ಭಾರತದ ಆಧಾರ್ ಪ್ರಾಜೆಕ್ಟ್ ಟ್ರೋಲ್ ಮಾಡಿದ ಹಾಟ್ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ
Sabeer Bhatia with Prakhar ke pravachan: ಭಾರತದ ತಂತ್ರಜ್ಞಾನ ಸಾಧನೆಯ ಹೆಗ್ಗುರುತುಗಳೆನಿಸಿದ ಆಧಾರ್ ಮತ್ತು ಯುಪಿಐ ಸಿಸ್ಟಂಗಳನ್ನು ಉದ್ಯಮಿ ಸಬೀರ್ ಭಾಟಿಯಾ ಟ್ರೋಲ್ ಮಾಡಿದ್ದಾರೆ. 1.3 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿತವಾದ ಆಧಾರ್ ಸಿಸ್ಟಂ ಅನ್ನು ಕೇವಲ 20 ಮಿಲಿಯನ್ ಡಾಲರ್ನಲ್ಲಿ ಕಟ್ಟಬಹುದಿತ್ತು ಎಂಬುದು ಅವರ ಅನಿಸಿಕೆ. ಯುಪಿಐ ಎಂಬುದು ಅಮೆರಿಕದ ವೆನ್ಮೋ ಪೇಮೆಂಟ್ ಸಿಸ್ಟಂಗಿಂತ ದೊಡ್ಡದೇನಲ್ಲ ಎಂದಿದ್ದಾರೆ ಹಾಟ್ಮೇಲ್ ಸಹ-ಸಂಸ್ಥಾಪಕರು.

ನವದೆಹಲಿ, ಫೆಬ್ರುವರಿ 10: ಭಾರತದ ಡಿಜಿಟಲ್ ಇಕೋಸಿಸ್ಟಂ ಮತ್ತು ಡಿಬಿಟಿ ವ್ಯವಸ್ಥೆಯ ಆಧಾರವಾಗಿರುವ ಆಧಾರ್ ಪ್ರಾಜೆಕ್ಟ್ ಮತ್ತು ಯುಪಿಐ ತಂತ್ರಜ್ಞಾನವನ್ನು ಹಾಟ್ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ಟ್ರೋಲ್ ಮಾಡಿದ್ದಾರೆ. ಅದರಲ್ಲೂ ಆಧಾರ್ ಯೋಜನೆಯನ್ನು ಅವರು ದುಬಾರಿ ಹೆಜ್ಜೆ ಎಂದು ಬಣ್ಣಿಸಿದ್ದಾರೆ. 1.3 ಬಿಲಿಯನ್ ಡಾಲರ್ ವೆಚ್ಚವಾಗಿರುವ ಆಧಾರ್ ಯೋಜನೆಯನ್ನು ಕೇವಲ 20 ಮಿಲಿಯನ್ ಡಾಲರ್ಗೆ ನಿರ್ಮಿಸಬಹುದಿತ್ತು ಎಂದಿದ್ದಾರೆ. ಅಂದರೆ ಶೇ. 2ರ ವೆಚ್ಚದಲ್ಲಿ ಆಧಾರ್ ಪ್ರಾಜೆಕ್ಟ್ ಮಾಡಬಹುದಿತ್ತು ಎಂಬುದು ಅವರ ಅನಿಸಿಕೆ.
ಪ್ರಖರ್ ಗುಪ್ತಾ ಅವರ ಯೂಟ್ಯೂಬ್ ವಾಹಿನಿಯಲ್ಲಿ ಪೋಡ್ಕ್ಯಾಸ್ಟ್ನಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅಮೆರಿಕನ್ ಉದ್ಯಮಿ ಸಬೀರ್ ಭಾಟಿಯಾ, ಆಧಾರ್ ಯೋಜನೆಯ ಹಿಂದಿದ್ದ ತಂತ್ರಜ್ಞರನ್ನೂ ಟ್ರೋಲ್ ಮಾಡಿದ್ದಾರೆ. ಆಧಾರ್ ಸರಳ ಹಾಗೂ ಪರಿಣಾಮಕಾರಿ ಮಾರ್ಗ ಬದಲು ಸುಮ್ಮನೆ ಸಂಕೀರ್ಣತೆ ಸೃಷ್ಟಿಸಿದೆ ಎಂಬುದು ಅವರ ಅನಿಸಿಕೆ.
‘ಆಧಾರ್ ನಿಮ್ಮೆಲ್ಲಾ ಬಯೋಮೆಟ್ರಿಕ್ ಡಾಟಾ ಪಡೆದುಕೊಂಡಿದೆ. ಆದರೆ, ಇದನ್ನು ಎಲ್ಲಿ ಬಳಸಲಾಗುತ್ತಿದೆ? ಇದಕ್ಕೆ ವ್ಯಯಿಸಿದ ಹಣದಲ್ಲಿ ಸ್ವಲ್ಪ ಭಾಗದಲ್ಲಿ ವಿಡಿಯೋ ಮತ್ತು ವಾಯ್ಸ್ ಪ್ರಿಂಟ್ ಟೆಕ್ನಾಲಜಿಯನ್ನು ಅನುಸರಿಸಬಹುದಿತ್ತು. ಈ ಮೂಲಕ 20 ಮಿಲಿಯನ್ ಡಾಲರ್ ಹಣದಲ್ಲಿ ಆಧಾರ್ ಸಿಸ್ಟಂ ನಿರ್ಮಿಸಬಹುದಿತ್ತು’ ಎಂದು ಪ್ರಖರ್ ಕೆ ಪ್ರವಚನ್ ಯೂಟ್ಯೂಬ್ ವಾಹಿನಿಯ ಸಂದರ್ಶನದಲ್ಲಿ ಸಬೀರ್ ಭಾಟಿಯಾ ಹೇಳಿದ್ದಾರೆ.
ಇದನ್ನೂ ಓದಿ: ಮೂಲಸೌಕರ್ಯ ಅಭಿವೃದ್ಧಿಗೆ ಗಣನೀಯ ವೆಚ್ಚ; ಯುಪಿಎ, ಎನ್ಡಿಎ ಸರ್ಕಾರಗಳ ಸಾಧನೆ ಹೋಲಿಸಿದ ಸಚಿವ ಜ್ಯೋತಿರಾದಿತ್ಯ
ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ನಡೆಸಲಾದ ಆಧಾರ್ ಪ್ರಾಜೆಕ್ಟ್ನ ತಂತ್ರಜ್ಞರನ್ನು ಸಬೀರ್ ಲೇವಡಿ ಮಾಡಿದ್ದಾರೆ. ‘ಆಧಾರ್ನ ತಂತ್ರಜ್ಞಾನ ರೂಪಿಸಿದವರು ಯಾರೇ ಆದರೂ ಅವರು ತಂತ್ರಜ್ಞರಲ್ಲ. ಅವರಿಗೆ ತಂತ್ರಜ್ಞಾನ ಏನೆಂದು ಗೊತ್ತಿಲ್ಲ. ಅವರ ಜೀವನದಲ್ಲಿ ಯಾವತ್ತೂ ಕೋಡಿಂಗ್ ಮಾಡಿಲ್ಲ. ಹೀಗಾಗಿ ಈ ಸಮಸ್ಯೆ ಆಗಿದೆ. ನಾನು ನನ್ನ ಸ್ವಂತ ಕೈಯಿಂದ ವಸ್ತುಗಳನ್ನು ಕಟ್ಟಿದ್ದೇನೆ. ಯಾವ ಉದ್ದೇಶಕ್ಕೆ ಯಾವ ತಂತ್ರಜ್ಞಾನ ಬಳಸಬೇಕು ಎಂದು ನನಗೆ ಗೊತ್ತು’ ಎಂದು ಹಾಟ್ಮೇಲ್ ಸಹ-ಸಂಸ್ಥಾಪಕರು ತಿಳಿಸಿದ್ದಾರೆ.
‘ನಮ್ಮ ಧ್ವನಿ ಮತ್ತು ದೃಶ್ಯ ಅನನ್ಯವಾಗಿರುತ್ತವೆ. ಡಾಟಾಬೇಸ್ನಲ್ಲಿ ಇರುವ ಒಬ್ಬ ವ್ಯಕ್ತಿಯ ವಾಯ್ಸ್ ಪ್ರಿಂಟ್ ಒಂದು ಯೂನಿಕ್ ಐಡಿಯಾಗಬಲ್ಲುದು. ನೀವು ವಿಮಾನ ನಿಲ್ದಾಣಕ್ಕೆ ನಡೆದು ಹೋಗುವಾಗ ಕಾರ್ಡ್ ತೋರಿಸುವ ಅವಶ್ಯಕತೆ ಇರುವುದಿಲ್ಲ. ಅಲ್ಲಿರುವ ಸಿಸ್ಟಂ ನಿಮ್ಮನ್ನು ಗುರುತು ಹಿಡಿದುಬಿಡುತ್ತದೆ. ಟೆಕ್ನಾಲಜಿ ಅಂದರೆ ಅದು. ಅದನ್ನು ಹೆಚ್ಚಿನ ವೆಚ್ಚವಿಲ್ಲದೇ ನಿರ್ಮಿಸಬಹುದು’ ಎಂದು ಅವರು ಹೇಳಿದ್ದಾರೆ.
ಯುಪಿಐಗೆ ಇರುವ ಹೈಪ್ ಅನ್ನೂ ಟೀಕಿಸಿದ ಭಾಟಿಯಾ
ಭಾರತದ ಯುಪಿಐ ಬಗ್ಗೆ ವಿಶ್ವದ ಹಲವು ದೇಶಗಳು ಆಸಕ್ತಿ ತೋರುತ್ತಿರುವ ಬಗ್ಗೆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ, ಸಬೀರ್ ಭಾಟಿಯಾರಿಂದ ಋಣಾತ್ಮಕ ಮಾತುಗಳೇ ಬಂದವು. ಈಗಿರುವ ಜಾಗತಿಕ ಪೇಮೆಂಟ್ ಪ್ಲಾಟ್ಫಾರ್ಮ್ಗಳಿಗೆ ಹೋಲಿಸಿದರೆ ಯುಪಿಎ ಇನ್ನೂ ಕೂಡ ಮೂಲಭೂತ ಹಂತದಲ್ಲಿ ಇದೆ. ವೆನ್ಮೋಗಿಂತ ಇದು ಹೆಚ್ಚೇನಲ್ಲ ಎಂಬುದು ಅವರ ಅನಿಸಿಕೆ. ವೆನ್ಮೋ (Venmo) ಎಂಬುದು ಅಮೆರಿಕದಲ್ಲಿ ಚಾಲ್ತಿಯಲ್ಲಿರುವ ಒಂದು ವಿಧದ ಪೇಮೆಂಟ್ ಪ್ಲಾಟ್ಫಾರ್ಮ್.
ಇದನ್ನೂ ಓದಿ: ಭಾರತದಿಂದ ವಿಶ್ವದ ಅತಿ ಉದ್ದದ ಮತ್ತು ಶಕ್ತಿಶಾಲಿ ಹೈಡ್ರೋಜನ್ ಟ್ರೈನ್: ಅಶ್ವಿನಿ ವೈಷ್ಣವ್
ಸಬೀರ್ ಭಾಟಿಯಾ ಭಾರತ ಮೂಲದ ಉದ್ಯಮಿ. 1996ರಲ್ಲಿ ಇವರು ವಿಶ್ವದ ಮೊದಲ ಉಚಿತ ಇಮೇಲ್ ಸರ್ವಿಸ್ ನೀಡಿದ ಹಾಟ್ಮೇಲ್ ಕಂಪನಿಯನ್ನು ಸ್ಥಾಪಿಸಿದರು. 1998ರಲ್ಲಿ ಈ ಹಾಟ್ಮೇಲ್ ಅನ್ನು ಮೈಕ್ರೋಸಾಫ್ಟ್ ಖರೀದಿಸಿತು. ಸದ್ಯ ಇವರು ಶೋರೀಲ್ ಎನ್ನುವ ವಿಡಿಯೋ ಪ್ಲಾಟ್ಫಾರ್ಮ್ ಅನ್ನು ಸ್ಥಾಪಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ