಗೆ ಸಿದ್ಧತೆ ಎಷ್ಟು ತಿಂಗಳು ಮುಂಚೆ ಶುರುವಾಗುತ್ತೆ? ಯೂನಿಯನ್ ಬಜೆಟ್ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು
ಚುನಾವಣೆಗೆ ಮುಂಚಿನ ಮಧ್ಯಂತರ ಬಜೆಟ್ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇದನ್ನು ನಿರ್ಬಂಧಿಸಲಾಗಿದೆ. ಹಾಗೆಯೇ, ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸುವಂತಿಲ್ಲ.
ಆದರೆ, ತೆರಿಗೆ ಹೆಚ್ಚಳ, ಇಳಿಕೆ ಇತ್ಯಾದಿ ಕ್ರಮಗಳನ್ನು ಇಂಟರಿಮ್ ಬಜೆಟ್ನಲ್ಲಿ ಘೋಷಿಸಬಹುದು.
ಮಧ್ಯಂತರ ಬಜೆಟ್ ವೇಳೆ ವೋಟ್ ಆನ್ ಅಕೌಂಟ್ ಇರುತ್ತದೆ. ಇದು ಮಾರ್ಚ್ 31ರಿಂದ ಹೊಸ ಸರ್ಕಾರದ ಬಜೆಟ್ ಮಂಡನೆ ಆಗುವವರೆಗೂ ಸರ್ಕಾರಿ ನೌಕರರ ಸಂಬಳ ಮತ್ತಿತರ ಅಗತ್ಯ ವೆಚ್ಚಗಳಿಗೆಂದು ವೋಟ್ ಆನ್ ಅಕೌಂಟ್ ಇರುತ್ತದೆ.
ಇದನ್ನೂ ಓದಿ: Union Budget: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಬಜೆಟ್; ಏನೇನು ನಿರೀಕ್ಷೆಗಳಿವೆ? ಮುಂಗಡಪತ್ರ ಹೇಗಿರಲಿದೆ?
ವೋಟ್ ಆನ್ ಅಕೌಂಟ್ಗೆ ಯಾವುದೇ ಚರ್ಚೆ ಇಲ್ಲದೇ ಅನುಮತಿ ಸಿಗುತ್ತದೆ. ಮಧ್ಯಂತರ ಬಜೆಟ್ಗೆ ಸದನದಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Fri, 5 January 24