GDP: ಜುಲೈನಿಂದ ಸೆಪ್ಟೆಂಬರ್ ಎರಡನೇ ತ್ರೈಮಾಸಿಕ ಜಿಡಿಪಿ ಶೇ 8.4ರಷ್ಟು ಬೆಳವಣಿಗೆ
2021ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 8.4ರಷ್ಟು ಪ್ರಗತಿ ಸಾಧಿಸಿದೆ. ಯಾವ ವಲಯ ಎಷ್ಟು ಪ್ರಗತಿ ಸಾಧಿಸಿದೆ ಎಂಬ ಬಗ್ಗೆ ವಿವರ ಇಲ್ಲಿದೆ.
2021ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 8.4 ರಷ್ಟು ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬೆಳವಣಿಗೆ ಆಗಿದೆ ಎಂದು ಕೇಂದ್ರ ಸಾಂಖ್ಯಿಕ ಇಲಾಖೆ ಕಚೇರಿಯ ಅಂಕಿಅಂಶಗಳಿಂದ ಇದು ತಿಳಿದು ಬಂದಿದೆ. ಈ ಸಂಬಂಧವಾಗಿ ಡೇಟಾ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಉಕ್ಕಿನ ಕ್ಷೇತ್ರದಲ್ಲಿ ಶೇಕಡಾ 0.9 ರಷ್ಟು ಬೆಳವಣಿಗೆ ಆಗಿದ್ದರೆ, ಸಿಮೆಂಟ್ ವಲಯದಲ್ಲಿ ಶೇ 14.5 ರಷ್ಟು, ಕಲ್ಲಿದ್ದಲು ಶೇ 14.6 ರಷ್ಟು ಏರಿಕೆ ಆಗಿದೆ.
ಕಚ್ಚಾತೈಲದ ಉತ್ಪಾದನೆಯಲ್ಲಿ ಶೇಕಡಾ 2.2 ರಷ್ಟು ಬೆಳವಣಿಗೆ ಕುಸಿತವಾಗಿದ್ದರೆ, ಎಂಟು ಮೂಲಸೌಕರ್ಯ ವಲಯಗಳಲ್ಲಿ ಒಟ್ಟಾರೆ ಶೇಕಡಾ 7.5 ರಷ್ಟು ಬೆಳವಣಿಗೆ ಆಗಿದೆ. ಕಳೆದ ವರ್ಷ ನೆಗೆಟಿವ್ ಶೇ (-) 0.5 ರಷ್ಟು ಬೆಳವಣಿಗೆ ದಾಖಲಾಗಿತ್ತು. ಕಲ್ಲಿದ್ದಲು, ನೈಸರ್ಗಿಕ ಅನಿಲ, ರಿಫೈನರಿ ಸಾಮಗ್ರಿ, ರಸಗೊಬ್ಬರ, ಸ್ಟೀಲ್, ಸಿಮೆಂಟ್, ವಿದ್ಯುತ್ ಕ್ಷೇತ್ರದಲ್ಲಿ ಬೆಳವಣಿಗೆ ದಾಖಲಾಗಿದೆ.
ಅಧಿಕೃತ ಬಿಡುಗಡೆಯ ಪ್ರಕಾರ, ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕವು ಅಕ್ಟೋಬರ್ 2021ರಲ್ಲಿ 136.2 ರಷ್ಟಿದೆ. ಕಲ್ಲಿದ್ದಲು, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಹೆಚ್ಚಾಗಿದೆ.
ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 4.5ಕ್ಕೆ ಸ್ವಲ್ಪ ಏರಿಕೆಯಾಗಿದೆ. “ಮಾಸಿಕ ವರ್ಷದ ಹಣದುಬ್ಬರವು ಹಿಂದಿನ ತಿಂಗಳಿನ ಶೇ 4.41ಕ್ಕೆ ಹೋಲಿಸಿದರೆ ಶೇಕಡಾ 4.50 ರಷ್ಟಿತ್ತು. ಮತ್ತು ಒಂದು ವರ್ಷದ ಹಿಂದಿನ ಇದೇ ತಿಂಗಳಲ್ಲಿ (ಅಕ್ಟೋಬರ್ 2020) ಶೇ 5.91ರಷ್ಟಿತ್ತು,” ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನಿವ್ವಳ ತೆರಿಗೆ ಆದಾಯ ಹೆಚ್ಚುತ್ತಲೇ ಇದೆ. ಏಪ್ರಿಲ್-ಅಕ್ಟೋಬರ್ ಅವಧಿಯ ಆದಾಯದ ಸ್ವೀಕೃತಿಗಳು ರೂ. 12.6 ಲಕ್ಷ ಕೋಟಿ ಅಥವಾ ಬಜೆಟ್ ಅಂದಾಜಿನ ಶೇ 70.5ರಷ್ಟಿದೆ. ಇದು ಒಂದು ವರ್ಷದ ಹಿಂದಿನ ಅವಧಿಯಲ್ಲಿ ಈ ಅವಧಿಯಲ್ಲಿ ಸಂಗ್ರಹಿಸಲಾದ ಬಜೆಟ್ ಅಂದಾಜಿನ ಶೇ 34.2ಕ್ಕಿಂತ ಹೆಚ್ಚಾಗಿದೆ.
ಏಪ್ರಿಲ್-ಅಕ್ಟೋಬರ್ ಮಧ್ಯೆ ಕೇಂದ್ರದ ವಿತ್ತೀಯ ಕೊರತೆಯು ಪೂರ್ಣ ವರ್ಷದ ಗುರಿಯ ಶೇ 36.3 ಮುಟ್ಟಿದೆ. ವಿತ್ತೀಯ ಅಂತರ 5.47 ಲಕ್ಷ ಕೋಟಿ ರೂಪಾಯಿ ಆಗಿದೆ. ನಿವ್ವಳ ತೆರಿಗೆ ಸ್ವೀಕೃತಿಗಳು ರೂ. 10.53 ಲಕ್ಷ ಕೋಟಿಗಳಾಗಿದ್ದರೆ, ಒಟ್ಟು ವೆಚ್ಚ ರೂ. 18.27 ಲಕ್ಷ ಕೋಟಿಗಳು. ಸರ್ಕಾರವು ಈ ವರ್ಷದ ವಿತ್ತೀಯ ಕೊರತೆಯನ್ನು ಶೇ 6.8ಕ್ಕೆ ನಿಗದಿಪಡಿಸಿತ್ತು.
ಇದನ್ನೂ ಓದಿ: PM Garib Kalyan Anna Yojana: ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ 2022ರ ಮಾರ್ಚ್ ತನಕ ವಿಸ್ತರಣೆ
Published On - 6:15 pm, Tue, 30 November 21