ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಆಧಾರ್ ದೃಢೀಕರಣ (Aadhaar Authentication) ನಡೆದಿದೆ. 2024-25ರಲ್ಲಿ ಆಧಾರ್ ಅಥೆಂಟಿಕೇಶನ್ ಆದ ಸಂಖ್ಯೆ 2,707 ಕೋಟಿ ಗಡಿ ದಾಟಿದೆಯಂತೆ. ಕೊನೆಯ ತಿಂಗಳಾದ ಮಾರ್ಚ್ ತಿಂಗಳೊಂದರಲ್ಲೇ 247 ಕೋಟಿ ಆಧಾರ್ ಟ್ರಾನ್ಸಾಕ್ಷನ್ಸ್ ಆಗಿವೆ. ಆಧಾರ್ ಸಿಸ್ಟಂ ಬಂದಾಗಿನಿಂದ ಅಥೆಂಟಿಕೇಶನ್ ಪ್ರಮಾಣ 14,800 ಕೋಟಿಯಾಗಿದೆ. ಇದು ಸರ್ಕಾರ ನಿನ್ನೆ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿರುವ ಅಂಶ.
ಆಧಾರ್ ದಾಖಲೆಗಳು ಅಗತ್ಯ ಇರುವ ವಿವಿಧ ಸೇವೆಗಳನ್ನು ಪಡೆಯಲು ಮತ್ತು ಆಧಾರ್ ದಾಖಲೆ ದೃಢೀಕರಿಸಲು ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಆ ಮೂಲಕ ಆಧಾರ್ ದೃಢೀಕರಣ ಮಾಡಲಾಗುತ್ತದೆ. ಕೆಲವೆಡೆ ಬೆರಳಚ್ಚು ಮೂಲಕವೂ ಆಧಾರ್ ದೃಢೀಕರಣ ಪಡೆಯಲಾಗುತ್ತದೆ.
ಇದನ್ನೂ ಓದಿ: ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ; ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ
ಯುಐಡಿಎಐ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತವಾಗಿ ಆಧಾರ್ ಫೇಸ್ ಅಥೆಂಟಿಕೇಶನ್ ಸಲ್ಯೂಶನ್ಸ್ ಅನ್ನು ಅಭಿವೃದ್ಧಿಪಡಿಸಿದೆ. ಈ ಫೇಸ್ ಅಥೆಂಟಿಕೇಶನ್ ಫೀಚರ್ ಸಾಕಷ್ಟು ಬಳಕೆಯಾಗುತ್ತಿದೆ. ಮಾರ್ಚ್ ತಿಂಗಳೊಂದರಲ್ಲೇ 15 ಕೋಟಿಗೂ ಹೆಚ್ಚು ಆಧಾರ್ ಫೇಸ್ ಅಥೆಂಟಿಕೇಶನ್ ನಡೆದಿದೆ. ಸರ್ಕಾರ ಹಾಗೂ ಖಾಸಗಿ ವಲಯಕ್ಕೆ ಸೇರಿದ ನೂರಕ್ಕೂ ಹೆಚ್ಚು ಸಂಸ್ಥೆಗಳು ಆಧಾರ್ ಫೇಸ್ ಅಥೆಂಟಿಕೇಶನ್ ಮೂಲಕ ವಿವಿಧ ಸೇವೆಗಳನ್ನು ಸುಗಮವಾಗಿ ವಿತರಿಸುತ್ತಿವೆ.
ಫೇಸ್ ಅಥೆಂಟಿಕೇಶನ್ ಫೀಚರ್ ಅಭಿವೃದ್ಧಿಪಡಿಸಿದ ಯುಐಡಿಎಐ ಸಂಸ್ಥೆಗೆ ಪ್ರೈಮ್ ಮಿನಿಸ್ಟರ್ ಅವಾರ್ಡ್ ಕೊಡಲಾಗಿದೆ. ಇನ್ನೋವೇಶನ್ ಕೆಟಗರಿಯಲ್ಲಿ ಪ್ರಧಾನಿಗಳ ಸಾರ್ವಜನಿಕ ಆಡಳಿತದ ಎಕ್ಸಲೆನ್ಸ್ ಅವಾರ್ಡ್ ಅನ್ನು ಸರ್ಕಾರ ಕಳೆದ ವಾರ ನೀಡಿದೆ.
ಇದನ್ನೂ ಓದಿ: ಭಾರತದ ಆಧಾರ್ ಪ್ರಾಜೆಕ್ಟ್ ಟ್ರೋಲ್ ಮಾಡಿದ ಹಾಟ್ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ
ದೇಶಾದ್ಯಂತ ಆಧಾರ್ ಇ-ಕೆವೈಸಿ ವಹಿವಾಟು ಕೂಡ ಹೆಚ್ಚಿದೆ. 2025ರ ಮಾರ್ಚ್ ತಿಂಗಳಲ್ಲಿ ಆಧಾರ್ ಇ-ಕೆವೈಸಿ ಟ್ರಾನ್ಸಾಕ್ಷನ್ಗಳ ಸಂಖ್ಯೆ 44.63 ಕೋಟಿ ಎಂದು ಹೇಳಲಾಗಿದೆ. 2024-25ರಲ್ಲಿ ಒಟ್ಟಾರೆ ಇಕೆವೈಸಿ ಟ್ರಾನ್ಸಾಕ್ಷನ್ಸ್ 2,356 ಕೋಟಿಯಷ್ಟಾಗಿದೆ.
ಮತ್ತೊಂದು ಕುತೂಹಲಕಾರಿ ಮಾಹಿತಿ ಪ್ರಕಾರ, ಮಾರ್ಚ್ ತಿಂಗಳಲ್ಲಿ 20 ಲಕ್ಷ ಹೊಸ ಆಧಾರ್ ನಂಬರ್ಗಳ ರಚನೆಯಾಗಿದೆ. ಹತ್ತಿರಹತ್ತಿರ ಎರಡು ಕೋಟಿ ಆಧಾರ್ಗಳು ಯಶಸ್ವಿಯಾಗಿ ಅಪ್ಡೇಟ್ ಆಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ