
ನವದೆಹಲಿ, ಫೆಬ್ರುವರಿ 2: ನಿನ್ನೆ ಮಂಡನೆಯಾದ ಕೇಂದ್ರ ಬಜೆಟ್ ಅನ್ನು ಟೀಕಿಸಿದ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ದೇಶದ ಮಧ್ಯವ ವರ್ಗದವರಿಗೆ ಇದು ಅತಿ ಸ್ನೇಹಮಯಿ ಬಜೆಟ್ ಎಂದು ಪ್ರಧಾನಿಗಳು ವರ್ಣಿಸಿದ್ದಾರೆ. ನಿನ್ನೆ ಕೂಡ ಪ್ರಧಾನಿಗಳು 2025ರ ಬಜೆಟ್ ಅನ್ನು ಶ್ಲಾಘಿಸಿ, ಆರ್ಥಿಕತೆಯ ಮೇಲೆ ಗುಣಕ ಪರಿಣಾಮ ಬೀರಬಲ್ಲ ಬಜೆಟ್ ಎಂದಿದ್ದರು. ದೆಹಲಿಯ ಆರ್.ಕೆ. ಪುರಂನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ನರೇಂದ್ರ ಮೋದಿ, ಬಜೆಟ್ನಲ್ಲಿ ಆದಾಯ ತೆರಿಗೆ ಇಳಿಕೆ ವಿಚಾರವನ್ನು ಪ್ರಸ್ತಾಪಿಸಿ ನೆಹರೂ ಕಾಲಘಟ್ಟದ ಸಂದರ್ಭವನ್ನು ನೆನಪು ಮಾಡಿದ್ದಾರೆ.
ಈಗ 12 ಲಕ್ಷ ರೂ ಆದಾಯ ಪಡೆಯುತ್ತಿರುವವರು ತೆರಿಗೆ ಕಟ್ಟಬೇಕಿಲ್ಲ ಎಂದು ಹೇಳಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಈ ಆದಾಯಕ್ಕೆ ಎಷ್ಟೆಷ್ಟು ತೆರಿಗೆ ಕಟ್ಟಬೇಕಿತ್ತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಬಜೆಟ್ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ
‘ನೆಹರೂ ಅವರ ಕಾಲದಲ್ಲಿ ನೀವು 12 ಲಕ್ಷ ರೂ ಗಳಿಸುತ್ತಿದ್ದರೆ ನಿಮ್ಮ ಸಂಬಳದ ಕಾಲು ಭಾಗ ಹಣವು ತೆರಿಗೆಗೆ ಹೋಗುತ್ತಿತ್ತು. ಇಂದಿರಾ ಗಾಂಧಿ ಅವರ ಸರ್ಕಾರ ಇದ್ದಾಗ ಪ್ರತೀ 12 ಲಕ್ಷ ರೂ ಆದಾಯಕ್ಕೆ 10 ಲಕ್ಷ ರೂ ತೆರಿಗೆ ಪಾವತಿಸಬೇಕಿತ್ತು. 10-12 ವರ್ಷಗಳ ಹಿಂದಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ನೀವು 12 ಲಕ್ಷ ರೂ ಗಳಿಸುತ್ತಿದ್ದರೆ 2.60 ಲಕ್ಷ ರೂ ಮೊತ್ತವು ತೆರಿಗೆಗೆ ಸಂದಾಯ ಮಾಡಬೇಕಿತ್ತು. ನಿನ್ನೆಯ ಬಜೆಟ್ ಬಳಿಕ ನೀವು 12 ಲಕ್ಷ ರೂ ಆದಾಯ ಗಳಿಸಿದರೆ ಒಂದೇ ಒಂದು ರುಪಾಯಿಯನ್ನೂ ತೆರಿಗೆಯಾಗಿ ಕಟ್ಟಬೇಕಿಲ್ಲ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
‘ದೇಶದ ಅಭಿವೃದ್ಧಿಯಲ್ಲಿ ಮಧ್ಯಮವರ್ಗದವರ ಪಾತ್ರ ಬಹಳ ದೊಡ್ಡದು. ಈ ಮಧ್ಯಮವರ್ಗದವರನ್ನು ಗೌರವಿಸುವ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಉತ್ತೇಜಿಸುವ ಏಕೈಕ ಪಕ್ಷ ಬಿಜೆಪಿ’ ಎಂದಿದ್ದಾರೆ ಪ್ರಧಾನಿಗಳು.
ಇದನ್ನೂ ಓದಿ: Tax Calculator: ಹೊಸ ಟ್ಯಾಕ್ಸ್ ಕ್ಯಾಲ್ಕುಲೇಟರ್, ಪಕ್ಕಾ ಲೆಕ್ಕಾಚಾರ… ನೀವೆಷ್ಟು ತೆರಿಗೆ ಕಟ್ಟಬೇಕು ತಿಳಿಯಿರಿ…
‘ವಿಕಸಿತ ಭಾರತದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತದ ನಾಲ್ಕು ಸ್ತಂಭಗಳನ್ನು ಗಟ್ಟಿಗೊಳಿಸಲು ನಿಶ್ಚಯಿಸಿದೆ. ಈ ನಾಲ್ಕು ಸ್ತಂಭಗಳೆಂದರೆ ರೈತರು, ಮಹಿಳೆಯರು, ಬಡವರು ಮತ್ತು ಯುವಜನರು. ಈ ಮೋದಿ ಗ್ಯಾರಂಟಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ ನಿನ್ನೆಯ ಬಜೆಟ್’ ಎಂದು ಮೋದಿ ಬಣ್ಣಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ