Budget 2024: ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಬಜೆಟ್​ನಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು?

|

Updated on: Jan 19, 2024 | 10:58 AM

Income Tax Rule Changes: 50 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ವಿಧಿಸಲಾಗುವ ಸರ್ಚಾರ್ಜ್ ಅಥವಾ ಹೆಚ್ಚುವರಿ ತೆರಿಗೆಯ ಹೊರೆಯನ್ನು ಇಳಿಸಬೇಕೆಂಬ ನಿರೀಕ್ಷೆ ಇದೆ. ಗೃಹಸಾಲಕ್ಕೆ ಕಟ್ಟುವ 2 ಲಕ್ಷ ರೂವರೆಗಿನ ಬಡ್ಡಿ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಇದನ್ನು 3 ಲಕ್ಷಕ್ಕೆ ಏರಿಸಲಾಗುತ್ತದಾ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.

Budget 2024: ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಬಜೆಟ್​ನಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು?
ಆದಾಯ ತೆರಿಗೆ
Follow us on

ಫೆಬ್ರುವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ (Interim budget) ಮಂಡನೆ ಮಾಡಲಿದ್ದಾರೆ. ಚುನಾವಣಾ ಪೂರ್ವ ಬಜೆಟ್ ಆದ್ದರಿಂದ ದೊಡ್ಡಮಟ್ಟದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇಲ್ಲ. ಆದರೂ ತೆರಿಗೆ ಇತ್ಯಾದಿ ಕೆಲ ವಿಚಾರದಲ್ಲಿ ಸರ್ಕಾರ ಒಂದಷ್ಟು ಬದಲಾವಣೆ ತಂದರೂ ತರಬಹುದು. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೆಲವಿಷ್ಟು ನಿರೀಕ್ಷೆಗಳಂತೂ ಇವೆ. ಹಣಕಾಸು ಸಚಿವೆ ಮಧ್ಯಂತರ ಬಜೆಟ್ ಅನ್ನು ಕೇವಲ ಲೇಖಾನುದಾನಕ್ಕೆ ಮಾತ್ರ ಸೀಮಿತಗೊಳಿಸುತ್ತಾರಾ ಅಥವಾ ಏನಾದರೂ ಹೊಸ ಬದಲಾವಣೆ ತರುತ್ತಾರಾ ಕಾದು ನೋಡಬೇಕು. ಆದರೆ, ತೆರಿಗೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿಉದ್ಯಮದವರ ನಿರೀಕ್ಷೆಗಳಂತೂ ಸಾಕಷ್ಟು ಇವೆ.

ಸರ್ಚಾರ್ಜ್ ಕಡಿಮೆ ಆಗುತ್ತದಾ?

ಹಳೆಯ ಆದಾಯ ತೆರಿಗೆ ಪದ್ಧತಿ ಮುಂದುವರಿದಿದೆಯಾದರೂ ಜೊತೆಗೆ ಹೊಸ ಆದಾಯ ತೆರಿಗೆಯನ್ನೂ ಪರಿಚಯಿಸಲಾಗಿದೆ. ಹೊಸ ಪದ್ಧತಿ ಡೀಫಾಲ್ಟ್ ಆಗಿದೆ. ಸಾಕಷ್ಟು ತೆರಿಗೆ ಉಳಿತಾಯಕ್ಕೆ ಅದು ಅವಕಾಶ ಕೊಟ್ಟಿದೆ. ಆದರೆ, ವರ್ಷಕ್ಕೆ 50 ಲಕ್ಷ ರೂನಿಂದ 5 ಕೋಟಿ ರೂವರೆಗಿನ ವರಮಾನ ಇರುವ ವ್ಯಕ್ತಿಗಳಿಗೆ ಹೊಸ ಇನ್ಕಮ್ ಟ್ಯಾಕ್ಸ್ ರಿಜೈಮ್​ನಿಂದ ಹೆಚ್ಚಿನ ಲಾಭ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಚಾರ್ಜ್ ಅಥವಾ ಹೆಚ್ಚುವರಿ ತೆರಿಗೆಯನ್ನು ಈ ಬಜೆಟ್​ನಲ್ಲಿ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇದೆ.

ತೆರಿಗೆ ಅನ್ವಯವಾಗುವ ಆದಾಯ ಮತ್ತು ಸರ್ಚಾರ್ಜ್​ನಲ್ಲಿ ಸಂಭಾವ್ಯ ಬದಲಾವಣೆ

  • 50 ಲಕ್ಷ ರೂನಿಂದ 1 ಲಕ್ಷ ರೂವರೆಗೆ: ಶೇ. 10ರಿಂದ ಶೇ. 5ಕ್ಕೆ ಸರ್ಚಾರ್ಜ್ ಇಳಿಕೆಯ ನಿರೀಕ್ಷೆ
  • 1-2 ಕೋಟಿ ರೂ: ಶೇ. 15ರಿಂದ ಶೇ. 10ಕ್ಕೆ
  • 2-5 ಕೋಟಿ ರೂ: ಶೇ. 25ರಿಂದ ಶೇ. 15ಕ್ಕೆ
  • 5 ಕೋಟಿ ಮೇಲ್ಪಟ್ಟ ಆದಾಯ: ಶೇ. 25

ಇದನ್ನೂ ಓದಿ: ಶುಭ ಸುದ್ದಿ; ಪಿಎಂ ಕಿಸಾನ್ ಫಲಾನುಭವಿಗಳು, ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?

ಗೃಹಸಾಲದ ಬಡ್ಡಿ ಮತ್ತು ತೆರಿಗೆ ಕಡಿತ

ಸದ್ಯ ಹಳೆಯ ಇನ್ಕಮ್ ಟ್ಯಾಕ್ಸ್ ಪದ್ಧತಿಯಲ್ಲಿ ಗೃಹಸಾಲಕ್ಕೆ ಕಟ್ಟಲಾಗುವ 2 ಲಕ್ಷ ರೂವರೆಗಿನ ಬಡ್ಡಿ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಅಥವಾ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಆದರೆ, 50 ಲಕ್ಷಕ್ಕೂ ಹೆಚ್ಚು ಮೊತ್ತದ ಗೃಹಸಾಲ ಪಡೆದವರು ವರ್ಷಕ್ಕೆ ಕಟ್ಟುವ ಬಡ್ಡಿ 4 ಲಕ್ಷ ರೂಗೂ ಹೆಚ್ಚು ಇರುತ್ತದೆ. ಹೀಗಾಗಿ, ತೆರಿಗೆ ಅನ್ವಯ ಆಗುವ ಆದಾಯದಿಂದ ಈ ಬಡ್ಡಿ ಮೊತ್ತಕ್ಕೆ ವಿನಾಯಿತಿ ಕೊಟ್ಟರೆ ಅನುಕೂಲವಾಗುತ್ತದೆ. ಈಗ ವಿನಾಯಿತಿ ಇರುವ 2 ಲಕ್ಷ ರೂ ಬಡ್ಡಿಹಣದ ಮಿತಿಯನ್ನು 3 ಲಕ್ಷ ರೂಗೆ ಹೆಚ್ಚಿಸುವ ನಿರೀಕ್ಷೆ ಇದೆ.

ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯ್​ಗೆ ಟ್ಯಾಕ್ಸ್ ಡಿಡಕ್ಷನ್

ಹಳೆಯ ಟ್ಯಾಕ್ಸ್ ಪದ್ಧತಿಯಲ್ಲಿ ಹೆಲ್ತ್ ಇನ್ಷೂರೆನ್ಸ್​ನ 25,000/50,0000 ರೂ ಪ್ರೀಮಿಯಮ್ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಇದನ್ನು 50,000/1,00,000 ರೂಗೆ ಹೆಚ್ಚಿಸಬೇಕೆಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Govt Insurance: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್, 10 ಲಕ್ಷ ರೂಗೆ ಕವರೇಜ್ ವಿಸ್ತರಣೆ; ಬಜೆಟ್​ನಲ್ಲಿ ಘೋಷಣೆ ಸಾಧ್ಯತೆ

ಟ್ಯಾಕ್ಸ್ ರಿಟರ್ನ್ ಮತ್ತು ಇ ವೆರಿಫಿಕೇಶನ್

ಸದ್ಯ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಪ್ರಕ್ರಿಯೆ ಎಲ್ಲವೂ ಆನ್​ಲೈನ್​ನಲ್ಲಿ ಇದೆ. ಆದರೆ, ಭಾರತೀಯರಿಗೆ ಮಾತ್ರವೇ ಈ ಆನ್​ಲೈನ್ ಸೌಲಭ್ಯ ಸೀಮಿತವಾದಂತಿದೆ. ವಿದೇಶೀ ಮೊಬೈಲ್ ನಂಬರ್​ಗಳಿರುವ ಎನ್​ಆರ್​ಐಗಳು ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಪೂರ್ಣ ಆನ್ಲೈನ್ ಇಲ್ಲ. ಅವರು ಐಟಿಆರ್-5 ಫಾರ್ಮ್ ಅನ್ನು ಸಹಿ ಮಾಡಿ 30 ದಿನದೊಳಗೆ ಕಳುಹಿಸಬೇಕು. ಆದರೆ, ಬಹಳಷ್ಟು ಜನರು ಈ ಗಡುವಿನೊಳಗೆ ಕಳುಹಿಸಲು ವಿಫಲರಾಗುತ್ತಾರೆ. ಇದನ್ನು ತಪ್ಪಿಸಲು ವಿದೇಶೀ ಮೊಬೈಲ್ ನಂಬರ್​ಗಳ ಮೂಲಕವೂ ದೃಢೀಕರಣ ಕ್ರಿಯೆ ನಡೆಸಲು ಅವಕಾಶ ಕಲ್ಪಿಸಬೇಕು. ಇದರಿಂದ ಮ್ಯಾನುಯಲ್ ಪ್ರಕ್ರಿಯೆಯ ಗೊಂದಲ ತಪ್ಪಿಸಬಹುದು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ