ಇಂದಿನಿಂದ 3 ದಿನ ಇನ್ವೆಸ್ಟ್ ಕರ್ನಾಟಕ ಸಮ್ಮಿಟ್: ಈ ಬಾರಿಯ ವಿಶೇಷವೇನು? ಇಲ್ಲಿದೆ ವಿವರ
ಇನ್ವೆಸ್ಟ್ ಕರ್ನಾಟಕ 2025ರ ಸಮ್ಮಿಟ್ ಇಂದು ಆರಂಭವಾಗುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬೃಹತ್ ಕೈಗಾರಿಕಾ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ. ಈ ಬಾರಿಯ ಇನ್ವೆಸ್ಟ್ ಕರ್ನಾಟಕದಲ್ಲಿ ಏನೆಲ್ಲ ಇರಲಿದೆ? ಈ ಬಾರಿಯ ವಿಶೇಷವೇನು ಎಂಬ ವಿವರಗಳು ಇಲ್ಲಿವೆ.

ಬೆಂಗಳೂರು, ಫೆಬ್ರವರಿ 11: ಇನ್ವೆಸ್ಟ್ ಕರ್ನಾಟಕ 2025ರ ಸಮ್ಮಿಟ್ಗೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಸ್ಥಳವನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿಮ್ (ಜಾಗತಿಕ ಹೂಡಿಕೆದಾರರ ಸಮಾವೇಶ) ಉದ್ಘಾಟನೆ ನೆರವೇರಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಘನ ಉಪಸ್ಥಿತಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ 2025-30ರ ಅವಧಿಯ ನೂತನ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ಪೋರ್ಟಲ್ ಬಿಡುಗಡೆಯಾಗಲಿದೆ.
10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ನಿರೀಕ್ಷೆ
ಸಮಾವೇಶದಲ್ಲಿ 19 ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ನೀಡುತ್ತಿರುವ 14 ಉದ್ಯಮಗಳನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಗುರುತಿಸಿ, ಪುರಸ್ಕರಿಸಲಾಗುತ್ತಿದೆ. ಈ ಕಾರ್ಯಕ್ರಮ ಫೆ.12ರ ಸಂಜೆ ನಡೆಯಲಿದೆ. ಇವುಗಳಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಆಟೋ ಇ.ವಿ., ಜೈವಿಕ ತಂತ್ರಜ್ಞಾನ ಮತ್ತು ಜೀವವಿಜ್ಞಾನ ವಲಯಗಳ ಸಾಧಕ ಉದ್ಯಮಗಳು ಇರಲಿವೆ. ಈವರೆಗೆ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ 7 ಲಕ್ಷ ಕೋಟಿ ರೂ.ವರೆಗೆ ಮಾತ್ರ ಹೂಡಿಕೆ ಮಾಡಲಾಗಿದೆ. ಆದರೆ ಈ ಬಾರೀ 10 ಲಕ್ಷ ಕೋಟಿ ರೂಪಾಯಿಗೂ ಹೂಡಿಕೆಯಾಗುವ ನಿರೀಕ್ಷೆಯಿದೆ.
ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ 35ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮಹಿಳಾ ಉದ್ಯಮಿಗಳು, ವಲಯವಾರು ಕೈಗಾರಿಕಾ ಉತ್ಕೃಷ್ಟತೆ ಸಾಧಿಸಿರುವ ಉದ್ಯಮಗಳಿಗೆ ಫೆ.13ರ ಸಂಜೆ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.
ಗೂಗಲ್ ಎಕ್ಸ್ ಸಂಸ್ಥಾಪಕ ಸೇರಿ ಅನೇಕ ಗಣ್ಯರು ಭಾಗಿ
ಸಮಾವೇಶದಲ್ಲಿ ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ ಯೋಜನೆ ಸಂಬಂಧ ದೇಶ-ವಿದೇಶದ ಕೆಲವು ವಿಶ್ವವಿದ್ಯಾಲಯಗಳ ಜತೆ ಒಡಂಬಡಿಕೆ ನಡೆಯಲಿದೆ. ಹಿಂದಿನ ಸಲದ ಸಮಾವೇಶಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ತ್ರನ್, ಲ್ಯಾಮ್ ರೀಸರ್ಚ್ ಮುಖ್ಯಸ್ಥ ಪ್ಯಾಟ್ರಿಕ್ ಲಾರ್ಡ್, ಜನರಲ್ ಅಟಾಮಿಕ್ಸ್ ಗ್ಲೋಬಲ್ ಕಾರ್ಪೊರೇಷನ್ ಸಿಇಒ ವಿವೇಕ್ ಲಾಲ್, ಟಿವಿಎಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಸೇರಿದಂತೆ ಮುಂತಾದವರು ಮಾತನಾಡಲಿದ್ದಾರೆ. ಸಣ್ಣ ಮತ್ತು ಬೃಹತ್ ಗಾತ್ರದ ಕೈಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದು. ಜಾಗತೀಕರಣ ಬೆಳವಣಿಗೆ ಹೆಚ್ಚು ಹೂಡಿಗೆ ಅಗತ್ಯ. ಇನ್ನೂ ಹೊಸ ಕೈಗಾರಿಕಾ ನೀತಿಯ ಅನ್ವಯ 20 ಲಕ್ಷ ಉದ್ಯೋಗವಕಾಶ ನಿರ್ಮಿಸುವ ಗುರಿ ಹೊಂದಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದಿಂದ ವಿಶ್ವದ ಅತಿ ಉದ್ದದ ಮತ್ತು ಶಕ್ತಿಶಾಲಿ ಹೈಡ್ರೋಜನ್ ಟ್ರೈನ್: ಅಶ್ವಿನಿ ವೈಷ್ಣವ್
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುನ್ನುಡಿ ಬರೆದದ್ದೇ ಕರ್ನಾಟಕ. ಇದನ್ನು ಗಮನಿಸಿದ ಅನ್ಯ ರಾಜ್ಯಗಳು ಇದೀಗ ಈ ಕಾರ್ಯಕ್ರಮವನ್ನೇ ಅನುಕರಣೆ ಮಾಡುತ್ತಿವೆ. ಎಲ್ಲ ರೀತಿಯಲ್ಲಿಯೂ ಕರ್ನಾಟಕ ಪ್ರಜ್ವಲಿಸಲಿದೆ. ಈ ಇನ್ವೆಸ್ಟ್ ಕರ್ನಾಟಕ 2025ರ ಸಮಾವೇಶ ಉದ್ಯೋಗ ಸೃಷ್ಟಿ ಸೇರಿದಂತೆ ಉತ್ಪಾದನೆಗೆ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡಲಿದೆ ಎನ್ನುವ ವಿಶ್ವಾಸದಲ್ಲಿ ಸರ್ಕಾರ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Tue, 11 February 25