PM Garib Kalyan Anna Yojana: ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ 2022ರ ಮಾರ್ಚ್ ತನಕ ವಿಸ್ತರಣೆ
ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ 2022ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಉಚಿತ ಪಡಿತರ ನೀಡಲು 2022ರ ಮಾರ್ಚ್ವರೆಗೆ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PM-GKY) ಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಕೊವಿಡ್ -19 ಬಿಕ್ಕಟ್ಟಿನಿಂದ ಏಕಾಏಕಿ ಉಂಟಾದ ಆರ್ಥಿಕ ಅಡೆತಡೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ವ್ಯಾಪ್ತಿಗೆ ಬರುವ ಎಲ್ಲ ಫಲಾನುಭವಿಗಳಿಗೆ ಪಿಎಂ-ಜಿಕೆವೈ ಅನ್ನು ಸರ್ಕಾರ ಘೋಷಿಸಿತ್ತು. ಈ ಯೋಜನೆಯು ನವೆಂಬರ್ 30ರಂದು ಕೊನೆಗೊಳ್ಳಲಿದೆ. ಈ ಯೋಜನೆಯಡಿ, ಸುಮಾರು 80 ಕೋಟಿ NFSA ಫಲಾನುಭವಿಗಳಿಗೆ ಸರ್ಕಾರವು 5 ಕೇಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತದೆ. ಐದನೇ ಹಂತದ ಆಹಾರ ಧಾನ್ಯಕ್ಕೆ ಅಂದಾಜು 53,344.52 ಕೋಟಿ ರೂಪಾಯಿ ಆಹಾರ ಸಬ್ಸಿಡಿ ದೊರೆಯಲಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ತಿಳಿಸಿದೆ. ಐದನೇ ಹಂತದಲ್ಲಿ ಆಹಾರ ಧಾನ್ಯಗಳ ಒಟ್ಟು ವಿತರಣೆ 163 ಲಕ್ಷ ಮೆಟ್ರಿಕ್ ಟನ್‌ಗಳ ನಿರೀಕ್ಷೆ ಇದೆ.
ಈ ಯೋಜನೆಯ ಹಂತ-I ಮತ್ತು ಹಂತ-II ಕ್ರಮವಾಗಿ ಏಪ್ರಿಲ್‌ನಿಂದ ಜೂನ್, 2020 ಮತ್ತು ಜುಲೈನಿಂದ ನವೆಂಬರ್, 2020ರ ವರೆಗೆ ಇತ್ತು. ಯೋಜನೆಯ ಹಂತ-III ಮೇನಿಂದ ಜೂನ್, 2021ರವರೆಗೆ ಇತ್ತು. ಯೋಜನೆಯ ಹಂತ-IV ಪ್ರಸ್ತುತ ಜುಲೈ-ನವೆಂಬರ್, 2021ರ ವರೆಗೆ ಇದೆ. PMGKAY-IV ಅಡಿಯಲ್ಲಿ ವಿತರಣೆಯು ಪ್ರಸ್ತುತ ನಡೆಯುತ್ತಿದೆ ಮತ್ತು ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯ ಇರುವ ವರದಿಗಳ ಪ್ರಕಾರ, ಶೇ 93.8ರಷ್ಟು ಆಹಾರ ಧಾನ್ಯಗಳನ್ನು ತೆಗೆಯಲಾಗಿದೆ ಮತ್ತು ಸುಮಾರು 37.32 LMT, 37.20 LMT, 36.87 LMT, 35.4 LMT ಮತ್ತು 17.9 LMT ಆಹಾರವನ್ನು ವಿತರಿಸಲಾಗಿದೆ. ಸುಮಾರು 74.64 ಕೋಟಿ, 74.4 ಕೋಟಿ, 73.75 ಕೋಟಿ, 70.8 ಕೋಟಿ ಮತ್ತು 35.8 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆಗಳನ್ನು ಪರಿಶೀಲಿಸಲು OMSS ನೀತಿಯ ಅಡಿಯಲ್ಲಿ ಸರ್ಕಾರವು ದೊಡ್ಡ ಪ್ರಮಾಣದ ಗ್ರಾಹಕರಿಗೆ ಅಕ್ಕಿ ಮತ್ತು ಗೋಧಿಯನ್ನು ನೀಡುತ್ತಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಔಪಚಾರಿಕತೆಯನ್ನು ಸಂಪುಟವು ಪೂರ್ಣಗೊಳಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಈ ಮೂರು ಕಾನೂನು ಹಿಂಪಡೆಯುವುದು ನಮ್ಮ ಆದ್ಯತೆಯಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಗರೀಬ್ ಕಲ್ಯಾಣ್: ನವೆಂಬರ್ವರೆಗೂ ಅನ್ನ ಯೋಜನೆ ಮುಂದುವರಿಕೆ- ಪ್ರಧಾನಿ ಮೋದಿ